CinemaLatest

ಕಾಲೇಜು ಹುಡುಗಿ ಭಾರತಿ  ನಟಿ ಆರತಿ ಆಗಿದ್ದು ಹೇಗೆ? ಈಗ ಎಲ್ಲಿದ್ದಾರೆ ಆರತಿ..?

ನಟನೆಯಲ್ಲಿ ತನ್ನದೇ ಆದ ಛಾಪು ಮೂಡಿಸಿ ಕನ್ನಡ ಸಿನಿಮಾಲೋಕದಲ್ಲಿ ವಿಜೃಂಭಿಸಿದ ನಟಿ ಆರತಿ ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ. ಅವರ ನಟನೆಯ ಚಿತ್ರಗಳನ್ನು ನೋಡಿದರೆ ಸಾಕು… ಒಂದು ಕಾಲದಲ್ಲಿ ತೆರೆಯಲ್ಲಿ ಮಿಂಚಿ ಇಂದು ವಿಶ್ರಾಂತಿ ಜೀವನ ನಡೆಸುತ್ತಿರುವ ನಟಿ ಆರತಿ ಅವರ ಬಗ್ಗೆ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ ಅವರು ಇಲ್ಲಿ ಒಂದಷ್ಟು ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳು ಮತ್ತು ನಟ ನಟಿಯರ ಬಗೆಗಿನ ಮಾಹಿತಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

1954ರಲ್ಲಿ ಕುಶಾಲನಗರ-ಅರಕಲಗೂಡು ಗಡಿ ಬಳಿಯಿರುವ ಅರೆಗಲ್ಲು ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದ ಇವರ ಮೂಲ ಹೆಸರು ಭಾರತಿ. ಮೈಸೂರು ಎಂ.ಡಿ.ಟಿ.ಡಿ.ಬಿ. ಕಾಲೇಜು ವಿದ್ಯಾರ್ಥಿನಿ ಆಗಿದ್ದಾಗ ಅಂತರ ಕಾಲೇಜು ಸಾಂಸ್ಕೃತಿಕ ಸ್ಫರ್ಧೆಗಳಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಪಡೆದಿದ್ದ ಇವರು ಆ ಮೂಲಕ ಪಠ್ಯೇತರ ಚಟುವಟಿಕೆಯಲ್ಲೂ ಸಹ ಎಲ್ಲರಿಗಿಂತ ಮುನ್ನಲೆಯಲ್ಲಿ ಇರುತ್ತಿದ್ದ ಧೈರ್ಯವಂತೆ. ಇಂಥದ್ದೆಒಂದು ಪ್ರತಿಭಾ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ತೆರಳಿದ್ದ ನಟ ಶಿವರಾಂ ಕಣ್ಣಿಗೆ ಬಿದ್ದರು. ಕಾದಂಬರಿ ಆಧಾರಿತ ಚಿತ್ರವೊಂದನ್ನು ನಿರ್ಮಿಸಲು ಮುಂದಾಗಿದ್ದ ನಿರ್ಮಾಪಕ ರಾಮನಾಥ್-ಶಿವರಾಮ್ (ರಾಶಿ ಬ್ರದರ್ಸ್) ಸೋದರರಿಂದ ಎಸ್.ಆರ್.ಪುಟ್ಟಣ್ಣ ಕಣಗಾಲ್ ರ ಪರಿಚಯವಾಯಿತು.

