ಸರಗೂರು: ಅಂಗವೈಕಲ್ಯವನ್ನು ಸವಾಲಾಗಿ ಸ್ವೀಕರಿಸಿ, ಕಠಿಣ ಪರಿಶ್ರಮ, ನಿರಂತರ ಅಭ್ಯಾಸ ಹಾಗೂ ಆತ್ಮವಿಶ್ವಾಸದ ಮೂಲಕ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದು ದೇಶ, ಜಿಲ್ಲೆ ಹಾಗೂ ನಾಮಧಾರಿಗೌಡ ಸಮಾಜಕ್ಕೆ ಕೀರ್ತಿ ತಂದಿರುವ ಕೆ.ಎಸ್. ಶಿಲ್ಪಾರವರಿಗೆ ಸರಗೂರಿನಲ್ಲಿ ಅದ್ದೂರಿ ಅಭಿನಂದನೆ ಸಲ್ಲಿಸಲಾಯಿತು.

ಪಟ್ಟಣದ ನಾಮಧಾರಿಗೌಡ ಸಮುದಾಯ ಭವನದಲ್ಲಿ ಅಖಿಲ ನಾಮಧಾರಿಗೌಡ ಸಮಾಜದ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಶಿಲ್ಪಾ ಅವರನ್ನು ಸನ್ಮಾನಿಸಿ, ₹1 ಲಕ್ಷ ಸಹಾಯಧನ ನೀಡಿ ಗೌರವಿಸಲಾಯಿತು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕಾಮನ್ವೆಲ್ತ್ ಕ್ರೀಡಾಕೂಟದ ಕಂಚಿನ ಪದಕ ವಿಜೇತೆ ಕೆ.ಎಸ್. ಶಿಲ್ಪಾ, ಜೀವನದಲ್ಲಿ ಉತ್ತಮ ಸಾಧನೆ ಮಾಡುವ ಗುರಿ ಹೊಂದಿರುವವರಿಗೆ ಗುರಿ, ಗುರು ಹಾಗೂ ಪ್ರೋತ್ಸಾಹ ದೊರೆತರೆ ಯಶಸ್ಸಿನ ಶಿಖರ ಏರಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಅಂಗವೈಕಲ್ಯ ತನ್ನ ಸಾಧನೆಗೆ ಅಡ್ಡಿಯಾಗದಂತೆ ಆತ್ಮವಿಶ್ವಾಸದಿಂದ ಮುನ್ನಡೆದಿರುವ ಶಿಲ್ಪಾ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ನಿರಂತರ ಅಭ್ಯಾಸ, ಪರಿಶ್ರಮ, ಶಿಸ್ತು ಹಾಗೂ ಆತ್ಮವಿಶ್ವಾಸ ಅತ್ಯಂತ ಮುಖ್ಯ ಎಂದು ಹೇಳಿದರು.
ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಅವರ ಆಸಕ್ತಿಗೆ ಅನುಗುಣವಾಗಿ ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರೋತ್ಸಾಹ ನೀಡಬೇಕು. ಮಕ್ಕಳ ಪ್ರತಿಭೆಯನ್ನು ಆರಂಭದಲ್ಲಿಯೇ ಗುರುತಿಸಿ ಬೆಂಬಲಿಸಿದರೆ ಅವರು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ. ನನ್ನ ಸಾಧನೆಗೆ ಕುಟುಂಬದವರು, ತರಬೇತುದಾರರು, ಸ್ನೇಹಿತರು ಹಾಗೂ ಸಮಾಜದ ಮುಖಂಡರು ನೀಡಿದ ಪ್ರೋತ್ಸಾಹವೇ ಪ್ರಮುಖ ಕಾರಣ” ಎಂದು ಅವರು ಹೇಳಿದರು.

