ಮೈಸೂರು: “ದೀಪ್ತಿ ಸಾಂಸ್ಕೃತಿಕ ವೇದಿಕೆ” ರಾಮಕೃಷ್ಣ ನಗರ, ಮೈಸೂರು ಹಾಗೂ ಗೋವಿಂದರಾವ್ ಮೆಮೋರಿಯಲ್, ಪಿಯು ಕಾಲೇಜು, ಕಂದಾಯ ನಗರ, ಶ್ರೀರಾಂಪುರ, ಮೈಸೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಮೈಸೂರಿನ ಲೇಖಕ, ವಿಮರ್ಶಕ ಕಾಳಿಹುಂಡಿ ಶಿವಕುಮಾರ್ ರವರು ಕಳೆದ 30 ವರ್ಷಗಳಿಂದ ಸಂಗ್ರಹಿಸಿರುವ ವಿವಿಧ ಭಾಷೆಗಳ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಗಣೇಶನ ಕುರಿತಾದ ಚಿತ್ರ- ಲೇಖನಗಳ ಉಚಿತ ಪ್ರದರ್ಶನ ವನ್ನು ಸಾಹಿತಿಗಳು, ಅಂಕಣಕಾರರು, ವಿಮರ್ಶಕರು, ಆದ ಮಿರ್ಲೆ ಚಂದ್ರಶೇಖರ್ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ ಗಣಪತಿಯನ್ನು ಪ್ರತಿಷ್ಠಾಪಿಸಿ ಭಕ್ತಿ- ಭಾವದಿಂದ ಪೂಜಿಸಿ, ವಿಸರ್ಜನೆ ಮಾಡಲಾಗುತ್ತದೆ. ಆದರೆ ನಾವು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಪರಿಸರ ಉಳಿವಿನ ಕಡೆ ಪ್ರಾಮುಖ್ಯತೆಯನ್ನ ನೀಡದೆ ಕೆರೆಕಟ್ಟೆಗಳನ್ನ ರಾಸಾಯನಿಕ ಯುಕ್ತ ಬಣ್ಣದ ಗಣಪನ ಜೊತೆಗೆ ಗಣಪತಿಯ ಮೇಲೆ ಹಾಕುವ ಹೂವು, ಹಣ್ಣು, ಬಾಳೆದಿಂಡು ಇನ್ನಿತರ ಪೂಜಾ ಸಾಮಗ್ರಿಗಳ ಸಮೇತ ಕೆರೆಗಳಿಗೆ, ನದಿಗಳಿಗೆ ವಿಸರ್ಜನೆ ಮಾಡುವುದರಿಂದ ನಂತರದಲ್ಲಿ ಕೊಳೆತು ನಾರುವ ಸ್ಥಿತಿಯನ್ನು ನಾವು ಕಾಣಬಹುದಾಗಿದೆ ಎಂದರು.

ಜೊತೆಗೆ ಕೆರೆಕಟ್ಟೆಗಳಲ್ಲಿ ನೀರಿನ ಶೇಖರಣ ಸಾಮರ್ಥ್ಯ ಕೂಡ ಇದರಿಂದ ಕಡಿಮೆಯಾಗಿ ಭವಿಷ್ಯದಲ್ಲಿ ನೀರಿನ ಸಮಸ್ಯೆ ಜೊತೆಗೆ ಜಲಚರಗಳ ಜೀವಕ್ಕೂ ಸಂಚಕಾರ ಉಂಟಾಗುತ್ತಿದೆ. ಎಂದು ಆತಂಕ ವ್ಯಕ್ತಪಡಿಸಿದರಲ್ಲದೆ, ಈಗಾಗಲೇ ಬಹಳಷ್ಟು ಕೆರೆಗಳು ಹಬ್ಬಗಳ ನೆಪದಲ್ಲಿ ನಾಶವಾಗಿವೆ. ಹೀಗಿರುವಾಗ ಮತ್ತೆ ಪರಿಸರ ಮಾಲಿನ್ಯ ಮಾಡುವುದು ಬೇಡ. ಭವಿಷ್ಯದ ಪೀಳಿಗೆಗೆ ಸ್ವಚ್ಚಂದ ಭೂಮಿಯನ್ನು ಬಿಟ್ಟು ಹೋಗುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದು ಅಭಿಪ್ರಾಯಪಟ್ಟರು.

