ಕನ್ನಡದ ಸಾಹಿತ್ಯಲೋಕಕ್ಕೆ ಕಾದಂಬರಿಕಾರರು, ನಾಟಕಕಾರರು, ಕಥೆಗಾರರು, ಕವಿಗಳು, ಸಾಹಿತಿಗಳು, ಲೇಖಕರು, ಪ್ರಬಂಧಕಾರರು ತಮ್ಮದೇ ಆದಕೃತಿಗಳನ್ನುಅರ್ಪಿಸಿದ್ದಾರೆ. ಇಂತಹ ಕೃತಿಗಳು ಓದುಗರನ್ನುಆಕರ್ಷಿಸಿದ್ದು ಮಾತ್ರವಲ್ಲದೆ, ಹಲವು ಪುರಸ್ಕಾರಗಳನ್ನು ಪಡೆದಿವೆ. ಇಂತಹ ಮೇರು ಕೃತಿಗಳನ್ನು ಪರಿಚಯಿಸುವ, ಸಂಕ್ಷಿಪ್ತವಾಗಿ ವಿಮರ್ಶಿಸುವ ಪ್ರಯತ್ನವೇ ಅವಲೋಕನ (ಸ್ಥಿರಶೀರ್ಷಿಕೆ ಅಡಿಯಲ್ಲಿ ಪುಸ್ತಕವಿಮರ್ಶೆ)ವಾಗಿದೆ. ಇದನ್ನು ಹಿರಿಯಬರಹಗಾರರಾದ ಕುಮಾರಕವಿ ನಟರಾಜ್ ಅವರು ನಾಲ್ಕುದಶಕಗಳ ಹಿಂದೆಯೇ ಬರೆದಿದ್ದು, ವಿವಿಧ ಲೇಖಕರ ಸಂಪಾದಕತ್ವದ ಗ್ರಂಥಗಳಲ್ಲಿ ಬೆಳಕುಕಂಡಿವೆ. ಅದನ್ನುಸಂಗ್ರಹಿಸಿ ಜನಮನ ಕನ್ನಡಕ್ಕೆ ನೀಡಿದ್ದಾರೆ.
91 ಕವನ ಸಂಕಲನ : ಕವನಸುಧೆ
ಲೇಖಕರು : ಕುಮಾರಕವಿ
ಪ್ರಕಾಶಕರು:ರಾಜಲಕ್ಷ್ಮಿ ಪ್ರಕಾಶನ ಮೈಸೂರು, ಸಾಧಾರಣ ಪ್ರತಿ:ರೂ.2/- ಕ್ಯಾಲಿಕೋ ಪ್ರತಿ:ರೂ.3-50, ಪುಟಗಳು:35 ಮೊದಲ ಮುದ್ರಣ 1977, ಹಾಗೂ ದ್ವಿತೀಯ ಮುದ್ರಣ 1978
ಕುಮಾರಕವಿಗಳ ಈ ಚೊಚ್ಚಲ ಕವನ ಸಂಗ್ರಹದಲ್ಲಿ ಇಪ್ಪತ್ತಾರು ರಚನೆಗಳಿವೆ. ಇವುಗಳ ವಸ್ತು; ಆರ್ಡಿನರಿ “ಬಸ್ಸು” ಕವನದಿಂದ ಮೊದಲ್ಗೊಂಡು “ಸತ್ತವರ ನೆರಳು” ಕವನದವರೆಗೆ ವ್ಯಾಪಿಸಿದ್ದರೂ ಬಹುಪಾಲು ಕವನಗಳು ಹದಿ ಹರೆಯದ ತರುಣರ ಮನಸ್ಸಿನಲ್ಲಿ ಕಾಮ ಪ್ರೇಮಗಳಿಗೆ ಸಂಬಂಧಿಸಿದಂತೆ ಮೂಡಬಹುದಾದ ಅಪಕ್ವ ಭಾವನೆಗಳನ್ನೂ ಯೌವ್ವನದ ಅಪ್ರಬುದ್ಧ ಅನುಭವಗಳನ್ನೂ ಕುರಿತಾಗಿ ಇವೆ. ಅತ್ಯುತ್ಸಾಹವೊಂದೇ ಇಲ್ಲಿನ ಕವನಗಳ ಮೂಲ ಬಂಡವಾಳವಾಗಿದೆ. ಉದಾಹರಣೆಗೆ…
“ಲಂಗು ಲಗಾಮಿಲ್ಲದ
ಕೊಬ್ಬಿದ ಮರಿಕುದುರೆಯಂತೆ
ಇಷ್ಟ ಬಂದೆಡೆಯಲ್ಲೆಲ್ಲ ಓಡುವ…..”
-ಎಂಬ ಕವನಗಳನ್ನು ಓದುವಾಗ,
“ನನ್ನಬಾಳಿಗೇ ನಾನೊಂದು
ಅರ್ಥಕೊಡದ ಅರ್ಥೈಸಿಕೊಳ್ಳದ
ಅವಿವೇಕದ ಅಸಂಬದ್ಧದ
ಪ್ರಬಂಧವಾಗಿದ್ದೇನೆ
ಅದರ ತಾತ್ಪರ್ಯವ
ನರಹುವವರನಿಂದಿಗೂ ಕಾಣದಾದೆ”
-ಎಂಬ ಕವನದ ಹಾಗೂ
“ಅರ್ಥ-ಗುರಿ
ಇವೆರಡೂ ಇಲ್ಲವಾದಾಗ
ಬದುಕು ತಾನೇಕೋ?”
-ಎಂಬ ಕವಿಯ ಕೊರಗನ್ನು ಗಮನಿಸಿದಾಗ ಕುಮಾರಕವಿಯು ಪ್ರೌಢಕವಿಯಾಗುವ ಕಾಲ ದೂರವಿಲ್ಲ ಅನಿಸುತ್ತದೆ.
“ಯೋಚನಾ ಬಾವಿಯೊಳಗೆ
ಇಳಿಯುತ್ತಿದ್ದಂತೆ”
“ಪ್ರಣಯಿಗಳ ಮಿಲನಕ್ಕೆ ಎಲೆಗರಿಗಳು
ಶುಭನಾಂದಿಯನ್ನಾಡಿಹವು”
“ಚಿಲಿಪಿಲಿಯೆನ್ನುವ ಗಿಳಿಗಳಿಂಚರ
ಎಲ್ಲರ ಕಿವಿಯನು ಹೊಕ್ಕಿತ್ತು”
-ಎಂಬುವ ಸಾಲುಗಳ ಜತಗೇ ಮತ್ತಷ್ಟು ಉದಾಹರಣೆ ಇಲ್ಲಿದೆ ಓದಿರಿ:
“ಆರು ಚಕ್ರದ ಮೋಟಾರು
ಹೊತ್ತು ಹೊರಟಿತ್ತು ಅರವತ್ತಾರು
ಅದಕ್ಕೆ “ಬಸ್ಸು” ಎಂದು
ಆಂಗ್ಲರು ಕರೆದಿದ್ದರಂತೆ…
ಅದನ್ನೇ ನಮ್ಮಪ್ಪನೂ ಕರೆದಿದ್ದ
ನಾನೂ ಕರೆಯುತ್ತಿದ್ದೇನೆ”
-ಮುಂತಾಗಿ ಸಲೀಸಾಗಿ ಕಾವ್ಯ ನಿರ್ಮಿಸಬಲ್ಲ ಕುಮಾರಕವಿಯವರ ಪ್ರತಿಭೆ!
“ಕನ್ನಡವೇ ಬಾನಾಗಿ
ಕನ್ನಡ ಹಕ್ಕಿಗಳು ಹಾರಾಡೆ
ಕನ್ನಡವೇ ಕಡಲಾಗಿ
ಕನ್ನಡ ಮೀನುಗಳು ಈಜಾಡೆ
ಕನ್ನಡವೇ ವನವಾಗಿ
ಕನ್ನಡ ಮಯೂರಿ ಲಾಸ್ಯವಾಡೆ
ಹೇ ತಾಯೆ… ಕನ್ನಡ ತಾಯೆ…
ಶಿರಬಾಗಿ ಮಣಿವೆ ನಿನ್ನ ಚರಣಕೆ
ಅಂದೇ…ಹುಟ್ಟಿದಂದೇ ಶಪಥಗೈದೆ
ಹೆದರೆನೆಂದಿಗು ಹೇಡಿಗಳ ಮರಣಕೆ”
ಮುಂತಾದ ಸಾಲುಗಳಲ್ಲಿ ಪ್ರಕಟಗೊಳ್ಳುವ ಲೇಖಕರ ಕನ್ನಡಾಭಿಮಾನ!
ಮೇಲೆ ಉದಾಹರಿಸಲಾದ ಭಾಗದಲ್ಲಿ ‘ಚರಣ’ ಎಂಬ ಶಬ್ದಕ್ಕೆ ‘ಮರಣ’ ಎಂಬ ಶಬ್ದವನ್ನು ಅರ್ಥಾರ್ಥ ಸಂಬಂಧವಿಲ್ಲದೆ ಜೋಡಿಸಿದಂತಿದೆ. ‘ಅಬ್ಬರ’ಕ್ಕೆ ‘ಗೊಬ್ಬರ’ವನ್ನು, ‘ಗಲ್ಲ’ಕ್ಕೆ ‘ಬೆಲ್ಲ’ವನ್ನು, ಜಾಜಿಹೂವಿಗೆ ‘ಬಾಜೀ’ರಾಯನನ್ನು, ‘ವಿಪತ್ತಿಗೆ ‘ಬಾಬತ್ತ’ನ್ನು, ಜೋಡಿಸಿ ಪ್ರಾಸ ಸಂರಕ್ಷಿಸಿದ ಇವರ ಶಬ್ಧ ಸಾಮರ್ಥ್ಯ ಇತ್ಯಾದಿಗಳ ಬಗ್ಗೆ ಏನೂ ಹೇಳಲು ಹೊಳೆಯುವುದಿಲ್ಲ.