ಅಂಗವೈಕಲ್ಯ ಸಾಧನೆಗೆ ಅಡ್ಡಿಯಲ್ಲ
ಅಂಗವೈಕಲ್ಯ ಹೊಂದಿದ್ದರೂ ಅದನ್ನು ತಮ್ಮ ಜೀವನದ ದೌರ್ಬಲ್ಯವೆಂದು ಪರಿಗಣಿಸದೆ, ಆತ್ಮವಿಶ್ವಾಸದಿಂದ ಮುನ್ನಡೆದ ಶಿಲ್ಪಾ ಅವರ ಸಾಧನೆ ಕಾರ್ಯಕ್ರಮದಲ್ಲಿ ವಿಶೇಷ ಗಮನ ಸೆಳೆಯಿತು. ದೈಹಿಕ ಸವಾಲುಗಳ ನಡುವೆಯೂ ಕ್ರೀಡಾ ಕ್ಷೇತ್ರದಲ್ಲಿ ನಿರಂತರವಾಗಿ ಅಭ್ಯಾಸ ನಡೆಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗಳಿಸಿರುವುದು ಯುವಜನತೆಗೆ, ವಿಶೇಷವಾಗಿ ಅಂಗವಿಕಲ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದೆ ಎಂದು ಮುಖಂಡರು ಅಭಿಪ್ರಾಯಪಟ್ಟರು.

ಬೀಜ ನಿಗಮದ ಮಾಜಿ ಅಧ್ಯಕ್ಷ ಡಿ. ಸುಂದರದಾಸ್ ಮಾತನಾಡಿ, ಗ್ರಾಮೀಣ ಪ್ರದೇಶದಿಂದ ಬಂದ ಯುವ ಪ್ರತಿಭೆಗಳು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಕ್ರೀಡೆಯಲ್ಲಿ ಕಠಿಣ ಪರಿಶ್ರಮ, ಶಿಸ್ತು ಹಾಗೂ ನಿರಂತರ ಅಭ್ಯಾಸದಿಂದ ಯಶಸ್ಸು ಸಾಧಿಸಲು ಸಾಧ್ಯ. ಶಿಲ್ಪಾ ಅವರ ಸಾಧನೆ ಮುಂದಿನ ಪೀಳಿಗೆಯ ಯುವಕ-ಯುವತಿಯರಿಗೆ ಪ್ರೇರಣೆಯಾಗಿದ್ದು, ನಾಮಧಾರಿಗೌಡ ಸಮಾಜದ ಹೆಮ್ಮೆಯನ್ನು ಹೆಚ್ಚಿಸಿದೆ ಎಂದರು.

ಶಿಲ್ಪಾ ಅವರು ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ ಹಾಗೂ ಕಂಚು ಸೇರಿದಂತೆ 12ಕ್ಕೂ ಹೆಚ್ಚು ಪದಕಗಳನ್ನು ಗಳಿಸಿರುವುದು ಅವರ ನಿರಂತರ ಸಾಧನೆಗೆ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದರು.
ಸರಗೂರಿನಲ್ಲಿ ಅದ್ದೂರಿ ಮೆರವಣಿಗೆ…
ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಮಹಾವೀರ ವೃತ್ತದ ಬಳಿಯ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಇವರಿಗೆ ಬಾರಿ ಗಾತ್ರದ ಸೇಬಿನ ಹಾರ ಹಾಕಿ ಸನ್ಮಾನಿಸಿ, ಬಳಿಕ ಬೆಳ್ಳಿ ಸಾರೋಟ್ನಲ್ಲಿ ಶಿಲ್ಪಾ ಅವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ವೀರಗಾಸೆ ನೃತ್ಯ, ಮಹಿಳಾ ವೀರಗಾಸೆ ತಂಡ, ನಗಾರಿ, ಕರಾಟೆ ಪ್ರದರ್ಶನ ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.