ಅದೃಷ್ಟವಶಾತ್ ಪುಟ್ಟಣ್ಣಕಣಗಾಲ್ ರವರ ಕಿರುನೋಟ ಈ ಹುಡುಗಿಯ ಮೇಲೆ ಬಿದ್ದು ತಾವು ನಿರ್ದೇಶಿಸುತ್ತಿದ್ದ ಎಂ.ಕೆ.ಇಂದಿರಾ ಕಾದಂಬರಿ ಆಧಾರಿತ “ಗೆಜ್ಜೆಪೂಜೆ” ಚಿತ್ರದಲ್ಲಿ ಅಶ್ವಥ್ ಪಂಡರೀಬಾಯಿ ಲೀಲಾವತಿ ಕಲ್ಪನಾ ಹಾಗೂ ಗಂಗಾಧರ್ ಮುಖ್ಯ ಭೂಮಿಕೆಯಲ್ಲಿದ್ದರು. ದೇವದಾಸಿ ಸುತ್ತಲೂ ಹೆಣೆದ ಮಹಿಳಾ ಪ್ರಧಾನ ಕಥಾಸಾರಾಂಶದ ಕಾದಂಬರಿಗೆ ಪುಟ್ಟಣ್ಣನವರು ಚಿತ್ರಕಥೆ ಬರೆದಿದ್ದರು. ಈ ಚಿತ್ರಕ್ಕೆ ಅಖಿಲ ಭಾರತ ಅತ್ಯುತ್ತಮ ಚಿತ್ರನಾಟಕ (ಆಲ್‍ ಇಂಡಿಯ ಬೆಸ್ಟ್ ಸ್ಕ್ರೀನ್‍ಪ್ಲೇ) ಅವಾರ್ಡ್ ರಾಷ್ಟ್ರಪ್ರಶಸ್ತಿ ದೊರಕಿತು.

ಇಂಥದ್ದೊಂದು ಶ್ರೇಷ್ಠ ಚಿತ್ರದ ಮೂಲಕ ಪಾದರ್ಪಣೆ ಮಾಡಿದ ಆರತಿ ಚಂದನವನದ ಮೈಲಿಗಲ್ಲಾದರು. ಇವರಲ್ಲಿದ್ದ ಒಂದು ವಿಶೇಷ ವಿಶಿಷ್ಟ ಆಕರ್ಷಣೆಯಿಂದಲೋ ಏನೋ ಇಡೀ ಪ್ರೊಡಕ್ಷನ್ ಯೂನಿಟ್‍ನ ಎಲ್ಲರ ಅಭಿಪ್ರಾಯಗಳನ್ನು ಗೌಣವಾಗಿಸಿದ ಪುಟ್ಟಣ್ಣ ತಮ್ಮದೇ ಅಚಲ ನಿರ್ಧಾರದಿಂದ ಈಕೆಗೆ ಗೆಜ್ಜೆಪೂಜೆ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರವನ್ನು ನೀಡಿದ್ದು ಇತಿಹಾಸ.

ಆರತಿ, ತಮ್ಮ ಅಭಿನಯ ಕ್ಷೇತ್ರದ ಎಂತಹ ಸಂದರ್ಭದಲ್ಲೂ ಹಿಂತಿರುಗಿ ನೋಡದೆ, ಹಿಂದಕ್ಕೆ ಹೆಜ್ಜೆ ಇಡದೆ, ಅತಿಎತ್ತರಕ್ಕೆ ಬೆಳೆದರು. ಇವರ ತಮ್ಮನಿಗೆ ಸಹಾಯಕ ನಿರ್ದೇಶಕ ಹುದ್ದೆಯನ್ನು ಗಿಟ್ಟಿಸಿಕೊಟ್ಟು ಕ್ರಮೇಣ ಸ್ವತಂತ್ರ ನಿರ್ದೇಶಕ ನಾಗುವಂತೆ ನಿಗಾವಹಿಸಿ, ತಮ್ಮ ಜತೆಗೆ ತಮ್ಮ ಕುಟುಂಬ ಬಂಧು ಬಳಗವನ್ನೂ ಬೆಳೆಸಿದರು.

