ArticlesDasaraLatest

ಮೈಸೂರಿನ ಆಕರ್ಷಣೆ ಸಾರೋಟು…  ಟಾಂಗಾ ನೇಪಥ್ಯಕ್ಕೆ… ಸಾರೋಟು ಮುನ್ನಲೆಗೆ… ಏನಿದರ ವಿಶೇಷ?

ದಸರಾ ಸಮಯದಲ್ಲಿ ಇಡೀ ಮೈಸೂರು ವಿದ್ಯುದ್ದೀಪದ ಬೆಳಕಿನಲ್ಲಿ ಮಿನುಗುತ್ತಿದ್ದರೆ ಆ ಬೆಳಕಿನಲ್ಲಿ ಜನಜಂಗುಳಿ ನಡುವೆ ಟಕ ಟಕ ಸದ್ದು ಮಾಡುತ್ತಾ ಬಣ್ಣದ ಚಿತ್ತಾರಗಳಲ್ಲಿ ಪ್ರವಾಸಿಗರನ್ನು ಹೊತ್ತು ಸಾಗುವ ಸಾರೋಟ್‌ಗಳು ನಮ್ಮನ್ನು ಸೆಳೆಯುತ್ತವೆ.

ಮೊದಲೆಲ್ಲ ಎಲ್ಲೆಡೆ ಟಾಂಗಾಗಳು ಕಾಣಿಸುತ್ತಿದ್ದವು. ಈ ಟಾಂಗಾ ಗಾಡಿಗಳು ನೇಪಥ್ಯಕ್ಕೆ ಸರಿದಿದ್ದು ಅವುಗಳ ಸಾರೋಟುಗಳು ರಸ್ತೆಗಿಳಿದಿವೆ.

ಮೈಸೂರು ದಸರಾಕ್ಕೆ ಸಂಬಂಧಿಸಿದ ಲೇಖನಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಈಗ ನಗರದಲ್ಲಿ ಆಕರ್ಷಕವಾದ ಸಾರೋಟುಗಳು ಓಡಾಡುವುದರೊಂದಿಗೆ ಪ್ರವಾಸಿಗರ ಮನಸೆಳೆಯುತ್ತಿವೆ. ಹಿಂದೆ ಟಾಂಗಾದಲ್ಲಷ್ಟೆ ಓಡಾಡುತ್ತಿದ್ದ ಪ್ರವಾಸಿಗರಿಗೆ ಇದೀಗ ಸಾರೋಟಿನಲ್ಲಿ ಕುಳಿತು ನಗರಪ್ರದಕ್ಷಿಣೆ ಮಾಡುತ್ತಿದ್ದಾರೆ. ಅದರಲ್ಲೂ ಅರಮನೆಯನ್ನು ಈ ಸಾರೋಟುನಲ್ಲಿ ಕುಳಿತು ನೋಡುವುದೇ ಮಜಾ..

ಇತಿಹಾಸವನ್ನು ಮೆಲುಕು ಹಾಕಿದರೆ ಮೈಸೂರಿನಲ್ಲಿ ಮಹಾರಾಜರ ಕಾಲದಲ್ಲಿ ಟಾಂಗಾ ಗಾಡಿಗಳೇ ಸಂಚಾರ ಸಾಧನಗಳಾಗಿದ್ದವು. ಸಾಮಾನ್ಯ ಜನರು ಟಾಂಗಾ ಗಾಡಿಗಳಲ್ಲಿ ತೆರಳುತ್ತಿದ್ದರೆ, ಮಹಾರಾಜರು ಸಾರೋಟಿನಲ್ಲಿ ರಾಜಗಾಂಭೀರ್ಯದಿಂದ ಪ್ರಯಾಣಿಸುತ್ತಿದ್ದರು ಎನ್ನಲಾಗುತ್ತಿದೆ.

ಮೈಸೂರಿನಲ್ಲಿ ವಾಹನ ಸೌಲಭ್ಯವಿಲ್ಲದ ದಿನಗಳಲ್ಲಿ ಎತ್ತಿನ ಬಂಡಿಯಲ್ಲಿಯೇ ಜನರು ಸಾಗುತ್ತಿದ್ದರಾದರೂ ಟಾಂಗಾ ಗಾಡಿಗಳು ಬಂದಿದ್ದು ಮಹಾರಾಜರ ಕಾಲದಲ್ಲಿ. ಅಂದರೆ 1897ರಲ್ಲಿ ಎಂದು ಹೇಳಲಾಗಿದೆ. ಅಂದಿನ ದಿನಗಳಲ್ಲಿ ಟಾಂಗಾ ಗಾಡಿಗಳು ಹೆಚ್ಚಿನ ಜನಪ್ರಿಯತೆ ಪಡೆದಿದ್ದವಲ್ಲದೆ, ಟಾಂಗಾ ಗಾಡಿಗಳಲ್ಲಿ ತೆರಳುವುದೆಂದರೆ ಅದೊಂದು ಪ್ರತಿಷ್ಠೆಯ ಸಂಕೇತವಾಗಿತ್ತು.