ಮಹಾವೀರ ವೃತ್ತದಿಂದ ಬಸ್ ನಿಲ್ದಾಣದ ರಸ್ತೆ ಮಾರ್ಗವಾಗಿ ಸಾಗಿದ ಮೆರವಣಿಗೆ ನಾಮಧಾರಿಗೌಡ ಸಮುದಾಯ ಭವನ ತಲುಪಿತು. ಸಮಾಜದ ಮುಖಂಡರು, ಪದಾಧಿಕಾರಿಗಳು, ಯುವಕರು, ಮಹಿಳೆಯರು, ಗ್ರಾಮಸ್ಥರು ಹಾಗೂ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಲ್ಪಾ ಅವರಿಗೆ ಶುಭಾಶಯ ಕೋರಿದರು.
ಹರಿದು ಬಂತು ಅಭಿನಂದನೆಯ ಮಹಾಪೂರ
ಸರಗೂರು ಹಾಗೂ ಎಚ್.ಡಿ.ಕೋಟೆ ತಾಲೂಕಿನ ವಿವಿಧ ಗ್ರಾಮಗಳ ನಾಮಧಾರಿಗೌಡ ಸಮಾಜದ ಮುಖಂಡರು, ಸಂಘ-ಸಂಸ್ಥೆಗಳು ಹಾಗೂ ಗ್ರಾಮಸ್ಥರು ಶಿಲ್ಪಾ ಅವರನ್ನು ಅಭಿನಂದಿಸಿ ಗೌರವಿಸಿದರು. ಸಮಾಜದ ಬಂಧುಗಳು ಸಹಾಯಧನ ನೀಡಿ ಅವರ ಮುಂದಿನ ಕ್ರೀಡಾ ಪಯಣಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ನಾಮಧಾರಿಗೌಡ ಸಮುದಾಯ ಸಂಘದ ಅಧ್ಯಕ್ಷ ಎಚ್.ಡಿ. ರತ್ನಯ್ಯ, ಅಖಿಲ ನಾಮಧಾರಿಗೌಡ ಕೇಂದ್ರ ಸಂಘದ ಅಧ್ಯಕ್ಷ ಕೆ.ಟಿ. ಗೋವಿಂದರಾಜು, ಉಪಾಧ್ಯಕ್ಷ ಕೆ.ಎನ್. ಮಲ್ಲಿಕಾರ್ಜುನ, ಜಿಪಂ ಮಾಜಿ ಅಧ್ಯಕ್ಷೆ ಪರಿಮಳಾ ಶ್ಯಾಂಸುಂದರ್, ಸದಸ್ಯರಾದ ಎಂ.ಎನ್. ಜಗದೀಶ್, ಪಿ. ರವಿ, ಜಿ.ಬಿ. ಸುಬ್ಬಣ್ಣ, ಸಂಘದ ಒಬಿಸಿ ಅಧ್ಯಕ್ಷ ಎಂ.ಎನ್. ನಟರಾಜು, ಉಪಾಧ್ಯಕ್ಷ ಸಿ.ಎಂ. ಪ್ರಕಾಶ್, ಮಾಜಿ ಅಧ್ಯಕ್ಷರಾದ ಎಚ್. ದೇವದಾಸ್, ಬಿ.ಸಿ. ಬಸಪ್ಪ,

ತಾಪಂ ಮಾಜಿ ಅಧ್ಯಕ್ಷರಾದ ಯಶೋಧಮ್ಮ, ಲಕ್ಷ್ಮಿ, ಪಿ. ಮಹದೇವು, ಗುಣಪಾಲ್, ಚೆಕ್ಕೂರು ಬಸವರಾಜು, ಕಾಟನ್ ಮಹದೇವಪ್ಪ, ಜಿ. ಕೃಷ್ಣ, ಚಂದ್ರಮ್ಮ, ಪಿ. ನಾಗೇಶ್, ಬಿ.ಎಂ. ನಾಗೇಶ್, ಉದಯ್ ಕುಮಾರ್, ನಂದಕುಮಾರ್, ಅಭಿಕುಮಾರ್, ಭರತ್, ರಮೇಶ್, ಸಿ.ಎಂ. ಚಿನ್ನಪ್ಪ, ಯುವ ಅಧ್ಯಕ್ಷ ಚರಣ್, ಪ್ರಗತಿ ಪ್ರಕಾಶ್ ಸೇರಿದಂತೆ ಸಂಘದ ವಲಯ ಅಧ್ಯಕ್ಷರುಗಳು, ಸಮಾಜದ ಬಂಧುಗಳು, ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.









