ArticlesLatest

ಸ್ವಾನಂದ ಲೋಕದ ಸಾಮ್ರಾಟ್ ಗಣೇಶ… ಸಿದ್ಧಿವಿನಾಯಕ ತೇ ನಮೊ ನಮೋ

ಅಗ್ರಪೂಜಿತ, ಆದಿಪೂಜಿತ, ಪ್ರಥಮಪೂಜಿತ, ಸಕಲಕಲಾವಲ್ಲಭ, ಸುಗುಣವಂತ, ನಿರ್ವಿಘ್ನಕಾರಕ, ಅಖಿಲ ವರಪ್ರದಾಯಕ, ಸಂಕಷ್ಟಹರ, ಮುಂತಾದ ಕೋಟಿಕೋಟಿ ಹೆಸರಿನಿಂದ ಸ್ತುತಿಸಲ್ಪಡುವ ಭೂಲೋಕದ ಭವ್ಯಭವಿತವ್ಯ ಭಗವಂತನೇ ಗಣೇಶನು.  ಪ್ರತಿವರ್ಷ ಭಾದ್ರಪದ ಮಾಸ ಅಮಾವಾಸ್ಯೆ ನಂತರದ 3ನೇ ದಿನ ಗೌರಮ್ಮನ ಪಾದಾರ್ಪಣೆ, 4ನೇದಿನ ಗಣೇಶಾಗಮನ.  ಅಪರೂಪಕ್ಕೆ, ತಾಯಿ-ಮಗ ಇಬ್ಬರು ಒಟ್ಟಿಗೇ ಧರೆಗಿಳಿವ ಸಂದರ್ಭವುಂಟು!

ಅಂದು ಇಂದು ಮುಂದು ಎಂದೆಂದೂ 21ಲೋಕದಲ್ಲಿ ದೇವ ಮಾನವ ದಾನವ ಮೊದಲ್ಗೊಂಡು ಪ್ರಪಂಚದಾದ್ಯಂತ ಪ್ರತಿಯೊಬ್ಬಧರ್ಮೀಯರು ಆರಾಧಿಸುವ ಏಕೈಕದೈವ! ಆದಿಕಾಲದಿಂದ ಲೋಕದಾದ್ಯಂತ ಎಲ್ಲಾ ದೇವಸ್ಥಾನಗಳಲ್ಲೂ ಪ್ರಥಮಪೂಜಿತ ಗಣೇಶನ ದೇವಾಲಯ ಅಥವ ವಿಗ್ರಹ/ಮೂರ್ತಿ ಇದ್ದೇಇರುತ್ತದೆ. ಇದರ ಕಾರಣವೇ: ನಾರದಮುನಿ ಏರ್ಪಡಿಸಿದ್ದ ಪ್ರಪಂಚ ಪರ್ಯಟನೆ ಸ್ಫರ್ಧೆಯಲ್ಲಿ ಬಾಲಕ ಗಣೇಶನು ತೋರಿಸಿದ ಮಾತಾ ಪಿತೃ ಭಕ್ತಿಯ ಪ್ರತಿಫ಼ಲ. ಹಾಗಾಗಿ ಪರಮೇಶ್ವರ ಪಾರ್ವತಿ ಸುಬ್ರಮಣ್ಯ ನೀಡಿದ ಸಿದ್ಧಿ ಬುದ್ಧಿ ಯುಕ್ತಿ ಶಕ್ತಿ ಸಂಗಮದ ವರಪ್ರಸಾದ!

