ಚಾಮರಾಜನಗರ: ಮನೆಯಿಂದಲೇ ಸಮಾನತೆಯ ಕಹಳೆ ಮೊಳಗಿಸಿದವರು ಬಸವಣ್ಣ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು.
ಚಾಮರಾಜನಗರ ಜಿಲ್ಲೆ ಕಾಗಲವಾಡಿಯ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಬಸವಣ್ಣನವರ ಬದುಕು, ಚಿಂತನೆ ಮತ್ತು ವಚನಗಳ ಸಾರ ಎಂಬ ವಿಷಯ ಕುರಿತು ಪ್ರವಚನ ನೀಡಿದ ಅವರು ಬಸವಣ್ಣನವರ ಬಾಲ್ಯದಿಂದ ಆರಂಭಿಸಿ ಅವರ ಜೀವನದ ಪ್ರಮುಖ ಘಟ್ಟಗಳು, ಸಾಮಾಜಿಕ ಚಿಂತನೆ, ಸಮಾನತೆಯ ಆಶಯ, ಕಾಯಕ-ದಾಸೋಹದ ಪರಿಕಲ್ಪನೆ ಹಾಗೂ ವಚನ ಸಾಹಿತ್ಯದ ಮೂಲಕ ಮಾನವಕುಲಕ್ಕೆ ಅವರು ನೀಡಿದ ಸಂದೇಶಗಳನ್ನು ವಿಸ್ತಾರವಾಗಿ ವಿವರಿಸಿದರು.

ಬಾಲ್ಯದಲ್ಲಿಯೇ ಬಸವಣ್ಣನವರು ಪ್ರತಿಯೊಂದು ವಿಚಾರವನ್ನೂ ಪ್ರಶ್ನಿಸಿ ತಂದೆಯಿಂದ ಉತ್ತರಗಳನ್ನು ಪಡೆಯುತ್ತಾ ವಿಚಾರಶೀಲ ಮನೋಭಾವವನ್ನು ಬೆಳೆಸಿಕೊಂಡರು. ಪ್ರಶ್ನಿಸುವುದು, ಉತ್ತರ ಹುಡುಕುವುದು ಮತ್ತು ಸತ್ಯವನ್ನು ಅರಿಯುವುದು ಅವರ ವ್ಯಕ್ತಿತ್ವದ ಪ್ರಮುಖ ಗುಣಗಳಾಗಿದ್ದವು. ಅವರ ಬದುಕಿನಲ್ಲಿ ಸಮಾನತೆಯ ಚಿಂತನೆ ಹೇಗೆ ಬಾಲ್ಯದಲ್ಲಿಯೇ ರೂಪುಗೊಂಡಿತ್ತು ಎಂಬುದನ್ನು ವಿವರಿಸಿ ಅಕ್ಕ ನಾಗಲಾಂಬಿಕೆಗೆ ಜನಿವಾರ ನೀಡುವ ವಿಚಾರದಲ್ಲಿ ಉಂಟಾದ ಪ್ರಸಂಗವನ್ನು ಪ್ರಸ್ತಾಪಿಸಿ ಅಕ್ಕನಿಗೆ ಸಲ್ಲದ ಜನಿವಾರ ನನಗೆ ಯಾಕೆ? ಎಂಬ ಪ್ರಶ್ನೆಯ ಮೂಲಕ ಬಸವಣ್ಣನವರು ಅಸಮಾನತೆಯನ್ನು ಪ್ರಶ್ನಿಸಿ, ಸಮಾನತೆಯ ತತ್ವಕ್ಕಾಗಿ ಮನೆಯನ್ನು ತೊರೆದರು.
