ArticlesLatest

ತಂಪಾಗಿದ್ದ ಕೊಡಗನ್ನು  ಸುಡುತ್ತಿದೆ ರಣ ಬಿಸಿಲು… ಕಾವೇರಿ ತವರಲ್ಲಿ ಏನಾಗುತ್ತಿದೆ?

ಕೊಡಗಿನಲ್ಲಿ ಈ ಹೊತ್ತಿಗೆ ಸಣ್ಣಗೆ ಸುರಿಯುವ ಮಳೆ… ನಡುಕ ಹುಟ್ಟಿಸುವ ಚಳಿ… ಮೋಡಕವಿದ ವಾತಾವರಣ ಅದರ ನಡುವೆ ತುಂಟ ನಗೆ ಬೀರುವ ಸೂರ್ಯ ಹೀಗೆ ಒಂಥರಾ ಸುಂದರ ಹವಾಮಾನ ಇರಬೇಕಾಗಿತ್ತು… ಭಾರತದ ಸ್ವಿಡ್ಜರ್ ಲ್ಯಾಂಡ್, ಕರ್ನಾಟಕದ ಕಾಶ್ಮೀರ ಹೀಗೆ ಹಲವು ಅನ್ವರ್ಥ ನಾಮಗಳಿಂದ ಕರೆಯಿಸಿಕೊಳ್ಳುತ್ತಿದ್ದ ಕೊಡಗಿನಲ್ಲಿ ಈಗ ಏನಾಗಿದೆ? ಎಂಬುದನ್ನು ಲೇಖಕ ಕಾಯಪಂಡ ವಿಷ್ಣು ನಾಚಪ್ಪ ತಮ್ಮ ಬರಹದಲ್ಲಿ ತೆರೆದಿಟ್ಟಿದ್ದಾರೆ….

ಕೊಡಗು ಅಂದರೆ ಇಡೀ ಕರ್ನಾಟಕಕ್ಕೆ ತಂಪು ಕೊಡುವ ಜಿಲ್ಲೆ, ಮಂಜಿನ ನಾಡು, ಮಳೆಯ ನಾಡು ಎಂದು ಎಲ್ಲರೂ ಹೆಮ್ಮೆಯಿಂದ ಹೇಳುತ್ತಿದ್ದರು. ಇಲ್ಲಿ ಇಡೀ ವರ್ಷ ತುಂತುರು ಮಳೆಯ ಸಿಂಚನವಿರುತ್ತಿತ್ತು. ಆದರೆ ಇಂದು ನಮ್ಮ ಜಿಲ್ಲೆಗೆ ಏನಾಗಿದೆ?

ಗೌರಿ-ಗಣೇಶ ಹಬ್ಬದ ಸಮಯದಲ್ಲಿ ಎಷ್ಟೇ ಬಿಸಿಲು ಇದ್ದರೂ ಸಂಜೆ ವೇಳೆಗಾದರೂ ತುಂತುರು ಮಳೆಯಾದರೂ ಆಗುತ್ತಿತ್ತು, ಅದೇ ನಮ್ಮ ನಂಬಿಕೆಯಾಗಿತ್ತು. ಆದರೆ ಈ ವರ್ಷ ಒಂದು ಹನಿ ಮಳೆಯೂ ಕಾಣದೆ, ಹಲವು ದಿನಗಳಿಂದ ಮಳೆ ಸಂಪೂರ್ಣ ಮಾಯವಾಗಿ ಸೆಪ್ಟೆಂಬರ್ ತಿಂಗಳಲ್ಲೇ ರಣಬಿಸಿಲು ಮೈ ಸುಡುತ್ತಿದೆ. ಇದು ನಿಜಕ್ಕೂ ನಮ್ಮೆಲ್ಲರ ಹೃದಯಕ್ಕೆ ನೋವು ಕೊಡುವ ವಿಷಯ.