ಆಗ ಇದರ ಉಸ್ತುವಾರಿಯನ್ನು ಮುನ್ಸಿಪಾಲಿಟಿ ವಹಿಸಿಕೊಂಡಿತ್ತು. ದೂರದ ಊರುಗಳಿಗೆ ತೆರಳುವವರು ಮುನ್ಸಿಪಾಲಿಟಿಗೆ  ಬಾಡಿಗೆ ನೀಡಿ  ಟಾಂಗಾ ಗಾಡಿಯಲ್ಲಿ ಹೋಗಬೇಕಾಗಿತ್ತು. ಆಗ ಮೈಸೂರು ನಗರದಲ್ಲಿ ಸುಮಾರು ಆರು ನೂರಕ್ಕೂ ಹೆಚ್ಚಿನ ಟಾಂಗಾ ಗಾಡಿಗಳು ಓಡಾಡುತ್ತಿದ್ದವಲ್ಲದೆ ಕೊಳ್ಳೇಗಾಲ, ಚಾಮರಾಜನಗರ, ನಂಜನಗೂಡು, ಕೆ.ಆರ್.ನಗರಗಳಲ್ಲಿಯೂ ಜನಪ್ರಿಯತೆಯನ್ನು ಗಳಿಸಿದ್ದವು. ಮುಂಬಯಿಯ ವಿಕ್ಟೋರಿಯ, ಮೈಸೂರಿನ ಮಹಾರಾಜರ ಷಾ ಪಂಸದ್ ಟಾಂಗಾಗಳು ಖ್ಯಾತಿ ಪಡೆದಿದ್ದವು. ಈ ಟಾಂಗಾ ಗಾಡಿಗಳಲ್ಲಿ ದೀಪದ ವ್ಯವಸ್ಥೆಯೂ ಇತ್ತು.

ದಸರಾ ಸಂದರ್ಭದಲ್ಲಿ  ಟಾಂಗಾಗಾಡಿಗಳಿಗೂ ಗೌರವ ಸ್ಥಾನ ನೀಡಲಾಗುತ್ತಿತ್ತಲ್ಲದೆ, ದಸರಾ ಮೆರವಣಿಗೆಯಲ್ಲಿಯೂ ತಮ್ಮದೇ ಪೋಷಾಕು ಧರಿಸಿ ಮುನ್ನಡೆಯುತ್ತಿದ್ದರು. ಆದರೆ ವಾಹನಗಳ ಭರಾಟೆ ಹೆಚ್ಚಾಗುತ್ತಿದ್ದಂತೆಯೇ ಟಾಂಗಾ ಗಾಡಿಗಳಲ್ಲಿ ತೆರಳುವವರ ಸಂಖ್ಯೆ ಸಂಪೂರ್ಣ ಇಳಿಮುಖವಾಯಿತು.

ಟಾಂಗಾ ಗಾಡಿ ಓಡಿಸಿ ಬದುಕು ಸಾಗಿಸುವುದು ಕಷ್ಟ ಎಂದರಿತ ಕೆಲವರು ಆಟೋ ಸೇರಿದಂತೆ ಇತರ ವಾಹನಗಳ  ಚಾಲಕರಾದರೆ, ಮತ್ತೆ ಕೆಲವರು ಜೀವನೋಪಾಯಕ್ಕಾಗಿ ಪರ್ಯಾಯ ಉದ್ಯೋಗ ಕಂಡುಕೊAಡರು. ಇದರಿಂದಾಗಿ ನಗರದಲ್ಲಿ ಟಾಂಗಾ ಗಾಡಿಗಳ ಸಂಖ್ಯೆ ಗಣನೀಯವಾಗಿ ಇಳಿಯತೊಡಗಿತು.

ಇಂದು ಕೇವಲ ಪ್ರವಾಸಿಗರನ್ನು ಕರೆದೊಯ್ಯಲಷ್ಟೆ ಬಳಕೆಯಾಗುತ್ತಿರುವುದರಿಂದ ಅರಮನೆ, ಮೃಗಾಲಯ ಮುಂತಾದ ಕಡೆ ನಿಂತು ಪ್ರವಾಸಿಗರನ್ನು ಬಲತ್ಕಾರವಾಗಿ ತಮ್ಮ ಬಳಿಗೆ ಕರೆದು ನಗರಪ್ರದಕ್ಷಿಣೆ ನಡೆಸಬೇಕಾದ ಅನಿವಾರ್ಯತೆ ಬಂದಿದೆ. ಅದರಲ್ಲೂ ಹಿಂದಿನ ಟಾಂಗಾ ಗಾಡಿಗೆ ಪ್ರವಾಸಿಗರು ಹತ್ತಲು ಹಿಂದೇಟು ಹಾಕುತ್ತಿದ್ದು, ಸಾರೋಟು ಕಡೆಗೆ ಮುಖ ಮಾಡುತ್ತಾರೆ. ಹೀಗಾಗಿಯೇ ಮೈಸೂರಿನಲ್ಲೀಗ ಸಾರೋಟುಗಳು ಜನಪ್ರಿಯವಾಗುತ್ತಿವೆ.

ಹಿಂದಿನ ಟಾಂಗಾ ಗಾಡಿಗಳಿಗೆ ಹೋಲಿಸಿದರೆ ಸಾರೋಟುಗಳು ಆಕರ್ಷಣೀಯವಾಗಿವೆ ಹಾಗೂ ಹೆಚ್ಚು ಜನರು ಕುಳಿತು ನೆಮ್ಮದಿಯಾಗಿ ಪ್ರಯಾಣಿಸಬಹುದಾಗಿದ್ದು, ಇದರಿಂದಾಗಿ ಪ್ರವಾಸಿಗರು ಇದರತ್ತ ಹೆಚ್ಚು ಆಕರ್ಷಿತರಾಗುತ್ತಿದ್ದು, ಪ್ರವಾಸಿಗರ ಆಕರ್ಷಣೆಯಾಗಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಮೈಸೂರು ದಸರಾಕ್ಕೆ ಸಂಬಂಧಿಸಿದ ಲೇಖನಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

 

 

admin
the authoradmin

ನಿಮ್ಮದೊಂದು ಉತ್ತರ