ನಿನ್ನೆ ಮೊನ್ನೆಯವರೆಗೆ ಜೊತೆಯಲ್ಲಿ ಒಡನಾಡಿ ತಿರುಗುತ್ತಿದ್ದವರು. ಒಂದೇ ಬೀದಿಯಲ್ಲಿ ಚಡ್ಡಿ ಹಾಕಿಕೊಂಡು ಆಟವಾಡಿದವರು. ಒಂದೇ ಶಾಲೆಯಲ್ಲಿ ಒಂದೇ ಬೆಂಚಿನಲ್ಲಿ ಕೂತವರು. ಒಂದೇ ತಟ್ಟೆಯಲ್ಲಿ ಊಟ ಮಾಡಿದವರು. ಇಂದು ಅವರೇ ಹಣದಿಂದ ಬೆಳೆದು ನಿಂತಿದ್ದಾರೆ. ದೊಡ್ಡ ದೊಡ್ಡ ಮನೆಗಳು, ಕಾರುಗಳು, ಬಂಗಲೆಗಳು. ಅವರ ನಡಿಗೆ ಬದಲಾಗಿದೆ, ನುಡಿ ಬದಲಾಗಿದೆ, ನೋಟ ಬದಲಾಗಿದೆ.
ಆದರೆ ಅದೇ ಬೀದಿಯಲ್ಲಿ ಇನ್ನೊಂದು ವರ್ಗವಿದೆ. ಅವರೂ ಅದೇ ಗೆಳೆಯರು. ಅವರೂ ಅದೇ ಶಾಲೆಯಲ್ಲಿ ಓದಿದವರು. ಆದರೆ ಅವರು ಹಣ ಸಂಪಾದನೆ ಮಾಡಲಿಲ್ಲ. ಹಣದ ಹಿಂದೆ ಓಡಲಿಲ್ಲ. ಅವರು ಸಮಾಜಕ್ಕಾಗಿ ಹಗಲು ರಾತ್ರಿ ಯೋಚನೆ ಮಾಡುತ್ತಾ ಕುಳಿತಿದ್ದಾರೆ. ಊರಿನ ಕಸ ತುಂಬಿದೆ ಹೇಗೆ ತೆಗಿಸಬೇಕು? ಊರಿನ ರಸ್ತೆ ಹಾಳಾಗಿದೆ ಹೇಗೆ ಸರಿಪಡಿಸಬೇಕು? ನಮ್ಮ ಸಮುದಾಯದ ಹುಡುಗನಿಗೆ ಕೆಲಸವಿಲ್ಲ ಹೇಗೆ ಕೊಡಿಸಬೇಕು? ಎಂದು ಯೋಚಿಸುತ್ತಾ ಯೋಜನೆ ರೂಪಿಸುತ್ತಿದ್ದಾರೆ.

ಇವರಿಗೆ ಸ್ವಂತ ಬ್ಯಾಂಕ್ ಬ್ಯಾಲೆನ್ಸ್ ಇಲ್ಲದಿರಬಹುದು. ಆದರೆ ಇವರ ತಲೆಯಲ್ಲಿ ಊರಿನ ಭವಿಷ್ಯದ ಬ್ಯಾಲೆನ್ಸ್ ಇದೆ. ಇವರು ಕೋಟ್ಯಧೀಶ್ವರರಲ್ಲ, ಆದರೆ ಯೋಚನೆಯಲ್ಲಿ ಶ್ರೀಮಂತರಾಗಿದ್ದಾರೆ. ತಾನು ಕಷ್ಟಪಟ್ಟರೂ ಪರವಾಗಿಲ್ಲ, ಊರು ಉದ್ದಾರವಾಗಬೇಕು, ನಾನು ನೋವು ಅನುಭವಿಸಿದರೂ ಪರವಾಗಿಲ್ಲ ಸಮಾಜಕ್ಕೆ ಒಳ್ಳೆಯದಾಗಬೇಕು ಎನ್ನುವ ಮನಸ್ಥಿತಿ ಇವರದ್ದು. ಇಂತಹ ಮನಸ್ಥಿತಿ ಎಲ್ಲರಿಗೂ ಬರುವುದಿಲ್ಲ. ಇದು ಹುಟ್ಟಿನಿಂದ ಬರುವ ಸಂಸ್ಕಾರ. ಈ ಶ್ರೀಮಂತಿಕೆ ಪಡೆಯಲು ಎಲ್ಲರಿಂದಲೂ ಆಗುವುದಿಲ್ಲ, ಇದಕ್ಕೆ ಅಮೋಘವಾದ ಇಚ್ಛಾಶಕ್ತಿ ಇರಬೇಕು.