ಈ ಬಿಸಿಲು ಹೀಗೆಯೇ ಮುಂದುವರೆದರೆ ಏನಾಗಬಹುದು ಎಂಬ ಆತಂಕ ಈಗಲೇ ಶುರುವಾಗಿದೆ. ನಮ್ಮ ಗದ್ದೆಗಳು ಬಿರುಕು ಬಿಡಬಹುದು, ನಮ್ಮ ಜೀವನಾಡಿಯಾದ ಹಳ್ಳ-ಕೊಳ್ಳಗಳು, ಕೆರೆ-ಬಾವಿಗಳು ಬತ್ತಿ ಹೋಗಬಹುದು, ನಮ್ಮ ಕಾಫಿ ಬೆಳೆ ಸಂಪೂರ್ಣವಾಗಿ ನಾಶವಾಗಬಹುದು ಎಂಬ ಭಯವಿದೆ. ಸೆಪ್ಟೆಂಬರ್ ನಲ್ಲೇ ಹೀಗಾದರೆ ಇನ್ನು ಬೇಸಿಗೆ ಬಾಕಿ ಇದೆ, ಮುಂದೆ ಕುಡಿಯುವ ನೀರಿಗೂ ತೊಂದರೆಯಾಗಬಹುದು ಎಂಬ ಆತಂಕ ಎಲ್ಲರಲ್ಲೂ ಮನೆಮಾಡಿದೆ. ಈ ಹಠಾತ್ ಬದಲಾವಣೆಯಿಂದ ಈಗಾಗಲೇ ಮಕ್ಕಳಲ್ಲಿ ಮತ್ತು ಹಿರಿಯರಲ್ಲಿ ಜ್ವರ, ಸುಸ್ತು ಕಾಣಿಸಿಕೊಳ್ಳುತ್ತಿದೆ.

ಇದು ಪ್ರಕೃತಿ ನಮಗೆ ಕೊಡುತ್ತಿರುವ ನೋವಿನ ಎಚ್ಚರಿಕೆ… ಆದ್ದರಿಂದ ನಾವೆಲ್ಲರೂ ಈಗಲೇ ಎಚ್ಚೆತ್ತುಕೊಳ್ಳಬೇಕಾಗಿದೆ…. ನೀರು ನಮ್ಮ ಜೀವ. ಅದನ್ನು ಇಂದಿನಿಂದಲೇ ಬಹಳ ಮಿತವಾಗಿ ಬಳಸೋಣ. ನೀರು ಶೇಖರಣೆ ಮಾಡುವ ವ್ಯವಸ್ಥೆಗಳನ್ನು ಈಗಲೇ ಮಾಡಿಕೊಳ್ಳೋಣ. ಪ್ರತಿ ಮನೆಯಲ್ಲೂ ನೀರು ಶೇಖರಣೆಗೆ ವಿಶೇಷ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ.

ನಮ್ಮ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸೋಣ ಶಾಲೆಗಳಲ್ಲಿ ಮಧ್ಯಾಹ್ನದ ರಣಬಿಸಿಲಿನಲ್ಲಿ ಮಕ್ಕಳು ಆಟವಾಡುವುದನ್ನು ಸದ್ಯಕ್ಕೆ ನಿಲ್ಲಿಸಿದರೆ ಉತ್ತಮ. ಎಲ್ಲಾ ಶಾಲೆಗಳಲ್ಲಿ ಮಕ್ಕಳು ಕಡ್ಡಾಯವಾಗಿ ಟೋಪಿ ಧರಿಸಿ ಬರುವಂತೆ ಮತ್ತು ಕುಡಿಯುವ ನೀರಿನ ಬಾಟಲ್ ತರುವಂತೆ ಶಿಕ್ಷಕರು ಅನೌನ್ಸ್ ಮಾಡಿದರೆ ತುಂಬಾ ಉತ್ತಮ. ಪೋಷಕರು ಮಕ್ಕಳಿಗೆ ಕುದಿಸಿ ಆರಿಸಿದ ನೀರು, ಮಜ್ಜಿಗೆ, ಎಳನೀರು ಕೊಡಿ, ಅವರನ್ನು ಬಿಸಿಲಿನಿಂದ ಕಾಪಾಡಿ.

