ಹುಣಸೂರು(ಮನುಕುಮಾರ್): ಹೊಲದಲ್ಲಿ ಬೆಳೆದಿದ್ದ ಶುಂಠಿ ಬೆಳೆಯನ್ನು ಕಳ್ಳರು ರಾತ್ರಿ ವೇಳೆ ಕಿತ್ತು ಕದ್ದೊಯ್ದಿರುವ ಘಟನೆ ತಾಲೂಕಿನ ಕಸಬಾ ಹೋಬಳಿಯ ನಂಜಾಪುರ ಗ್ರಾಮದ ಕೃಷ್ಣಶೆಟ್ಟಿರವರ ಜಮೀನಿನಲ್ಲಿ ಈ ಘಟನೆ ನಡೆದಿದೆ.
ನಂಜಾಪುರ ಗ್ರಾಮದ ತಮ್ಮ ಜಮೀನಿನಲ್ಲಿ 30 ಗುಂಟೆಯಷ್ಠು ಶುಂಠಿ ಬೆಳೆದಿದ್ದರು. ಶುಂಠಿ ಬೆಳೆಯೂ ಉತ್ತಮವಾಗಿ ಬಂದಿದ್ದು, ಗುರುವಾರ ರಾತ್ರಿ ಯಾರೋ ಕಳ್ಳರು ಸುಮಾರು 20 ಸಾವಿರ ಬೆಲೆಬಾಳುವ 10 ರಿಂದ 15 ಚೀಲದಷ್ಟು ಶುಂಠಿ ಬೆಳೆಯನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಬಿಳಿಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಳ್ಳರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಇಷ್ಟು ದಿವಸ ಮನೆ-ಅಂಗಡಿಗಳಲ್ಲಿ ಕಳ್ಳತನ ಮಾಡುವುದು, ಪಂಪ್ ಸೆಟ್, ಸ್ಲಿಂಕ್ಲರ್ ಸೆಟ್ ಗಳನ್ನು ಕಳ್ಳರು ಹೊತ್ತೊಯ್ಯುತ್ತಿದ್ದರು. ಇದೀಗ ಶುಂಠಿ ಬೆಲೆ ಗಗನಕ್ಕೇರಿರುವುದರಿಂದ ಶುಂಠಿಬೆಳೆ ಮೇಲೂ ಕಳ್ಳರು ಕಣ್ಣು ಹಾಯಿಸಿದ್ದು, ರೈತರು ಕಷ್ಟಪಟ್ಟು ಸಾಲಸೋಲ ಮಾಡಿ ಬೆಳೆದ ಬೆಳೆಯೂ ದಕ್ಕದಂತಾಗಿದೆ ಎಂದು ಗ್ರಾಮದ ಗ್ರಾ.ಪಂ.ಸದಸ್ಯ ಮನುಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಪೊಲೀಸರ ಭೇಟಿ: ನಂಜಾಪುರ ಗ್ರಾಮದ ಶುಂಠಿ ಕಳತನವಾದ ಜಮೀನಿಗೆ ಬಿಳಿಕೆರೆ ಠಾಣೆ ಎಸ್ ಐ ಅಪ್ಪಣೆ ಮೇರೆಗೆ ಅಪರಾಧ (ಕ್ರೈಂ) ವಿಭಾಗ ಸತೀಶ್ ಮತ್ತು ತಂಡ ಪರಿಶೀಲನೆ ನಡೆಸಿ ಆದಷ್ಟು ಬೇಗ ಕಳ್ಳರನ್ನು ಪತ್ತೆ ಹಚ್ಚಲಾಗುವುದು ಎಂದು ತಿಳಿಸಿದ್ದಾರೆ.








