LatestMysore

ಬಿ.ಆರ್. ಕಾವಲ್ ಗ್ರಾಮದ ಅಲೆಮಾರಿ ಕುಟುಂಬಗಳಿಗೆ ವಸತಿ ಕಲ್ಪಿಸಲು ದಸಂಸ ಮನವಿ

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ಹುಣಸೂರು ತಾಲ್ಲೂಕು ಹನಗೋಡು ಹೋಬಳಿ, ಕಡೇಮನುಗನಹಳ್ಳಿ ಗ್ರಾಮ ಪಂಚಾಯ್ತಿಗೆ ಒಳಪಡುವ ಬಿ.ಆರ್ ಕಾವಲ್ ಗ್ರಾಮದ ನಿರ್ಗತಿಕ ಡೋಂಗ್ರಿ ಗೆರಾಸಿಯಾ ಅಲೆಮಾರಿ ಕುಟುಂಬಗಳಿಗೆ ವಾಸಿಸಲು ಮನೆಗಳನ್ನು ಕಡೆಮನುಗನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ದಸಂಸ ದ ವತಿಯಿಂದ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ದಸಂಸ ರಾಜ್ಯ ಸಂಘಟನಾ ಸಂಚಾಲಕರಾದ ನಿಂಗರಾಜ್ ಮಲ್ಲಾಡಿ ರವರು ಮಾತನಾಡಿ ಬಿ.ಆರ್. ಕಾವಲ್ ಗ್ರಾಮದಲ್ಲಿ ಸುಮಾರು 200 ಡೋಂಗ್ರಿ ಗೆರಾಸಿಯಾ ಅಲೆಮಾರಿ ಕುಟುಂಬಗಳು ವಾಸ ಮಾಡುತ್ತಿದ್ದು, ಈಕುಟುಂಬಗಳ ಪೈಕಿ 30 ಕುಟುಂಬಗಳಿಗೆ ವಾಸಿಸಲು ಮನೆಯಿಲ್ಲದೆ ರಸ್ತೆ ಬದಿಗಳಲ್ಲಿ, ಪಾಳು ಜಾಗಗಳಲ್ಲಿ ಕಚ್ಚಾ ಗುಡಿಸಲುಗಳನ್ನು ಕಟ್ಟಿಕೊಂಡು ಹರಿದ ಸೀರೆ ಬಟ್ಟೆಗಳ ಹೊದಿಕೆಯೊಂದಿಗೆ ಮಳೆ, ಗಾಳಿ, ಚಳಿಯೆನ್ನದೆ ಅತ್ಯಂತ ಶೋಚನೀಯವಾಗಿ  ಜೀವನ ಸಾಗಿಸುತ್ತಿದ್ದಾರೆ.

ಹುಟ್ಟು ಸಾವುಗಳಿಗೆ ದಾಖಲೆಗಳು ಸಹ ಇಲ್ಲದೆ ಅವಮಾನ ಅಪಮಾನಗಳನ್ನು ಸಹಿಸಿಕೊಂಡು ವಾಸಿಸಲು ನೆಲೆಯಿಲ್ಲದೆ ಸಂಕಷ್ಟದ ಬದುಕು ದೂಡುತ್ತಿದ್ದಾರೆ. ಈ ಡೋಂಗ್ರಿ ಗೆರಾಸಿಯಾ ಕುಟುಂಬಗಳಿಗೆ ಅಲೆಮಾರಿ ಅಭಿವೃದ್ಧಿ ನಿಗಮದ ವತಿಯಿಂದ ವಾಸಿಸಲು ಮನೆ ಇತರೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಹಲವಾರು ವರ್ಷಗಳಿಂದ ದಸಂಸ ವು ಹೋರಾಟ ಮಾಡುತ್ತಾ ಬರುತ್ತಿದ್ದರೂ ಕಣ್ಣು, ಕಿವಿ ಇಲ್ಲದ ಅಧಿಕಾರಿಗಳು ದಿಕ್ಕು ದನಿಯಿಲ್ಲದ ಈ ಅಲೆಮಾರಿ ಕುಟುಂಬಗಳಿಗೆ ವಾಸಿಸಲು ಮನೆ, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಯಾವುದೇ ಕ್ರಮ ವಹಿಸಿರಲಿಲ್ಲ.

