ಮೈಸೂರು: ವಿರೋಧದ ನಡುವೆಯೂ ಈ ಬಾರಿಯ ದಸರಾ ಮಹೋತ್ಸವದಲ್ಲಿ ಕರಾವಳಿ ಕರ್ನಾಟಕದ ಜಾನಪದ ಕ್ರೀಡೆ ಕಂಬಳ ನಡೆಯುವುದು ಬಹುತೇಕ ಖಚಿತವಾಗಿದೆ. ಸರ್ಕಾರ ದಸರಾ ಕಂಬಳ ಉಪಸಮಿತಿ ರಚಿಸಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಈ ಬಾರಿ ದಸರಾ ಉಪಸಮಿತಿಗಳ ಸಂಖ್ಯೆ 17ರಿಂದ 18ಕ್ಕೆ ಏರಿಕೆಯಾಗಿದೆ. ಉಪಸಮಿಯ ಉಪ ವಿಶೇಷಾಧಿಕಾರಿಯಾಗಿ ಜಿ.ಪಂ ಸಿಇಒ ಎಸ್.ಉಕೇಶ್‌ಕುಮಾರ್, ಕಾರ್ಯಾಧ್ಯಕ್ಷರಾಗಿ ಜಿ.ಪಂ ಉಪಕಾರ್ಯದರ್ಶಿ ಭೀಮಪ್ಪ ಕೆ.ಲಾಳಿ, ಸಹಕಾರ್ಯಾಧ್ಯಕ್ಷರಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಪರಮೇಶ್, ಕಾರ್ಯದರ್ಶಿಯಾಗಿ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಪದ್ಮನಾಭ, ಸಹಕಾರ್ಯದರ್ಶಿಯಾಗಿ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರೆ ಮೈತ್ರಿ ಅವರನ್ನು ನೇಮಕ ಮಾಡಲಾಗಿದೆ.

ಇನ್ನು ಕಂಬಳಕ್ಕೆ ಸಾತಗಳ್ಳಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದ ಬಳಿ ಟ್ರ್ಯಾಕ್ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ಔಟರ್ ರಿಂಗ್ ರಸ್ತೆಗೆ ಹೊಂದಿಕೊಂಡಂತಿರುವ ಸಾತಗಳ್ಳಿ ಸರ್ವೆ ನಂ. 85, 88, 106 ಮತ್ತು 107ರಲ್ಲಿರುವ ಮೈಸೂರು ಅಭಿವೃದ್ಧಿ ಪ್ರಾಧಿಕಾರದ 17ಎಕರೆ 35 ಗುಂಟೆ ಜಾಗದಲ್ಲಿ ಈ ಬೃಹತ್ ಕ್ರೀಡೆ ಆಯೋಜನೆಯಾಗುತ್ತಿದೆ. ಜೋಡಿ ಕೋಣಗಳು ಏಕಕಾಲದಲ್ಲಿ ಓಡಲು ಅನುಕೂಲವಾಗುವಂತೆ 250 ಮೀಟರ್ ಉದ್ದ ಹಾಗೂ 50 ಅಡಿ ಅಗಲದ ಎರಡು ಸಮಾಂತರ ಓಟದ ಟ್ರ್ಯಾಕ್ ನಿರ್ಮಿಸಲಾಗುತ್ತಿದೆ.

ಈಗಾಗಲೇ ಬೃಹತ್ ಯಂತ್ರಗಳನ್ನು ಬಳಸಿ ಭೂಮಿ ಸಮತಟ್ಟು ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಕಂಬಳದ ನಂತರ ಈ ಜಾಗವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರಿಸಲಾಗುತ್ತಿದ್ದು, ಇಲ್ಲಿ ಸೈಕ್ಲಿಂಗ್ ವೆಲೋಡ್ರೋಮ್ ನಿರ್ಮಿಸುವ ಯೋಜನೆಯಿದೆ. ಕಂಬಳದ ಕೆಸರು ಟ್ರ್ಯಾಕ್ ನಿರ್ಮಾಣ ಮಾಡಲು ಅಪಾರ ಪ್ರಮಾಣದ ನೀರು ಅಗತ್ಯವಿರುವುದರಿಂದ, ಸೂಕ್ತ ಜಲಮೂಲಗಳನ್ನು ಗುರುತಿಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ತಜ್ಞರು ಭೂ ಸಮೀಕ್ಷೆ ನಡೆಸುತ್ತಿದ್ದಾರೆ.
ಅಗತ್ಯ ಬಿದ್ದರೆ ಸರಣಿ ಕೊಳವೆಬಾವಿಗಳನ್ನು (ಬೋರ್‌ವೆಲ್) ಕೊರೆಸಲು ನಿರ್ಧರಿಸಲಾಗಿದೆ. ಸ್ಥಳೀಯವಾಗಿರುವ ಮರಗಳನ್ನು ಕಡಿಯದೆ, ಅವುಗಳನ್ನು ಅಂಗಳದ ವಿನ್ಯಾಸದಲ್ಲೇ ಉಳಿಸಿಕೊಳ್ಳಲಾಗುತ್ತಿದೆ. ಓಟದ ಟ್ರ್ಯಾಕ್ ಕೆಲಸ ಪೂರ್ಣಗೊಂಡ ತಕ್ಷಣ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲು ಆಯೋಜಕರು ಸಿದ್ಧತೆ ನಡೆಸಿದ್ದಾರೆ








