ಕ್ಯಾಪ್ಟನ್ ಸ್ಮಿತ್ ಮಚ್ಛರ್ ಭಾರತದ ಹೆಮ್ಮೆ… ಜನರಲ್ ತಿಮ್ಮಯ್ಯ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ನೆನಪಾದರು!

ಕ್ಯಾಪ್ಟನ್ ಸ್ಮಿತ್ ಮಚ್ಛರ್ ಎಂಬ 38 ವರ್ಷದ ಭಾರತೀಯ ಇಂದು ಇಡೀ ವಿಶ್ವದ ಮುಂದೆ ಭಾರತದ ಹೆಮ್ಮೆಯಾಗಿದ್ದಾರೆ. ದುಬೈನಿಂದ ತೆಲ್ ಅವಿವ್ ಗೆ ಹೊರಟಿದ್ದ *flydubai FZ1073 ವಿಮಾನದಲ್ಲಿ 174 ಜೀವಗಳ ಜವಾಬ್ದಾರಿ ಅವರ ಹೆಗಲ ಮೇಲಿತ್ತು.
ವಿಮಾನ 34,000 ಅಡಿ ಎತ್ತರದಲ್ಲಿದ್ದಾಗ ಸಹ-ಪೈಲಟ್ ಆಗಿದ್ದ ಓಮನ್ ಪ್ರಜೆ ಏಕಾಏಕಿ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಅವರ ತಲೆ, ಕುತ್ತಿಗೆ ಮತ್ತು ಕೈಗೆ ಗಂಭೀರ ಇರಿತವಾಗಿದೆ, ಆತನ ಉದ್ದೇಶ ವಿಮಾನವನ್ನು ಪತನಗೊಳಿಸಿ 9/11 ರಂತಹ ದುರಂತ ಸೃಷ್ಟಿಸುವುದಾಗಿತ್ತು.

ಆ ಕ್ಷಣದಲ್ಲಿ ವಿಮಾನ 30 ಸೆಕೆಂಡ್ ನಲ್ಲಿ 14,000 ಅಡಿ ಕೆಳಗೆ ಕುಸಿದಿದೆ. ಎಲ್ಲರೂ ಸಾವು ಖಚಿತ ಎಂದುಕೊಂಡಿದ್ದರು. ಆದರೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸ್ಮಿತ್ ಅವರು ಮಾಡಿದ್ದು ಅಸಾಧಾರಣ ಸಾಹಸ. ತಮ್ಮ ಕೊನೆಯ ಶಕ್ತಿಯಿಂದ ಕಾಕ್ಪಿಟ್ ಬಾಗಿಲಿನ ಲಾಕ್ ತೆರೆದರು.
ಬಾಗಿಲು ತೆರೆದಿದ್ದೇ ಜೀವ ಉಳಿಯಲು ಕಾರಣ. ಹೊರಗಿದ್ದ ಪ್ಲಂಬರ್, ಬ್ಯಾಂಕರ್, ದಂತ ವೈದ್ಯ ಸೇರಿದಂತೆ ಪ್ರಯಾಣಿಕರು ಒಳನುಗ್ಗಿ ದಾಳಿಕೋರನನ್ನು ಹೆಡ್ಫೋನ್ ವೈರ್ ನಿಂದ ಕಟ್ಟಿ ಹಾಕಿದರು. ವಿಮಾನದಲ್ಲಿದ್ದ ಇಬ್ಬರು ಆಫ್-ಡ್ಯೂಟಿ ಪೈಲಟ್ ಗಳು ನಿಯಂತ್ರಣ ತೆಗೆದುಕೊಂಡು ವಿಮಾನವನ್ನು ಸೌದಿ ಅರೇಬಿಯಾದ ತಬುಕ್ ನಲ್ಲಿ ಸುರಕ್ಷಿತವಾಗಿ ಇಳಿಸಿದರು.

ಇಂದು ಸ್ಮಿತ್ ಅವರು ಸ್ಥಿರ ಸ್ಥಿತಿಯಲ್ಲಿ ಇದ್ದು ಅಬುಧಾಬಿಗೆ ಚಿಕಿತ್ಸೆಗೆ ರವಾನೆಯಾಗಿದ್ದಾರೆ. ಅವರ ಈ ಕಾರ್ಯಕ್ಕೆ ಪ್ರಧಾನಿ ಮೋದಿ ಅವರು ಕುಟುಂಬಕ್ಕೆ ಕರೆ ಮಾಡಿ “ದೇಶಕ್ಕೆ ಹೆಮ್ಮೆ ತಂದಿದ್ದೀರಿ” ಎಂದಿದ್ದಾರೆ. ಗುಜರಾತ್ ಸರ್ಕಾರ ವಿಶಿಷ್ಟ ಗುಜರಾತ್ ಗರಿಮಾ ಪ್ರಶಸ್ತಿ ಘೋಷಿಸಿದೆ.
ಸ್ಮಿತ್ ಅವರಲ್ಲಿ ಕಂಡಿದ್ದು ತರಬೇತಿ ಅಲ್ಲ, ಭಾರತೀಯತನ. ತನ್ನ ಪ್ರಾಣಕ್ಕಿಂತ ಇನ್ನೊಬ್ಬರ ಪ್ರಾಣ ದೊಡ್ಡದು ಎಂಬ ನಮ್ಮ ಸಂಸ್ಕೃತಿ. ಇದೇ ಸಂಸ್ಕೃತಿ ನಮ್ಮ ಕೊಡಗಿನ ವೀರರಲ್ಲಿ ಕಾಣುತ್ತೇವೆ. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರು ಸ್ವತಂತ್ರ ಭಾರತದ ಮೊದಲ ಸೇನಾ ಮುಖ್ಯಸ್ಥರು. 1947ರ ನೌಶೇರಾ ಕದನದಲ್ಲಿ ಪಾಕಿಸ್ತಾನದ ದೊಡ್ಡ ಪಡೆಯನ್ನು ಎದುರಿಸಿ “ನೆಲ ಬಿಟ್ಟುಕೊಡಬೇಡಿ” ಎಂದು ಘರ್ಜಿಸಿ ಗೆದ್ದವರು.