ಭಕ್ತಾದಿಗಳು ಅವರವರ ಯೋಗ್ಯತೆ ಯಥಾಶಕ್ತಿ ಅನುಸಾರ, 1,3,5,7,9 ದಿನ ಅಥವ ತಿಂಗಳ ಪೂರ್ತಿ ಅವಧಿಗೆ ಮಣ್ಣಿನ ಗಣೇಶ ತಂದು ಭವ್ಯ ಮಂಟಪದಲ್ಲಿ ಕೂರಿಸಿ ದಿವ್ಯಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಮಾಡಿ, ಪ್ರತಿದಿನವೂ ಮಹಾಮಂಗಳಾರತಿ ಪ್ರಸಾದ ವಿನಿಯೋಗದ ಪೂಜೆ ಕೈಗೊಳ್ಳುವರು. ಆಧ್ಯಾತ್ಮ ನೆಲೆಗಟ್ಟಿನ ಅಡಿಯಲ್ಲಿ ವೈಭವದಿಂದ ಗಣೇಶೋತ್ಸವ ಆಚರಿಸುವಾಗ ಸಾಮಾಜಿಕ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಳ್ಳಬೇಕು.

ಕಾನೂನು-ಸುವ್ಯವಸ್ಥೆಗೆ ಚ್ಯುತಿಬಾರದಂತೆ ಅನ್ಯಧರ್ಮೀಯರಿಗೆ ನೋವುಂಟಾಗದಂತೆ ಪ್ರಕೃತಿ ಪರಿಸರಕ್ಕೆ ನಷ್ಟವಾಗದಂತೆ ಶುಚಿತ್ವ ಕಾಪಾಡಿಕೊಂಡು ಆರೋಗ್ಯಕ್ಕೆ ಧಕ್ಕೆಯಾಗದಂತೆ ನೆರೆಹೊರೆ ಸುಖ ಶಾಂತಿ ನಿದ್ರೆಗೆ ಭಂಗವಾಗದಂತೆ ರೋಗಿ ಮಕ್ಕಳು ಮಹಿಳೆ ವೃದ್ಧರಿಗೆ ಊನವಾಗದಂತೆ ಸಾರ್ವಜನಿಕ ಸಭೆ ಸಮಾರಂಭಕ್ಕೆ ಅಡ್ಡಿ ಪಡಿಸದೆ ಅರೆ/ ಸರ್ಕಾರಿ ಖಾಸಗಿ ಆಸ್ತಿಪಾಸ್ತಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು. ಸಭ್ಯತೆ ಮೀರದ ಅಶ್ಲೀಲ-ಅಸಹ್ಯ [ಪ್ರ]ದರ್ಶನ ಇಲ್ಲದ ಸಾಂಸ್ಕೃತಿಕ ಮನರಂಜನಾತ್ಮಕ ಕಾರ್ಯ ಕ್ರಮಗಳನ್ನು ಎಚ್ಚರಿಕೆಯಿಂದ ಆಯೋಜಿಸಿ ಭೇಷ್ ಎನಿಸಿಕೊಳ್ಳಬೇಕು!

ಗಣೇಶ ಬಂದ, ಕಾಯಿಕಡಬು ತಿಂದ, ತಥಾಸ್ತು ಅಂದ, ಚಿಕ್ಕಕೆರೆಯಲ್ಲಿ ಬಿದ್ದ, ದೊಡ್ಡಕೆರೆಯಲ್ಲಿ ಎದ್ದ ಮುಂತಾದ ಚಿನ್ನಾರಿಚಿಣ್ಣರ ಹರ್ಷಮಯ ಮುಗ್ಧತೆಯ [ಅನು]ಪಲ್ಲವಿ ಯನ್ನೂ; ಮುತ್ತುಸ್ವಾಮಿ ದೀಕ್ಷಿತರ ’ವಾತಾಪಿ ಗಣಪತಿಂ ಭಜೇ ಹಂ’ ಸಂಸ್ಕೃತ ಕೀರ್ತನೆಯನ್ನೂ; ವೇದೋಪನಿಷತ್‌ನ ಶುಕ್ಲಅಂಬರಧರಂ [ಬಿಳಿವಸ್ತ್ರಧಾರಿ] ವಿಷ್ಣುಂ[ಬೆಳಕುಹರಡುವ] ಶಶಿವರ್ಣಂ [ಚಂದ್ರಬಣ್ಣದ] ಚತುರ್‌ಭುಜಂ [೪ಭುಜದ] ಪ್ರಸನ್ನವದನಂ [ಶಾಂತಮುಖದ] ಧ್ಯಾಯೇತ್ [ದೇವರಧ್ಯಾನಮಾಡಲು] ಸರ್ವ ವಿಘ್ನೋಪ [ಎಲ್ಲ ವಿಘ್ನಗಳು] ಶಾಂತಯೆ [ನಿವಾರಣೆಯಾಗುತ್ತೆ]

