ArticlesLatest

ಕಂತೆ ಭಿಕ್ಷಾ ಕಾಯಕ ಸಂತ ಶ್ರೀ ಸುಬ್ಬೇದೇವರು ಸ್ವಾಮೀಜಿ… ಇದು ಮಹಾಯೋಗಿಯ ಜೀವನಗಾಥೆ!

ಪತ್ರಕರ್ತ ದೊಡ್ಡನಹುಂಡಿ ರಾಜಣ್ಣ ರಚಿತ ಕೃತಿ...

ಕಾಡಂಚಿನ ಗ್ರಾಮೀಣ ಪ್ರದೇಶದಲ್ಲಿ ಅಕ್ಷರ ಮತ್ತು ಅನ್ನ ದಾಸೋಹದ ಮೂಲಕ ಶರಣ ಸಂಸ್ಕೃತಿಯನ್ನು ಬಿತ್ತಿದ ಶ್ರೀ ಗುರುಮಲ್ಲೇಶ್ವರ ಮಠದ ಸದ್ಗುರುಗಳ ಚರಿತ್ರೆಯನ್ನು ಸಾರುವ ‘ಕಂತೆ ಭಿಕ್ಷಾ ಕಾಯಕ ಸಂತ ಶ್ರೀ ಸುಬ್ಬೇದೇವರು ಸ್ವಾಮೀಜಿ’ ಎಂಬ ಕೃತಿಯನ್ನು ದೊಡ್ಡನಹುಂಡಿ ರಾಜಣ್ಣ ಅವರು ರಚಿಸಿದ್ದು ಶ್ರೀಮಠದ ಇತಿಹಾಸ ಮತ್ತು ಪೂಜ್ಯ ಶ್ರೀಗಳ ಜೀವನ ಸಾಧನೆಯನ್ನು ಸುಂದರವಾಗಿ ಅನಾವರಣಗೊಳಿಸಿದೆ.

ಕೃತಿಯ ಹೂರಣ...

ಒಟ್ಟು 80 ಪುಟಗಳ ಈ ಹೊತ್ತಗೆಯನ್ನು 12 ಅಧ್ಯಾಯಗಳಾಗಿ ವಿಂಗಡಿಸಲಾಗಿದೆ. ಶುಭ ಸಂದೇಶ, ಮುನ್ನುಡಿ, ಸಂಪಾದಕರ ಮಾತು, ಲಿಂಗಾಯತರ ಅಸ್ಮಿತೆ ಶ್ರೀ ಬಸವೇಶ್ವರರು, ಸ್ವಲೀಲ ಮಹಾತ್ಮ ಶ್ರೀ ಗುರುಮಲ್ಲೇಶ್ವರರು, ಗೋಪಿಶೆಟ್ಟಿಯೂರಿನ ಶ್ರೀ ಗುರುಮಲ್ಲೇಶ್ವರ ಮಠ, ಗೋಪಿಶೆಟ್ಟಿಯೂರಿನ ಇತಿಹಾಸ, ಕಂತೆ ಭಿಕ್ಷಾ ಕಾಯಕ ಸಂತ ಶ್ರೀ ಸುಬ್ಬೇದೇವರು ಸ್ವಾಮೀಜಿ, ಶ್ರೀ ಸೋಮಶೇಖರ ಸ್ವಾಮೀಜಿ ಕಾಯಕ ನಿಷ್ಠೆ, ಶ್ರೀ ಸುಬ್ಬೇದೇವರು ಸ್ವಾಮೀಜಿ ಕುರಿತು ಶ್ರೀಗಳ ಅನಿಸಿಕೆ, ಶ್ರೀಮಠದ ವಿದ್ಯಾರ್ಥಿಗಳಿಂದ ಶ್ರೀಗಳ ಗುಣಗಾನ, ಶ್ರೀ ಸುಬ್ಬೇದೇವರು ಸ್ವಾಮೀಜಿ ಸ್ಮಾರಕ ಭವನ ಲೋಕಾರ್ಪಣೆ ಸಮಾರಂಭದ ನೆನಪಿನ ಚಿತ್ರಮಾಲೆ…