ಕೇಳ್ವಂತೆ, ಗೂಳಿಯೋಳ್, ಉಳಿಯಲು, ಪೇಳುವುದುಂಟೆ, ಅವಂಗೆ, ಮೂಡಣದಿಂ, ಅಂತ್ಯವಾದೊಡೆ, ಇಹವು, ನೀಡಲುಬೇಕು, ಮೊದಲಾದ ಹಳೆಕನ್ನಡದ ರೂಪಗಳೂ; ಕನ್ನಡದ್ಹಕ್ಕಿ, ಬಹಳೊತ್ತು(ಬಹಳ ಹೊತ್ತು), ಬದುಕುವಿಚ್ಛೆಯಿಲ್ಲವೆನಗೀ, ಮರ್ಯಾದೆ ಚೌಕಟ್ಟಿನಿಂದ್ಹೊರಬಂದಳು, ಮೊದಲಾದ ನವೀನ ಪ್ರಯೋಗಗಳು ಈ ಪುಸ್ತಕದಲ್ಲಿ ಸಮೃದ್ಧವಾಗಿ ಕಾಣಿಸಿಕೊಳ್ಳುತ್ತವೆ. ಮುಗುಧೆ, ವೈವಿದ್ಯತೆ, ವೈಶಮ್ಯ, ಸ್ವಚ್ಛಂದ, ದೃಢ, ಜಿಗುಪ್ಸೆ, ಭೋಧಿಸಲು, ಮುಂತಾದ ತಪ್ಪುಗಳಿಗೆ ಮುದ್ರಾರಾಕ್ಷಸನನ್ನೇ ಸಂಪೂರ್ಣ ಹೊಣೆಯಾಗಿಸುವುದು ಅನ್ಯಾಯವಲ್ಲವೇ?
ಖ್ಯಾತ ವಿದ್ವಾಂಸ ಹಾಗೂ ಜನಪ್ರಿಯ ಪ್ರಾಧ್ಯಾಪಕ ಡಾ .ಸಿಪಿಕೆ ರವರ “ಮುನ್ನುಡಿ ” ಬೆಂಬಲದ ಜತೆಗೆ ಏಳೆಂಟು ಮಂದಿ ಹಿರಿಯ ಬರಹಗಾರರ ಆಶೀರ್ವಚನದ ರಕ್ಷೆಯೊಂದೇ ಕುಮಾರಕವಿಯನ್ನು ಬೆಳೆಸಬೇಕು. ಹೊಸ ಕವಿಗಳಿಗೆ ಪ್ರೋತ್ಸಾಹ ನೀಡಬೇಕಾದ್ದು ಓದುಗರ ಕರ್ತವ್ಯವೆಂದು ಲೇಖಕರು ಒತ್ತಿ ಹೇಳಿದ್ದಾರೆ. ಎರಡು ರೂಪಾಯಿ ಬೆಲೆಯ ಚಿಕ್ಕ ಪುಸ್ತಕ “ಕವನಸುಧೆ” ಒಂದು ವರ್ಷದಲ್ಲಿಯೇ ದ್ವಿತೀಯ ಮುದ್ರಣ ಕಂಡಿರುವುದು ಕುಮಾರಕವಿಗೆ ಹೆಚ್ಚಿನ ಪ್ರೋತ್ಸಾಹ ದೊರೆತಿರುವುದನ್ನು ಸ್ಪಷ್ಟಪಡಿಸುತ್ತದೆ.
– ಶಂಸ ಐತಾಳ , ಪುಸ್ತಕ ಪ್ರಪಂಚ
ಕರ್ನಾಟಕ ರಾಜ್ಯ ವಯಸ್ಕರ ಶಿಕ್ಷಣ ಸಮಿತಿ ಪ್ರಕಟಣೆ
ಸಂಪುಟ 33 ಸಂಚಿಕೆ 11 ಜೂನ್ 1979
92 ಕನ್ನಡ ಡಿಂಡಿಮ (ಹನಿಗವನ)
ಲೇಖಕರು: ಕುಮಾರಕವಿ
ಪ್ರಕಾಶಕರು: ರಾಜಲಕ್ಷ್ಮಿ ಪ್ರಕಾಶನ, ಮೈಸೂರು-570001 ಬೆಲೆ: ರೂ.5-00, ಪುಟಗಳು: 66
ಮೊದಲ ಮುದ್ರಣ 1985
ಡಾ.ರಾಮಶೇಷನ್ ಬರೆದ ವಿಮರ್ಶೆ ಪ್ರಕಟಿತ: ಕರ್ನಾಟಕ ರಾಜ್ಯ ವಯಸ್ಕರ ಶಿಕ್ಷಣ ಸಮಿತಿಯ “ಪುಸ್ತಕ ಪ್ರಪಂಚ” ಸಂಪುಟ 33, ಸಂಚಿಕೆ11, ಜೂನ್ 1979.
ಇದೊಂದು ಹನಿಗವನ ಸಂಕಲನವೆಂದು ಕುಮಾರಕವಿ ಹೇಳಿಕೊಂಡಿದ್ದಾರೆ. ಬದಿಯ ಸಾಲುಗಳು ಒಂದರ ಕೆಳಗೊಂದು ಬರೆದರೆ ಕವನ ಎನಿಸಬಹುದಾದರೆ ಇದೂ ಆಗಬಹುದು. ಪುಸ್ತಕ ಶೀರ್ಷಿಕೆಯು ಕವಿಯ “ಡಿಂಡಿಮ ಬಾಜನೆಯ” ಭಾವನೆಯನ್ನು ಧ್ವನಿಸುತ್ತದೆಯೇ ವಿನಹ ಒಳಗಿನ ಸಾಲುಗಳು ಹಾಗಿಲ್ಲ. “ಹುಟ್ಟುತ್ತಲೇ ಯಾರೂ ಕವಿಗಳಲ್ಲ” ಎಂಬ ಧೋರಣೆ ಅದೆಷ್ಟು ಸರಿಯೋ ಕುಮಾರಕವಿಗಳಿಗೇ ಗೊತ್ತು!
ಕವಿಯ ಭಾವಹೃದಯ, ಅನುಭವಿಸಿ ಭಾವಿಸುವ ಮನ, ಸಹಜರೀತಿಯಲ್ಲಿ ಬಂದಿರುತ್ತದೆ. ಇದನ್ನು ಅನಂತರದ ಬದುಕಲ್ಲಿ ಒಡಮೂಡಿಸಿಕೊಂಡ ಅಭ್ಯಾಸ, ಆಚರಣೆ, ಅಧ್ಯಯನ, ಸೃಜನಭಾವನೆ, ಇವೆಲ್ಲವೂ ಕವಿತೆಗಳನ್ನು ಹೃದ್ಯವಾಗಿ ಒಡಮೂಡಿಸಲು ಸಮಯೋಚಿತವಾಗಿ ನೆರವಾಗಬಲ್ಲ ಪರಿಕರ! ಕವಿತೆಯ ಗುಣ, ಧರ್ಮ, ಕವಿತೆಯಿಂದಾಗುವ ಪ್ರಯೋಜನ, ಧ್ಯೇಯ, ನೊಳ್ತೆ, ಈ ಎಲ್ಲವನ್ನೂ ಕುರಿತು ಆದಿಕವಿ ಪಂಪನಿಂದ ಇಂದಿನವರೆಗೆ ಅನೇಕರು ಬಗೆಬಗೆಯಾಗಿ ತಿಳಿಸಿಕೊಟ್ಟಿದ್ದಾರೆ. ಈ ದಿಸೆಯಲ್ಲಿ ಕುಮಾರ ಕವಿಗಳದ್ದೇ ಒಂದು ಸ್ವತಂತ್ರ ಧೋರಣೆ! ಇದರಲ್ಲಿ ಕಂಡುಬರುತ್ತದೆ.
ಈ ಕವನ ಸಂಕಲನದಲ್ಲಿ ಪ್ರಯೋಗ ಮಾಡಿರುವ ಅನೇಕ ಪದಗಳು ಭಾಷೆಯ ದೃಷ್ಟಿಯಿಂದ “ಪ್ರಯೋಗ” ಎನಿಸಲು ಎಷ್ಟು ಸರಿಯೊ ತಿಳಿಯುವುದಿಲ್ಲ. “ಕುದುರೆ ಇದೆ, ಮೈದಾನ ಇದೆ, ಬೇಕಾದಂತೆ ಹೊಡಿ” ಎಂಬುವುದಾದಲ್ಲಿ ಕಾವ್ಯ, ಸಾಹಿತ್ಯ, ಬರಹವೂ ಸಹ ಸ್ವೇಚ್ಚೆಯೇ ಆಗಲಿ! ಅದೂ ಸರಿಯೆ “ಕನ್ನಡ ಡಿಂಡಿಮ”ದ ಕುಮಾರಕವಿ ಕಂಡರಿಸಲೆತ್ನಿಸಿರುವ ಭಾವನೆಗಳು, ಅವುಗಳಿಗೆ ಮೂರ್ತ ಸ್ವರೂಪ ನೀಡಲು ಇರಿಸಿಕೊಂಡಿರುವ ಇವರ ಧ್ಯೇಯ; ಕುಂಚ ಕಲಾವಿದನ ಕುಸುರಿ ಕೆಲಸಕ್ಕೆ ಒಳಗಾಗಿದ್ದರೆ ಹನಿಗವನಗಳ ಈ ಸಂಕಲನವು ಖಂಡಿತ ಸಾರ್ಥಕ್ಯ ಪಡೆಯುತ್ತಿತ್ತೇನೊ?
