ಹುಣಸೂರು:(ನಂಜಾಪುರ ಮನುಕುಮಾರ್): ಗಡಿಯಲ್ಲಿ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ದೇಶದ ಸಾರ್ವಭೌಮತೆ ಹಾಗೂ ಭದ್ರತೆಗಾಗಿ ಕರ್ತವ್ಯ ನಿರ್ವಹಿಸಿ 18ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತಿ ನಂತರ ಗ್ರಾಮಕ್ಕೆ ಆಗಮಿಸಿದ ಯೋಧನನ್ನು ತಾಲೂಕಿನ ಬಿಳಿಕೆರೆ ಹೋಬಳಿಯ ಉಯಿಗೊಂಡನಹಳ್ಳಿ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಪೂರ್ಣ ಕುಂಭದ ಮೂಲಕ ಅದ್ದೂರಿ ಸ್ವಾಗತ ನೀಡಿದರು.
ಜಗನಾಯಕ ಅವರು ತಮ್ಮ ಸೇವಾ ಅವಧಿಯಲ್ಲಿ ಜಮ್ಮು-ಕಾಶ್ಮೀರ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ಸುಮಾರು 18 ವರ್ಷಗಳ ಸುದೀರ್ಘ ಸೇವೆಯ ಬಳಿಕ ನಿವೃತ್ತರಾಗಿದ್ದಾರೆ. ಸ್ವಗ್ರಾಮಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ಗ್ರಾಮದ ನಾಗರಾಜನಾಯಕ- ಕಮಲಮ್ಮ ದಂಪತಿ ಪುತ್ರ ನಿವೃತ್ತ ಯೋಧ ಜಗ ನಾಯಕರವರು ಶುಕ್ರವಾರದಂದು ಗ್ರಾಮದ ಹೆಬ್ಬಾಲಿಗೆ ಬಂದಿಳಿಯುತ್ತಿದ್ದಂತೆ ನೆರೆದಿದ್ದ ಗ್ರಾಮಸ್ಥರು, ಸ್ನೇಹಿತರು, ಕುಟುಂಬಸ್ಥರು ಮಂಗಳವಾದ್ಯದೊಂದಿಗೆ ಪುಷ್ಪಾರ್ಚನೆಗೈದು ಪಟಾಕಿ ಸಿಡಿಸಿ, ಘೋಷಣೆ ಮೊಳಗಿಸಿ, ಪೂರ್ಣಕುಂಬದೊಂದಿಗೆ ಸ್ವಾಗತಿಸಿ, ಮೆರವಣಿಗೆ ನಡೆಸಿದರು.
ನಂತರ ಗ್ರಾಮ ಪಂಚಾಯ್ತಿ ಕಚೇರಿ ಆವರಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಗ್ರಾಮಸ್ಥರು, ಸ್ನೇಹಿತರು ದೇಶಕ್ಕಾಗಿ ಸೇವೆ ಸಲ್ಲಿಸಿ ಗ್ರಾಮಕ್ಕೆ ಹೆಮ್ಮೆ ತಂದಿದ್ದೀರೆಂದು ನಿವೃತ್ತ ಯೋಧ ಜಗ ನಾಯಕರನ್ನು ಅಭಿಮಾನದಿಂದ ಸನ್ಮಾನಿಸಿದರು.

ಈ ವೇಳೆ ಮಾತನಾಡಿದ ಟಿ.ಎ.ಪಿ.ಎಂ.ಎಸ್ ಮಾಜಿ ಅಧ್ಯಕ್ಷ ಬಸವಲಿಂಗಯ್ಯ ದೇಶಕ್ಕಾಗಿ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತರಾಗುವ ಸೈನಿಕರನ್ನು ಗೌರವಿಸುವುದು ನಮ್ಮೆಲ್ಲರ ಜವಬ್ದಾರಿಯಾಗಿದೆ. ಸೈನಿಕ- ಕೃಷಿಕರು ಎರಡು ಕಣ್ಣುಗಳಿಂದAತೆ ರೈತ ಅನ್ನ ನೀಡಿದರೆ, ಸೈನಿಕ ದೇಶ-ನಮ್ಮನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಾರೆ. ಇವರು ಯಾವಾಗಲೂ ಸದಾ ಸ್ಮರಣಿಯವೆಂದರು.