ಶ್ರೀ ಮಹದೇಶ್ವರ ಬೆಟ್ಟದ ಶ್ರೀ ಸಾಲೂರು ಬೃಹನ್ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಯವರು ಶುಭಸಂದೇಶ ನೀಡಿ 1975ರಲ್ಲಿ ತಿ. ನರಸೀಪುರ ತಾಲೂಕಿನ ಶಂಭುದೇವನಪುರದ ಸುಬ್ಬೇದೇವರು ಸ್ವಾಮೀಜಿಯವರಿಂದ ಆರಂಭವಾದ  ಭಿಕ್ಷದ ಮಠವು, ಪ್ರಸ್ತುತ ಸೋಮಶೇಖರ ಸ್ವಾಮೀಜಿಯವರ ನೇತೃತ್ವದಲ್ಲಿ ಕಾಡಂಚಿನ ಸದ್ಭಕ್ತರಿಗೆ ದಾಸೋಹ ತತ್ವವನ್ನು ಪಸರಿಸುತ್ತಿದೆ. ಇಂತಹ ಶ್ರೀಮಠದ ಹಿರಿಮೆಯನ್ನು ಬೆಳಕಿಗೆ ತಂದ ಲೇಖಕ ದೊಡ್ಡನಹುಂಡಿ ರಾಜಣ್ಣನವರ ಪ್ರಯತ್ನ ಅಭಿನಂದನೀಯ ಎಂದಿದ್ದಾರೆ.

ಮೈಸೂರಿನ ಶ್ರೀ ಕುಂದೂರು ಮಠದ ಡಾ. ಶ್ರೀ ಶರತ್‌ಚಂದ್ರ ಸ್ವಾಮೀಜಿಯವರು ಮುನ್ನುಡಿ ಬರೆದಿದ್ದು, 1950ರ ಆಸುಪಾಸಿನಲ್ಲೇ ಅಕ್ಕನ ಬಳಗ ಸ್ಥಾಪನೆಯಾಗಿದ್ದ ಗೋಪಿಶೆಟ್ಟಿಯೂರು ಶರಣ ಸಂಸ್ಕೃತಿಯ ನೆಲೆವೀಡು. ಅಂತಹ ಗ್ರಾಮಕ್ಕೆ ಶ್ರೀ ಸುಬ್ಬೇದೇವರು ಸ್ವಾಮೀಜಿ ಮತ್ತಷ್ಟು ಸುಸಂಸ್ಕೃತಿಯ ಮೆರುಗು ತಂದರು. ಅವರ ಬಾಲ್ಯದಿಂದ ಮುಪ್ಪಿನವರೆಗಿನ ಜೀವನದ ಪ್ರಮುಖ ಘಟ್ಟಗಳನ್ನು ಲೇಖಕರು ವಿಶಿಷ್ಟ ದಾಖಲೆಗಳೊಂದಿಗೆ ಕಟ್ಟಿಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೌಲ್ಯ ಹೆಚ್ಚಿಸಿದ ಬೆನ್ನುಡಿ

ಕೃತಿಗೆ ಬೆನ್ನುಡಿ ಬರೆದಿರುವ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿಯವರ ಮಾತುಗಳು ಕೃತಿಯ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿವೆ. ಶ್ರೀ ಮಲೆ ಮಹದೇಶ್ವರರ ಪಾದದ ಪವಿತ್ರ ಮಣ್ಣಿನಲ್ಲಿ, ಪ್ರಕೃತಿಯ ಮಡಿಲಲ್ಲಿ ಅರಳಿದ ಜ್ಞಾನ ಪುಷ್ಪವೇ ಗೋಪಿಶೆಟ್ಟಿಯೂರು ಶ್ರೀ ಗುರುಮಲ್ಲೇಶ್ವರ ದಾಸೋಹ ಮಠ’. ‘ಕಾಯಕವೇ ಕೈಲಾಸ’ ಎಂಬ ಬಸವ ತತ್ವವನ್ನೇ ತಮ್ಮ  ಉಸಿರಾಗಿಸಿಕೊಂಡು, ಸೋಮಾರಿಗಳನ್ನು ಎಚ್ಚರಿಸಿ, ಕಾಯಕ ಜೀವಿಗಳನ್ನು ಪ್ರೀತಿಯಿಂದ ಅಪ್ಪಿಕೊಂಡವರು ಶ್ರೀ ಸುಬ್ಬೇದೇವರು ಸ್ವಾಮೀಜಿಯವರು.