ಇಷ್ಟಾದರೂ ಇಲ್ಲಿನ ಹಲವಾರು ಕವನಗಳು ಕವಿಯ ಒಳಗುದಿ, ತುಡಿತ ಹಾಗೂ ಮಿಡಿತ ಗಳನ್ನು ಬಿಂಬಿಸುವಲ್ಲಿ ಸಾಫಲ್ಯ ಪಡೆದಿವೆ. “ಕಣಿವೆ”, “ಕಿಚ್ಚುಹುಚ್ಚು” ಕವನಗಳ ಭಾವನೆ ಹಿತಕರವಾಗಿದೆ. ಹಾಗೆಯೆ “ಖಾ..ಖಾ..ಖಾ..” ಕವನದ ಧ್ಯೇಯವು ತಾತ್ಕಾಲೀನ ಎನ್ನಬಹುದಾಗಿದ್ದು, ಇದನ್ನೇ ಇನ್ನಷ್ಟು ಎತ್ತರಿಸಿ ಭಾವುಕತೆಯಿಂದ ಬರೆದಿದ್ದರೆ ಉತ್ತಮ ಎನಿಸುತ್ತಿತ್ತು. “ಗಾಂಧಿ” ಮತ್ತು “ಇಂದಿರಾಪ್ರಿಯದರ್ಶಿ-ನೀ” ಕವನಗಳು ಚೆನ್ನಾಗಿವೆ. ಇನ್ನಷ್ಟು ಹೆಸರಿಸುವಂಥ ಹನಿ ಕವನಗಳೆಂದರೆ “ಜೀವನ”, “ತಾಯಿ-ತಂದೆ”, “ಚಕ್ರ”, “ಜಾತಿಯಾತೀತ” ಮುಂತಾದವು ಆಪ್ಯಾಯಮಾನ ಆಗಿದ್ದು ಮೆಜಾರಿಟಿ ಓದುಗರಿಗೆ ಇಷ್ಟವಾಗುತ್ತವೆ. ನವಯುವಕ ಕುಮಾರಕವಿಗಳಿಂದ ಇನ್ನೂ ಉತ್ತಮ ಸಾಹಿತ್ಯ ನಿರೀಕ್ಷಿಸಬಹುದು ಎಂದೆನ್ನಿಸುತ್ತದೆ. ಇವರ “ಕನ್ನಡ ಡಿಂಡಿಮ” ಸರ್ವತ್ರ ಬಾರಿಸುತ್ತಲೇ ಇರಲಿ….!
– ರಾಮಶೇಷನ್, ಗ್ರಂಥಪಾಲಕ
ಮೈವಿವಿ ಸ್ನಾತಕೋತ್ತರ ಗ್ರಂಥಾಲಯ, ಮಾನಸಗಂಗೋತ್ರಿ ಮೈಸೂರು-570006.

93 ಕವನ ಸಂಕಲನ: ಅನನ್ಯ
ಲೇಖಕರು: ಎಂ.ವಿ.ತ್ಯಾಗರಾಜ್
ಪ್ರಕಾಶಕರು:ಅನನ್ಯ ಪ್ರಕಾಶನ,ಬೆಂಗಳೂರು
ಬೆಲೆ : ರೂ.75-00, ಪುಟಗಳು : 80 ಮೊದಲ ಮುದ್ರಣ : 2012
ಕನ್ನಡ ಸಾರಸ್ವತ ಲೋಕಕ್ಕೆ ಹೊಸದಾಗಿ ಸೇರ್ಪಡೆಯಾದ ಎಂ.ವಿ.ತ್ಯಾಗರಾಜ್ ರವರ ಚೊಚ್ಚಲ ಕೃತಿ ‘ಅನನ್ಯ’ ಕವನ ಸಂಕಲನದಲ್ಲಿ ೬೫ ಕವಿತೆಗಳು ರಾರಾಜಿಸುತ್ತವೆ. ಲೇಖಕರು
ವೃತ್ತಿಯಲ್ಲಿ ಎಂಜಿನಿಯರ್ ಆದರೂ ಪ್ರವೃತ್ತಿಯಲ್ಲಿ ಆಥರ್ ಆಗುವ ಇಚ್ಛಾಶಕ್ತಿ ಬೆಳೆಸಿಕೊಂಡು ಕವಿಯಾಗಲು ಮನಸ್ಸು ಮಾಡಿದ ಇವರು ತಮ್ಮ ಪ್ರಥಮ ಪ್ರಯತ್ನದಲ್ಲೆ ಯಶಸ್ವೀ ಆಗಿರಬಹುದು. ಹೊಸದಾಗಿ ಸಾಹಿತ್ಯಸೇವೆ ಪ್ರಾರಂಭಿಸಿರುವ ಲೇಖಕರಿಗೆ ಮತ್ತವರ ಕೃತಿಗೆ ಸ್ವಾಗತವಿದೆ.
ನಯನ ಮನೋಹರವಾದ ವರ್ಣಮಯ ಭಂಗಿಯ ಮೋಹನಾಂಗಿಯ ಹೊದಿಕೆ ಇರುವ ಹನಿ-ಮಿನಿ-ಸಾಮಾನ್ಯ; ಈ ಮೂರೂ ಬಗೆಯ ಕವನಗಳ ಗೊಂಚಲು. ಮೊಟ್ಟಮೊದಲ ಕವಿತೆ “ಅಭಿನವ ಬಸವಣ್ಣ” ಹಿತ ನೀಡಿದರೆ, ಕಟ್ಟಕಡೆಯ “ಮಿನುಗುತಾರೆ” ಮುದ ನೀಡುತ್ತಾಳೆ. ಇವರಿಬ್ಬರ ನಡುವೆ ಇರುವ ಕವಿತೆಗಳಲ್ಲಿ ಕ್ಲಾಸ್-ಮಾಸ್ ಓದುಗರಿಗೆ ಇಷ್ಟ ಆಗಬಹುದಾದ ಕವನಗಳೂ ಇದ್ದು, ಅವು ಇಂತಿವೆ:
ಅನನ್ಯಸುಂದರಿ, ಅಗೋಚರ, ಶಾಪ, ಅಂತರ್ಮುಖಿ, ಅತ್ತೆಸೊಸೆ, ಆದರ್ಶ, ರಾತ್ರಿಹೂ, ನಿಸ್ವಾರ್ಥ, ಪಾಪದಕಂದ, ಶ್ವೇತಗುಲಾಬಿ, ಬೆಳದಿಂಗಳಬಾಲೆ, ವಿಸ್ಮಯ, ವಾಸ್ತವ, ಹೀಗೇಕೆ, ಹೆಂಡಸಾರಾಯಿ, ಮುದಿಗೂಳಿ, ಪ್ರೀತಿಬದುಕು, ಮೊಬೈಲ್ ಗೆಳತಿ. ಪ್ರಥಮ ಪ್ರಯತ್ನದ ಕವಿಯ ಅನನ್ಯ ಮಧುರ ಭಾವನೆಗಳಿಂದ ಕೂಡಿದ ಅನಿಸಿಕೆಗಳ ಅಪೂರ್ವ ಸಂಗಮ. ದಿಟ್ಟವಾಗಿ ಸಹಜತೆಗೆ ಹತ್ತಿರವಿರುವ ಕೆಲವು ಕವನಗಳು ಕೃತಿಯ ಶೀರ್ಷಿಕೆಗೆ ಅನ್ವರ್ಥವಾಗಿದೆ ಎಂದು ಧಾರಾಳವಾಗಿ ತೀರ್ಮಾನಿಸಬಹುದು.
ಬರೆದವರಾರು? ಎಂಬುದಕ್ಕಿಂತ ಬರೆದಿರುವುದೇನು? ಎಂಬುದು ಮುಖ್ಯವಾಗುತ್ತದೆ. ಏಕೆಂದರೆ, ರಾಷ್ಟ್ರಕವಿ ಬರೆದುದೆಲ್ಲವೂ ಶ್ರೇಷ್ಠವೇನಲ್ಲ, ಬಡಬೋರೇಗೌಡ ಬರೆದುದೆಲ್ಲವು ನಿಕೃಷ್ಟವೂ ಅಲ್ಲ! ಟೀಕೆ-ಟಿಪ್ಪಣಿ ಮಾಡುವವರಿಗೆ, ಓದುಗರಿಗೆ ಹೃದಯವಂತಿಕೆ ಇದ್ದರೆ ಸಾಕು ಬೆಳೆಯುವ ಕವಿಗಳಿಗೆ ಉತ್ತೇಜನ ದೊರಕಿದಂತೆ. ಯಾವ ವಿಮರ್ಶಕನೇ ಆಗಿರಲಿ, ಮೊಸರಲ್ಲಿ ಕಲ್ಲು ಹುಡುಕುವ ವ್ಯರ್ಥಪ್ರಯತ್ನ ಮಾಡಬಾರದು. ಬೂದಿಮುಚ್ಚಿದ ಕೆಂಡದಂತಿರುವ ಹೊಸ ಪ್ರತಿಭೆಗಳಿಗೆ ತಣ್ಣೀರೆರಚದೆ ಸಾಧ್ಯವಾದಷ್ಟು ಪ್ರೋತ್ಸಾಹಿಸಬೇಕು. ಆಗಮಾತ್ರ ಉತ್ತಮ ಫಲಿತಾಂಶ ದೊರಕಿ ಕನ್ನಡ ಸಾಹಿತ್ಯ ಪ್ರಪಂಚ ತುಂಬಿ ತುಳುಕುತ್ತದೆ.
ಅನನ್ಯ ಸಂಕಲನದ ಕವಿಯ-ಕವಿತೆಗಳ ಒಳಹೊಕ್ಕು ಸತ್ಯ-ಸತ್ವವನ್ನು ಹೊರತೆಗೆಯಬೇಕು. ಜಾತಿ, ಉಪಜಾತಿಗಿಂತಲೂ ನೀತಿ, ಪ್ರೀತಿಯೇ ಮಿಗಿಲು. ಅರ್ಹತೆಯನ್ನು ಸಮ್ಮಾನಿಸಬೇಕು, ಪ್ರತಿಭೆಯನ್ನು ಒಪ್ಪಿಅಪ್ಪಿಕೊಳ್ಳಬೇಕು. ಇದರಲ್ಲಿರುವ ಬಹುತೇಕ ಕವಿತೆಗಳಿಗೆ ಮಾನ್ಯತೆ ನೀಡಿ ಉದಯೋನ್ಮುಖ ಲೇಖಕ ತ್ಯಾಗರಾಜರಿಗೆ ಚೇತನ ತುಂಬಬೇಕು. ಮೌಲ್ಯಾಧಾರಿತ ಅವಲೋಕನ ಮಾಡುವುದೆಂದರೆ ಕೇವಲ ತಪ್ಪುಗಳನ್ನು ಮಾತ್ರ ಹುಡುಕಿ ಇಷ್ಟಬಂದಂತೆ ತೆಗಳುವುದಲ್ಲ. ವಿಮರ್ಶಕರಿಗಿಂತ ಶ್ರೇ(ಜೇ)ಷ್ಟರು ಇರುವುದಿಲ್ಲವೆಂಬ ಸ್ವಪ್ರತಿಷ್ಠೆ ತೋರಬಾರದು. ಬರೆಯುವ ಪ್ರತಿಯೊಬ್ಬರಲ್ಲೂ ವಿಶಿಷ್ಟವಾದ ಯೋಗ್ಯತೆ, ಒಂದು ಅರ್ಹತೆಯ ಜತೆಗೆ ಒಂದಾದರೂ ಧನ್ಯತೆ ಇದ್ದೇ ಇರುತ್ತದೆ. ಹೀಗಾಗಿ ಇಲ್ಲಿರುವ ಯಾವ ಕವನವೂ ಅನುಪಯುಕ್ತವಲ್ಲ ಬೇಸರತರಿಸಲ್ಲ. ಸ್ವಯಂಘೋಷಿತ ಬುದ್ಧಿಜೀವಿ, ಪಂಡಿತರು, ಎಂಬುವರಲ್ಲಿ ಓದುವ ಸಹನೆ ಹಾಗೂ ಪ್ರೋತ್ಸಾಹಿಸುವ ದೊಡ್ಡಮನಸ್ಸು ಇರಬೇಕಷ್ಟೆ?!