ಕವಯಿತ್ರಿ ಡಾ ಕೆ ಎನ್ ಲಾವಣ್ಯ ಪ್ರಭಾ ಮಾತನಾಡುತ್ತಾ ಗಣಪತಿ ಪದದ ಅರ್ಥದ ಬಗ್ಗೆ ಅರ್ಥಪೂರ್ಣವಾಗಿ ತಿಳಿಸಿಕೊಟ್ಟರು. ಜೊತೆಗೆ ಗಣಪತಿಯ ಅಂಗಾಂಗಗಳಾದ ಮೊರದಗಲದ ಕಿವಿ, ತೀಕ್ಷ್ಣ ಕಣ್ಣು, ಸೊಂಡಿಲು, ಏಕದಂತ (ಮುರಿದದಂತ), ಹೊಟ್ಟೆ, ಅಭಯ ಹಸ್ತ, ಹೀಗೆ ಪ್ರತಿಯೊಂದಕ್ಕೂ ತನ್ನದೇ ಆದ ವಿಶಾಲತೆಯನ್ನು ಮತ್ತೆ ಪ್ರಾಮುಖ್ಯತೆಯನ್ನ ಹೊಂದಿದ್ದು, ನಾವು ಗಣಪತಿಯನ್ನು ಪೂಜೆ ಮಾಡುವುದರ ಜೊತೆಗೆ ಭಕ್ತಿ-ಭಾವದಿಂದ ನೆನೆಯಬೇಕು. ಅದರಲ್ಲೂ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಇಂತಹ ಪ್ರದರ್ಶನವನ್ನ ವೀಕ್ಷಣೆ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಗೋವಿಂದರಾವ್ ಮೆಮೋರಿಯಲ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ರವಿ ಕೆ ರವರು ಇವತ್ತಿನ ದಿನಗಳಲ್ಲಿ ಸಂಗ್ರಹ ಎನ್ನುವುದು ಬಹಳ ಕಷ್ಟದ ಕೆಲಸ ಅಂತಹದರಲ್ಲಿ ಕಾಳಿಹುಂಡಿ ಶಿವಕುಮಾರ್ ರವರು ತಮ್ಮದೇ ಆದ ವೈವಿಧ್ಯಮಯ ಪತ್ರಿಕೆಗಳ ಸಂಗ್ರಹದಿಂದ ಅತಿ ಮುಖ್ಯವಾಗಿ ಹೊರಬಂದಿರುವುದು.

ಈ ಗಣಪತಿ ಚಿತ್ರ-ಲೇಖನಗಳು ಕೂಡ ಒಂದಾಗಿದ್ದು, ಅವರು ಜತನದಿಂದ ಕಾಪಾಡಿಕೊಂಡು ಪತ್ರಿಕೆಗಳಲ್ಲಿ ಬಂದಿರುವ ಚಿತ್ರ- ಲೇಖನಗಳನ್ನು ಸಂಗ್ರಹಿಸಿ, ಪ್ರದರ್ಶನದ ರೂಪದಲ್ಲಿ ಮತ್ತಷ್ಟು ಜನರಿಗೆ ತಲುಪಿಸುತ್ತಿದ್ದಾರೆ. ಅವರ ಸಂಗ್ರಹದಲ್ಲೇ ನಾನು ಓದಿದ ಗಣಪತಿಯ ಅಹಂಕಾರದ ಕಥೆ ಜೊತೆಗೆ, “ಶುಕ್ಲಾಂ ಭರದರಂ ವಿಷ್ಣು…”- ಎಂಬ ಒಂದು ಶ್ಲೋಕದಲ್ಲಿ ವಿಷ್ಣುವಿನ ಹೆಸರು ಹೇಗೆ ಬಂತು ಎಂಬಿತ್ಯಾದಿಗಳ ಬಗ್ಗೆ ತಿಳಿಸಿದರು.
ಕಾಲೇಜಿನ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ದಲ್ಲಿ ಆರ್ ಎಂ ಪಿ ಯ ಹಿರಿಯ ಶುಶ್ರೂಷಕ ಕಣ್ಣೂರು ವಿ ಗೋವಿಂದಾಚಾರಿ, ಇಡೀ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಾ ಮೊದಲು ಗಣಪತಿಯ ವೈವಿಧ್ಯಮಯ ಹೆಸರು ಜೊತೆಗೆ ಪುರಾತನ ಕಾಲದಿಂದಲೂ ಗಣಪತಿಯ ಸುತ್ತ ಇರುವ ಕಥೆಗಳ ವಿಶಿಷ್ಟತೆಯ ಬಗ್ಗೆ ತಿಳಿಸಿದರು. ಪ್ರದರ್ಶನವು 16.09.2026 ಬುಧವಾರ ದವರೆಗೂ ಬೆಳಿಗ್ಗೆ 10ರಿಂದ ಸಂಜೆ 7.30 ರವರೆಗೆ ಇರುತ್ತದೆ.