ಈ ಸಂಬಂಧ ದಸಂ ಸ ವು ಹುಣಸೂರು ಶಾಸಕರಾದ ಜಿ.ಡಿ. ಹರೀಶ್ ಗೌಡ ರವರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಯತೀಂದ್ರ ಸಿದ್ಧರಾಮಯ್ಯ ರವರಿಗೆ ಪ್ರಜಾಸೇವಾ ಅಹವಾಲು ಸಭೆಯಲ್ಲಿ ಮನವಿ ಸಲ್ಲಿಸಲಾಗಿತ್ತು. ಶಾಸಕರಾದ ಜಿ.ಡಿ ಹರೀಶ್ ಗೌಡ ರವರು ಕಾರ್ಯನಿರ್ವಹಣಾಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣವೇ ಬಿ.ಆರ್. ಕಾವಲ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಲೆಮಾರಿ ಕುಟುಂಬಗಳಿಗೆ ವಾಸಿಸಲು ಮನೆ, ಇತರೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಸೂಚಿಸಿದ್ದರು.

ಈ ಹಿನ್ನೆಲೆಯಲ್ಲಿ ಕಾರ್ಯನಿರ್ವಹಣಾಧಿಕಾರಿ ಹೊಂಗಯ್ಯ ರವರ ಆದೇಶದಂತೆ ಕಡೇಮನುಗನಹಳ್ಳಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ಸಮಾಜ ಕಲ್ಯಾಣಾಧಿಕಾರಿಗಳು, ಗ್ರಾಮದಲ್ಲಿ ಪರಿಶೀಲಿಸಿ 30 ನಿರ್ಗತಿಕ ಡೋಂಗ್ರಿ ಗೆರಾಸಿಯ ಅಲೆಮಾರಿ ಕುಟುಂಬಗಳು ವಾಸಿಸಲು ಮನೆಗಳಿಲ್ಲದೆ ಹರುಕಲು ಮುರುಕಲು ಗುಡಿಸಲುಗಳಲ್ಲಿ ವಾಸ ಮಾಡುತ್ತಿರುವ ಬಗ್ಗೆ ಮಹಜರ್ ನಡೆಸಿ 30 ಅಲೆಮಾರಿ ಕುಟುಂಬಗಳಿಗೆ ವಾಸಿಸಲು ಮನೆ ಅಗತ್ಯವಾಗಿ ಬೇಕಾಗಿರುತ್ತದೆಂದು ದೃಢೀಕರಿಸಿಕೊಂಡು ಅಲೆಮಾರಿ ಅಭಿವೃದ್ಧಿ ನಿಗಮದಿಂದ ಈ ಕುಟುಂಬಗಳಿಗೆ ಮನೆಗಳು ಮತ್ತು ಇತರೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿರುತ್ತಾರೆ.

ಇದು ದಿಕ್ಕು ದನಿಯಿಲ್ಲದ ಅಲೆಮಾರಿ ಕುಟುಂಬಗಳ ಜೊತೆ ನಿರಂತರವಾಗಿ ದಸಂಸ ವು ಹೋರಾಟದ ಫಲದಿಂದ ನ್ಯಾಯ ಸಿಕ್ಕಿದಂತಾಗಿದೆ. ನೊಂದವರು, ಹಸಿದವರು, ಬೀದಿಯಲ್ಲಿ ಬಿದ್ದ ಜನರೊಂದಿಗೆ ದಸಂಸ ವು ಯಾವಾಗಲೂ ನಿಲ್ಲಲಿದೆ ಎಂದರು.

ಈ ಸಂದರ್ಭದಲ್ಲಿ ಕಡೇಮನುಗನಹಳ್ಳಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಾದ ದೇವರಾಜು, ಬಿಲ್ ಕಲೆಕ್ಟರ್ ಉಮೇಶ, ಅಲೆಮಾರಿ ಮುಖಂಡ ಶಿವರಾಜು ಕೆಪ್ಪೆ ಕೊಪ್ಪಲು,  ಬಿ.ಆರ್. ಕಾವಲ್ ಗ್ರಾಮದ ಪ್ರಕಾಶ, ಗೋವಿಂದ, ಪಾಂಡುರಂಗ, ಸುರೇಶ, ಮಹಿಳೆಯರಾದ ಸಕ್ಕೂಬಾಯಿ, ಸುಶೀಲ, ಸವಿತಾ, ಯಮುನಾಬಾಯಿ, ಕಮಲಾಬಾಯಿ, ಅನಿತಾ, ಸುಶೀಲ ನಂದಿನಿ, ಸರೋಜ, ಸುಮಿತ್ರ, ಲಕ್ಷ್ಮಿ ಸಾವಿತ್ರಿ, ವಸಂತ, ಸವಿತಾ, ಲಕ್ಷ್ಮಿಬಾಯಿ ಮುಂತಾದವರು ಹಾಜರಿದ್ದರು.

admin
the authoradmin

ನಿಮ್ಮದೊಂದು ಉತ್ತರ