ಬಿಸಿಲಿನಲ್ಲಿ ದುಡಿಯುವವರ ಬಗ್ಗೆ ಮಾನವೀಯತೆ ತೋರಿಸೋಣ ರಸ್ತೆಯಲ್ಲಿ ನಿಂತು ಕರ್ತವ್ಯ ಮಾಡುವ ನಮ್ಮ ಪೊಲೀಸ್ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಕಟ್ಟಡ ಕಾರ್ಮಿಕರು, ತೋಟದಲ್ಲಿ ದುಡಿಯುವವರ ಬಗ್ಗೆ ಕಾಳಜಿ ವಹಿಸೋಣ. ಅವರಿಗೆ ಒಂದು ಬಾಟಲ್ ತಣ್ಣೀರು, ಒಂದು ಲೋಟ ಮಜ್ಜಿಗೆ ಕೊಟ್ಟರೆ ಅದೇ ದೊಡ್ಡ ಮಾನವೀಯತೆ. ಅವರಿಗೆ ಸ್ವಲ್ಪ ನೆರಳಿನಲ್ಲಿ ವಿಶ್ರಾಂತಿ ಪಡೆಯಲು ಅವಕಾಶ ಮಾಡಿಕೊಡೋಣ.

ನಮ್ಮ ದನ-ಕರುಗಳಿಗೂ ನೆರಳು ಮತ್ತು ನೀರಿನ ವ್ಯವಸ್ಥೆ ಮಾಡಲೇಬೇಕಾಗಿದೆ. ನಮ್ಮ ಕೆರೆ-ಕಟ್ಟೆಗಳನ್ನು ಉಳಿಸಲು ಆಡಳಿತ ವರ್ಗ ಈಗಲೇ ಗಮನ ಹರಿಸಬೇಕಾಗಿದೆ. ಹವಾಮಾನ ಇಲಾಖೆಯ ಪ್ರಕಾರ ಮುಂದಿನ ದಿನಗಳಲ್ಲಿ ಬಿಸಿಲಿನ ತಾಪಮಾನ ಸ್ವಲ್ಪ ಕಡಿಮೆಯಾಗುವ ಸಾಧ್ಯತೆಯೂ ಇದೆ. ಆದರೆ ಅಲ್ಲಿಯತನಕ ನಾವೆಲ್ಲರೂ ಮುನ್ನೆಚ್ಚರಿಕೆ ವಹಿಸುವುದು ತುಂಬಾ ಒಳ್ಳೆಯದು. ಈಗ ವಹಿಸುವ ಸಣ್ಣ ಎಚ್ಚರಿಕೆ ಮುಂದೆ ಬರಬಹುದಾದ ದೊಡ್ಡ ಸಂಕಷ್ಟವನ್ನು ತಪ್ಪಿಸಬಹುದು.

ಸ್ನೇಹಿತರೆ, ಇದು ಯಾವುದೋ ಒಂದು ಪಕ್ಷದ, ಒಂದು ಊರಿನ ಸಮಸ್ಯೆ ಅಲ್ಲ, ಇದು ನಮ್ಮ ಕೊಡಗಿನ ಸಮಸ್ಯೆ, ನಮ್ಮ ನಾಡಿನ ಸಮಸ್ಯೆ. ಸರ್ಕಾರ ಈ ಮುನ್ಸೂಚನೆಯನ್ನು ಗಂಭೀರವಾಗಿ ತೆಗೆದುಕೊಂಡು ಕೊಡಗಿನ ಕುಡಿಯುವ ನೀರಿನ ಬಗ್ಗೆ ಈಗಲೇ ಮುಂಜಾಗ್ರತಾ ಯೋಜನೆ ಮಾಡಬೇಕೆಂದು ನಾವು ಪ್ರೀತಿಯಿಂದ ಆದರೆ ಗಟ್ಟಿಯಾಗಿ ಒತ್ತಾಯಿಸೋಣ. ಇದು ನನ್ನದಲ್ಲ, ನಮ್ಮೆಲ್ಲರ ಧ್ವನಿ. ನಿಮ್ಮ ಊರಿನಲ್ಲಿ ನೀರಿನ ಪರಿಸ್ಥಿತಿ ಹೇಗಿದೆ ಎಂದು ದಯವಿಟ್ಟು ಹಂಚಿಕೊಳ್ಳಿ, ಜನಜಾಗೃತಿ ಮೂಡಿಸೋಣ.

ಕೊಡಗಿನ ಬಗ್ಗೆ ಕಾಳಜಿಯನ್ನಿಟ್ಟುಕೊಂಡು ಲೇಖಕ ಕಾಯಪಂಡ ವಿಷ್ಣು ನಾಚಪ್ಪರವರು ಬರೆದಿರುವ ಲೇಖನಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ…

admin
the authoradmin

ನಿಮ್ಮದೊಂದು ಉತ್ತರ