ಕಾರ್ಯಪ್ಪ ಅವರ ದೇಶಪ್ರೇಮಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಇಲ್ಲ. ಅವರ ಮಗ ಯುದ್ಧದಲ್ಲಿ ಪಾಕಿಸ್ತಾನದ ಸೆರೆಯಾದಾಗ, ಪಾಕ್ ಅಧ್ಯಕ್ಷರು “ನಿಮ್ಮ ಮಗನನ್ನು ಬಿಡುತ್ತೇವೆ” ಎಂದರು. ಆಗ ಅವರು ಹೇಳಿದರು “ಅವನು ನನ್ನ ಮಗನಲ್ಲ, ಭಾರತದ ಮಗ. ಎಲ್ಲರಂತೆ ನೋಡಿಕೊಳ್ಳಿ.” ಇದು ತಂದೆಗಿಂತ ದೇಶ ದೊಡ್ಡದು ಎಂಬ ಸಂದೇಶ.
ಇನ್ನೊಬ್ಬರು ಜನರಲ್ ಕೆ.ಎಸ್. ತಿಮ್ಮಯ್ಯ. ಇವರನ್ನು ವಿಶ್ವಸಂಸ್ಥೆಯೇ ಕೊರಿಯಾ ಯುದ್ಧದಲ್ಲಿ 22,000 ಯುದ್ಧ ಕೈದಿಗಳ ಸಮಸ್ಯೆ ಬಗೆಹರಿಸಲು ಕರೆದಿತ್ತು. ಅಮೆರಿಕ, ಚೀನಾ ನಡುವೆ ನಿಂತು ಶಾಂತಿ ಸ್ಥಾಪಿಸಿದ ಏಕೈಕ ಭಾರತೀಯ. ತಿಮ್ಮಯ್ಯ ಅವರ ನೇರ ನುಡಿ ಇಂದಿಗೂ ಮಾದರಿ. 1962ರ ಯುದ್ಧದ ಮೊದಲು ಸೈನಿಕರಿಗೆ ಬೂಟು, ಬಟ್ಟೆ, ಶಸ್ತ್ರ ಇಲ್ಲದಿದ್ದಾಗ ರಕ್ಷಣಾ ಸಚಿವರ ಎದುರೇ “ನೀವು ದೇಶದ ಸುರಕ್ಷತೆಯ ಜೊತೆ ಚೆಲ್ಲಾಟವಾಡುತ್ತಿದ್ದೀರಿ” ಎಂದು ರಾಜೀನಾಮೆ ಎಸೆಯಲು ಮುಂದಾದವರು. ಸ್ಮಿತ್, ಕಾರ್ಯಪ್ಪ, ತಿಮ್ಮಯ್ಯ – ಮೂವರೂ ಬೇರೆ ಬೇರೆ ಕಾಲದವರು, ಆದರೆ ಅವರ ರಕ್ತ ಒಂದೇ, ಗುಣ ಒಂದೇ – ದೇಶ ಮೊದಲು.

ಈ ಕಥೆಗಳು ನಮಗೆ ಹೇಳುವುದು ಇಷ್ಟೇ. ದೇಶಪ್ರೇಮ ಎಂದರೆ ಗಡಿಯಲ್ಲಿ ನಿಲ್ಲುವುದು ಮಾತ್ರವಲ್ಲ. ನಾವು ಇರುವ ಜಾಗದಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ಮಾಡುವುದೇ ದೇಶಪ್ರೇಮ. ಪೈಲಟ್ ಆಗಿ ಜೀವ ಉಳಿಸುವುದು, ಯೋಧನಾಗಿ ಹೋರಾಡುವುದು, ನಾವು ಕೊಡಗಿನ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತುವುದು ಕೂಡ ದೇಶಪ್ರೇಮವೇ. ಕ್ಯಾಪ್ಟನ್ ಸ್ಮಿತ್ ಮಚ್ಛರ್ ಅವರಿಗೆ ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇವೆ. ಅವರ ಶೌರ್ಯಕ್ಕೆ ಒಂದು ಸಲಾಂ.