ದೈವಶ್ಲೋಕವ ಹಾಗೂ ಲಕ್ಷಗಟ್ಟಲೆ ಪದ್ಯ ರಚಿಸಿದ ಪುರಂದರದಾಸರ: “ಶ್ರೀಗಣನಾಥ [ಗಣಗಳ ಒಡೆಯ], ಸಿಂಧೂರ ವರ್ಣ[ಪ್ರಕಾಶಮಾನ ಬಣ್ಣದ] ಕರುಣಸಾಗರ [ಸಹಾನುಭೂತಿ ಸಮುದ್ರದ] ಕರಿವದನ[ಆನೆ ಮುಖದ] ಲಂಬೋದರ [ದೊಡ್ಡಹೊಟ್ಟೆಯ] ಲಕುಮಿ ಕರ[ಲಕ್ಷ್ಮಿಯನ್ನು ಕೈಯಲ್ಲಿ ಹಿಡಿದ] ಅಂಬಾಸುತ[ಪಾರ್ವತೀಪುತ್ರ] ಅಮರ ವಿನುತ (ಮರಣಇಲ್ಲದ ಪ್ರಾಣಶರೀರ) ಸಿದ್ಧ ಚಾರಣ[ಸಿದ್ಧರು-ಆಕಾಶಕಾಯಗಳು] ಗಣ ಸೇವಿತ [ದೇವ, ದಾನವ, ಮಾನವ, ಗಣ ಆದಿಯಾಗಿ ಎಲ್ಲರೂ ಪೂಜಿಸುವ] ಸಿದ್ಧಿವಿನಾಯಕ ತೇ ನಮೊನಮೋ” [ಅಡೆತಡೆ ನಿವಾರಿಸಿ ವಿಜಯ ದೊರಕಿಸುವ ನಿನಗೆ ನಮಸ್ಕಾರಗಳು] ಕೀರ್ತನೆಯನ್ನು ಯಾರೂ ಮರೆಯುವಂತಿಲ್ಲ!

ಕೀರ್ತಿಶೇಷ ವಾಸುದೇವಾಚಾರ್ಯ, ಅಣ್ಣಮಾಚಾರ್ಯ ಚಿ.ಉದಯಶಂಕರ್ ಆರ್.ಎನ್.ಜಯಗೋಪಾಲ್ ಮುಂತಾದ ಲಕ್ಷಾಂತರ ಭಕ್ತರು ಅಮಾಯಕರು ನೂರಾರು ಭಾಷೆಗಳಲ್ಲಿ ರಚಿಸಿದ ಕೋಟ್ಯಾಂತರ ಭಕ್ತಿಗೀತೆ ಜನಪದಗೀತೆ ನುಡಿಗಟ್ಟು ಲಾವಣಿ ಮುಂತಾದವು ಕೇಳಲು ಕರ್ಣಾನಂದಕರ. ಭಕ್ತರ ನೃತ್ಯ-ಕುಣಿತ ನೋಡಿ ಆನಂದಿಸಿ ಮೈಮರೆವ ನಯನ ಮನೋಹರ ಕ್ಷಣವು ಗಣೇಶನ ಹಬ್ಬದಲ್ಲಿ ಮಾತ್ರಲಭ್ಯ! ಹರಿಕಥೆ ಗಣೇಶಕಥೆ ಭರತನಾಟ್ಯ ನಾಟಕ ಸಂಗೀತ ಮುಂತಾದ ನೂರಾರು ಆಧ್ಯಾತ್ಮಿಕ ಭಕ್ತಿಪೂರ್ವಕ ಸಾಂಸ್ಕೃತಿಕ ಕಾರ್ಯಕ್ರಮ ಆಪ್ಯಾಯಮಾನ, ಸಾರ್ಥಕ.ಪ್ರಥಮಪೂಜೆ ಮಾಡದೆ ಕಷ್ಟನಷ್ಟ ಶಿಕ್ಷೆ ಅನುಭವಿಸಿದ ದೇವ ದಾನವ ಮಾನವರ ಉದಾಹರಣೆ ಹೀಗಿವೆ..