ಗ್ರಾ.ಪಂ.ಮಾಜಿ ಅಧ್ಯಕ್ಷ ದೇವರಾಜ್ ಮಾತನಾಡಿ ಉಯಿಗೊಂಡನಹಳ್ಳಿಯಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಸೇವೆ ಸಲ್ಲಿಸುತ್ತಿರುವುದು ಗ್ರಾಮದ ಹೆಮ್ಮೆ, ಇವರ ಸೇವೆಯನ್ನು ಬಳಸಿಕೊಳ್ಳುತ್ತೇವೆಂದರು. ಪಿಡಿಒ ಶೇಖರ್ ಸೈನಿಕರ ಊರಿನಲ್ಲಿ ಕೆಲ ಮಾಡುವುದಕ್ಕೆ ಖುಷಿಯಾಗಲಿದೆ ಎಂದರು.

ಹುಂಡಿಮಾಳ ವ್ಯವಸಾಯ ಸಹಕಾರ ಸಂಘದ ಅಧ್ಯಕ್ಷ ಪ್ರವೀಣ್‌ಗೌಡ, ಮಾಜಿ ಅಧ್ಯಕ್ಷ ಕಿರಣ್, ಯಜಮಾನರಾದ ರಾಮೇಗೌಡ, ಬಲರಾಮೇಗೌಡ, ಮುಂಖಡರಾದ ಶ್ರೀನಿವಾಸ್, ಸ್ವಾಮಿಗೌಡ,ಮಹದೇವ, ಸೇರಿದಂತೆ ಗ್ರಾಮಸ್ಥರು ಸೇರಿದಂತೆ ಸಾಕಷ್ಟು ಮಂದಿ ಭಾಗವಹಿಸಿದ್ದರು. ಇದೇ ಸಮಾರಂಭದಲ್ಲಿ ನಿವೃತ್ತ ಸೈನಿಕರಾದ ನಿವೃತ್ತ ಯೋಧರಾದ ರಾಜಶೇಖರ್, ಎಚ್.ಎಸ್.ಮಂಜುನಾಥ್, ರಾಜೇಶ್, ಹರೀಶ್‌ರನ್ನು ಹಾಗೂ ಜಗನ್‌ನಾಯಕರ ತಂದೆ-ತಾಯಿ ನಾಗರಾಜನಾಯಕ-ಕಮಲಮ್ಮರನ್ನು ಗ್ರಾಮಸ್ಥರು ಸನ್ಮಾನಿಸಿದರು.
ಆಪರೇಷನ್ ಸಿಂಧೂರದಲ್ಲಿ ಭಾಗಿಯಾಗಿದ್ದೆ…
ತಮ್ಮೂರಿನ ಗೌರವ ಸ್ವೀಕರಿಸಿದ ನಿವೃತ್ತ ಯೋಧ ಜಗನಾಯಕ ಮಾತನಾಡಿ ತಾವು ಬೆಳಗಾಂ ರೆಜಿಮೆಂಟ್ ಹುದ್ದೆಗೆ ಆಯ್ಕೆಯಾಗಿದ್ದು, ದೆಹಲಿಯಲ್ಲಿ ಎರಡು, ಉತ್ತರಕಾಂಡ-ಅಸ್ಸಾಂನಲ್ಲಿ ತಲಾ ಮೂರು ಹಾಗೂ ಜಮ್ಮು-ಕಾಶ್ಮೀರದಲ್ಲಿ 9ವರ್ಷ ಸೇವೆ ಸಲ್ಲಿಸಿದ್ದೇವೆ. ಅದರಲ್ಲೂ ಪಹಲ್ಗಾಮ್ ದುರ್ಘಟನೆ ಸಂಬಂಧ ನಡೆದ ಆಪರೇಷನ್ ಸಿಂಧೂರದಲ್ಲಿ ಭಾಗಿಯಾಗಿರುವ ಬಗ್ಗೆ ಹೆಮ್ಮೆ ಇದೆ. ನಿವೃತ್ತರಾದ ನನ್ನನ್ನು ಗ್ರಾಮಸ್ಥರು ನೀಡಿರುವ ಪ್ರೀತಿಯ ಗೌರವ, ಅಭಿಮಾನ ಮರೆಯಲಾಗದ್ದೆಂದರು. ಪತ್ನಿ ಲಾವಣ್ಯ ಮಕ್ಕಳಾದ ಮಾನಸ-ಲೋಹಿತ್ ಜೊತೆಗಿದ್ದರು. .








