ಕಾಳಿಹುಂಡಿ ಶಿವಕುಮಾರ್ ಸಂಗ್ರಹಿಸಿರುವ ವಿವಿಧ ಭಾಷೆಗಳ ಪತ್ರಿಕೆಗಳಲ್ಲಿ ಗಣಪನ ಬಹುರೂಪ!.
5 ದಿನಗಳ ಉಚಿತ ಗಣಪತಿ ಚಿತ್ರ-ಲೇಖನಗಳ ಪ್ರದರ್ಶನ

ಮೈಸೂರು: “ದೀಪ್ತಿ ಸಾಂಸ್ಕೃತಿಕ ವೇದಿಕೆ” ರಾಮಕೃಷ್ಣ ನಗರ, ಮೈಸೂರು ಹಾಗೂ ಗೋವಿಂದರಾವ್ ಮೆಮೋರಿಯಲ್, ಪಿಯು ಕಾಲೇಜು, ಕಂದಾಯ ನಗರ, ಶ್ರೀರಾಂಪುರ, ಮೈಸೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಮೈಸೂರಿನ ಲೇಖಕ, ವಿಮರ್ಶಕ ಕಾಳಿಹುಂಡಿ ಶಿವಕುಮಾರ್ ರವರು ಕಳೆದ 30 ವರ್ಷಗಳಿಂದ ಸಂಗ್ರಹಿಸಿರುವ ವಿವಿಧ ಭಾಷೆಗಳ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಗಣೇಶನ ಕುರಿತಾದ ಚಿತ್ರ- ಲೇಖನಗಳ ಉಚಿತ ಪ್ರದರ್ಶನ ದಿನಾಂಕ 12.09.2026ರ ಶನಿವಾರ ಮಧ್ಯಾಹ್ನ 2.30 ಗಂಟೆಗೆ ಮೈಸೂರಿನ ಶ್ರೀರಾಂಪುರ ಎರಡನೇ ಹಂತದ ಕಂದಾಯ ನಗರದಲ್ಲಿರುವ ಗೋವಿಂದರಾವ್ ಮೆಮೋರಿಯಲ್ ಪಿಯು ಕಾಲೇಜಿನ ಗ್ರಂಥಾಲಯದ ಕೊಠಡಿಯಲ್ಲಿ ಉದ್ಘಾಟನೆಯಾಗಲಿದೆ.

ಪ್ರದರ್ಶನವು 5 ದಿನಗಳ ಕಾಲ ಇರುತ್ತದೆ. (12.09.2026 ರ ಶನಿವಾರದಿಂದ 16.09.2026 ಬುಧವಾರ ದವರೆಗೆ) ಬೆಳಿಗ್ಗೆ 10ರಿಂದ ಸಂಜೆ 7.30 ರವರೆಗೆ ಇರುತ್ತದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಸಾಹಿತಿಗಳು, ಅಂಕಣಕಾರರು, ವಿಮರ್ಶಕರು ಆದ ಮಿರ್ಲೆ ಚಂದ್ರಶೇಖರ್ ರವರು ಮಾಡುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕರು, ಸಂಸ್ಕೃತಿ ಚಿಂತಕರು, ಲೇಖಕರು ಆದ ಕೊಕ್ಕಡ ವೆಂಕಟರಮಣ ಭಟ್ಟರು ವಹಿಸುವರು.
ಇದೇ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕವಯಿತ್ರಿ, ಡಾ ಕೆ ಎಸ್ ಲಾವಣ್ಯ ಪ್ರಭಾ, ಹಾಜರಿರುವರು. ಮತ್ತೋರ್ವ ಮುಖ್ಯ ಅತಿಥಿಗಳಾಗಿ ಗೋವಿಂದರಾವ್ ಮೆಮೋರಿಯಲ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ರವಿ ಕೆ ಹಾಜರಿದ್ದು ಪ್ರಸ್ತಾವಿಕ ಹಾಗೂ ಸ್ವಾಗತ ಭಾಷಣ ಮಾಡುವವರು.ಜೊತೆಗೆ ಗಣಪತಿ ಚಿತ್ರ- ಲೇಖನಗಳ ಸಂಗ್ರಾಹಕ ಶ್ರೀ ಕಾಳಿಹುಂಡಿ ಶಿವಕುಮಾರ್ ರವರು ಹಾಜರಿರುವರು. ಕಾರ್ಯಕ್ರಮದ ನಿರೂಪಣೆಯನ್ನು ಆರ್ ಎಂ ಪಿ ಯ ಹಿರಿಯ ನಿವೃತ್ತ ಶುಶ್ರೂಷಕ ಕಣ್ಣೂರು ವಿ ಗೋವಿಂದಾಚಾರಿ ರವರು ಮಾಡುವರು.

