ArticlesDasaraLatest

ಮೈಸೂರು ದಸರಾದ ಕಥೆ ಹೇಳುವ ‘ಸೀತಾವಿಲಾಸ ಛತ್ರ’ ಇದು ಇತಿಹಾಸದ ಸಾಕ್ಷಿ!

ಮೈಸೂರು ರಾಜರ ಆಡಳಿತದ ಕಾಲದಲ್ಲಿ ಪ್ರಜೆಗಳು ರಾಜರನ್ನು ದೈವಸ್ವರೂಪಿ ಎಂಬಂತೆ ನೋಡುತ್ತಿದ್ದರು. ರಾಜರನ್ನು ನೋಡುವುದು ಪ್ರಜೆಗಳಿಗೆ ಸುಲಭವಾಗಿರಲಿಲ್ಲ. ಹೀಗಾಗಿ ದಸರಾ ಸಂದರ್ಭದಲ್ಲಿ ಜಂಬೂಸವಾರಿಯಲ್ಲಿ ಅಂಬಾರಿಯಲ್ಲಿ ಕುಳಿತು ಸಾಗುವ ಮಹಾರಾಜರನ್ನು ನೋಡಲು ಪ್ರಜೆಗಳು ಹಾತೊರೆಯುತ್ತಿದ್ದರು. ಹೀಗಾಗಿಯೇ ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳಲ್ಲದೆ, ದೂರದ ಊರುಗಳಿಂದಲೂ ಜನ ಮೈಸೂರಿನ ಕಡೆಗೆ ಮುಖ ಮಾಡುತ್ತಿದ್ದರು.

(ಓದುವ ಬದಲಿಗೆ ಈ  seethavilasa chatra Audio     ಲಿಂಕ್ ನ್ನು .ಒತ್ತಿ… ಆಲಿಸಿ.)

ಸಾರಿಗೆ ಸಂಚಾರದ ಸೌಲಭ್ಯವಿಲ್ಲದ ಕಾಲದಲ್ಲಿ ಕೆಲವರು ಕಾಲ್ನಡಿಯಲ್ಲಿ ಬಂದರೆ ಮತ್ತೆ ಕೆಲವರು ಎತ್ತಿನ ಗಾಡಿಗಳಲ್ಲಿ ಮೈಸೂರಿಗೆ ಆಗಮಿಸುತ್ತಿದ್ದರು. ದಸರಾ ಆರಂಭಕ್ಕೆ ಮುನ್ನವೇ ಬಂದು ನಗರದಲ್ಲಿ ಬೀಡು ಬಿಡುತ್ತಿದ್ದ ಜನರು ದಸರಾ ಸಡಗರದಲ್ಲಿ ಪಾಲ್ಗೊಂಡು ರಾಜವೈಭವವನ್ನು ಕಣ್ಣಾರೆ ನೋಡಿ ಖುಷಿಪಡುತ್ತಿದ್ದರು.

ಇನ್ನು ಸಂತೆಯಲ್ಲಿ ಒಂದಷ್ಟು ವಸ್ತುಗಳನ್ನು ಖರೀದಿಸಿ, ಮತ್ತೊಂದಷ್ಟು ತಿನಿಸುಗಳ ರುಚಿಯನ್ನು ಸವಿದು ದಸರಾದ ಸುಂದರ ದೃಶ್ಯಗಳನ್ನು ಮೆಲುಕು ಹಾಕುತ್ತಾ ತಮ್ಮ ಊರಿನತ್ತ ಹೆಜ್ಜೆಹಾಕುತ್ತಿದ್ದರು ಮಹಾರಾಜರು ದಸರಾ ವೇಳೆಗೆ ಮಾತ್ರವಲ್ಲದೆ, ಇತರೆ ದಿನಗಳಲ್ಲಿ ದೂರದ ಊರುಗಳಿಂದ ಬರುವವರು ನಗರದಲ್ಲಿ ವಾಸ್ತವ್ಯ ಹೂಡಲು  ನಗರದ ಹಲವೆಡೆ  ಛತ್ರಗಳನ್ನು ನಿರ್ಮಿಸಿದ್ದರು. ಇಲ್ಲಿ ಕೆಲವು ದಿನಗಳವರೆಗೆ ತಂಗಲು ಅವಕಾಶವಿತ್ತು. ಈ ವೇಳೆ ಊಟ, ತಿಂಡಿ, ಇನ್ನಿತರ ಅಗತ್ಯತೆಗಳನ್ನು ನೋಡಿಕೊಳ್ಳಲಾಗುತ್ತಿತ್ತು.