ಯುವಕ-ಮುದುಕ ಎಲ್ಲಾ ವರ್ಗದವರಿಗೂ ಹಲವು ಕವಿತೆಗಳು ಕಚಗುಳಿ ಇಟ್ಟರೆ, ಕೆಲವು ಪದ್ಯಗಳು ರೋಮಾಂಚನಗೊಳಿಸುತ್ತವೆ.ಪಂಡಿತನೋ ಪಾಮರನೋ ಓದುವಾಸಕ್ತಿ ಇದ್ದವರಿಗೆ ಹೊಸಬರ ಹೊಸಪುಸ್ತಕಗಳು ಯಾವತ್ತೂ ನಿರಾಸೆಗೊಳಿಸುವುದಿಲ್ಲ, ಏನಾದರೊಂದು ಹೊಸತನದಿಂದ ಕೂಡಿದ್ದು ಯಾವುದಾದರೂ ವಿಧದಲ್ಲಿ ಆಕರ್ಷಿಸುತ್ತವೆ. ಈ ಹೊತ್ತಗೆಯನ್ನು ಕೊಂಡು ಓದುವ ಸಹೃದಯ ವಾಚಕರಿಗೆ ಹಣಕ್ಕೆ ತಕ್ಕ ನ್ಯಾಯ ಒದಗಿಸುತ್ತಾ ಸಾರಸ್ವತ ಸಾರ್ಥಕತೆ ಹೊಂದಿಸುತ್ತದೆ. ಕನ್ನಡ ಕವಿಗಳ ಸಾಲಿಗೆ ಮತ್ತೋರ್ವ ಸರಳ ಸಜ್ಜನಿಕೆಯ ಅರ್ಹ ಬರಹಗಾರನ ಸೇರ್ಪಡೆಯಾಗಿದೆ, ಎಂದು ಹೆಮ್ಮೆ ಪಡಬಹುದು. ಇದನ್ನೇ ಕರ್ನಾಟಕದ ಕವಿಮಿತ್ರರಿಗೂ ಪ್ರಚುರ ಪಡಿಸಬಹುದು ಎಂದರೆ ಅತಿಶಯೋಕ್ತಿಯಲ್ಲ? ಎಲ್ಲಬಗೆಯ ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಲೇಖಕರಿಗೆ ಅಭಿನಂದಿಸಿ ಶುಭಕೋರುತ್ತ, ಈ ಕವನ ಸಂಕಲನವನ್ನು ಬರಮಾಡಿಕೊಳ್ಳೋಣ!
–ಕುಮಾರಕವಿ ಬಿ.ಎನ್.ನಟರಾಜ್
ಮಹಾರಾಜ ಕಾಲೇಜು, ಮೈಸೂರು , ‘ಅನನ್ಯನುಡಿ’ ಮಾಸಿಕ ಜನವರಿ ೨೦೧೩
94 ಕೃತಿ : ಸಾಧಕರ ಸವಿಹೆಜ್ಜೆ
ಕರ್ತೃ : ಎಲ್.ಶಿವಲಿಂಗಪ್ಪ
ಪ್ರಕಾಶಕರು: ಮೈಸೂರು ಆರ್ಟ್ ಗ್ಯಾಲರಿ ಮೈಸೂರು-4
ಬೆಲೆ: ರೂ.150/-, ಪುಟಗಳು: 156,
ಮೊದಲ ಮುದ್ರಣ: 2018
ಯಾವುದೇ ಮನೆಯ ಸಾಮಾನುಗಳನ್ನು ತಮಗೆ ಬೇಡವಾದಲ್ಲಿ ಅದನ್ನು ತಕ್ಷಣವೇ ಹೊರಹಾಕುವುದು ಹಲವರ ಗುಣ. ಆದರೆ ಯಾವುದನ್ನೂ ಹೊರಗೆ ಬಿಸಾಕದೇನೆ ಮನೆಯಲ್ಲಿ ಇಟ್ಟುಕೊಳ್ಳುವುದು ಕೆಲವರ ಗುಣ. ಹಾಗೆಯೇ ಕಂಡದ್ದನ್ನು ಕ್ರಯಿಸಿ ತನ್ನದಾಗಿಸಿಕೊಳ್ಳುವ ತವಕದ ಒಂದು ವರ್ಗವಿದ್ದರೆ, ಮತ್ತೊಂದು ವರ್ಗ ವಿದ್ಯಾವಂತರೆನ್ನಿಸಿಕೊಂಡವರು ‘ಆಂಟಿಕ್ ಪೀಸ್’ ಎಂದು ಎಷ್ಟು ಹಣ ಕೊಟ್ಟಾದರೂ ಸಂಗ್ರಹಿಸುವ ಗುಣ ಉಳ್ಳವರು. ಇಂತಹವರು ತಮಗೆ ಬೇಕಾದವರಿಗೆ ತೋರಿಸಿ ಗಂಟೆಗಟ್ಟಲೆ ತಾವು ಸಂಗ್ರಹಿಸಿದವುಗಳ ಬಗ್ಗೆ ಮಾತನಾಡುತ್ತಾರೆ.
ಈ ವರ್ಗಕ್ಕೆ ಸೇರಿದ ನಟರಾಜ್ ಒಂದೇಅಂಗುಲ ದಪ್ಪವಿರುವ ನಿಘಂಟಿನಿಂದ ಮೊದಲ್ಗೊಂಡು ಹಲವಾರು ಅಳತೆಯ ವಿವಿಧ ಬಗೆಯ ನಿಘಂಟಿನವರೆಗೆ; ಈ ಹಿಂದೆ ಚಲನಚಿತ್ರ ಮಂದಿರ(ಸಿನಿಮಾ ಟಾಕೀಸ್)ಗಳಲ್ಲಿ ಸಾಧಾರಣ ಕಾಗದದಲ್ಲಿ ಮುದ್ರಿಸಿದ ಚಿತ್ರಗೀತೆ (ಫಿಲಂ ಹಾಡಿನ ಬುಕ್ಸ್)ಪುಸ್ತಕಗಳು; ಅವತ್ತಿನಕಾಲದ ಶಾಯಿ(ಇಂಕ್)ಅದ್ದುಕೊಂಡು ಬರೆಯುತ್ತಿದ್ದ ಮುಳ್ಳು(ನಿಬ್)ನಿಂದ ಪ್ರಾರಂಭಿಸಿ ಇವತ್ತಿನಕಾಲದ ತರಹೇವಾರಿ ಲೇಖನಿ(ಪೆನ್) ವರೆಗೆ ನೂರಾರು ಸಂಖ್ಯೆಯ ತರಾವರಿ ಡಿಸೈನ್ಗಳು! ಹಳೇ ಕಾಲದ ಗ್ರಾಮಫೋನ್ ಪ್ಲೇಟು, ಟೇಪ್ ರೆಕಾರ್ಡ್, ರೇಡಿಯೋ, ಜಾಮಿಟ್ರಿಬಾಕ್ಸ್, ದೇಶವಿದೇಶದ ಪೋಸ್ಟ್ ಕಾರ್ಡ್,ಇನ್ಲ್ಯಾನ್ಡ್ ಲೆಟರ್,ಸ್ಟಾಂಪ್,ನಾಣ್ಯ-ನೋಟು,ಡೈರಿ, ಜಗತ್ತಿನ ಅತಿಚಿಕ್ಕ ಒಂದಂಗುಲ ಎತ್ತರದ ಕೋಕಾಕೋಲ ಬಾಟಲ್, ಹೀಗೆ ಒಂದೇ ಎರಡೇ! ನೂರಾರು ಬಗೆಯ ಎಲ್ಲೂ ಕಂಡರಿಯದ ಬಲು ಅಪರೂಪದ ವಸ್ತುಗಳನ್ನು ಸಂಗ್ರಹಿಸಿದ್ದಾರೆ.
