LatestMysore

ಹಿಂದೂಸ್ಥಾನ್ ಕಾಲೇಜಿನಲ್ಲಿ  ಇಲ್ಯೂಮಿನೇಷನ್‌ 2026 – ರಾಜ್ಯಮಟ್ಟದ ಅಂತರ ಕಾಲೇಜು ಸಾಹಿತ್ಯೋತ್ಸವ

ಮೈಸೂರು: ಮೈಸೂರಿನ ಜೆ.ಪಿ. ನಗರದ ಹಿಂದೂಸ್ಥಾನ್ ಕಾಲೇಜಿನಲ್ಲಿ ವಾರ್ಷಿಕ ಸಾಹಿತ್ಯೋತ್ಸವವಾದ ‘ಇಲ್ಯೂಮಿನೇಷನ್‌ 2026’ ರಾಜ್ಯಮಟ್ಟದ ಅಂತರ ಕಾಲೇಜು ಸಾಹಿತ್ಯೋತ್ಸವವು ಬುಧವಾರ ಕಾಲೇಜಿನ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು.

ಕಾಲೇಜಿನ ಇಂಗ್ಲಿಷ್ ವಿಭಾಗದ ವತಿಯಿಂದ ಆಯೋಜಿಸಲಾದ ಈ ಬಾರಿಯ ಸಾಹಿತ್ಯೋತ್ಸವವು ಮೈಸೂರು ನಗರ ಹಾಗೂ ಸುತ್ತಮುತ್ತಲಿನ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ಉದ್ದೇಶದಿಂದ ವಿನೂತನ ಹಾಗೂ ವಿಶಿಷ್ಟ ಸ್ಪರ್ಧೆಗಳನ್ನು ಒಳಗೊಂಡಿತ್ತು.

ಸಾಹಿತ್ಯೋತ್ಸವದಲ್ಲಿ ಒಟ್ಟು ನಾಲ್ಕು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಅವುಗಳೆಂದರೆ ‘Book-Born’ – ಶೇಕ್ಸ್‌ಪಿಯರ್‌ ಪಾತ್ರಗಳ ವೇಷಧಾರಣೆ ಮತ್ತು ಪಾತ್ರಾಭಿನಯ, ‘Literary-Lens’ – ಪೌಲೊ ಕೊಯೆಲೊ ಅವರ The Alchemist ಕೃತಿಯ ಪುಸ್ತಕ ವಿಮರ್ಶೆ, ‘Crossfire’ – ಚರ್ಚಾ ಸ್ಪರ್ಧೆ ಹಾಗೂ ‘Word-Weave’ – ಕವನ ರಚನೆ ಮತ್ತು ವಾಚನ ಸ್ಪರ್ಧೆ.

ಇವುಗಳಲ್ಲಿ ‘Literary-Lens’ ತಂಡ ಆಧಾರಿತ ಸ್ಪರ್ಧೆಯಾಗಿದ್ದು, ಉಳಿದ ಮೂರು ಸ್ಪರ್ಧೆಗಳು ವೈಯಕ್ತಿಕ ಸ್ಪರ್ಧೆಗಳಾಗಿದ್ದವು. ಮೈಸೂರಿನ 15ಕ್ಕೂ ಹೆಚ್ಚು ಕಾಲೇಜುಗಳಿಂದ ಸುಮಾರು 65 ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಈ ಬಾರಿಯ ‘ಇಲ್ಯೂಮಿನೇಷನ್‌ 2026’ರ ಪ್ರಮುಖ ಆಕರ್ಷಣೆಯೆಂದರೆ ನೋಂದಣಿ ಶುಲ್ಕವನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿತ್ತು. ಆದರೆ ವಿಜೇತರಿಗೆ ನೀಡಲಾಗುತ್ತಿದ್ದ ನಗದು ಬಹುಮಾನಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿರಲಿಲ್ಲ.  ಪ್ರತಿಯೊಂದು ಸ್ಪರ್ಧೆಯಲ್ಲಿಯೂ ಉತ್ತಮ ಪ್ರದರ್ಶನ ನೀಡಿದ ಮೊದಲ ಇಬ್ಬರು ಸ್ಪರ್ಧಿಗಳಿಗೆ ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ನೀಡಿ ಗೌರವಿಸಲಾಯಿತು.

ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಿ. ಜೆ. ಪ್ರಿಯ, ಐಕ್ಯೂಎಸಿ ಸಂಯೋಜಕರಾದ ಶ್ರೀಮತಿ ಸುನೀತಾ, ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಚರಣ್ ಶೇಖರ್ ಸಿ. ಹಾಗೂ ಸಹಾಯಕ ಪ್ರಾಧ್ಯಾಪಕರಾದ ಕುಮಾರಿ ಮೈತ್ರಿ ವೇಣುಗೋಪಾಲ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ, ಸೃಜನಶೀಲತೆ, ವಿಮರ್ಶಾ ಮನೋಭಾವ, ವಾಗ್ಮಿತೆ ಹಾಗೂ ಅಭಿವ್ಯಕ್ತಿ ಕೌಶಲ್ಯಗಳನ್ನು ಬೆಳೆಸುವಲ್ಲಿ ‘ಇಲ್ಯೂಮಿನೇಷನ್‌ 2026’ ಮಹತ್ವದ ವೇದಿಕೆಯಾಗಿ ಮೂಡಿಬಂದಿತು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಸಾಹಿತ್ಯೋತ್ಸವವು ಯಶಸ್ವಿಯಾಗಿ ಸಂಪನ್ನಗೊಂಡಿತು.

 

admin
the authoradmin

Leave a Reply