 ದೇವಲೋಕದಲ್ಲಿ:

ಬ್ರಹ್ಮನು ತನ್ನದೊಂದು ಮುಖವನ್ನು ಕಳೆದುಕೊಂಡನು. ಶಿವನು ಬ್ರಹ್ಮ ಕಪಾಲ ಹಿಡಿದು ಭಿಕ್ಷೆ ಬೇಡಿದನು. ವಿಷ್ಣುವು ಶರಭನಿಂದ ಸೋಲು ಅನುಭವಿಸಿದನು. ನಾರದನು ತುಂಬುರು ಮುನಿಯಿಂದ ಪರಾಜಿತನಾದನು. ದೇವೇಂದ್ರನು ದಾಸಿಯಿಂದ ಛೀಮಾರಿ ಹಾಕಿಸಿಕೊಂಡನು. ಜಯ-ವಿಜಯ ದ್ವಾರಪಾಲಕರು ಸಪ್ತ ಮಹರ್ಷಿಗಳ ಶಾಪಕ್ಕೆ ಗುರಿಯಾದರು.

 ಕೃತ[ಸತ್ಯ]ಯುಗದಲ್ಲಿ:

ಮಹಾವಿಷ್ಣುವು ಮತ್ಸ್ಯ, ಕೂರ್ಮ, ವರಾಹ, ನರಸಿಂಹನಾಗಿ ೪ ಬಾರಿ ಅವತಾರ ತಾಳಿದನು. ಹಿರಣ್ಯಾಕ್ಷ ಹಿರಣ್ಯಕಶ್ಯಪ ಸೋದರರು ದುರಹಂಕಾರದಿಂದ ಮೆರೆಯುತ್ತ ಅನೇಕ ಯುದ್ಧಗಳನ್ನು ಜಯಿಸಿದ್ದರೂ ಸಹ ಪ್ರಥಮ ಪೂಜೆ ಸಲ್ಲಿಸಲು ಮರೆತ ದಿನವೇ ಹತರಾದರು. ಸೂರ್ಯದೇವನು ಶನಿಯ ವಕ್ರದೃಷ್ಟಿಗೆ ಬಿದ್ದು ಕಳಾಹೀನತೆ ಹೊಂದಿದನು. ತನ್ನ ಪತಿಯಾದ ಪರಶಿವನ ನಿಂದನೆಯನ್ನು ಕೇಳಿ ಸಹಿಸಲಾರದೇ ಅಗ್ನಿಪ್ರವೇಶ ಮಾಡಿದ ದಾಕ್ಷಾಯಣಿಯಿಂದ ದಕ್ಷರಾಜನ ಯಾಗಯಜ್ಞ ವಿಫಲವಾಯಿತು.

 ತ್ರೇತಾಯುಗದಲ್ಲಿ:

ರಾಜಾ ಸತ್ಯಹರಿಶ್ಚಂದ್ರನು ತನ್ನ ಬೃಹತ್ ಸಾಮ್ರಾಜ್ಯವನ್ನೂ ಬಂಧು ಬಳಗ ಎಲ್ಲವನ್ನು ಕಳೆದುಕೊಂಡು ಸತಿ-ಸುತರ ಆದಿಯಾಗಿ ಸ್ವಯಂ ತನ್ನಂತಾನೇ ಮಾರಿಕೊಂಡು ಕೊನೆಗೆ  ಸ್ಮಶಾನವನ್ನು ಕಾಯ್ದನು. ರಘುರಾಮನು ಪತ್ನಿ ಮತ್ತು ಸಹೋದರನ ಸಮೇತ 14 ವರ್ಷ ವನವಾಸಕ್ಕೆ ತೆರಳಿದ್ದಾಗ ಸೀತಾದೇವಿಯ ಅಪಹರಣವಾಗಿ ಶ್ರೀರಾಮನು ವಿರಹ ತಾಪದಿಂದ ನೊಂದುಬೆಂದು ಬಳಲಿದನು. ಬಲಶಾಲಿ ವಾಲಿಯನ್ನು ಕೊಂದು ಮೋಸಗಾರನೆಂಬ ಕೆಟ್ಟ ಹೆಸರು ಪಡೆದನು. ಲಕ್ಷ್ಮಣನೂ ಪ್ರಜ್ಞೆ ಕಳೆದುಕೊಂಡನು!

ಕ್ರಮೇಣ ರಾಮ ಲಕ್ಷ್ಮಣರಿಗೆ ತಮ್ಮ ತಪ್ಪಿನ ಅರಿವಾಗಿ ಪ್ರಾಯಶ್ಚಿತ ಮಾಡಿಕೊಳ್ಳಲು 21ಬಾರಿ ಗಣಪತಿಯನ್ನು ಪೂಜಿಸುವರು. ತತ್ಪರಿಣಾಮವಾಗಿ ಕಿಷ್ಕಿಂಧೆಯಂಥ ದಟ್ಟ ಕಾಡಿನಲ್ಲಿ ಹನುಮಂತ ಸುಗ್ರೀವನ ಆಸರೆ, ವಾನರಸೇನೆಯ ಸಹಾಯ ದೊರಕುತ್ತದೆ. ಸೇತುವೆ ನಿರ್ಮಾಣ ಲಂಕಾದಹನ ಸೀತಾ-ರಾಮರ ಪುನರ್ಮಿಲನ. ಪ್ರಥಮಪೂಜೆ ಮರೆತ ರಾವಣನಿಂದ ಸಂಧ್ಯಾವಂದನೆ ಸಮಯದಲ್ಲಿ ಪರಶಿವನ ಆತ್ಮಲಿಂಗ ಪಡೆದು ಧರೆಗಿರಿಸಿ ಗೋಕರ್ಣವನ್ನ ಭೂಕೈಲಾಸವನ್ನಾಗಿ ಮಾಡಿದ್ದು ಮಹಾಗಣಪ. ಪ್ರಥಮಪೂಜೆ ಮರೆತಕಾರಣ ರಘುರಾಮನಿಂದ ದಶಕಂಠ ಲಂಕೇಶನು ಹತನಾದ.

 ದ್ವಾಪರಯುಗದಲ್ಲಿ:

ನಳಮಹಾರಾಜನು ಶನೈಶ್ಚರನ ಅವಕೃಪೆಗೆ ಬಲಿಯಾಗಿ ಸರ್ವಸ್ವವನ್ನೂ ಕಳೆದುಕೊಂಡು ನರಕಯಾತನೆ ಅನುಭವಿಸಿದನು. ಪಾಂಡವರು ವನವಾಸ ಅಜ್ಞಾತವಾಸ, ಅನುಭವಿಸಿದರು. ಸುಯೋಧನನು ಯುದ್ಧವನ್ನು ಸೋತು ಸಾವನ್ನಪ್ಪಿದನು.ಭಗವಾನ್ ಶ್ರೀಕೃಷ್ಣನು ವಿನಾಯಕ ಚೌತಿಯ ಚಂದ್ರದರ್ಶನದಿಂದ ಶಮಂತಕಮಣಿ ಕಳ್ಳನೆಂಬ ನಿಂದೆಗೆ ಗುರಿಯಾಗುವನು!

