ArticlesDasaraLatest

ಮೈಸೂರು ದಸರಾ… ಮುನ್ನುಡಿ ಬರೆದ ಶ್ರೀರಂಗಪಟ್ಟಣ… ಆರಂಭವಾಗಿದ್ದು ಹೇಗೆ?

ಮೈಸೂರು ದಸರಾ ಇವತ್ತು ವಿಶ್ವವಿಖ್ಯಾತಿಯಾಗಿದೆ.. ಆದರೆ ಈ ಮೈಸೂರು ದಸರಾ ಆರಂಭವಾಗಿದ್ದು ಮೊದಲಿಗೆ ಶ್ರೀರಂಗಪಟ್ಟಣದಲ್ಲಿ ಎಂಬ ವಿಚಾರ ಹೆಚ್ಚಿನವರಿಗೆ ಗೊತ್ತಿಲ್ಲ. ಹೀಗಾಗಿ ಇದು ಅಚ್ಚರಿ ಎನಿಸಿದರೂ ಇತಿಹಾಸದ ಸತ್ಯವಾಗಿದೆ.

ಇವತ್ತು ಮೈಸೂರು ದಸರಾ ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿ ಇಡೀ ವಿಶ್ವದ ಗಮನಸೆಳೆಯುತ್ತಾ ಅದ್ಧೂರಿಯಾಗಿ ಆಚರಣೆಯಾಗುತ್ತಿದೆ. ಆದರೆ ಈ ದಸರಾ ಆರಂಭ ಬಗ್ಗೆ ಮೆಲುಕು ಹಾಕುತ್ತಾ ಹೋದರೆ ಈ ದಸರಾದ ಮೂಲ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಎಂಬುದು ಗೊತ್ತಾಗುತ್ತದೆ. ಇವತ್ತಿನ ಮೈಸೂರು ದಸರಾಕ್ಕೆ ಮುನ್ನುಡಿ ಬರೆದಿದ್ದು ಶ್ರೀರಂಗಪಟ್ಟಣವಾಗಿದ್ದು, ಇವತ್ತಿಗೂ ಅಲ್ಲಿ ದಸರಾ ನಡೆಯುತ್ತಿದೆ.

 

ಮೈಸೂರಿನಲ್ಲಿ ನಡೆಯುವಂತೆ ಅದ್ಧೂರಿ ಅಲ್ಲದಿದ್ದರೂ ಧಾರ್ಮಿಕ ಮತ್ತು ಸಾಂಸ್ಕೃತಿಕ ನೆಲೆಯಲ್ಲಿ ಹಲವು ರೀತಿಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಅಷ್ಟೇ ಅಲ್ಲದೆ ಜಂಬೂಸವಾರಿಯೂ ನಡೆಯುತ್ತದೆ. ಶ್ರೀರಂಗಪಟ್ಟಣ ಮತ್ತು ಅಲ್ಲಿ ನಡೆಯುವ ದಸರಾದ ಬಗ್ಗೆ ಹೇಳುವುದಾದರೆ ಶ್ರೀರಂಗಪಟ್ಟಣವು ಮಂಡ್ಯ ಜಿಲ್ಲೆಯ ತಾಲೂಕು ಕೇಂದ್ರದಲ್ಲೊಂದಾಗಿದೆ. ಮೈಸೂರಿಗೆ ಹದಿನಾರು ಕಿ.ಮೀ.ದೂರದಲ್ಲಿದ್ದು, ಮಂಡ್ಯದಿಂದ 30 ಕಿ.ಮೀ. ಬೆಂಗಳೂರಿನಿಂದ 122 ಕಿ.ಮೀ. ದೂರದಲ್ಲಿದೆ.