ಕಾಳಿಹುಂಡಿ ಶಿವಕುಮಾರ್ ಬಗ್ಗೆ ನಿಮಗೆ ಗೊತ್ತಾ?
ವೃತ್ತಿಯಲ್ಲಿ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಲೆಕ್ಕ ಪರಿಶೋಧನಾಧಿಕಾರಿಯಾಗಿರುವ ಇವರು ಸಾಲಿಗ್ರಾಮ ತಾಲೂಕು ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಹಲವು ಪತ್ರಿಕೆಗಳನ್ನು ಕೊಂಡು ಓದುತ್ತಾರೆ, ಇವರು ಪತ್ರಿಕೆಗಳಲ್ಲಿ ಮೈಸೂರು, ಪತ್ರಿಕೆಗಳಲ್ಲಿ ದಸರಾ, ಪತ್ರಿಕೆಗಳಲ್ಲಿ ಯೋಗ ಅಲ್ಲದೆ ನಮ್ಮ ಕನ್ನಡ ನಾಡು ನುಡಿ ಸಂಸ್ಕೃತಿಗೆ ತಕ್ಕಂತಹ ಚಿತ್ರ-ಲೇಖನಗಳ ಪ್ರದರ್ಶನ ಮಾಡುವ ಸದಭಿರುಚಿಯ ಹವ್ಯಾಸಗಳನ್ನು ರೂಢಿಸಿ ಕೊಂಡಿದ್ದಾರೆ. ರಾಜ್ಯದ ಎಲ್ಲಾ ಪತ್ರಿಕೆಗಳಿಗೂ ಕಥೆ, ಕವನ, ಲೇಖನ, ವ್ಯಕ್ತಿಚಿತ್ರ, ಬರೆಯುತ್ತಾರೆ. ಆಕಾಶವಾಣಿಯ ಖಾಯಂ ಕೇಳುಗರೂ ಆದ ಇವರು ಭಕ್ತಿ ಗೀತೆ, ಭಾವಗೀತೆ, ಚಿತ್ರಗೀತೆಗಳ ಗಾಯಕರೂ ಕೂಡ ಹೌದು. ಹಲವಾರು ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ.