 ಕಲಿಯುಗದಲ್ಲಿ:

ಮಹಾವಿಷ್ಣು ಭೃಗುಮುನಿಯ ಶಾಪಕ್ಕೆ ಗುರಿಯಾಗಿ ಶ್ರೀನಿವಾಸನ ಅವತಾರವೆತ್ತಿ ಕಷ್ಟ ಕಾರ್ಪಣ್ಯ ಎದುರಿಸಿ! ಕುಬೇರನಿಗೆ ಸಾಲಗಾರನಾದನು. ಅಜೇಯಅಶೋಕ ಇಮ್ಮಡಿಪುಲಿಕೇಶಿ, ಶ್ರೀಕೃಷ್ಣದೇವರಾಯ, ಮುಂತಾದ ಅನೇಕ ಚಕ್ರವರ್ತಿಗಳು ಅವನತಿ ಹೊಂದಿದರು. ಈಕಾರಣಕ್ಕಾಗಿ ಅಂದಿನ ಆಚಾರ್ಯತ್ರಯರು, ವಚನಗಾರರು, ದಾಸವರೇಣ್ಯರು, ಪವಾಡಪುರುಷರು, ಸರ್ವಜ್ಞರು, ರಾಜ ಮಹಾರಾಜರು ಮತ್ತು ಇಂದಿನ ಮಠ-ಪೀಠಾಧಿಪತಿಗಳು, ರಾಜಕಾರಣಿಗಳು, ಜ್ಞಾನಿ-ವಿಜ್ಞಾನಿಗಳು ಆದಿಯಾಗಿ ಪ್ರತಿಯೊಬ್ಬರೂ ಪ್ರಥಮ ಪೂಜಿತನನ್ನು ಆರಾಧಿಸುತ್ತ ನಿರ್ವಿಘ್ನವಾಗಿ ತಮ್ಮ ಕಾರ್ಯಗಳನ್ನು ಮುಗಿಸಿಕೊಂಡು ಕೀರ್ತಿ ಹಣ ಯಶಸ್ಸು ಆನಂದ ನೆಮ್ಮದಿ ತೃಪ್ತಿ ಪಡೆಯುತ್ತಾರೆ!

21ರ ಮಹತ್ವ ಏನು ಗೊತ್ತಾ?

“ಬೆನಕಬೆನಕ ಏಕದಂತ ಪಚ್ಚೆಕಲ್ಲು…..೨21 ನಮಸ್ಕಾರಗಳು” 21ಲೋಕದಲ್ಲೂ 4 ಯುಗದಲ್ಲೂ ಅಸ್ತಿತ್ವದಲ್ಲಿರುವ ಅಯೋನಿಜ, ಅಜಾತಶತ್ರು, ಅಮರಶಕ್ತಿ, ನಿರಂಕುಶಪ್ರಭು, ದೇವಾಧಿದೇವ, ಶೀಘ್ರವರಪ್ರದಾಯಕ, ಕ್ರಿಯಾಶೀಲದೈವ, 21ಬಾರಿ ಶನಿ[ವಕ್ರ]ದೃಷ್ಟಿಗೆ ಸಿಲುಕದ ಏಕೈಕ ನಾಯಕ-ವಿನಾಯಕ. ಕೈಲಾಸ ವೈಕುಂಠ ಸತ್ಯಲೋಕ ಮುಂತಾದ ೧೩ಲೋಕದೊಡನೆ ಅಷ್ಟದಿಕ್ಪಾಲಕರ ೮ಲೋಕ ಸೇರಿ ಒಟ್ಟು21 ಲೋಕಗಳಿದ್ದು ೨೧ನೇ ಶೂನ್ಯಲೋಕ ದಾಟಿದರೆ ಸಿಗುವ 22ನೇ ಲೋಕವೇ ವಿಘ್ನೇಶ್ವರನ ’ಸ್ವಾನಂದಲೋಕ’.

