ದೇವಲಾಪುರ ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದಲ್ಲಿ ಶ್ರಾವಣಮಾಸದ ಪ್ರವಚನ ಸಮಾರೋಪ
ವಚನ ಪಾಠಶಾಲೆಯ ಮಕ್ಕಳಿಂದ ಅನುಭವ ಮಂಟಪ ನಾಟಕ ಪ್ರದರ್ಶನ


ಮೈಸೂರು: ಮೈಸೂರು ತಾಲೂಕಿನ ದೇವಲಾಪುರದ ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಏರ್ಪಡಿಸಲಾಗಿದ್ದ ಪ್ರವಚನ ಕಾರ್ಯಕ್ರಮದ ಸಮಾರೋಪ ಸಮಾರಂಭವು ಭಕ್ತಿಭಾವ ಹಾಗೂ ಸಾಂಸ್ಕೃತಿಕ ವೈಭವದಿಂದ ನೆರವೇರಿತು. ಸಮಾರಂಭದ ಅಂಗವಾಗಿ ವಚನ ಪಾಠಶಾಲೆಯ ವಿದ್ಯಾರ್ಥಿಗಳು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ವಚನ ಕುಮಾರಸ್ವಾಮಿ ಮತ್ತು ರೂಪ ಕುಮಾರಸ್ವಾಮಿ ಅವರ ರಚನೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದ ಅನುಭವ ಮಂಟಪ ನಾಟಕವನ್ನು ಅತ್ಯಂತ ಮನೋಜ್ಞವಾಗಿ ಪ್ರದರ್ಶಿಸಿದರು.

ವಿದ್ಯಾರ್ಥಿಗಳ ಅಭಿನಯವು ಸಾಕ್ಷಾತ್ ಶರಣರ ಲೋಕವನ್ನೇ ಧರೆಗಿಳಿಸಿದಂತೆ ಭಾಸವಾಯಿತು. 12ನೇ ಶತಮಾನದ ಶಿವಶರಣರ ವೇಷಭೂಷಣ ಹಾಗೂ ಉಡುಗೆ-ತೊಡುಗೆಗಳನ್ನು ಧರಿಸಿ, ಅನುಭವ ಮಂಟಪದ ದಿವ್ಯ ಪರಿಕಲ್ಪನೆಯನ್ನು ಪ್ರೇಕ್ಷಕರ ಮುಂದೆ ಕಟ್ಟಿಕೊಡುವಲ್ಲಿ ಮಕ್ಕಳು ಯಶಸ್ವಿಯಾದರು. ಅವರ ಸಂಭಾಷಣೆ, ಅಭಿನಯ ಹಾಗೂ ಭಾವಾಭಿವ್ಯಕ್ತಿಗೆ ಸಭಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.

ಅಕ್ಕಮಹಾದೇವಿಯವರು ಉಡುತಡಿಯಿಂದ ಬಸವಕಲ್ಯಾಣಕ್ಕೆ ಆಗಮಿಸುವ ಸನ್ನಿವೇಶ, ನಂತರ ಅನುಭವ ಮಂಟಪದಲ್ಲಿ ಅಲ್ಲಮಪ್ರಭುಗಳೊಂದಿಗೆ ನಡೆಯುವ ಸಂವಾದ ಹಾಗೂ ವಿವಿಧ ಶಿವಶರಣರು ಅನುಭವ ಮಂಟಪದಲ್ಲಿ ತಮ್ಮ ಅನುಭಾವಿಕ ವಚನಗಳನ್ನು ಪ್ರಸ್ತುತಪಡಿಸುವ ಸನ್ನಿವೇಶಗಳನ್ನು ವಿದ್ಯಾರ್ಥಿಗಳು ಪರಿಣಾಮಕಾರಿಯಾಗಿ ಅಭಿನಯಿಸಿದರು.

ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಮಾತನಾಡಿ, ಶರಣನ ನೆನೆದು ಶರಣನಾದೆನಯ್ಯಾ ಎಂಬಂತೆ ವಿದ್ಯಾರ್ಥಿಗಳು ಶರಣರ ವೇಷಭೂಷಣ ಧರಿಸಿ ಅವರ ಪಾತ್ರಗಳನ್ನು ಅಭಿನಯಿಸುವುದರಿಂದ ಶರಣರ ಸಂಸ್ಕೃತಿ ಹಾಗೂ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸಾಧ್ಯವಾಗುತ್ತದೆ. ಇಂತಹ ಕಾರ್ಯಕ್ರಮಗಳು ಶರಣರಲ್ಲಿರುವ ದಿವ್ಯ ಗುಣಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲು ಪೂರಕವಾಗಿವೆ ಎಂದರು.

ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ಮಾತನಾಡಿ, ಅನುಭವ ಮಂಟಪ ನಾಟಕವು ಅಲ್ಲಿನ ವೈಚಾರಿಕ ಮೌಲ್ಯಗಳನ್ನು ನಮಗೆ ಗೊತ್ತಿಲ್ಲದಂತೆ ನಮ್ಮೊಳಗೆ ಆವಾಹನೆಗೊಳಿಸುತ್ತದೆ. ಇಂತಹ ನಾಟಕಗಳು ವಿದ್ಯಾರ್ಥಿಗಳಲ್ಲಿ ಸಚ್ಚಿಂತನೆ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.

ದೇವಲಾಪುರ ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದ ಶ್ರೀ ಜಡೇಸ್ವಾಮಿಗಳು ಮಾತನಾಡಿ, ಇಂದು ಸಾಕ್ಷಾತ್ ಶರಣರೇ ದೇವಲಾಪುರದ ಮಠಕ್ಕೆ ಪ್ರವೇಶಿಸಿದಂತೆ ಭಾಸವಾಗುತ್ತಿದೆ. ಇವರು ಕೇವಲ ವಿದ್ಯಾರ್ಥಿಗಳಲ್ಲ; ಜಗಜ್ಯೋತಿ ಬಸವಣ್ಣ, ಅಲ್ಲಮಪ್ರಭು, ಮಡಿವಾಳ ಮಾಚಿದೇವರೇ ಆಗಿ ಕಂಗೊಳಿಸಿದ್ದಾರೆ. ಮಕ್ಕಳ ರೂಪದಲ್ಲಿದ್ದ ಶರಣರ ದರ್ಶನದಿಂದ ಹಾಗೂ ಅವರ ಚರಣಸ್ಪರ್ಶದಿಂದ ನಮ್ಮ ಮಠವು ಅತ್ಯಂತ ಪಾವನವಾಗಿದೆ ಎಂದು ತುಂಬು ಹೃದಯದ ಸಂತಸ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಭರತನಾಟ್ಯ ಕಲಾವಿದೆ ಸಿ.ಕೆ. ವಚನ ಶರಣರ ವಚನಗಳಿಗೆ ಮನಮೋಹಕ ನೃತ್ಯ ಪ್ರದರ್ಶನ ನೀಡಿದರು. ಎಂ. ತನುಶ್ರೀ ಮತ್ತು ಎಂ. ಮಂಜುನಾಥ್ ಪ್ರಸಾದ್ ಅವರು ನಡೆಸಿಕೊಟ್ಟ ಯೋಗ ಪ್ರದರ್ಶನವು ಸಹ ಎಲ್ಲರ ಗಮನ ಸೆಳೆಯಿತು.

ಇದೇ ಸಂದರ್ಭದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ರೂಪ ಕುಮಾರಸ್ವಾಮಿ ಮತ್ತು ಸಿ ಕೆ ವಚನ ಅವರಿಗೆ ಶ್ರೀ ಗುರುಮಲ್ಲೇಶ್ವರ ವಚನ ಸಂಸ್ಕಾರ ಪುರಸ್ಕಾರ ನೀಡಿ ಗೌರವಿಸಲಾಯಿತು. ಯೋಗ ಪ್ರದರ್ಶನ ಮಾಡಿದ ಎಂ ತನುಶ್ರೀ ಮತ್ತು ಎಂ. ಮಂಜುನಾಥ್ ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮೈಸೂರು ಶ್ರೀ ಮಡಿವಾಳೇಶ್ವರ ಮಠದ ಶ್ರೀ ಇಮ್ಮಡಿ ಮಡಿವಾಳ ಸ್ವಾಮಿಗಳು, ಸೋಮೇಶ್ವರಪುರ ಮಠದ ಶ್ರೀ ಗುರುಸ್ವಾಮಿಗಳು, ಸಿಂಧುವಳ್ಳಿ ಮಠದ ಶ್ರೀ ಶಿವಕುಮಾರಸ್ವಾಮಿಗಳು, ಏಚಗಳ್ಳಿ ಮಠದ ಶ್ರೀ ಮೂರ್ತಿಸ್ವಾಮಿಗಳು, ಶರಣು ವಿಶ್ವವಚನ ಫೌಂಡೇಷನ್ ಕೇಂದ್ರೀಯ ಸಂಚಾಲಕ ವಿ. ಲಿಂಗಣ್ಣ ಹಾಗೂ ಉಪಾಧ್ಯಕ್ಷ ಶಿವಪುರ ಉಮಾಪತಿ ಉಪಸ್ಥಿತರಿದ್ದರು. ದೇವಿಕಾ ಪ್ರಾರ್ಥಿಸಿದರು. ಲಿಂಗಣ್ಣ ಸ್ವಾಗತಿಸಿದರು. ನಾಗರಾಜು ವಂದಿಸಿದರು. ಗುರುಮಲ್ಲೇಶ್ ಕಾರ್ಯಕ್ರಮವನ್ನು ನಿರೂಪಿಸಿದರು.








