LatestMysore

ದೌರ್ಜನ್ಯ, ಶೋಷಣೆ, ಅನ್ಯಾಯದ ವಿರುದ್ಧ ಪ್ರತಿಭಟಿಸಲು  ‘ಸಾಹಿತ್ಯ’ ಪ್ರಬಲ ಅಸ್ತ್ರ: ಸತೀಶ್ ಜವರೇಗೌಡ

ಮಳವಳ್ಳಿ: ಸಮಾಜದಲ್ಲಿನ ತಳಸಮುದಾಯದ ಜನರ ಮೇಲೆ ಆಗುತ್ತಿರುವ ದೌರ್ಜನ್ಯ, ಶೋಷಣೆ, ಅನ್ಯಾಯದ ವಿರುದ್ಧ ಪ್ರತಿಭಟಿಸುವ ಶಕ್ತಿ ಕೊಡುವ ಸಾಹಿತ್ಯವು ಹೋರಾಟದ ಒಂದು ಪ್ರಬಲ ಅಸ್ತ್ರ ಎಂದು  ಯುವ ಬರಹಗಾರರ ಬಳಗದ ಅಧ್ಯಕ್ಷ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ ಅಭಿಪ್ರಾಯಪಟ್ಟರು.

ಪಟ್ಟಣದ ಯೂನಿವರ್ಸಲ್ ಸೇವಾ ಟ್ರಸ್ಟಿನ ಕಚೇರಿಯಲ್ಲಿ ದಲಿತ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಡೆದ ರಾಜ್ಯ ಮಟ್ಟದ ‘ಅಕ್ಷರದವ್ವ ಕವಿಗೋಷ್ಠಿ, ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಿಡುಗಡೆ’ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಯಾವುದೇ ಕಾವ್ಯದಲ್ಲಿ ಪ್ರತಿಭಟನೆಯ ದನಿಯಿರಬೇಕು. ಆಗ ಹೋರಾಟದ ಕಾವು ಇಮ್ಮಡಿಯಾಗುತ್ತದೆ. ಕಾವ್ಯವು ಆಂದೋಲನಗಳಿಗೆ, ಚಳವಳಿಗಳಿಗೆ ಶಕ್ತಿ ತುಂಬಿದಾಗ ಮಾತ್ರ ಜನರ ಎದೆಯಲ್ಲಿ ಹೋರಾಟದ ಬೀಜ ಬಿದ್ದು, ಅದು ಚಿಗಿತು, ಬಳಿಕ ಹೆಮ್ಮರವಾಗಲು ಸಾಧ್ಯ ಎಂದು ನುಡಿದರು.

ಎಲ್ಲ ಕಾಲದ ಸಮಾಜದಲ್ಲಿಯೂ ಶೋಷಣೆಯ ಕ್ರೂರತೆಯಿತ್ತು. ಅದು ಈಗಲೂ ದೌರ್ಜನ್ಯದ ನಾನಾ ಮುಖಗಳ ತೋರುತ್ತಲೇ ಇದೆ. ಇಂತಹ ಶೋಷಣೆಯ ವಿರುದ್ಧ ಶಿಕ್ಷಣ ಜಾಗೃತಿ ಮೂಡಿಸಿದರೆ, ಸಾಹಿತ್ಯ ಪ್ರತಿಭಟಿಸುವ ಶಕ್ತಿಯನ್ನು ಧಾರಣೆ ಮಾಡುತ್ತದೆ ಎಂದು ವ್ಯಾಖ್ಯಾನಿಸಿದರು.

ವರ್ತಮಾನದ ಕಾವ್ಯಕ್ಕೆ ಬೇಕಾದ ವಸ್ತು ವಿಷಯಗಳು ಜಗತ್ತಿನಲ್ಲಿ ಬೇಕಾದಷ್ಟಿವೆ. ನೂರಾರು ಸಮಸ್ಯೆಗಳು ಮತ್ತು ತಲ್ಲಣಗಳು ಬದುಕನ್ನು ಕಾಡುತ್ತಿವೆ. ಇವೆಲ್ಲವನ್ನೂ ಕವಿಗಳು ತಮ್ಮ ಕಾವ್ಯದಲ್ಲಿ ಪ್ರತಿಬಿಂಬಿಸಬೇಕು. ಆ ಮೂಲಕ ಆಡಳಿತ ವ್ಯವಸ್ಥೆಗೆ ಮುಟ್ಟಿಸಬೇಕು. ಆಗ ಕಾವ್ಯ ಸಮಾಜಮುಖಿ ಆಗಲು ಸಾಧ್ಯ ಎಂದರು.