ಇವರಿಗೊಂದು ದೊಡ್ಡನಮಸ್ಕಾರ. ಈಎಲ್ಲದರ ಎಲ್ಲಾರೀತಿಯ ಸಂಗ್ರಹವನ್ನ ಮೈಸೂರು ಆರ್ಟ್ ಗ್ಯಾಲರಿಯ ‘ಸಾಧಕರೊಡನೆ ಸಂವಾದ’ದಲ್ಲಿ ಪ್ರದರ್ಶಿಸಿದ್ದಾಗ ನಟರಾಜ್ ಅವರನ್ನು ಕುರಿತು”ಇಂಥವುಗಳನ್ನ ಸಂಗ್ರಹಿಸುವ ಹುಚ್ಚು ನಿಮಗೇಕೆ ಬಂತು” ಎಂದು ಕೆಣಕಿದಾಗ ಅವರು ಇಡೀ ತಮ್ಮ ಜೀವನದ ಸಾಧನೆಯನ್ನು ಒಂದಿಷ್ಟೂ ಬಿಡದಂತೆ ವಿವರಿಸಿದ್ದನ್ನು ಕೇಳುತ್ತಾ ಹೋದಂತೆ……
ನಟರಾಜ್ 15.6.1955 ರಂದು ಕರ್ನಾಟಕ ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರು ನಗರದಲ್ಲಿ ಮಧ್ಯಮವರ್ಗ ಕುಟುಂಬದ ಶ್ರೀಮತಿ ಪಿ.ಪುಟ್ಟತಾಯಮ್ಮ ಶ್ರೀ ಬಿ.ನಾಗೇಗೌಡ ದಂಪತಿಯ ಏಕಮೇವ ಪುತ್ರರಾಗಿ ‘ಹೋಲ್ಡ್ಸ್ವರ್ತ್ ಮೆಮೋರಿಯಲ್ ಮಿಷನ್ ಆಸ್ಪತ್ರೆ’ಯಲ್ಲಿ ಜನಿಸಿದರು. ಕಾಲಕ್ರಮೇಣ ಅಶೋಕ ರಸ್ತೆ ಪಾಂಡುರಂಗ ವಿಠೋಬ ದೇವಸ್ಥಾನ ಬಳಿಇದ್ದ ವೆಸ್ಲಿ ಮಿಷನ್ (WM) ಬಾಯ್ಸ್ ಸ್ಕೂಲ್ ಸೇರಿ ಪ್ರಾಥಮಿಕ ಶಿಕ್ಷಣ ಪಡೆಯುವಾಗಲೇ 2ರಿಂದ 4ನೆ ತರಗತಿಗೆ ಡಬ್ಬಲ್ ಪ್ರಮೋಶನ್ ಪಡೆದ ಚೂಟಿ! ನಂತರ ಗಾಂಧಿ ಚೌಕ ಬಳಿ ಶ್ರೀರಾಂಪೇಟೆ (ಹಳೇಗುಜರಿ)ಶಾರದಾವಿಲಾಸ ನ್ಯೂಟೈಪ್ ಮಿಡ್ಲ್ ಸ್ಕೂಲ್ 7ನೆ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದು ಬನುಮಯ್ಯ ಹೈಸ್ಕೂಲ್-ಕಾಲೇಜ್ (1ವರ್ಷದ ಪಿಯುಸಿ) ಮೂಲಕ ವಿದ್ಯಾಭ್ಯಾಸ ಮುಗಿಸಿ 1973ರಲ್ಲಿ ತಮ್ಮ18ನೆ ವಯಸ್ಸಿಗೆ ಬಿ.ಕಾಂ.ಪದವಿ ಪಡೆದು ‘ಮೈವಿವಿ Youngest Graduate ಎನಿಸಿ ನೂತನ ದಾಖಲೆ ನಿರ್ಮಿಸಿದರು!
1969ರಲ್ಲಿ ಜರುಗಿದ ಡಿ.ಬನುಮಯ್ಯ ಪ್ರೌಢಶಾಲೆಯ ಸಮಾರಂಭಕ್ಕೆ ರಾಷ್ಟ್ರಕವಿ ಕುವೆಂಪು ರವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂಧರ್ಭದಲ್ಲಿ 10ನೇ ತರಗತಿಯಲ್ಲಿದ್ದ ನಟರಾಜ ಕುವೆಂಪು ಬಗ್ಗೆ ಬರೆದಿದ್ದ ಚುಟುಕು ಪದ್ಯ ಓದಿದಾಗ ಆಶ್ಚರ್ಯಚಕಿತರಾದ ರಾಷ್ಟ್ರಕವಿ ತಮ್ಮ ಪಕ್ಕದಲ್ಲಿದ್ದ ಹೆಡ್ ಮಾಸ್ಟರ್ ಶೇಷಗಿರಿರಾಯರನ್ನು ಕುರಿತು “ಯಾರೀ…ಕುಮಾರ ಕವಿ..?”ಎಂದು ಉದ್ಘರಿಸಿದರಂತೆ. ಈಕಾರಣದಿಂದ ತಾವು ಸಾಹಿತ್ಯಕೃಷಿ ಪ್ರಾರಂಭಿಸಿದಂದಿನಿಂದ ಹೆಸರಿನ ಜತೆಗೆ ‘ಕುಮಾರಕವಿ’ ಕಾವ್ಯನಾಮ ಸೇರಿಸಿಕೊಂಡುಬರೆಯಲು ಪ್ರಾರಂಭಿಸಿದರು
1987ರವರೆಗೆ ಇವರ ನೂರಾರು ಲೇಖನ ಕವನ ಕಥೆ ಕಾದಂಬರಿಗಳು ನಾಡಿನ ಪ್ರತಿಷ್ಠಿತ ದಿನ/ವಾರ/ಮಾಸ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ ಜತೆಗೆ ೮ ಪುಸ್ತಗಳನ್ನೂ ಪ್ರಕಟಿಸಿದ್ದಾರೆ. ‘ಬುದ್ಧಿ ಭೂಲೋಕ ಆಳಿದರೂ ಅದೃಷ್ಟ ಕತ್ತೆ ಕಾಯ್ವಂತೆ’ 1988ರಿಂದ 2008 ರವರೆಗೆ ಸುಮಾರು ೨೦ ವರ್ಷ ಪರ್ಯಂತ ಇವರ ಲೇಖನಿ ತಟಸ್ಥ ವ್ರತ ಕೈಗೊಳ್ಳುವಂತಾಯ್ತು. ಇಷ್ಟಾದರೂ ಕುಮಾರಕವಿಯವರ ದಿಟ್ಟ ಬರವಣಿಗೆ 2009ರಿಂದ ಪುನರ್ ಆರಂಭವಾಯ್ತು. ಅಂಕಣ, ಲೇಖನ, ಕತೆ, ಕವಿತೆ, ವ್ಯಕ್ತಿವಿಶೇಷ, ವಿಮರ್ಶೆ, ಚಂದನವನಚರಿತ್ರೆ, ಚುಟುಕು, ಸಂಪಾದಕೀಯ, ಪ್ರವಚನ, ವಿಶೇಷೋಪನ್ಯಾಸ, ಭಾಷಣ, ಸಂದರ್ಶನ, ಸಮ್ಮೇಳನ, ಕವಿಗೋಷ್ಠಿ, ದೂರದರ್ಶನ, ಆಕಾಶವಾಣಿ, ಸೇರಿದಂತೆ ನಾಡಿನಾದ್ಯಂತ ಎಲ್ಲಾ ದಿನಪತ್ರಿಕೆ ನಿಯತಕಾಲಿಕೆಗಳಲ್ಲಿ ಇವರ ಭರ್ಜರಿ ಬರಹ ಪ್ರಕಟವಾಗುತ್ತ ಸಾವಿರ ಸಂಖ್ಯೆ ದಾಟಿದವು!
ಕುಮಾರಕವಿ ಬಿ.ಎನ್.ನಟರಾಜ್ ರ ಪ್ರಕಟಣೆ, ಸಾಧನೆ, ಬಹುಮಾನ ಸನ್ಮಾನ ಇತ್ಯಾದಿಗಳ ಸಂಕ್ಷಿಪ್ತ ಪರಿಚಯ *ಕವನ ಸಂಕಲನ: ಕವನಸುಧೆ, ಕಸ್ತೂರಿ, ಕಪ್ಪುಸಮುದ್ರ, ಕನ್ನಡಡಿಂಡಿಮ, ಕಲ್ಲುಸಕ್ಕರೆ, ಕನಸಿನಕನ್ಯೆ, ಕನಕಾಂಬರ, ಕಬ್ಬಿನಜಲ್ಲೆ, ಚುಟುಕುಚಟಾಕಿ, ಇತ್ಯಾದಿ.
*ಸಂಪಾದಿತ ಕೃತಿ: ಅರಳಿದಮೊಗ್ಗುಗಳು, ಆಶಾಕಿರಣ. *ಕಾದಂಬರಿ: ದುಂಬಿಯೆರಡು ಹೂವೊಂದು, ಒಡೆದವಜ್ರ.
*ನಾಟಕ: ಆಧುನಿಕಪಾಂಚಾಲಿ, ಕೊಡಲೀ, ರೋಮಿಯೋ-ಜೂಲಿಯೆಟ್, ಒಂದು ಸೂಜಿ ಹೊತ್ತ ೧೨ ಗಾಂಪರು
*ಸೃಜನೇತರ ಸಾಹಿತ್ಯ: ಅನುಭವಾಮೃತಅನರ್ಘ್ಯರತ್ನಗಳು, ಸಾಮಾನ್ಯಜ್ಞಾನ, ನಿಮಗೂತಿಳಿದಿರಲಿ! ಇದುನಿಮಗೆಗೊತ್ತೇ? ರಸಪ್ರಶ್ನೆ? ಕಿಡಿ-ನುಡಿ! ೧೦೦ಗಂಟೆಯಲ್ಲಿ ಇಂಗ್ಲಿಷ್ ಕಲಿಯಿರಿ!
ಹೇಗಾದರೂ ಓದಿರಿ-ಕಂಗ್ಲೀಷ್, ಕನ್ನಡದ ತಪ್ಪು-ಒಪ್ಪು, ಮೈಸೂರು ಅಲಮ್ನಿ,
ಕಚೇರಿ-ಕುಚೋದ್ಯ(ಆಫೀಸ್ ಜೋಕ್ಸ್)
*ಸಿನಿಮಾ:- ಕನ್ನಡ ಫಿಲಂ ಡೈರೆಕ್ಟರಿ, ಸಮಗ್ರ ಕನ್ನಡ ಚಿತ್ರಾವಲೋಕನ (2 ವಿಭಾಗಗಳು),
ಚಂದನವನ ಚರಿತ್ರೆ(10 ಸಂಪುಟಗಳು).
*ವ್ಯಕ್ತಿಪರಿಚಯ: ಮರೆಯಲಾರದ ಮಹಾನುಭಾವರು, ದೊಡ್ಡವರ ಸಣ್ಣತನಗಳು
*ಪ್ರಬಂಧ-ಲೇಖನ: ಹೂಗೊಂಚಲು.
*ನಿಘಂಟು: ಕನ್ನಡ ಸಮಾನಾರ್ಥಕೋಶ,
ಕನ್ನಡವೆನ್ನುವ ಕನ್ನಡೇತರ ಪದಕೋಶ.