ಕೊಡಗಿನಿಂದ ಹರಿದು ಬರುವ ಕಾವೇರಿ ನದಿ ಇಲ್ಲಿ ಎರಡು ಕವಲಾಗಿ ಹರಿಯುವುದರೊಂದಿಗೆ ಶ್ರೀರಂಗಪಟ್ಟಣವನ್ನು ದ್ವೀಪವಾಗಿಸಿದ್ದು ವಿಶೇಷ. ಇವತ್ತಿನ ಶ್ರೀರಂಗಪಟ್ಟಣ ಪೌರಾಣಿಕಯುಗದಲ್ಲಿ ’ಆದಿರಂಗ’ವಾಗಿ ಚಾರಿತ್ರಿಕವಾಗಿ ’ಅಷ್ಟಗ್ರಾಮ’ವಾಗಿ ಕರೆಯಲ್ಪಡುತ್ತಿತ್ತು. ಕಾವೇರಿ ನದಿ ಸುತ್ತುವರಿದು ಸೃಷ್ಠಿಯಾದ ಈ ಪಟ್ಟಣವು ಪಶ್ಚಿಮದಿಂದ ಪೂರ್ವಕ್ಕೆ ಸುಮಾರು 3 ಮೈಲಿಗಳಷ್ಟು ಉದ್ದ ಮತ್ತು ಉತ್ತರ-ದಕ್ಷಿಣವಾಗಿ ಒಂದು ಮೈಲಿಯಷ್ಟು ಅಗಲವನ್ನು ಹೊಂದಿದೆ.

ಇದನ್ನೂ ಓದಿ.. ಮೈಸೂರು ದಸರಾ!.. ರಾಜರ ಕಾಲದ ಜಂಬೂಸವಾರಿ ಹೇಗಿತ್ತು? ಅಲ್ಲಿಂದ ಇಲ್ಲಿವರೆಗೆ!

ಇತಿಹಾಸದ ಪ್ರಕಾರ ಶ್ರೀರಂಗಪಟ್ಟಣವನ್ನು ಹೊಯ್ಸಳ ಚಕ್ರವರ್ತಿ ವಿಷ್ಣುವರ್ಧನನ ಸಹೋದರ ಉದಯಾದಿತ್ಯನು ಕ್ರಿ.ಶ. 1120ರಲ್ಲಿ ನಿರ್ಮಿಸಿದ್ದರೆ, ಕ್ರಿ.ಶ. 1454ರಲ್ಲಿ ನಾಗಮಂಗಲದ ದೊರೆ ತಿಮ್ಮಣ್ಣನೆಂಬುವನು ಶ್ರೀರಂಗಪಟ್ಟಣಕ್ಕೆ ಸುತ್ತಲೂ ಕೋಟೆಯನ್ನು ಕಟ್ಟಿಸಿದ್ದಾನೆ.  ನಾಲ್ಕು ದ್ವಾರಗಳಿಂದ ಪಟ್ಟಣವನ್ನು ಸುತ್ತುವರಿದಿರುವ ಈ ಬಲವಾದ ಕೋಟೆ ಭಾರತದ ಎರಡನೇ ಅತ್ಯಂತ ಬಲಿಷ್ಟ ಕೋಟೆಯೆಂದು ಪರಿಗಣಿತವಾಗಿದೆ.

ಇತಿಹಾಸದ ಪುಟಗಳನ್ನು ತಿರುವಿದರೆ ಶ್ರೀರಂಗಪಟ್ಟಣವು ವಿಜಯನಗರದ ಅರಸರ ಆಳ್ವಿಕೆಗೂ ಒಳಪಟ್ಟಿತ್ತು. ಆಗ ಅವರ ಸಾಮಂತ ಶ್ರೀರಂಗರಾಯನು ಇಲ್ಲಿ ಆಡಳಿತ ನಡೆಸುತ್ತಿದ್ದನು. ಆತನ ಕಾಲದಲ್ಲಿಯೇ ನವರಾತ್ರಿ ಆಚರಣೆ ಶ್ರೀರಂಗಪಟ್ಟಣದಲ್ಲಿ ನಡೆಯುತ್ತಿತ್ತು ಎನ್ನಲಾಗಿದೆ.