ಇಂತಹ ಛತ್ರಗಳು ಮೈಸೂರಿನಲ್ಲಿ ಹಲವಾರು ಇವೆ. ಈ ಪೈಕಿ ಚಾಮರಾಜ ಜೋಡಿ ರಸ್ತೆಯ ಶಾಂತಲ ಚಿತ್ರಮಂದಿರದ ಬಳಿಯಿರುವ ಸೀತಾವಿಲಾಸ ಛತ್ರ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತಿರುವುದನ್ನು ಕಾಣಬಹುದಾಗಿದೆ. ಇವತ್ತು ಈ ಛತ್ರ ಶಿಥಿಲಾವಸ್ಥೆಗೆ ತಲುಪಿದಂತೆ ಗೋಚರಿಸುತ್ತಿದ್ದು, ಇಲ್ಲಿ ಹಲವು ಕುಟುಂಬಗಳು ಆಶ್ರಯ ಪಡೆದಿರುವುದನ್ನು ಕಾಣಬಹುದಾಗಿದೆ.

ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ದಸರಾ ವೀಕ್ಷಣೆಗೆ ಬರುವವರಿಗೆ ವಾಸ್ತವ್ಯಕ್ಕೆ ತೊಂದರೆಯಾಗದಂತೆ ನಿರ್ಮಿಸಲಾಗಿರುವ ಸೀತಾ ವಿಲಾಸ ಛತ್ರ ಮೈಸೂರಿನ ಪಾರಂಪರಿಕ ಕಟ್ಟಡವಾಗಿದೆ. ಮೈಸೂರು ರಾಜರು ತಮ್ಮ ಆಡಳಿತಾವಧಿಯಲ್ಲಿ ಕೇವಲ ಅರಮನೆಗಳನ್ನಷ್ಟೆ ಅಲ್ಲದೆ ಅಲ್ಲಲ್ಲಿ ನೂರಾರು ಕಟ್ಟಡಗಳನ್ನು ನರ‍್ಮಿಸಿದ್ದರು ಎಂಬುದನ್ನು  ಈ ಛತ್ರ ಹೇಳುತ್ತಿದೆ.

ಸೀತಾ ವಿಲಾಸ ಛತ್ರ   ಇವತ್ತು  ಮೇಲ್ನೋಟಕ್ಕೆ ಪಾಳುಬಿದ್ದ ಕಟ್ಟಡದಂತೆ ಕಂಡು ಬಂದರೂ ಅದು ಇತರೆ ಕಟ್ಟಡಗಳಿಗಿಂತ ವಿಭಿನ್ನವಾಗಿ ಗಮನಸೆಳೆಯುತ್ತದೆ. ಇದೀಗ ಈ ಕಟ್ಟಡವು ಸುಮಾರು ನೂರಮೂವತ್ತು ವರ್ಷಗಳನ್ನು ಪೂರೈಸಿದೆ ಎನ್ನುವುದೇ ಖುಷಿಕೊಡುವ ವಿಚಾರವಾಗಿದೆ.