*ಮಕ್ಕಳಸಾಹಿತ್ಯ: ಅಂತಾರಾಷ್ಟ್ರೀಯ ಮಕ್ಕಳ ವರ್ಷ 1979 ಮಕ್ಕಳಮಿಠಾಯಿ, ಮಂಗೀಮಳ್ಳಿ, ಅಸೂಯೆಫಲ, ಅಜ್ಜೀಗುಜ್ಜಿ
ಇತರರೊಡನೆ ಸೇರಿ ಬರೆದ ಕೃತಿಗಳು:-
ಹೆಜ್ಜೆಮೂಡದಹಾದಿ, ವಸಂತ, ಶತಮಾನ, ಗುಲಾಬಿಗುಚ್ಛ, ಮಾವುಬೇವು, ವಿಗಾನ, ಹೊಂಗಿರಣ, ಕನ್ನಡಕಿರಣ, ಕನ್ನಡದೀಪ, ಕಾವ್ಯಕುಸುಮಾಂಜಲಿ, ಚುಟುಕುಕಾವೇರಿ, ಪೈರುಪಚ್ಚೆತೆನೆ, ಕಾವ್ಯಮಾಧುರ್ಯ, ಚೈತ್ರ, ಕಾವ್ಯಸಂಪದ, ದಿವ್ಯಸಂಪದ, ಸಿರಿಸಂಪದ, ಭಗೀರಥ, ಅನನ್ಯ, ಕವಿ-ಕಾವ್ಯಮಾಲೆ, ಡಾ.ರಾಜ್‌ಕುಮಾರ್ ಗೀತಮಾಲೆ, ಪುನೀತ್ ಅಪ್ಪುಚುಟುಕುಗಳು, ಪದ್ಮಭೂಷಣ ರಾಜ್‍ಕುಮಾರ್ ಚುಟುಕು, ಅಮರದೀಪ, ಅಮೃತಬಿಂದು, ಮಕರಂದ, ಮುಂತಾದವು.
ಇವುಗಳಲ್ಲದೆ ಬಹುತೇಕ ಎಲ್ಲಾ ಕನ್ನಡ ಪತ್ರಿಕೆ ಮತ್ತು ನಿಯತಕಾಲಿಕೆ ಹಾಗೂ ‘ಪ್ರತಿಲಿಪಿ’ ವಿದ್ಯುನ್ಮಾನ ಸಾಹಿತ್ಯ ಪ್ರಪಂಚದಲ್ಲಿ ಬರೆದ ಬರಹಗಳು ಸಾವಿರಾರು! 1976 ರಿಂದ 2015 ವರೆಗೆ ಮೈಸೂರು ವಿಶ್ವವಿದ್ಯಾನಿಲಯದ ಸೇವೆ. ವಯೋನಿವೃತ್ತಿ ನಂತರ ಮೈಸೂರಿನಲ್ಲಿ ವಾಸ. ಸಧ್ಯಕ್ಕೆ ಬೆಂಗಳೂರಿನಲ್ಲಿ ತಾತ್ಕಾಲಿಕ ವಾಸವಿರುವ ಕುಮಾರಕವಿ ಅವರಿಗೆ ಎರಡು ಸಂತಾನ; ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗ. ಜತೆಗೆ ಆನಂದ ತರುವಂಥ ಅಂದಚಂದದ ಇಬ್ಬರು ಮೊಮ್ಮಕ್ಕಳೂ ಇದ್ದಾರೆ.
ಪ್ರಶಸ್ತಿ, ಸನ್ಮಾನ, ಬಹುಮಾನ, ಭಾಗವಹಿಸುವಿಕೆ:-
1977 : ಬಿದರಗುಪ್ಪೆ ಶ್ರೀರಾಮಮೂರ್ತಿ ರಾಜ್ಯ ಪ್ರಶಸ್ತಿ ಬಹುಮಾನ-ಸನ್ಮಾನ ಅತ್ತಿಬೆಲೆ ಬೆಂಗಳೂರು
1979: 51ನೇ ಅ.ಭಾ.ಕ.ಸಾ.ಸಮ್ಮೇಳನ, ಧರ್ಮಸ್ಥಳ -ಕವಿಗೋಷ್ಠಿ.
1981/2010: ಕರ್ನಾಟಕ ಸರ್ಕಾರದ ಮೈಸೂರು ದಸರಾ ಕವಿಗೋಷ್ಠಿ.
1983: ಕರ್ನಾಟಕ ರಾಜ್ಯ ಸಾಹಿತ್ಯ ಅಕ್ಯಾಡೆಮಿ-ಮೈ.ವಿ.ವಿ. ಸಂಯುಕ್ತಾಶ್ರಯದಲ್ಲಿ
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಜರುಗಿದ ರಾಜ್ಯ ಮಟ್ಟದ ಕವಿಗೋಷ್ಠಿ, ರಾಜ್ಯ ಸಾಹಿತ್ಯ
ಅಕ್ಯಾಡೆಮಿ ಅಧ್ಯಕ್ಷರಾದ ಪ್ರೊ.ನಿಸಾರ್ ಅಹ್ಮದ್ರಿಂದ ಬಹುಮಾನ-ಸನ್ಮಾನ.
1987, 1993, 2003, 2010: ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಕವಿಗೋಷ್ಠಿ
1991, 1998, 2005 2010, 2013 : ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನ ಕವಿಗೋಷ್ಠಿ
1989-1990: ಒಂದು ಕ್ಯಾಲೆಂಡರ್ ವರ್ಷ ಅವಧಿಯಲ್ಲಿ 100 ವಿಶೇಷೋಪನ್ಯಾಸ ನೀಡಿ ದಾಖಲೆ ನಿರ್ಮಿಸಿದ ಪ್ರಯುಕ್ತ ಅಂದಿನ ಜಿಲ್ಲಾ ಪರಿಷತ್ ಅಧ್ಯಕ ಪುಟ್ಟಬುದ್ಧಿ ಅವರಿಂದ ‘ವಾಚಸ್ಪತಿ’ ಬಿರುದಿನೊಂದಿಗೆ ಸನ್ಮಾನ.
1993: ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ – ಕವಿಗೋಷ್ಠಿ.
1994: 63ನೇ ಅ.ಭಾ.ಕ.ಸಾ. ಸಮ್ಮೇಳನ, ಮಂಡ್ಯ – ಕವಿಗೋಷ್ಠಿ.
1995-97: ಆಕಾಶವಾಣಿ ಮೈಸೂರು ‘ಚಿಂತನ’ ಕಾರ್ಯಕ್ರಮದಲ್ಲಿ 5 ಬಾರಿ 5ಬೇರೆ ಬೇರೆ ವಿಷಯದಲ್ಲಿ ಕಿರು ಭಾಷಣ.
1997: ಯುನಿವರ್ಸಲ್ ಅಕ್ಯಾಡೆಮಿ, ಜ್ಞಾನಬುತ್ತಿ ಹಾಗು ಅಪೂರ್ವಸಂಗಮ ಸೇವಾಸಮಿತಿ ಆಶ್ರಯದಲ್ಲಿ ಯುಪಿಎಸ್ಸಿ/ಕೆಪಿಎಸ್ಸಿ ಪರೀಕ್ಷಾರ್ಥ ಅಭ್ಯರ್ಥಿಗಳ ಉಚಿತ ತರಬೇತಿ ಶಿಕ್ಷಣ ಶಿಬಿರದಲ್ಲಿ 21 ವಿಚಾರ ಗೋಷ್ಠಿಗಳಲ್ಲಿ ಅಂದಾಜು 180ತಾಸುಗಳಷ್ಟು ಪಾಠ-ಪ್ರವಚನ ನೀಡಿದ ಪ್ರಯುಕ್ತ ‘ಯುವಜ್ಞಾನಿ’ ಬಿರುದಾಂಕಿತ ಪ್ರಶಸ್ತಿ, ನೆನಪಿನ ಕಾಣಿಕೆ, ಸನ್ಮಾನ.
೧೯೯೮: ಉದಯ ಟಿ.ವಿ.ಯ ‘ಸಾಹಿತಿಗಳು ಕಂಡಂತೆ ರಾಜ್ಯೋತ್ಸವ’ ಕವಿಗೋಷ್ಠಿ ಪ್ರಸಾರದಲ್ಲಿ ಭಾಗವಹಿಸುವಿಕೆ.
೨೦೧೧: ಕರ್ನಾಟಕ ಸರ್ಕಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರ; ೬ ಜಿಲ್ಲೆಗಳ ವಿಭಾಗ ಮಟ್ಟದ ‘ನುಡಿಸೊಗಡು’ ಸಮಾವೇಶ, ಸುತ್ತೂರು.
2012:ಕ.ರ.ವೇ.ವತಿಯಿಂದ “ತಾಯಿ” ಬಗ್ಗೆ ಆಶುಕವಿತೆ (ಬರೆದು-ಓದಿದ) ಕವಿಗೋಷ್ಠಿಯಲ್ಲಿ ಪ್ರಥಮ ಬಹುಮಾನ-ಸನ್ಮಾನ: ಜೀವಣ್ಣರಾಯನ ಕಟ್ಟೆ ವೈದ್ಯರ ಭವನ, ಮೈಸೂರು
2013:ತಲಕಾಡು ಪಂಚಲಿಂಗ ದರ್ಶನ ಮಹೋತ್ಸವ: ಚುಟುಕು ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ.
2016, 17, 18: ಕರ್ನಾಟಕ ಸರ್ಕಾರ ಕನ್ನಡ-ಸಂಸ್ಕೃತಿ ಇಲಾಖೆ ಮೈಸೂರು, ವತಿಯಿಂದ ಕರ್ನಾಟಕ ಕಲಾಮಂದಿರದಲ್ಲಿ ಜರುಗಿದ ‘ವಿಶ್ವಕರ್ಮ ದಿನಾಚರಣೆ’ ಮುಖ್ಯ ಭಾಷಣಕಾರ.
2016-18:’ಸಮರ’ಟಿ.ವಿ.ಚಾನಲ್ ಚೀಫ್ ಪ್ರೋಗ್ರಾಮ್ ಕೋಆರ್ಡಿನೇಟರ್ “ಜೂನಿಯರ್ ಬಿಗ್ ಬಾಸ್” ರಾಜ್ಯ ಮಟ್ಟದ ಮಕ್ಕಳ ರಿಯಾಲಿಟಿ ಷೋ ಪ್ರೋಗ್ರಾಮ್ ನ ರೂವಾರಿ.