ಸಮಾನತೆಗಾಗಿ ಹೋರಾಟವನ್ನು ಸಮಾಜದಲ್ಲಿ ಮಾಡುವವರನ್ನು ನಾವು ನೋಡಿದ್ದೇವೆ. ಆದರೆ ಬಸವಣ್ಣನವರು ಮೊದಲು ತಮ್ಮ ಮನೆಯಲ್ಲಿಯೇ ಸಮಾನತೆಯ ಪ್ರಶ್ನೆಯನ್ನು ಎತ್ತಿ, ಅದರ ವಿರುದ್ಧ ಧ್ವನಿ ಎತ್ತಿದ ಮಹಾನ್ ಚಿಂತಕರು. ಆದ್ದರಿಂದಲೇ ಅವರು ಕೇವಲ ಒಬ್ಬ ಧಾರ್ಮಿಕ ವ್ಯಕ್ತಿಯಾಗಿರದೆ, ಜಗಜ್ಯೋತಿ, ವಿಶ್ವಗುರು ಗೌರವಕ್ಕೆ ಪಾತ್ರರಾದರು.

ಮಹಿಳೆಯರಿಗೆ ಶಿಕ್ಷಣ ಹಾಗೂ ಧಾರ್ಮಿಕ ಆಚರಣೆಗಳ ಹಕ್ಕು ನಿರಾಕರಿಸಲ್ಪಟ್ಟಿದ್ದ ಕಾಲಘಟ್ಟದಲ್ಲಿ ಬಸವಣ್ಣನವರು ಇಷ್ಟಲಿಂಗದ ಪರಿಕಲ್ಪನೆಯನ್ನು ನೀಡುವ ಮೂಲಕ ಧಾರ್ಮಿಕ ಕ್ಷೇತ್ರದಲ್ಲಿಯೇ ಮಹತ್ವದ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದರು. ತಾವೇ ಪ್ರಥಮವಾಗಿ ಇಷ್ಟಲಿಂಗ ಧಾರಣೆ ಮಾಡಿಕೊಂಡು, ನಂತರ ತಮ್ಮ ಅಕ್ಕ ನಾಗಲಾಂಬಿಕೆಯವರಿಗೆ ಇಷ್ಟಲಿಂಗ ದೀಕ್ಷೆ ನೀಡುವ ಮೂಲಕ, ಹೆಣ್ಣಿಗೂ ಪುರುಷನಷ್ಟೇ ಧಾರ್ಮಿಕ ಆಚರಣೆ ಮತ್ತು ಆತ್ಮಸಾಧನೆಯ ಹಕ್ಕಿದೆ ಎಂಬುದನ್ನು ಸಮಾಜಕ್ಕೆ ಸಾರಿದರು.
ದೇವರನ್ನು ಕಾಣಲು ಮಧ್ಯವರ್ತಿಯ ಅವಶ್ಯಕತೆಯಿಲ್ಲ; ಪ್ರತಿಯೊಬ್ಬ ವ್ಯಕ್ತಿಯೂ ತನ್ನೊಳಗಿನ ಶಿವತತ್ತ್ವವನ್ನು ಅರಿಯಬಹುದು ಎಂಬ ಸಮಾನತೆಯ ಸಂದೇಶವನ್ನು ಇಷ್ಟಲಿಂಗದ ಮೂಲಕ ಜನಮಾನಸಕ್ಕೆ ತಲುಪಿಸಿದರು. ಮಹಿಳೆಯನ್ನು ಕೇವಲ ಸಾಮಾಜಿಕವಾಗಿ ಮಾತ್ರವಲ್ಲ, ಆಧ್ಯಾತ್ಮಿಕವಾಗಿಯೂ ಸಮಾನ ಸ್ಥಾನಕ್ಕೆ ಏರಿಸಿದ ಬಸವಣ್ಣನವರ ಚಿಂತನೆ, ಅಂದಿನ ಕಾಲಕ್ಕಿಂತ ಹಲವು ಶತಮಾನಗಳಷ್ಟು ಮುಂದಿದ್ದ ಕ್ರಾಂತಿಕಾರಿ ವಿಚಾರಧಾರೆಯಾಗಿತ್ತು.