ಇವರು ಕಳೆದ 30 ವರ್ಷಗಳಿಂದಲೂ ಕೂಡ ವಿವಿಧ ಭಾಷೆಗಳ, ವಿವಿಧ ದಿನ, ವಾರ, ಮಾಸ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಗಣಪತಿಯ ಕುರಿತಾದ ಚಿತ್ರ-ಲೇಖನಗಳನ್ನು ಒಂದೆಡೆ ಸಂಗ್ರಹಿಸಿ ಪ್ರದರ್ಶನ ಮಾಡುತ್ತಾ ಬಂದಿದ್ದಾರೆ. ಮೈಸೂರಿನ ತಮ್ಮ ನಿವಾಸ, ಹಲವು ಬಡಾವಣೆಗಳು, ಅಲ್ಲದೆ ಧಾರವಾಡ, ಕಲ್ಬುರ್ಗಿ, ಹಾವೇರಿ, ಬೆಂಗಳೂರು ಮುಂತಾದ ಕಡೆ ಪ್ರದರ್ಶನ ಮಾಡಿದ್ದಾರೆ.
ಇವರ ಸಂಗ್ರಹಾಲಯದಲ್ಲಿ ರಾಜ್ಯದಲ್ಲಿರುವ ಎಲ್ಲಾ ಗಣಪತಿಯ ದೇವಸ್ಥಾನಗಳ ಬಗ್ಗೆ, ವರ್ಷ ವರ್ಷವೂ ಕೂಡ ಪ್ರಚಲಿತ ವಿದ್ಯಮಾನಗಳಿಗೆ ತಕ್ಕಂತೆ ಕಲಾವಿದರ ಕಲ್ಪನೆಯಲ್ಲಿ ಸೃಷ್ಟಿಯಾಗಿರುವ ಗಣಪನ ಚಿತ್ರಗಳು, ಗಣಪನ ಕುರಿತಾದ ಗೀತೆಗಳು, ಜನಪದ ಕಥೆಗಳು, ಅಪರೂಪದ ಪುರಾಣ ಕಥೆಗಳು, ಮಾಹಿತಿಗಳು, ದೇಶ- ವಿದೇಶಗಳಲ್ಲಿರುವ ಕೆಲವು ಗಣಪತಿ ಚಿತ್ರಗಳು, ಕಲಾವಿದರು ಸೃಷ್ಟಿ ಮಾಡುತ್ತಿರುವ ಚಿತ್ರಗಳು,

ಸೃಷ್ಟಿಯ ವೈಚಿತ್ರದಲ್ಲಿ ಗಣಪತಿ ಆಕಾರಗಳು, ಗಣಪತಿಯ ಕುರಿತು ವ್ಯಂಗ್ಯ ಚಿತ್ರಕಾರರ ಚಿತ್ರಗಳು, ವಿವಿಧ ಪದಾರ್ಥಗಳಲ್ಲಿ ತಯಾರಾದ ಗಣಪತಿ ಚಿತ್ರಗಳು, ಜೊತೆಗೆ ನಗರ ಗ್ರಾಮಾಂತರ ಪ್ರದೇಶಗಳಲ್ಲಿ, ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿರುವ ಬೃಹದಾಕಾರದ ಗಣಪತಿಯ ಚಿತ್ರಗಳು, ಗ್ರೀಟಿಂಗ್ಸ್ ಗಣಪತಿ, ವಿವಾಹ ಆಮಂತ್ರಣದಲ್ಲಿರುವ ಗಣಪತಿ ಚಿತ್ರಗಳು, ಮುಂತಾದವುಗಳನ್ನು ಕಾಣಬಹುದಾಗಿದೆ.
5 ದಿನವೂ ಉಚಿತ ಪ್ರದರ್ಶನ ಇರುವುದರಿಂದ ನಗರದ ವಿವಿಧ ಬಡಾವಣೆಗಳ ಭಕ್ತಾದಿಗಳು, ನಾಗರಿಕರು ಹಾಜರಾಗಿ ಕಾರ್ಯಕ್ರಮ ದ ಸದುಪಯೋಗಪಡಿಸಿಕೊಳ್ಳಲು ಕಾಳಿಹುಂಡಿ ಶಿವಕುಮಾರ್ ರವರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ. ಜೊತೆಗೆ ಇವರ ಸಂಗ್ರಹಕ್ಕೆ ನೆರವಾಗುವವರು ಅಲ್ಲದೆ ತಮ್ಮ ಬಳಿ ಇರುವ ಗಣಪತಿಯ ಚಿತ್ರ-ಲೇಖನಗಳು, ಪುಸ್ತಕಗಳು, ಇನ್ನಿತರ ಪತ್ರಿಕಾ ಮಾಹಿತಿ ಇದ್ದರೆ ಸಂಪರ್ಕಿಸಲು ಕೋರಿದ್ದಾರೆ. ಇವರ ಸಂಪರ್ಕ ಸಂಖ್ಯೆ 9844883581.