2017: ‘ರಾಜ್’ ಟಿ.ವಿ. ನ್ಯೂಸ್ ಚಾನಲ್ನಲ್ಲಿ 5 ಬಾರಿ ಡಿಬೇಟ್ ಪ್ಯಾನಲ್ ಡಿಸ್ಕಷನ್ ಕಾರ್ಯಕ್ರಮದಲ್ಲಿ ಸಕ್ರಿಯ ಭಾಗವಹಿಸುವಿಕೆ.
ಯಾರಾದರೂ ಸರಿ ಇವರನ್ನು ಮಾತಿಗೆ ಎಳೆದರೆ ಸಾಕು, ಸಿಡಿಲು ಬಡಿದಂತೆ ಗುಡುಗು ಮಿಂಚುಗಳ ಆರ್ಭಟದಂತೆ ತರ್ಕ ಮಾಡುವ ವಾದ ವಿವಾದ ಮಂಡಿಸುವ, ಪರ-ವಿರೋಧ ಎರಡರಲ್ಲು ಉತ್ತಮ ವಾಗ್ಮಿ. ಇಂತಹ ಅಪರೂಪದ ಗುಣ ಇವರದಾಗಿದೆ. ಮಾತು ನಿಂತ ಮೇಲೆ ರಭಸದ ಮಳೆಯೂ ನಿಂತ ಅನುಭವವಾಗುತ್ತದೆ, ಹಾಗೆಯೇ ಒಂದಿಷ್ಟು ಚರ್ಚಾಸ್ಪದ ಮಾತುಕತೆಯೂ ಆಗುತ್ತದೆ!
–ಎಲ್.ಶಿವಲಿಂಗಪ್ಪ
ಕಲಾವಿದರು ಹಾಗೂ ಸಂಸ್ಥಾಪಕ ಅಧ್ಯಕ್ಷರು, ಮೈಸೂರು ಆರ್ಟ್ ಗ್ಯಾಲರಿ, ಮೈಸೂರು-4
“23ನೇ ಸಾಧಕರೊಂದಿಗೆ ಸಂವಾದ”
ಕಾರ್ಯಕ್ರಮವು ಕುಮಾರಕವಿ ನಟರಾಜ್ ಅವರೊಡನೆ ೧೪-೧೦-೨೦೧೭ ರಂದು
ನಮ್ಮ ಸಂಸ್ಥೆಯ ಸಭಾಂಗಣದಲ್ಲಿ ಜರುಗಿತು.
95.ಕೃತಿ :ಸಮಗ್ರ ಕನ್ನಡ ಚಿತ್ರಾವಲೋಕನ
ಲೇಖಕ :ಕುಮಾರಕವಿ ನಟರಾಜ
ಟಿ.ಕೆ.ರಘು ಅವರ ಚೆನ್ನುಡಿ/ಬೆನ್ನುಡಿ
ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಕ್ರೀಡಾ ಕ್ಷೇತ್ರದ ಮತ್ತು ಸಿನಿಮಾರಂಗದ ಬಗೆಗಿನ ಲೇಖನಗಳು ಅಪರೂಪ. ಇದಕ್ಕೆ ಅನೇಕರು ನೂರಾರು ಕಾರಣ ನೀಡಬಹುದು. ಅದ್ಯಾವುದು ಇಲ್ಲಿ ಅಪ್ರಸ್ತುತ ಹಾಗೂ ನಗಣ್ಯ. ಯಾರು ಏನೇ ಹೇಳಲಿ ಈ ಎರಡು ಕ್ಷೇತ್ರಗಳಲ್ಲಿ ಬರೆಯ ಬೇಕಾದರೆ ಆ ಬಗ್ಗೆ ಅರಿವು, ಅನುಭವ, ಅಥವಾ ಆಸಕ್ತಿ ಅತ್ಯಗತ್ಯ. ಯಾರು ಬೇಕಾದರು ಯಾವುದರ ಬಗ್ಗೆ ಬೇಕಾದರೂ ಊಹಿಸಿ ಬರೆದು ಬಿಡಬಹದು? ಆದರೆ ಕ್ರೀಡೆ ಮತ್ತು ಚಲನಚಿತ್ರದ ಬಗ್ಗೆ ಬರೆಯಬೇಕಾದರೆ ಸದರಿ ವಿಷಯಗಳ ಬಗ್ಗೆ ಶೇ.90ರಷ್ಟು ಜ್ಞಾನ ಇರಲೇಬೇಕು.
ಅದರಲ್ಲೂ ವಿಶೇಷವಾಗಿ ಸಿನಿಮಾ ಸಾಹಿತ್ಯ ಬರೆಯಲು ಚಲನಚಿತ್ರಗಳ ಮತ್ತು ಚಿತ್ರೋದ್ಯಮದ ಇತಿಹಾಸವನ್ನು ಸರಿಯಾಗಿ ತಿಳಿದು ಕೊಂಡಿರಲೇಬೇಕು ಎಂಬುದಕ್ಕೆ ಉತ್ತಮ ಉದಾಹರಣೆ ಕುಮಾರಕವಿ ನಟರಾಜ್ ಎಂದು ನಿಸ್ಸಂದೇಹವಾಗಿ ಘೋಷಿಸಬಹುದು!
ಇದಕ್ಕೆ ಜ್ವಲಂತ ಸಾಕ್ಷಿ ಇವರು ಬರೆದಿರುವ ಮೇರು ಕೃತಿ ‘ಕನ್ನಡ ಫಿಲಂ ಡೈರೆಕ್ಟರಿ.’ ಒಟ್ಟು 2 ಭಾಗಗಳಲ್ಲಿ ಪ್ರಕಟವಾಗುವ ಡೈರೆಕ್ಟರಿಯ ಮೊದಲ ಭಾಗಕ್ಕೆ ಕನ್ನಡ ಚಿತ್ರರಂಗದ ಅತಿರಥರೂ ನಟ-ನಿರ್ಮಾಪಕ-ನಿರ್ದೇಶಕ ಕರ್ನಾಟಕ ಚಲನಚಿತ್ರ ಅಕ್ಯಾಡೆಮಿ ಅಧ್ಯಕರೂ ಆದ ಮಾನ್ಯ ಶ್ರೀ ಎಸ್.ವಿ.ರಾಜೇಂದ್ರಸಿಂಗ್ ಬಾಬುರವರ ಮುನ್ನುಡಿ ಇದೆ. ಇಂಥ ಮಹಾನ್ ಚಿತ್ರೋದ್ಯಮಿ ಬರೆದ ಮುನ್ನುಡಿಯಲ್ಲಿ, ಕುಮಾರಕವಿಯವರ ಶ್ರಮ ಶ್ರದ್ಧೆ ಸಾಹಸ ತಪಸ್ಸು ತ್ಯಾಗ ಪ್ರತಿಯೊಂದನ್ನು ಎಳೆಎಳೆಯಾಗಿ ತಿಳಿಸಿ, ಓದುಗರಿಗೆ ಅರ್ಥವಾಗುವಂತೆ ವಿವರವಾಗಿ ಬರೆದು ಈ ಲೇಖಕರನ್ನು ತುಂಬು ಹೃದಯದಿಂದ ಹಾರೈಸಿದ್ದಾರೆ.
ಪುಸ್ತಕವನ್ನು ಓದಿದನಂತರ ದಿಗ್ಗಜ ಎಸ್.ಕೆ.ಭಗವಾನ್ ರಂಥ ಅನೇಕ ಖ್ಯಾತನಾಮರು ಚಿತ್ರೋದ್ಯಮಿಗಳು ಚಿತ್ರಪ್ರೇಮಿಗಳು ಪತ್ರಕರ್ತರು ಈ ಪುಸ್ತಕದ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸುತ್ತ ಅವರವರ ಸಂಪೂರ್ಣ ಬೆಂಬಲ ಮತ್ತು ಪ್ರೋತ್ಸಾಹವನ್ನು ಪ್ರಕಟಪಡಿಸಿದ್ದಾರೆ.
ಇದಲ್ಲದೇ ಕುಮಾರಕವಿಯವರು 1932ರಿಂದ 2022 ವರೆಗಿನ ಒಟ್ಟು90ವರ್ಷಗಳ ಸಮಗ್ರ ಕನ್ನಡ ಚಲನಚಿತ್ರ ಇತಿಹಾಸದ ಮಾಹಿತಿ ನೀಡುವ “ಚಂದನವನ ಚರಿತ್ರೆ”ಯ 10 ಸಂಪುಟಗಳನ್ನು ಬರೆದು ನೂತನ ದಾಖಲೆ ನಿರ್ಮಿಸಿದ್ದಾರೆ! ಇವೆಲ್ಲವೂ ಇಷ್ಟರಲ್ಲೇ ಲೋಕಾರ್ಪಣೆ ಆಗಲಿದೆ. ಪ್ರಸ್ತುತ ಕನ್ನಡ ಫಿಲಂ ಡೈರೆಕ್ಟರಿಯ 2 ಭಾಗಗಳನ್ನು ಓದಿದರೆ ಸಾಕು ನಾಡಿನ ಎಲ್ಲರಿಗೆ ಅದರಲ್ಲೂ ವಿಶೇಷವಾಗಿ ಸಿನಿಮಾ ಪ್ರಿಯರಿಗೆ, ಚಲನಚಿತ್ರ ನಟ-ನಟಿಯರಿಗೆ, ಪಾರಿಭಾಷಿಕ ವರ್ಗದವರಿಗೆ, ಧನ್ಯತಾಭಾವನೆ ದೊರಕುತ್ತದೆ. ಮಾತ್ರವಲ್ಲ ಭಾರತದ ಪ್ರತಿಯೊಬ್ಬರಿಗೂ ಏನೋ ಒಂಥರಾ ದೃಶ್ಯಾದೃಶ್ಯ ಖುಷಿ ಸಿಗುತ್ತದೆ! ಕನ್ನಡ ಫಿಲಂ ಡೈರೆಕ್ಟರಿಯ 2ಭಾಗಗಳಲ್ಲಿ ಪ್ರಕಟವಾದ ಸಂಪೂರ್ಣ ಮಾಹಿತಿ ಮತ್ತು ಪ್ರಮುಖ ಅಂಕಿ-ಅಂಶಗಳ ಬಗ್ಗೆ ನಾನು ಕಂಡಂತೆ ಸಂಕ್ಷಿಪ್ತವಾಗಿ ತಿಳಿಸಲು ಬಯಸುತ್ತೇನೆ.