ರಾಜ್ಯಮಟ್ಟದ ‘ಅಕ್ಷರದವ್ವ ಕವಿಗೋಷ್ಠಿ’ಯ ಸರ್ವಾಧ್ಯಕ್ಷತೆ ವಹಿಸಿದ್ದ ಕವಯತ್ರಿ ಹಾಗೂ ಸಮಾಜ ಸೇವಕಿ ಹೆಚ್.ಆರ್. ಕನ್ನಿಕಾ ಮಾತನಾಡಿ ನಮ್ಮ ಭಾರತದ ಶಿಕ್ಷಣ ಸಂಸ್ಕಾರ ಮತ್ತು ಮೌಲ್ಯಯುತ ಜೀವನ ಕೊಡುತ್ತದೆ. ಆ ಮೂಲಕ ಉತ್ತಮ ಜೀವನದ ದಾರಿ ತೋರುತ್ತದೆ ಎಂದರು.

ಮಾನವ ಜೀವನ ಕ್ಷಣಿಕವಾದುದು. ಇಂತಹ ಜೀವನದಲ್ಲಿ ನಾವು ದುಡಿದುದ್ದರ ಒಂದು ಭಾಗವನ್ನು ಸಮಾಜ ಸೇವಾ ಕಾರ್ಯಗಳಿಗೆ ವಿನಿಯೋಗಿಸಬೇಕು. ಇಂತಹ ಸೇವೆಯನ್ನು ಆತ್ಮಸಂತೋಷಕ್ಕಾಗಿ ಮಾಡಬೇಕೇ ಹೊರತು, ಪ್ರಚಾರಕ್ಕಾಗಿ ಮಾಡಬಾರದು ಎಂದು ಕಿವಿಮಾತು ಹೇಳಿದರು.

ಸಾಹಿತಿಗಳು ಸಮಾಜದ ಗುರುಗಳಿದ್ದಂತೆ. ಅವರು ಸಮಾಜದ ಲೋಪ- ದೋಷಗಳನ್ನು ತಿದ್ದಬೇಕು. ಆದರೆ, ಇಂದು ಸಾಹಿತಿಗಳು ಪ್ರಶಸ್ತಿಗಳ ಬೆನ್ನು ಬಿದ್ದಿದ್ದಾರೆ. ಪರಸ್ಪರ ದ್ಚೇಷಸೂಯೆಯಿಂದ ಇಟ್ಟುಕೊಂಡು ತಮ್ಮ ತಮ್ಮಲ್ಲೇ ಕಚ್ಚಾಡಬಾರದು ಎಂದು ಕಿವಿಮಾತು ಹೇಳಿದರು.

ಯೂನಿವರ್ಸಲ್ ಸೇವಾಟ್ರಸ್ಟ್ ಅಧ್ಯಕ್ಷ ಟಿ.ಎಂ. ಪ್ರಕಾಶ್ ಸಮಾರಂಭವನ್ನು ಉದ್ಘಾಟಿಸಿದರು. ತಾಲ್ಲೂಕು ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚುಂಚಣ್ಣ ಬಿ. ಕಲ್ಲಾರೆಪುರ ಅಧ್ಯಕ್ಷತೆ ವಹಿಸಿದ್ದರು. ದಸಾಪ ಜಿಲ್ಲಾಧ್ಯಕ್ಷ ಹುರುಗಲವಾಡಿ ರಾಮಯ್ಯ ಆಶಯ ನುಡಿಗಳನ್ನಾಡಿದರು. ಹುಣಸೂರಿನ ಪೂರ್ಣಚಂದ್ರ ಅವರ ‘ಒಳಗಣ್ಣು ತರೆದು ನೋಡು’ ಕವನ ಸಂಕಲನವನ್ನು ಸಮಾಜ ಸೇವಕ ಎಂ. ವಿನಯ್ ಕುಮಾರ್ ಬಿಡುಗಡೆ ಮಾಡಿದರು.

ಬಳಿಕ ನಡೆದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕವಯತ್ರಿ ಪಿ. ನಾಗರತ್ನಮ್ಮ ವಹಿಸಿದ್ದರು. ಕವಯತ್ರಿ ಶಿಲ್ಪ ಮುತ್ತು ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದ ಸಾಧಕರಿಗೆ ‘ಅಕ್ಷರದವ್ವ ಉತ್ತಮ ಶಿಕ್ಷಕ-ಶಿಕ್ಷಕಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

admin
the authoradmin

ನಿಮ್ಮದೊಂದು ಉತ್ತರ