ಕೂಡಲಸಂಗಮದಲ್ಲಿ ವಿದ್ಯಾಭ್ಯಾಸ, ಮಂಗಳವೇಡದಲ್ಲಿ ಕರಣಿಕರಾಗಿ ಸೇವೆ ಸಲ್ಲಿಸಿದ ಸಂದರ್ಭ ಹಾಗೂ ನಂತರ ಬಸವಕಲ್ಯಾಣಕ್ಕೆ ಆಗಮಿಸಿ ಮಹಾಮಂತ್ರಿಯಾಗಿ ಕಾರ್ಯನಿರ್ವಹಿಸಿದ ಐತಿಹಾಸಿಕ ಘಟ್ಟಗಳನ್ನು ವಿವರಿಸಿದರು. ಬಸವಕಲ್ಯಾಣದಲ್ಲಿ ಬಸವಣ್ಣನವರು ರೂಪಿಸಿದ ಸಾಮಾಜಿಕ-ಆಧ್ಯಾತ್ಮಿಕ ಚಳವಳಿ ಹಾಗೂ ಅನುಭವ ಮಂಟಪದ ಮಹತ್ವವನ್ನು ವಿಶೇಷವಾಗಿ ವಿವರಿಸಿದರು.
ಅನುಭವ ಮಂಟಪದಲ್ಲಿ ಜಾತಿ, ವರ್ಣ, ಲಿಂಗ, ವರ್ಗಗಳ ಭೇದವಿಲ್ಲದೆ ಶರಣರು ತಮ್ಮ ಅನುಭವಗಳನ್ನು ಹಂಚಿಕೊಂಡು ವಿಚಾರ ವಿನಿಮಯ ನಡೆಸಿದ ಪರಂಪರೆಯನ್ನು ವಿವರಿಸಿದ ಅವರು, ಅಲ್ಲಮಪ್ರಭುಗಳನ್ನು ಅನುಭವ ಮಂಟಪದ ಅಧ್ಯಕ್ಷರನ್ನಾಗಿ ಮಾಡಿ, ಶರಣರ ಅನುಭವ-ಚಿಂತನೆಗಳಿಗೆ ಮುಕ್ತ ವೇದಿಕೆಯನ್ನು ಕಲ್ಪಿಸಿದರು. ವಿವಿಧ ಶರಣ-ಶರಣೆಯರ ಭಾಗವಹಿಸುವಿಕೆಯ ಮೂಲಕ ಅನುಭವ ಮಂಟಪವು ವಿಶ್ವದ ಮೊದಲ ಪ್ರಜಾಸತ್ತಾತ್ಮಕ ಆಧ್ಯಾತ್ಮಿಕ-ಸಾಮಾಜಿಕ ಚಿಂತನಾ ವೇದಿಕೆ ಎಂಬ ಮಹತ್ವವನ್ನು ಪಡೆಯಿತು.

ಬಸವಣ್ಣನವರ ವಚನಗಳು ಕೇವಲ ಸಾಹಿತ್ಯ ಕೃತಿಗಳಲ್ಲ; ಅವು ಬದುಕನ್ನು ರೂಪಿಸುವ ಮಾರ್ಗದರ್ಶಕ ನುಡಿಗಳು ಎಂದು ಪ್ರತಿಪಾದಿಸಿ ಇಂದಿನ ಮಾನವ ಜೀವನದ ಅನೇಕ ಸಮಸ್ಯೆಗಳಿಗೆ ಶರಣರ ವಚನಗಳಲ್ಲಿ ಮೌಲ್ಯಯುತ ಪರಿಹಾರಗಳಿವೆ. ದೇವಲೋಕ ಮರ್ತ್ಯಲೋಕ ಎಂಬುದು ಬೇರಿಲ್ಲ ಕಾಣಿರೋ; ಸತ್ಯವ ನುಡಿವುದೆ ದೇವಲೋಕ, ಮಿಥ್ಯವ ನುಡಿವುದೆ ಮರ್ತ್ಯಲೋಕ; ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂಬ ವಚನದ ಆಶಯವನ್ನು ವಿವರಿಸಿ ಮನುಷ್ಯನ ಸ್ವರ್ಗ-ನರಕಗಳು ಹೊರಗಿನ ಲೋಕದಲ್ಲಿಲ್ಲ; ಆತನ ಆಚಾರ-ವಿಚಾರ, ನಡೆ-ನುಡಿ ಮತ್ತು ಬದುಕಿನಲ್ಲಿಯೇ ಸ್ವರ್ಗ-ನರಕಗಳು ಅಡಗಿವೆ ಎಂಬ ಶರಣರ ಮಾನವೀಯ ಸಂದೇಶವನ್ನು ವಿವರಿಸಿದರು.