ಕನ್ನಡ ಫಿಲಂ ಡೈರೆಕ್ಟರಿ(ಭಾಗ-1) “ಪರಿವಿಡಿ”:
* ಕನ್ನಡ ಚಿತ್ರರಂಗ ಚಂದನವನದ ಪಕ್ಷಿನೋಟ
* ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ
* ಕರ್ನಾಟಕ ಚಲನಚಿತ್ರ ಅಕಾಡೆಮಿ
* ಕರ್ನಾಟಕ ಚಲನಚಿತ್ರ ಪತ್ರಕರ್ತರ ಪರಿಷತ್
* ಸಿನಿಮಾ ಪತ್ರಿಕೆ-ನಿಯತಕಾಲಿಕೆಗಳು
* ಚಲನಚಿತ್ರ ಪ್ರಶಸ್ತಿಗಳು(ಅಂತಾರಾಷ್ಟ್ರ,ರಾಷ್ಟ್ರ,ರಾಜ್ಯ,ಸೈಮ, ಫಿಲಂಫೇರ್, ದಾದಾಸಾಹೇಬಫಾಲ್ಕೆ, ಚಿತ್ರರಸಿಕರಸಂಘ)
* ಪ್ರಪ್ರಥಮ ದಾಖಲೆಗಳು (ಚಿತ್ರವಿಚಿತ್ರ,ವೈಶಿಷ್ಟ್ಯ,ನಿತ್ಯನೂತನ, ವಿಶ್ವ,ಗಿನ್ನಿಸ್,ಇತ್ಯಾದಿ)
* ದೇಶದ ಮೊಟ್ಟಮೊದಲ ಫಿಲಂ ಇನ್ಸ್ಟಿಟ್ಯೂಟ್: ಎಸ್.ಜೆ. ಪಾಲಿಟೆಕ್ನಿಕ್,ಬೆಂಗಳೂರು
*ಕರ್ನಾಟಕ ಸರ್ಕಾರದ ಸಬ್ಸಿಡಿ ಯೋಜನೆ: ದೇಶದಲ್ಲೇ ಪ್ರಥಮ
* ಡಬ್ಬಿಂಗ್-ರೀಮೇಕ್ ಪುರಾಣ:ಅಂದು-ಇಂದು-ಮುಂದು
* ನಾಯಕ-ಹಾಸ್ಯ-ಪೋಷಕನಟರು(1000ಕ್ಕೂಅಧಿಕ)
* ನಾಯಕಿ-ಹಾಸ್ಯ-ಪೋಷಕನಟಿಯರು(1000ಕ್ಕೂ ಹೆಚ್ಚು)
* ಬಾಲನಟ ನಟಿಯರ ಸಮಗ್ರ ಪಟ್ಟಿ
* ಖಳನಾಯಕನಟ ನಟಿಯರ ಪಟ್ಟಿ
* ನೃತ್ಯ ಕಲಾವಿದೆಯರು(ಕ್ಯಾಬರೆ-ಐಟಂ ಡ್ಯಾನ್ಸರ್)
* ನಟನಟಿಯರ ಅಸಲಿ-ನಕಲಿ ಹೆಸರು (ಮೂಲನಾಮ-ಚಿತ್ರರಂಗದ ಮರುನಾಮಕರಣ)
* ನಟನಟಿಯರ ಬಿರುದು ಬಹುಮಾನ ಪದವಿ ಪ್ರಶಸ್ತಿ….
* ರೀಲ್ ಲೋಕದ ರಿಯಲ್(ತಾರಾ)ದಂಪತಿಗಳು
* ದೀರ್ಘಪ್ರದರ್ಶನ-ಗಲ್ಲಾಪೆಟ್ಟಿಗೆ(ಬಾಕ್ಸಾಫೀಸ್)ದಾಖಲೆ
* ನಿರ್ಮಾಪಕರು, ನಿರ್ದೇಶಕರುಗಳ ಪಟ್ಟಿ
* ಸಂಗೀತ-ನಿರ್ದೇಶಕರ ಪಟ್ಟಿ
* ಛಾಯಾಗ್ರಾಹಕ-ನಿರ್ದೇಶಕರ ಪಟ್ಟಿ
* ಸಂಕಲನಕಾರರ ಪಟ್ಟಿ(ಎಡಿಟರ್ಸ್)
* ಹಿನ್ನೆಲೆಗಾಯಕರು(ಪ್ಲೇಬ್ಯಾಕ್ ಸಿಂಗರ್ಸ್)
* ಚಿತ್ರಸಾಹಿತಿಗಳು(ಕಥೆ-ಚಿತ್ರಕಥೆ-ಸಂಭಾಷಣೆ-ಹಾಡು)
* ದಿಗ್ಗಜರ ಸಾಧನೆ-ಕೊಡುಗೆ
* ಒಂದೇಹೆಸರಿನ ಬೇರೆಬೇರೆ(ಪಾರ್ಟ್ ಬೈಪಾರ್ಟ್/ಕಾರ್ಬನ್ ಕಾಪಿ )ಸಿನಿಮಾಗಳು
* ಅತೀಕಡಿಮೆ-ಅತೀಹೆಚ್ಚುಅಕ್ಷರದ ಮತ್ತು ವಿಚಿತ್ರಹೆಸರಿನ ಫಿಲಂಸ್
* ಪರಭಾಷೆ ಚಿತ್ರರಂಗದೊಡನೆ ಕನ್ನಡದ ನಂಟು:
(1)ಬಾಲಿವುಡ್,ಕಾಲಿವುಡ್,ಟಾಲಿವುಡ್,ಮಾಲಿವುಡ್ಗಳಲ್ಲಿ ಕನ್ನಡಿಗರ ದರ್ಬಾರ್
(2)ಕನ್ನಡ ಚಿತ್ರರಂಗದಲ್ಲಿ ಅನ್ಯಭಾಷೆ ನಿರ್ಮಾಪಕ-ನಿರ್ದೇಶಕ-ಕಲಾವಿದ-ತಂತ್ರಜ್ಞ-ಮುಂತಾದವರು
(3)ಕರ್ನಾಟಕದಲ್ಲಿ ಚಿತ್ರೀಕರಣಗೊಂಡ ಅನ್ಯಭಾಷೆ ಸಿನಿಮಾಗಳು
ಕನ್ನಡ ಫಿಲಂ ಡೈರೆಕ್ಟರಿ ಭಾಗ-೨ರ “ಪರಿವಿಡಿ”:-
*200 ನಾಯಕನಟರ(ಹೀರೋ)ವೈಯಕ್ತಿಕ ಸಿನಿಮಾ ಪಟ್ಟಿ
*200 ನಾಯಕಿಯರ(ಹೀರೋಯಿನ್)ವೈಯಕ್ತಿಕ ಸಿನಿಮಾ
* 5000ಕ್ಕೂ ಹೆಚ್ಚು ಕನ್ನಡ ಸಿನಿಮಾಗಳ ಸಮಗ್ರ ಪಟ್ಟಿ
* ಕೊಡವ ಫಿಲಂಸ್ ಪಟ್ಟಿ
* ಕೊಂಕಣಿ ಫಿಲಂಸ್ ಪಟ್ಟಿ
* ತುಳು ಫಿಲಂಸ್ ಪಟ್ಟಿ
* ಮಕ್ಕಳ ಫಿಲಂಸ್ ಪಟ್ಟಿ
(1932ರಿಂದ 2022ರವರೆಗೆ ವರ್ಷಾವಾರು ಕ್ರ.ಸಂ.ಪ್ರಕಾರ)
* ಕಣ್ಮರೆಯಾದ (ಅಮರ)ಕಲಾವಿದರು
* ತಿದ್ದುಪಡಿ-ಅನುಬಂಧ.
ಇಷ್ಟೆಲ್ಲಾ ಮಾಹಿತಿ ವಿವರ ಅಂಕಿ ಅಂಶಗಳು ಇರುವಂಥ ಕುಮಾರಕವಿಯವರ ಕನ್ನಡ ಫಿಲಂ ಡೈರೆಕ್ಟರಿಯ ಎರಡೂ ಭಾಗಗಳನ್ನು; ಪ್ರಪಂಚದಾದ್ಯಂತ ನೆಲೆಸಿರುವ ಪ್ರತಿಯೊಬ್ಬ ಕನ್ನಡಪುತ್ರರು ಸಿನಿಮಾಪ್ರಿಯರು ಎಲ್ಲಕ್ಕಿಂತ ಮಿಗಿಲಾಗಿ ಕನ್ನಡ ಚಲನಚಿತ್ರ ಅಭಿಮಾನಿಗಳು ಅದರಲ್ಲು ವಿಶೇಷವಾಗಿ ರಾಜ್-ವಿಷ್ಣು-ಅಂಬಿ-ನಾಗ್ ರವರ ಅಭಿಮಾನಿ ದೇವರುಗಳು ಒಂದು ಸಲವಾದರೂ ಓದಲೇಬೇಕಾದ ಪುಸ್ತಕಗಳಿವು. ಇಂಥ ಓದುಗರೆಲ್ಲರಿಗು ಅನಂತಾನಂತ ವಂದನೆಗಳು ಮತ್ತು ನಿಮ್ಮೆಲ್ಲರ ಪರವಾಗಿ ದಿಟ್ಟ ಸಾಧಕರಾದ ಕುಮಾರಕವಿ ಬಿ.ಎನ್.ನಟರಾಜ್ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು.
– ತಿರುಮಲೈ ಕಣ್ಣನ್(ಟಿ.ಕೆ.)ರಘು
ಚಿತ್ರನಟ, ವಾಗ್ಮಿ, ಸಾಹಿತಿ, ವಿದ್ವಾಂಸ
15.6.2021

ಅವಲೋಕನ….. ಇದು ಸ್ಥಿರಶೀರ್ಷಿಕೆ ಅಡಿಯಲ್ಲಿ ಪುಸ್ತಕ ವಿಮರ್ಶೆ ಮತ್ತು ಕೃತಿಗಳ ಪರಿಚಯ.. ಭಾಗ-18