ಇದನ್ನೂ ಓದಿ… ಮೈಸೂರು ದಸರಾ ವಿಶ್ವವಿಖ್ಯಾತಿಯಾಗಿದ್ದು ಹೇಗೆ? ಇದು ದಸರಾ ಇತಿಹಾಸದ ಮೆಲುಕು

ಹೀಗಿರುವಾಗ 1610ರಲ್ಲಿ ಶ್ರೀರಂಗಪಟ್ಟಣಕ್ಕೆ ದಂಡೆತ್ತಿ ಹೋದ ಮೈಸೂರು ರಾಜರಾದ ಯದುವಂಶದ ರಾಜಒಡೆಯರ್  ಶ್ರೀರಂಗಪಟ್ಟಣವನ್ನು ವಶಕ್ಕೆ ಪಡೆದುಕೊಂಡರು. ಆ ನಂತರ ಶ್ರೀರಂಗಪಟ್ಟಣವನ್ನು ರಾಜಧಾನಿಯನ್ನಾಗಿಸಿ ಕೊಂಡು ರಾಜ್ಯಭಾರ ಮಾಡುವ ವೇಳೆ ವಿಜಯನಗರ ಅರಸರಂತೆ ತಮ್ಮ ಅರಮನೆಯಲ್ಲಿಯೂ ದಸರಾ ಆಚರಣೆ ಮಾಡಲು ಆರಂಭಿಸಿದರು ಎಂಬುದು ಇತಿಹಾಸ.

1610ರಲ್ಲಿ ವಿಜಯನಗರ ಪರಂಪರೆಯ ಪ್ರತೀಕವಾಗಿದ್ದ ವಿಜಯದಶಮಿ ಆಚರಣೆಯನ್ನು ಮೊದಲ ಬಾರಿಗೆ ಆಚರಿಸುವ ಮೂಲಕ ದಸರಾ ಆಚರಣೆಗೆ ರಾಜಒಡೆಯರ್ ಮುನ್ನುಡಿ ಬರೆದರು. ಆ ನಂತರ ಮುಮ್ಮಡಿಕೃಷ್ಣ ರಾಜಒಡೆಯರ ಕಾಲದಲ್ಲಿ ಅಂದರೆ 1799 ರಿಂದ 1868ರ ಅವಧಿಯಲ್ಲಿ ತಮ್ಮ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬದಲಾಯಿಸಲಾಯಿತಲ್ಲದೆ, ಮೈಸೂರಿನಲ್ಲಿ ದಸರಾವನ್ನು ಆಚರಣೆ ಮಾಡಿದರು. ಹೀಗಾಗಿ ಮೈಸೂರು ದಸರಾವಾಗಿ ಖ್ಯಾತಿ ಪಡೆಯಿತು.

ಇದನ್ನೂ ಓದಿ… ಮೈಸೂರಿನ ಕಟ್ಟಿಗೆಯ ಅರಮನೆ ಏನಾಯಿತು? ಇದು ಅಂಬಾವಿಲಾಸ ಅರಮನೆ ರಹಸ್ಯ!

ಇತ್ತ ಮೈಸೂರಿನಲ್ಲಿ ದಸರಾ ಅದ್ಧೂರಿಯಾಗಿ ನಡೆಯುತ್ತಿದ್ದರೆ ಅತ್ತ ಶ್ರೀರಂಗಪಟ್ಟಣದಲ್ಲಿ ದಸರಾ ಮಂಕಾಯಿತು. ಸಾಂಪ್ರದಾಯಿಕ ಪೂಜೆಯಷ್ಟೇ ನಡೆಸಲಾಗುತ್ತಿತ್ತು. ಇದೆಲ್ಲದರ ನಡುವೆ ಇತ್ತೀಚೆಗಿನ ವರ್ಷಗಳಲ್ಲಿ ಮಂಡ್ಯದ ಜನರ ಬಯಕೆಯಂತೆ ಶ್ರೀರಂಗಪಟ್ಟಣದಲ್ಲಿ ದಸರಾ ಆಚರಣೆಗೆ ಜಿಲ್ಲಾಡಳಿತ ಮುಂದಾಯಿತು.

ಇನ್ನು ಶ್ರೀರಂಗಪಟ್ಟಣದಲ್ಲಿ ದಸರಾ ಹೇಗೆ ನಡೆಯುತ್ತದೆ ಎಂಬುದನ್ನು ನೋಡಿದ್ದೇ ಆದರೆ, ಶ್ರೀರಂಗಪಟ್ಟಣಕ್ಕೆ ಸಮೀಪವಿರುವ ಕಿರಂಗೂರು ಬಳಿಯ ಬನ್ನಿಮಂಟಪದಲ್ಲಿ ನಾಡದೇವತೆ ಶ್ರೀಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆಯೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ.