ಈ ಲೋಕದ ಏಕಮೇವಾದ್ವಿತೀಯ ಚಕ್ರವರ್ತಿ”ಸ್ವಾನಂದೇಶ” ವಿನಾಯಕನ ಅರಮನೆ”ಆನಂದಭವನ” ಇದೆ. ಸ್ವಾನಂದಲೋಕ ಸಾಮ್ರಾಜ್ಯದ ರಾಜಧಾನಿಗೆ 21 ಮುಖ್ಯ ದ್ವಾರಗಳಿದ್ದು ಅರಮನೆ ಕೋಟೆಗೆ 21 ಪ್ರಮುಖ ಬಾಗಿಲುಗಳಿದ್ದು ಇವುಗಳ 21 ಹೆಸರು: ಶ್ರೀಮುಖ, ಸುಮುಖ, ಅಥರ್ವ, ಪ್ರಣವ, ಬೆನಕ, ವಿಶ್ವಮೂರ್ತಿ, ವಿಶಿಷ್ಟಕೀರ್ತಿ, ಅಧಿಪತಿ, ಗಣಪತಿ, ಗಣೇಶ, ಲಂಬೋದರ, ಗೌರೀವರ, ವಿಘ್ನೇಶ್ವರ, ಗಣೇಶ್ವರ, ಅಜರಾಮರ, ಅತಿರಥ, ಅಖುರಥ, ಅಮಿತ, ಅಚ್ಯುತ, ಅನಂತ, ಅಗಣಿತ.

ಶ್ರೀಗಣೇಶ ಸಹಸ್ರನಾಮ ಜಪಿಸುವಾಗ ಕೇಳಿಬರುವ ‘ಸ್ವಾನಂದೇಶ’ ಸ್ಮರಣೆ ಗಣೇಶನ ಇನ್ನೊಂದು ಹೆಸರು! ವಿಘ್ನಹರ್ತ ವಾಸಿಸುವ ಸ್ವಾನಂದ ಲೋಕವು 5 ಸಾವಿರ ಯೋಜನೆ ವಿಸ್ತಾರವುಳ್ಳ ನವರತ್ನಖಚಿತ ಸ್ವರ್ಣಧರಣಿಗೆ ಸಾಮ್ರಾಟನಾಗಿ ಪಂಚಮುಖಿ ಗಣಪತಿಯು 21 ಕೋಟಿ ಸೂರ್ಯತೇಜಸ್ಸಿನಿಂದ ಸಮಷ್ಟಿ ವೃಷ್ಟಿರೂಪನಾಗಿ ಸಕಲ ಭೋಗಭಾಗ್ಯದ ವೈಭೋಗದಿಂದ ದರ್ಬಾರ್ ನಡೆಸುತ್ತಿದ್ದಾನೆ. ರವಿ, ಚಂದ್ರ, ನಕ್ಷತ್ರ, ಅಷ್ಟ ದಿಕ್ಪಾಲಕರು ಇರದ ಈ ಲೋಕದಲ್ಲಿ ಶೇ.100 ಪುಣ್ಯಜೀವಿ ಗಳಿದ್ದು ಪ್ರಜೆಗಳ ಸ್ವಯಂ ಪ್ರಭೆಯಿಂದ 10ದಿಕ್ಕುಗಳು ಪ್ರಕಾಶಮಾನದಿ ಬೆಳಗುತ್ತವೆ ಪ್ರತಿಯೊಬ್ಬರೂ ಸುಖಶಾಂತಿ ನೆಮ್ಮದಿ ಸುಭಿಕ್ಷುತೆಯಿಂದ ಹಸಿವು ಬಾಯಾರಿಕೆ ಸಾವುನೋವು ಇಲ್ಲದೆ ಪ್ರತಿದಿನ 21 ಬಾರಿ ಗಣೇಶ ಭಜನೆ ಪೂಜೆ ಪುನಸ್ಕಾರ ಮಾಡುತ್ತ ಚಿರಂಜೀವಿಗಳಾಗಿದ್ದಾರೆ!