ದುರಂತ ಏನು ಗೊತ್ತಾ? ಇಂದಿನ ಸಮಾಜ ಹಣವಂತರನ್ನು ತಕ್ಷಣ ಗೌರವಿಸುತ್ತದೆ. ಹಣದಿಂದ ಬೆಳೆದು ನಿಂತವರಿಗೆ ತಕ್ಷಣ ಸನ್ಮಾನ, ಮುಂದಿನ ಸಾಲಿನ ಕುರ್ಚಿ, ಮೈಕ್. ಆದರೆ ಸಮಾಜಕ್ಕಾಗಿ ಹಗಲಿರುಳು ಯೋಚಿಸುವವರನ್ನು ಸಮಾಜ ತುಂಬಾ ತಡವಾಗಿ ಗುರುತಿಸುತ್ತದೆ. ಅವರು ಸತ್ತ ಮೇಲೆ, ಅವರು ಇಲ್ಲವಾದ ಮೇಲೆ ಅವರ ಫೋಟೋಗೆ ಹಾರ ಹಾಕುತ್ತದೆ. ಬದುಕಿರುವಾಗ ಅವರನ್ನು ಯಾರೂ ಕೇಳುವುದಿಲ್ಲ. ಇದು ಇಂದಿನ ಸಮಾಜದಲ್ಲಿ ಆಗುತ್ತಿರುವ ಕಟು ಸತ್ಯ.

ಒಂದು ಮುಷ್ಟಿಯಷ್ಟು ಇರುವಂತಹ ಒಂದು ಜನಾಂಗ ನಮ್ಮದು. ಬೆರಳೆಣಿಕೆಯಷ್ಟು ಜನಸಂಖ್ಯೆ. ಇಂತಹ ಪುಟ್ಟ ಜನಾಂಗದಲ್ಲಿ ಪರಸ್ಪರ ದ್ವೇಷ ಏತಕ್ಕಾಗಿ? ನಾನು ಅನ್ನುವ ಅಹಂ ಏತಕ್ಕಾಗಿ? ನೀವು ಮಾಡುತ್ತಿರುವ ಈ ದ್ವೇಷ ಸಮಾಜದ ಉದ್ಧಾರಕ್ಕಾಗಿ ಅಂತೂ ಅಲ್ಲ. ಇದು ಕೇವಲ ತಮ್ಮ ತಮ್ಮ ಸ್ವಾರ್ಥ ಸಾಧನೆಗಾಗಿ. “ಯಾರಿಂದಲೂ ನನಗೆ ಲಾಭ ಆಗುತ್ತಿದೆ, ಹಾಗಾಗಿ ನಾನು ದೊಡ್ಡವನು” ಎನ್ನುವ ಅಹಂ. ನನ್ನಿಂದಲೇ ಎಲ್ಲವೂ ನಡೆಯುತ್ತಿದೆ ಎನ್ನುವ ಭ್ರಮೆ.
ಒಳಗಡೆ ಒಂದು ಮುಖ, ಹೊರಗಡೆ ಒಂದು ಮುಖ ಇಟ್ಟುಕೊಂಡು ಬದುಕುವುದು ಇಂದು ಫ್ಯಾಷನ್ ಆಗಿದೆ. ತಮ್ಮ ಸ್ವಂತ ಲಾಭಕ್ಕೋಸ್ಕರ ಕುಟುಂಬವನ್ನು, ಊರಿನವರನ್ನು, ನಾಡಿನವರನ್ನು ದ್ವೇಷಿಸುವವರು ಹೆಚ್ಚಾಗಿದ್ದಾರೆ. ನಿನ್ನೆ ತನಕ ಅಣ್ಣ ಎಂದವರು ಇಂದು ಆಸ್ತಿಗಾಗಿ ವೈರಿಯಾಗಿದ್ದಾರೆ. ಇದು ನಮ್ಮ ಯುಗದ ಅಂತ್ಯದ ಕಾಲದ ಸೂಚನೆಯಂತೆ ಕಾಣುತ್ತದೆ. ರಾಜಕೀಯ ಎನ್ನುವ ದಾಳಕ್ಕೆ ಸಿಕ್ಕಿ ನಾವು ತಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ. ಪಕ್ಷ ಮುಖ್ಯವಾಯಿತು, ಬಾಂಧವ್ಯ ಮೂಲೆಗುಂಪಾಯಿತು. ಬಾವುಟದ ಬಣ್ಣದ ಮುಂದೆ ರಕ್ತದ ಬಣ್ಣ ಮಸುಕಾಗುತ್ತಿದೆ.