ಇದನ್ನೂ ಓದಿ… ಮೈಸೂರು ದಸರಾದ ಕಥೆ ಹೇಳುವ ‘ಸೀತಾವಿಲಾಸ ಛತ್ರ’ ಇದು ಇತಿಹಾಸದ ಸಾಕ್ಷಿ!

ಆ ನಂತರ ವೈದಿಕರ ತಂಡಪ್ರಥಮವಾಗಿ ನಂದಿಕಂಬಕ್ಕೆ ಪೂಜೆಸಲ್ಲಿಸಿ,  ಹಲವು ಪೂಜಾ ಕೈಂಕರ್ಯಗಳು ನಡೆಯುವ ಮೂಲಕ ದಸರಾ ವಿಧ್ಯುಕ್ತವಾಗಿ ಆರಂಭವಾಗುತ್ತದೆ. ಇದೇ ವೇಳೆ ಗಣಪತಿಹೋಮ, ನವಗ್ರಹಪೂಜೆ, ಪುಣ್ಯಾಹ, ಶಮಿಪೂಜೆ,  ಚಾಮುಂಡಿಪೂಜೆ ಹಾಗೂ ಬನ್ನಿಮಂಟಪಕ್ಕೆ ಬನ್ನಿಪೂಜೆ ಕೂಷ್ಮಾಂಡಚೇಧನ, ಮಹಾಭಿಷೇಕ, ಪುಷ್ಪಾರ್ಚನೆ ಸಲ್ಲಿಸಲಾಗುತ್ತದೆ.

ಇದೇ ಸಂದರ್ಭ ಶ್ರೀಚಾಮುಂಡೇಶ್ವರಿ ಮೂರ್ತಿ ಹೊತ್ತರಥದೊಂದಿಗೆ ಆರಂಭಗೊಳ್ಳುವ ದಸರಾ ಉತ್ಸವದಲ್ಲಿ ಆನೆ ಮೇಲೆ ಅಂಬಾರಿಯೊಂದಿಗೆ ಕಳಶಹೊತ್ತ ಮಹಿಳೆಯರು ಹಾಗೂ ವಿವಿಧ ಕಲಾತಂಡಗಳ ಮೆರವಣಿಗೆ ನಡೆಯುತ್ತದೆ.

ಈ ಮೆರವಣಿಗೆ ಕಿರಂಗೂರು ಗ್ರಾಮದ ಮಾರ್ಗವಾಗಿ ಬಾಬುರಾಯನಕೊಪ್ಪಲು, ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ಸಾಗಿ ಪಟ್ಟಣದ ಕೋಟೆಯ ದ್ವಾರದ ಮೂಲಕ ರಾಜಬೀದಿಗಳಲ್ಲಿ ಮುಂದುವರೆಯುತ್ತಾ ಸಾಗಿ ರಂಗನಾಥಸನ್ನಿಧಿಯನ್ನು ತಲುಪುತ್ತದೆ.

ಮೈಸೂರು ದಸರಾಕ್ಕೆ ಬರಲು ಸಾಧ್ಯವಾಗದವರು ಶ್ರೀರಂಗಪಟ್ಟಣದಲ್ಲಿ ನಡೆಯುವ ದಸರಾದಲ್ಲಿ ಪಾಲ್ಗೊಂಡು ಖುಷಿಪಡುತ್ತಾರೆ.  ಅದು ಏನೇ ಇರಲಿ ಇವತ್ತಿನ ಜಗಮಗಿಸುವ ಮೈಸೂರು ದಸರಾದ ಬೇರು ಶ್ರೀರಂಗಪಟ್ಟಣದಿಂದಲೇ ಶುರುವಾಗಿರುವುದು ಎನ್ನುವುದು ಇತಿಹಾಸದ ಸತ್ಯವಾಗಿದೆ….

ಧ್ವನಿ:ಪೃಥ್ವಿ ದೇವರಾಜ್

 

 

 

admin
the authoradmin

ನಿಮ್ಮದೊಂದು ಉತ್ತರ