21 ನಿತ್ಯಸತ್ಯ ಸಾರ್ಥಕಗಳು: [1]ಶ್ರೀವಾರಿಪಿಳ್ಳೆಯಾರ್  [2]ವಿಘ್ನನಿವಾರಣಾ ಇಷ್ಟಾರ್ಥಪ್ರದಾಯಕ  [3]ಗೂಳೂರು ಗಣಪ  [4]ಬಸವನಗುಡಿ ಬೃಹತ್‌ಗಣೇಶ  [5]ಕಡಲೆ ಕಾಳುಗಣಪತಿ [6]ಶೋಣಭದ್ರ ಶಿಲಾಮೂರ್ತಿ  [7]ಯೋಗಶಾಸ್ತ್ರ ಚಕ್ರಸ್ಥಾನಿಕ [8]ಸಂಕಷ್ಟ ಹರವ್ರತ [9]ಹಾಸ್ಯರಸಾಧಿಪತಿ  [10]ಪೋಷಕಾರಾಧ್ಯ ಸುಜ್ಞಾನಮೂರ್ತಿ [11]ಪೂನಾಕ್ಷೇತ್ರ ಅಷ್ಟವಿನಾಯಕ [12]ಗಣೇಶ ಪುರಾಣ-ಮುದ್ಗಲಪುರಾಣ [13]ತಾರಕಾಸುರಸಂಹಾರ ಮುರುಗನ್‌ಪೂಜಿತ

[14]ತ್ರಿಪುರಾಸುರ ಸಂಹಾರಸಂದರ್ಭ ಕಾಲಭೈರವಂಗೆ ಶ್ರೀಸಹಸ್ರ ನಾಮೋಪದೇಶಪೂಜ್ಯ [15]ಕಾಶೀಕ್ಷೇತ್ರ ದುಂಢಿರಾಜ [16]ಇಂಡೊನೇಷ್ಯ ಕಾಂಚಾಣಗಣೇಶ [17]ಭಾದ್ರಪದ ಶುಕ್ಲ ಚೌತಿಮೌರ್ಯ [18]ಸಿದ್ಧಿಬುದ್ಧಿಮೂಶಿಕ ಗಣಾಧಿಪತಿ [19)ತ್ರಿಮೂರ್ತಿಗಳಿಂ ರಚಿಸಲ್ಪಟ್ಟ’ಅಜಂನಿರ್ವಿಕಲ್ಪಂ…..’ ಸ್ತೋತ್ರ ಪೂಜಿತ: [20]ಬ್ರಹ್ಮಚರ್ಯವುಳ್ಳ ಸಂಸಾರಿ  [21]’ಗಜವದನ ಹೇರಂಭ’ ಆದಿಯಾಗಿ 126ಭಾಷೆಗಳಲ್ಲಿ ೮ಕೋಟಿ ಭಕ್ತಿಗೀತೆಯುಳ್ಳ ಏಕೈಕದೈವ!

ಮೇಲ್ಕಂಡ 21 ದೃಷ್ಟಾಂತದಿಂದ ತಿಳಿಯಬೇಕಾದ್ದಿಷ್ಟೆ.. ಗಣೇಶನಿಗೆ ನಿಷ್ಕಪಟ ಭಕ್ತಿಯಿಂ ಭಜಿಸಿ, ನಿಸ್ವಾರ್ಥದಿಂ ಪೂಜಿಸಿ 21ನಮಸ್ಕಾರದಿಂದ ಗರಿಕೆ ನೀಡಿದರೆ ಸಾಕು ಉದ್ಯೋಗ ಆರೋಗ್ಯ ಆಹಾರ ಆನಂದ ಜೀವನ ದೊರಕಿ, ಸುಖ ಶಾಂತಿ ನೆಮ್ಮದಿ ಸಿಗುವುದರ ಜತೆಗೆ ಅಕಾಲಿಕ ದುರ್ಮರಣ ದುರಂತ ತಪ್ಪಿಸಿಕೊಂಡು? ಸಕಾಲದ ಸಾವಿನ ಮುಕ್ತಿ ಕಾಣಬಹುದು! ನನ್ನದೇನಿದೆ ಬೆನಕ? ನಿನ್ನದಹುದಿಹುದೆಲ್ಲ ಕೊನೆತನಕ!

admin
the authoradmin

ನಿಮ್ಮದೊಂದು ಉತ್ತರ