ಈ ಸಮಾಜದಲ್ಲಿ ಎರಡು ರೀತಿಯ ದುಡ್ಡಿದೆ. ಒಂದು ಕಷ್ಟಪಟ್ಟು ಬೆವರು ಸುರಿಸಿ ಗಳಿಸಿದ ದುಡ್ಡು. ಇನ್ನೊಂದು ಅಡ್ಡದಾರಿ, ವಾಮಮಾರ್ಗದಿಂದ ಬಂದ ದುಡ್ಡು. ಕಷ್ಟಪಟ್ಟು ದುಡಿದವನು ಎಂದಿಗೂ ಯಾರನ್ನೂ ಹೀಯಾಳಿಸುವುದಿಲ್ಲ. ಆದರೆ ವಾಮಮಾರ್ಗದಿಂದ ಬಂದ ಹಣ ಮನುಷ್ಯನನ್ನು ಕುರುಡನನ್ನಾಗಿ ಮಾಡುತ್ತದೆ. “ನಾನು, ನನ್ನದು, ನಾನು ಕೋಟ್ಯಧೀಶ್ವರ” ಎನ್ನುವ ಅಹಂಕಾರ ಹುಟ್ಟಿಸುತ್ತದೆ. ಆ ಅಹಂಕಾರದಿಂದಲೇ ಇನ್ನೊಬ್ಬರಿಗೆ ಕಿರುಕುಳ ಕೊಟ್ಟು ಅದರಲ್ಲಿ ವಿಕೃತ ಸುಖ ಪಡುವ ಮನಸ್ಥಿತಿ.
ಜನಗಳೇ, ಬದಲಾಗಿ. ದಯವಿಟ್ಟು ನಿಮ್ಮ ಅಹಂಕಾರದಿಂದ ಹೊರಗಡೆ ಬನ್ನಿ. ದ್ವೇಷದಿಂದ ಹೊರಗಡೆ ಬನ್ನಿ. ಎಲ್ಲರನ್ನೂ ಸಮಾನ ಮನಸ್ಸಿನಿಂದ ನೋಡಿ. “ನೀನು ಹಾಗೆ ಮಾಡಬೇಡ, ನೀನು ಹೀಗೆ ಮಾಡಬೇಡ” ಎಂದು ಬೆದರಿಸುವ ಕಲೆಗಳನ್ನು ಯಾರೂ ರೂಢಿಸಿಕೊಳ್ಳಬೇಡಿ.
ಎಲ್ಲರೂ ಒಮ್ಮೆ ಕೂತು ಯೋಚಿಸಿ. ತಾಯಿಯ ಗರ್ಭದಿಂದ ಸಣ್ಣ ಮಗುವಾಗಿ ಹುಟ್ಟಿದಾಗ ನಾವು ಬರಿಗೈಯಲ್ಲಿ ಬಂದೆವು. ತಂದೆ ತಾಯಿಗಳು ನಮಗೆ ಎಂದಾದರೂ ದ್ವೇಷ ಕಲಿಸಿದರೇ? ಇಲ್ಲ. ಅವರು ನಮಗೆ ಭಾಷೆ ಕಲಿಸಿದರು, ದ್ವೇಷ ಕಲಿಸಲಿಲ್ಲ. ಅವರು ನಮಗೆ ರಾಜಕೀಯ ಕಲಿಸಲಿಲ್ಲ, ಸಂಸ್ಕಾರ ಕಲಿಸಿದರು. ಅವರು “ಯಾರನ್ನಾದರೂ ಬೆದರಿಸು” ಅಂತ ಹೇಳಲಿಲ್ಲ, “ಎಲ್ಲರನ್ನು ಸಮಾನವಾಗಿ ಕಾಣು” ಅಂತ ಹೇಳಿಕೊಟ್ಟರು. ಹೀಗಿರುವಾಗ ಜೀವನದ ಒಂದು ಮಧ್ಯದ ಹಂತ ತಲುಪಿದಾಗ ಈ ದ್ವೇಷಗಳು ಏಕೆ ಬೇಕು?