ಅದೇ ರೀತಿ, ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು ಎಂಬ ಬಸವಣ್ಣನವರ ವಚನದ ಆಶಯವನ್ನು ವಿವರಿಸಿ, ಮನುಷ್ಯನ ಮಾತು ಶುದ್ಧವಾಗಿರಬೇಕು, ಸತ್ಯವಾಗಿರಬೇಕು, ಇನ್ನೊಬ್ಬರ ಮನಸ್ಸಿಗೆ ನೋವುಂಟು ಮಾಡದಂತಿರಬೇಕು. ನುಡಿ ಮತ್ತು ನಡೆ ಒಂದಾಗಿರುವುದೇ ನಿಜವಾದ ವ್ಯಕ್ತಿತ್ವ ಎಂದರು. ಬಸವಣ್ಣನವರ ಚಿಂತನೆಗಳಲ್ಲಿ ಕಾಯಕ, ದಾಸೋಹ, ಸಮಾನತೆ, ಸತ್ಯ, ಶುದ್ಧ ನುಡಿ, ಮಾನವೀಯತೆ, ಸ್ತ್ರೀ-ಪುರುಷ ಸಮಾನತೆ ಹಾಗೂ ಜಾತಿಭೇದ ನಿರ್ಮೂಲನೆ ಪ್ರಮುಖವಾಗಿವೆ. ಇವು ಕೇವಲ ಹನ್ನೆರಡನೇ ಶತಮಾನಕ್ಕೆ ಸೀಮಿತವಾದ ವಿಚಾರಗಳಲ್ಲ; ಇಂದಿನ ಸಮಾಜಕ್ಕೂ ಅತ್ಯಂತ ಅಗತ್ಯವಾದ ಜೀವನಮೌಲ್ಯಗಳಾಗಿವೆ.

ಬಸವಣ್ಣನವರ ವಚನಗಳನ್ನು ಕೇವಲ ಓದುವುದರಿಂದ ಪ್ರಯೋಜನವಿಲ್ಲ. ಅವುಗಳ ಆಶಯವನ್ನು ಅರ್ಥಮಾಡಿಕೊಂಡು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ವಚನ ಸಾಹಿತ್ಯದ ನಿಜವಾದ ಉದ್ದೇಶ ಈಡೇರುತ್ತದೆ. ಪ್ರತಿಯೊಬ್ಬರ ಬದುಕಿನಲ್ಲಿ ವಚನದ ಬೆಳಕು ಮೂಡಿದಾಗ ಕುಟುಂಬದಲ್ಲಿ ಶಾಂತಿ, ಸಮಾಜದಲ್ಲಿ ಸಮಾನತೆ ಮತ್ತು ಮಾನವಕುಲದಲ್ಲಿ ಸಹೋದರತ್ವ ಬೆಳೆಸಬಹುದು” ಎಂದು ಅವರು ಕರೆ ನೀಡಿದರು. ಪ್ರವಚನದುದ್ದಕ್ಕೂ ಬಸವಣ್ಣನವರ ಜೀವನದ ಪ್ರಮುಖ ಘಟನೆಗಳು, ಶರಣರ ಅನುಭವಗಳು ಹಾಗೂ ವಚನಗಳ ಆಶಯಗಳನ್ನು ಸರಳವಾಗಿ ಮತ್ತು ಅರ್ಥಪೂರ್ಣವಾಗಿ ವಿವರಿಸಿದ ಅವರು, ವಚನ ಸಾಹಿತ್ಯದ ಅರಿವು ಪ್ರತಿಯೊಬ್ಬರಲ್ಲೂ ಮೂಡಬೇಕು.