ಅಂತಹ ಮಹಾಸಂತರ ಕುರಿತು ಮೈಸೂರು ಜಿಲ್ಲೆಯ ಮಣ್ಣಿನ ಗುಣ ಹಾಗೂ ಚಾಮರಾಜನಗರ ಜಿಲ್ಲೆಯ ಮಠದ ಸಂಸ್ಕಾರ—ಎರಡನ್ನೂ ತಮ್ಮಲ್ಲಿ ಮೈಗೂಡಿಸಿಕೊಂಡಿರುವ, ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಲೇಖಕ ದೊಡ್ಡನಹುಂಡಿ ರಾಜಣ್ಣನವರು ಅತ್ಯಂತ ಶ್ರದ್ಧೆಯಿಂದ ಈ ಕೃತಿಯನ್ನು ರಚಿಸಿದ್ದು,  ತಮಗೆ ಬಾಲ್ಯದಲ್ಲಿ ಆಶ್ರಯ ನೀಡಿ ಬೆಳಸಿದ ಮಠ ಮತ್ತು ಸ್ಥಾಪಕರಾದ ಶ್ರೀ ಸುಬ್ಬೇದೇವರ ಕುರಿತು ಕೃತಿ ರಚಿಸುವ ಮೂಲಕ ತಮಗೆ ಆಶ್ರಯ ನೀಡಿದ ಮಠದ ಋಣವನ್ನು ಸಾರ್ಥಕವಾಗಿ ತೀರಿಸಿದ್ದಾರೆ ಎಂದಿದ್ದಾರೆ.

ಲೇಖಕರ ಧನ್ಯತಾ ಭಾವ  

ತಮ್ಮ ಬಾಲ್ಯದ ನೆನಪುಗಳನ್ನು ಸ್ಮರಿಸಿರುವ ಲೇಖಕ ದೊಡ್ಡನಹುಂಡಿ ರಾಜಣ್ಣ ಬಾಲ್ಯದಲ್ಲಿ ನನಗೆ ಆಶ್ರಯ ನೀಡಿ, ಸಣ್ಣಪುಟ್ಟ ಕೆಲಸಗಳನ್ನು ನಿರ್ವಹಿಸುತ್ತಾ ಶಾಲಾ ಶಿಕ್ಷಣ ಪೂರೈಸಲು ಆಸರೆಯಾದದ್ದು‌ ಗೋಪಿಶೆಟ್ಟಿಯೂರು ಮಠ. ಮುಂದಿನ ಉನ್ನತ ವ್ಯಾಸಂಗ ಮಾಡಲು ಈ ಮಠವೇ ಪ್ರೇರಣೆ. ನಾನು ಕಂಡ ಅನುಭವ ಹಾಗೂ ಶ್ರೀ ಸುಬ್ಬೇದೇವರು ಸ್ವಾಮೀಜಿಯವರ ಬದುಕಿನ ಪ್ರಮುಖ ಮಾಹಿತಿಗಳನ್ನು ಈ ಕೃತಿಯಲ್ಲಿ ದಾಖಲಿಸುವ ಮೂಲಕ ಒಂದು ಸಣ್ಣ ಕೃತಜ್ಞತೆ ಸಲ್ಲಿಸಿದ್ದೇನೆ ಎಂಬ ಸಾರ್ಥಕ ಭಾವ ನನಗಿದೆ ಎಂದು ಧನ್ಯತಾ ಭಾವ ವ್ಯಕ್ತಪಡಿಸಿದ್ದಾರೆ.

ಶರಣ ಸಂಸ್ಕೃತಿ, ಗ್ರಾಮೀಣ ಮಠಗಳ ಶೈಕ್ಷಣಿಕ ಕ್ರಾಂತಿ ಹಾಗೂ ಕಾಯಕ ತತ್ವದ ಮಹತ್ವವನ್ನು ಸಾರುವ ಈ ಗ್ರಂಥವು ಪ್ರತಿಯೊಬ್ಬ ಓದುಗರ ಹಾಗೂ ಅಭ್ಯಾಸಿಗಳ ಸಂಗ್ರಹದಲ್ಲಿ ಇರಬೇಕಾದ ಮೌಲ್ಯಯುತ ಕೃತಿಯಾಗಿದ್ದು, ಕೃತಿಯನ್ನು ಓದಲು ಇಚ್ಛಿಸುವವರು ಮೊ. 63641 57529 ಸಂಪರ್ಕಿಸಬಹುದು‌.

ಕೃತಿ ಪರಿಚಯಿಸಿರುವವರು…

ವಚನ ಕುಮಾರಸ್ವಾಮಿ ಅವರ ಲೇಖನಗಳನ್ನು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಓದಿ

admin
the authoradmin

ನಿಮ್ಮದೊಂದು ಉತ್ತರ