ವೇದಿಕೆಯಲ್ಲಿ ಉಪಸ್ಥಿತರಿದ್ದ ಸಂಗ್ರಹಕ ಕಾಳಿಹುಂಡಿ ಶಿವಕುಮಾರ್ ಮಾತನಾಡುತ್ತಾ ನನ್ನ ಸಂಗ್ರಹಾಲಯದಲ್ಲಿ ರಾಜ್ಯದಲ್ಲಿರುವ ಎಲ್ಲಾ ಗಣಪತಿಯ ದೇವಸ್ಥಾನಗಳ ಬಗ್ಗೆ, ವರ್ಷ ವರ್ಷವೂ ಕೂಡ ಪ್ರಚಲಿತ ವಿದ್ಯಮಾನಗಳಿಗೆ ತಕ್ಕಂತೆ ಕಲಾವಿದರ ಕಲ್ಪನೆಯಲ್ಲಿ ಸೃಷ್ಟಿಯಾಗಿರುವ ಗಣಪನ ಚಿತ್ರಗಳು, ಗಣಪನ ಕುರಿತಾದ ಗೀತೆಗಳು, ಜನಪದ ಕಥೆಗಳು, ಅಪರೂಪದ ಪುರಾಣ ಕಥೆಗಳು, ಮಾಹಿತಿಗಳು, ದೇಶ- ವಿದೇಶಗಳಲ್ಲಿರುವ ಕೆಲವು ಗಣಪತಿ ಚಿತ್ರಗಳು, ಕಲಾವಿದರು ಸೃಷ್ಟಿ ಮಾಡುತ್ತಿರುವ ಚಿತ್ರಗಳು, ಸೃಷ್ಟಿಯ ವೈಚಿತ್ರದಲ್ಲಿ ಗಣಪತಿ ಆಕಾರಗಳು,
ಗಣಪತಿಯ ಕುರಿತು ವ್ಯಂಗ್ಯ ಚಿತ್ರಕಾರರ ಚಿತ್ರಗಳು, ವಿವಿಧ ಪದಾರ್ಥಗಳಲ್ಲಿ ತಯಾರಾದ ಗಣಪತಿ ಚಿತ್ರಗಳು, ಜೊತೆಗೆ ನಗರ ಗ್ರಾಮಾಂತರ ಪ್ರದೇಶಗಳಲ್ಲಿ, ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿರುವ ಬೃಹದಾಕಾರದ ಗಣಪತಿಯ ಚಿತ್ರಗಳು, ಗ್ರೀಟಿಂಗ್ಸ್ ಗಣಪತಿ, ವಿವಾಹ ಆಮಂತ್ರಣದಲ್ಲಿರುವ ಗಣಪತಿ ಚಿತ್ರಗಳು, ಮುಂತಾದವುಗಳನ್ನು ಕಾಣಬಹುದಾಗಿದೆ. ಉಚಿತ ಪ್ರದರ್ಶನ ಇರುವುದರಿಂದ ನಗರದ ವಿವಿಧ ಬಡಾವಣೆಗಳ ಭಕ್ತಾದಿಗಳು, ನಾಗರಿಕರು ಪ್ರದರ್ಶನದ ಸದುಪಯೋಗಪಡಿಸಿಕೊಳ್ಳಲು ಮನವಿ ಮಾಡಿದರು.

ಪ್ರದರ್ಶನವು ಮತ್ತೊಮ್ಮೆ ತಮ್ಮ ಗಮನಕ್ಕೆ 16.09.2026 ರ ಬುಧವಾರ ದವರೆಗೂ ಬೆಳಿಗ್ಗೆ 10ರಿಂದ ಸಂಜೆ 7.30 ರವರೆಗೆ ಇರುತ್ತದೆ. ಇವರ ಸಂಪರ್ಕ ಸಂಖ್ಯೆ 9844883581.