ಮನುಷ್ಯನ ಜೀವನ ನಶ್ವರ. ಯಾರೂ ಶಾಶ್ವತವಾಗಿ ಈ ಭೂಮಿಯ ಮೇಲೆ ಇರುವುದಿಲ್ಲ. ಒಂದು ವೇಳೆ ಮನುಷ್ಯ ಶಾಶ್ವತವಾಗಿ ಈ ಭೂಮಿಯ ಮೇಲೆ ಇರುವಂತಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು? ಮನುಷ್ಯನನ್ನು ಮನುಷ್ಯನೇ ಕಚ್ಚಿ ತಿನ್ನುತ್ತಿದ್ದರೂ ಆಶ್ಚರ್ಯವಿರುತ್ತಿರಲಿಲ್ಲ. ಆದರೆ ದೇವರು ದೊಡ್ಡವನು. ಅವನು ಮನುಷ್ಯನನ್ನು ಈ ಭೂಮಿಯ ಮೇಲೆ ಶಾಶ್ವತವಾಗಿ ಇರದಂತೆ ನೋಡಿಕೊಂಡಿದ್ದಾನೆ. ನಮ್ಮದು ಕ್ಷಣಿಕ ಜೀವನ. ಇವತ್ತು ಚೆನ್ನಾಗಿ ಮಾತನಾಡಿಸಿದವರು ನಾಳೆ ನಮಗೆ ಸಿಗುವುದಿಲ್ಲ. ಸಣ್ಣ ಸಣ್ಣ ವಯಸ್ಸಿನಲ್ಲಿ ಅಕಾಲಿಕ ಮರಣ ಹೊಂದುತ್ತಿದ್ದಾರೆ. ಆದರೂ ನಮ್ಮವರಿಗೆ ಬುದ್ಧಿ ಬರುತ್ತಿಲ್ಲ.
ಒಂದು ಸಂಸಾರವನ್ನು ಮೇಲೆ ತರಲು ಸಾಧ್ಯವಿಲ್ಲ ಅಂದರೂ ಪರವಾಗಿಲ್ಲ, ಆದರೆ ಅವರಿಗೆ ಹಿಂಸೆ ಕೊಡಬಾರದು. ಅವರ ಬದುಕಿಗೆ ಕೊಳ್ಳಿ ಇಡಬಾರದು. ಸಾಧ್ಯವಾದರೆ ಏನಾದರೂ ಸಹಾಯ ಮಾಡಿ. ಅದು ಬಿಟ್ಟು “ನಾನು” ಅನ್ನುವ ಅಹಂ ಹಾಗೂ “ನನ್ನಿಂದಲೇ” ಅನ್ನುವ ಅಹಂಕಾರದಿಂದ ಮನುಕುಲಕ್ಕೆ ತೊಂದರೆ ಕೊಡಬಾರದು.