ವಿಶೇಷವಾಗಿ ಮಕ್ಕಳಿಗೆ ಮತ್ತು ಯುವಜನರಿಗೆ ಶರಣರ ವಿಚಾರಧಾರೆ ಪರಿಚಯವಾಗಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು. ಬಸವಣ್ಣನವರ ಬದುಕು ಕೇವಲ ಇತಿಹಾಸವಲ್ಲ; ಅದು ಸಮಾನತೆಯ ಪಾಠ, ಮಾನವೀಯತೆಯ ಮಾರ್ಗ, ಕಾಯಕದ ಮಹತ್ವ ಮತ್ತು ಸತ್ಯದ ಬದುಕಿಗೆ ದಾರಿದೀಪ. ಅವರ ವಚನಗಳು ಇಂದಿಗೂ ಮನುಷ್ಯನ ಬದುಕಿಗೆ ಬೆಳಕಾಗಿವೆ. ಆದ್ದರಿಂದ ಬಸವಣ್ಣನವರ ವಿಚಾರಧಾರೆಗಳನ್ನು ಮನೆಮನೆಗೆ ತಲುಪಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ತಿಳಿಸಿದರು.

ಕಾಗಲವಾಡಿಯ ನಾಡಗೌಡರಾದ ಹೊನ್ನಪ್ಪ ಅವರು ಮಾತನಾಡಿ ಪಂಚಾಚಾರ, ಅಷ್ಟಾವರಣ ಮತ್ತು ಷಟ್ಸ್ಥಲಗಳ ಮಹತ್ವವನ್ನು ವಿವರಿಸಿ ಇವು ಕೇವಲ ಧಾರ್ಮಿಕ ಪರಿಕಲ್ಪನೆಗಳಲ್ಲ; ಮನುಷ್ಯನ ಬದುಕನ್ನು ಶಿಸ್ತು, ಸದಾಚಾರ, ಭಕ್ತಿ, ಕಾಯಕ ಮತ್ತು ಮಾನವೀಯತೆಯ ಹಾದಿಯಲ್ಲಿ ಮುನ್ನಡೆಸುವ ಜೀವನಮೌಲ್ಯಗಳಾಗಿವೆ. ಶರಣರ ಮೌಲ್ಯಗಳನ್ನು ಕೇವಲ ಕೇಳಿ ತಿಳಿದುಕೊಳ್ಳುವುದಷ್ಟೇ ಸಾಕಾಗದು; ಅವುಗಳನ್ನು ನಮ್ಮ ನಿತ್ಯಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅದರ ನಿಜವಾದ ಫಲ ದೊರೆಯುತ್ತದೆ. ಪಂಚಾಚಾರ, ಅಷ್ಟಾವರಣ ಮತ್ತು ಷಟ್ಸ್ಥಲಗಳ ತತ್ತ್ವಗಳನ್ನು ಜೀವನದಲ್ಲಿ ಪಾಲಿಸುವ ಮೂಲಕ ವ್ಯಕ್ತಿಯಲ್ಲಿ ಸಾತ್ವಿಕತೆ, ಸಮಾಜದಲ್ಲಿ ಪರಸ್ಪರ ಗೌರವ ಮತ್ತು ಬದುಕಿನಲ್ಲಿ ನೆಮ್ಮದಿ ಮೂಡಲು ಸಾಧ್ಯ. ಶರಣರ ಚಿಂತನೆಗಳು ವೈಯಕ್ತಿಕ ಬದುಕಿನ ಉನ್ನತಿಯ ಜೊತೆಗೆ ಸಮಾಜದ ಶಾಂತಿ, ಸಾಮರಸ್ಯ ಮತ್ತು ನೆಮ್ಮದಿಗೂ ದಾರಿದೀಪವಾಗಿವೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಬಸವಣ್ಣ, ಶಿವಸ್ವಾಮಿ, ಬಸವರಾಜು, ಮಹದೇವ ಪ್ರಸಾದ್, ಶರಣು ವಿಶ್ವವಚನ ಫೌಂಡೇಷನ್ ಕೇಂದ್ರೀಯ ಸಂಚಾಲಕ ವಿ. ಲಿಂಗಣ್ಣ, ದೈಹಿಕ ಶಿಕ್ಷಕ ಗುರುಪಾದಸ್ವಾಮಿ, ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.