ಈ ಛತ್ರವು ವಿಶಾಲವಾದ ಜಗಲಿ ಮತ್ತು ಪ್ರಾಂಗಣ ಹೊಂದಿದ್ದು, ಕಟ್ಟಡಕ್ಕೆ ಬೃಹತ್ ಕಂಬಗಳು ಆಸರೆಯಾಗಿವೆ. ಛತ್ರದಲ್ಲಿರುವ  ಪ್ರತಿಯೊಂದು ಕೊಠಡಿಯೂ ವಿಶಾಲವಾಗಿದ್ದು, ಮಹಡಿಗೆ ತೆರಳಲು ಮರದ ಮೆಟ್ಟಿಲನ್ನು ನರ‍್ಮಿಸಲಾಗಿದ್ದು, ವಿದ್ಯುತ್ ಸಂಪರ್ಕಕ್ಕೆ ಮರದ ಪಟ್ಟಿಯನ್ನು ಬಳಸಲಾಗಿದ್ದು, ಮದ್ರಾಸ್ ತಾರಸಿಯಿಂದ ನಿರ್ಮಿಸಿದ ಕಟ್ಟಡವಾಗಿದೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಈ ಕಟ್ಟಡವನ್ನು ಮಹಾರಾಜರು ದಸರಾ ವೀಕ್ಷಿಸಲು ರಾಜ್ಯದ ಇತರೆ ಕಡೆಗಳಿಂದ ಬರುವ ಪ್ರವಾಸಿಗರ ವಾಸ್ತವ್ಯಕ್ಕಾಗಿ ನಿರ್ಮಿಸಿದ್ದರು ಎಂದು ಹೇಳಲಾಗಿದೆ. ಅವತ್ತಿನ ಕಾಲಕ್ಕೆ ಇದು ವಿಶಾಲವಾದ ಕಟ್ಟಡವಾಗಿತ್ತು. ಜತೆಗೆ ಅರಮನೆಗೆ ಒಂದಷ್ಟು ಹತ್ತಿರದಲ್ಲಿತ್ತು. ಹೀಗಾಗಿ ದಸರಾ ನೋಡಲು ಆಗಮಿಸುತ್ತಿದ್ದ ಜನರು ಇಲ್ಲಿ ತಂಗುತ್ತಿದ್ದರು. ತದ ನಂತರದ ವರ್ಷಗಳಲ್ಲಿ ಮೈಸೂರು ಅಭಿವೃದ್ಧಿಯಾಗ ತೊಡಗಿತು. ಹೀಗಾಗಿ ಈ ಛತ್ರವನ್ನು ಭಾಗಗಳನ್ನಾಗಿ ಮಾಡಿ ಅರಮನೆಯಲ್ಲಿ ವಿವಿಧ ಕೆಲಸಗಳನ್ನು ಮಾಡುತ್ತಿದ್ದ ಸುಮಾರು ಹತ್ತೊಂಬತ್ತು ನೌಕರರಿಗೆ ಬಾಡಿಗೆ ರೂಪದಲ್ಲಿ ನೀಡಲಾಯಿತು. ಇವತ್ತಿಗೂ ಈ ಕುಟುಂಬಗಳ ತಲೆಮಾರಿನವರು ಇಲ್ಲಿ ವಾಸಿಸುತ್ತಿದ್ದಾರೆ.

ಇದೆಲ್ಲವನ್ನು ನೋಡಿದರೆ ಮೈಸೂರು ದಸರಾ ಬರೀ ದಸರಾ ಅಲ್ಲ ಅದೊಂದು ಕಲೆ ಸಾಹಿತ್ಯ ಸಾಂಸ್ಕೃತಿಕ ಸಂಪ್ರದಾಯ ಸಡಗರದ ಸಂಗಮ ಎಂದರೆ ತಪ್ಪಾಗುವುದಿಲ್ಲ. ಮಹಾರಾಜರು ಬರೀ ದಸರಾ ಆಚರಣೆ ಮಾಡಿ ಸಂಭ್ರಮಿಸಿಲ್ಲ. ಅದನ್ನು ಎಲ್ಲರೂ ನೋಡಬೇಕು ಮತ್ತು ಆ ಸಂಭ್ರಮದಲ್ಲಿ ಎಲ್ಲರೂ ಭಾಗಿಯಾಗಬೇಕೆಂದು ಆಶಿಸಿದ್ದರು. ಹೀಗಾಗಿಯೇ ಮೈಸೂರು ಮಹಾರಾಜರ ಹೆಸರು ಅಜರಾಮರವಾಗಿ ಉಳಿದಿದೆ.

ಧ್ವನಿ:ಪೃಥ್ವಿ ದೇವರಾಜ್

admin
the authoradmin

ನಿಮ್ಮದೊಂದು ಉತ್ತರ