ನಾವು ಇದ್ದರೂ ಇಲ್ಲದಿದ್ದರೂ ನಮ್ಮ ಸಮಾಜ ಇರಬೇಕು, ನಮ್ಮ ಜನಾಂಗ ಇರಬೇಕು, ನಮ್ಮ ಸಂಸ್ಕೃತಿ ಉಳಿಯಬೇಕು. ದ್ವೇಷ ನಶ್ವರ, ಪ್ರೀತಿ ಅಮರ. ಹಣ ನಶ್ವರ, ಬಾಂಧವ್ಯ ಅಮರ. ಅಧಿಕಾರ ನಶ್ವರ, ಸಂಸ್ಕಾರ ಅಮರ. ನಮಗೆ ಹನುಮಂತನ ಅಂಶ ಬೇಕು. ಹನುಮಂತನಲ್ಲಿ ಅಗಾಧ ಶಕ್ತಿ ಇತ್ತು, ಆದರೆ ಅಹಂಕಾರ ಇರಲಿಲ್ಲ. ಅವನು ಬಲಶಾಲಿ, ಆದರೆ ವಿನಯಶಾಲಿ. ಅವನು ಎಲ್ಲರನ್ನು ರಕ್ಷಿಸಿದನು, ಯಾರಿಗೂ ಬೆದರಿಕೆ ಹಾಕಲಿಲ್ಲ. ತನ್ನ ಶಕ್ತಿಯನ್ನು ಸಮಾಜದ ಒಳಿತಿಗಾಗಿ ಬಳಸಿದನು, ಸ್ವಾರ್ಥಕ್ಕಾಗಿ ಅಲ್ಲ. ನಾವೂ ಹಾಗೆಯೇ ಬದುಕಬೇಕು. ಶಕ್ತಿ ಇದ್ದರೆ ಅಹಂಕಾರ ಬರಬಾರದು, ಭಕ್ತಿ ಬರಬೇಕು. ಹಣ ಇದ್ದರೆ ದ್ವೇಷ ಬರಬಾರದು, ದಾನ ಗುಣ ಬರಬೇಕು. ಇವನನ್ನ ಹೀಗೆ ಮುಗಿಸಲಿ ಅನ್ನುವ ದುರಂಕಾರ ಬರಬಾರದು.
ನಾವು ಹುಟ್ಟಿದಾಗ ಬರಿಗೈಯಲ್ಲಿ ಬಂದೆವು, ಹೋಗುವಾಗ ಬರಿಗೈಯಲ್ಲೇ ಹೋಗುತ್ತೇವೆ. ಜೊತೆಯಲ್ಲಿ ಬರುವುದು ನಾವು ಮಾಡಿದ ಒಳ್ಳೆಯ ಕೆಲಸ ಮಾತ್ರ. ಒಂದು ಮುಷ್ಟಿಯಷ್ಟು ಇರುವ ಜನಾಂಗ ನಮ್ಮದು. ನಾವು ಒಡೆದು ಹೋದರೆ ನಮ್ಮನ್ನು ಕೇಳುವವರು ಯಾರೂ ಇಲ್ಲ. ನಾವು ಒಂದಾಗಿ ಇದ್ದರೆ ಮಾತ್ರ ನಮ್ಮ ಉಳಿವು, ನಮ್ಮ ಸಂಸ್ಕೃತಿಯ ಉಳಿವು.

ಇದು ಯಾವುದೇ ಒಂದು ಜನಾಂಗದ ವಿಷಯವಲ್ಲ, ಇಂದಿನ ಸಮಾಜದಲ್ಲಿ ಪ್ರತಿಯೊಂದು ಜನಾಂಗದ ಮೂಲಭೂತ ಸಮಸ್ಯೆ. ಈ ಬರಹ ಯಾವುದೇ ಒಂದು ವ್ಯಕ್ತಿ, ಪಕ್ಷ, ಜಾತಿ ಅಥವಾ ಜನಾಂಗವನ್ನು ದೂರುವ ಉದ್ದೇಶದಿಂದ ಬರೆದಿದ್ದಲ್ಲ. ಇದು ಇಂದಿನ ಸಾಮಾಜಿಕ ವ್ಯವಸ್ಥೆಯ ಕನ್ನಡಿ. ಈ ನೋವು, ಈ ದ್ವೇಷ, ಈ ಅಹಂಕಾರ ಎಲ್ಲ ಸಮಾಜದಲ್ಲೂ ಇದೆ. ಆದ್ದರಿಂದ ಈ ಸಂದೇಶ ಸಮಾಜದ ಪ್ರತಿಯೊಬ್ಬ ಮನುಷ್ಯನಿಗೂ, ಪ್ರತಿಯೊಂದು ಕುಟುಂಬಕ್ಕೂ ಅನ್ವಯಿಸುತ್ತದೆ.
ಕಾಯಪಂಡ ವಿಷ್ಣುನಾಚಪ್ಪ ಅವರು ಬರೆದಿರುವ ಸಾಮಾಜಿಕ ಕಳಕಳಿಯ ಇನ್ನಷ್ಟು ಲೇಖನಗಳಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ… ಓದಿ