ವರ್ಷಕ್ಕೆ 10 ಚಿತ್ರಗಳಲ್ಲಿ ನಟಿಸುವ ಮೂಲಕ ಮೇರುನಟಿಯರ ಸಾಲಿಗೆ ಸೇರಿದ್ದಲ್ಲದೆ ಕೇವಲ 20 ವರ್ಷಾವಧಿಯಲ್ಲಿ 100ಚಿತ್ರಗಳಲ್ಲಿ ನಟಿಸಿದ ಪ್ರಪ್ರಥಮ ಹೀರೋಯಿನ್ ಎಂಬ ದಾಖಲೆ ನಿರ್ಮಿಸಿದರು. ಪಾತ್ರವು ಯಾವುದೇ ಇರಲಿ ಅದನ್ನು ಗೌರವದಿಂದ ಸ್ವೀಕರಿಸಿ ಶ್ರದ್ಧೆಯಿಂದ ನಿರ್ವಹಿಸಿ ಸೈ ಎನಿಸಿಕೊಂಡ ಅಪ್ರತಿಮ ಕಲಾವಿದೆ.

ರಾಜ್ಯಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ, ಫಿಲಂಫೇರ್ ಪ್ರಶಸ್ತಿ ಗಳಿಸಿರುವ ಅಪರೂಪದ ಅಭಿನೇತ್ರಿ ಸಂಘ-ಸಂಸ್ಥೆಗಳಿಂದಲೂ ಬಿರುದು ಬಹುಮಾನ ಸನ್ಮಾನ ಪಡೆದ ನಟವಿಜೇತೆ. ಹಣ ಅಂತಸ್ತು ಕೀರ್ತಿ ಆಸ್ತಿ ಎಲ್ಲವನ್ನು ತಂದುಕೊಟ್ಟ ಇವರ ನೂರಾರು ಚಿತ್ರಗಳಲ್ಲಿ ಕೆಲವು ಉದಾಹರಣೆ.. ಕಸ್ತೂರಿನಿವಾಸ, ಪ್ರತಿಧ್ವನಿ, ಸಿಪಾಯಿರಾಮು, ರಾಜ ನನ್ನ ರಾಜ, ಭಲೇ ಹುಚ್ಚ, ಪ್ರೇಮದ ಕಾಣಿಕೆ, ಬಂಗಾರದ ಪಂಜರ, ನಾಗರ ಹಾವು, ಶುಭಮಂಗಳ, ಕಥಾಸಂಗಮ, ಎಡಕಲ್ಲುಗುಡ್ಡದ ಮೇಲೆ, ರಂಗನಾಯಕಿ, ತಾಯಿಯ ಮಡಿಲಲ್ಲಿ, ನ್ಯಾಯವೇ ದೇವರು, ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ, ದಾರಿತಪ್ಪಿದಮಗ, ಬಿಳೀಹೆಂಡ್ತಿ, ಉಪಾಸನೆ, ದೇವರಕಣ್ಣು, ಅಪರಾಧಿ, ಬಾಳುಜೇನು,

ಫಲಿತಾಂಶ, ಪಾವನಗಂಗ, ಅನುರೂಪ, ಕುದುರೆಮುಖ, ಹೊಂಬಿಸಿಲು, ಮಾತುತಪ್ಪದಮಗ, ಮುಯ್ಯಿಗೆಮುಯ್ಯಿ, ಪಡುವಾರಳ್ಳಿಪಾಂಡವರು, ಧರ್ಮಸೆರೆ, ಭಕ್ತಸಿರಿಯಾಳ, ನ್ಯಾಯಎಲ್ಲಿದೆ, ಹಂತಕನಸಂಚು, ಬಂಗಾರದ ಜಿಂಕೆ, ನ್ಯಾಯನೀತಿಧರ್ಮ, ಪೆದ್ದಗೆದ್ದ, ಎಡೆಯೂರು ಸಿದ್ಧಲಿಂಗೇಶ್ವರ, ಭಾಗ್ಯವಂತ, ಪ್ರೀತಿಸಿನೋಡು, ಮುಂತಾದವು ಆಚಂದ್ರಾರ್ಕ ಅಜರಾಮರ.

ಮಿಠಾಯಿಮನೆ ಚಿತ್ರಕ್ಕೆ ನಿರ್ದೇಶಕಿಯಾಗಿ ಕೆಲಸ ಮಾಡಿ 1987ರಲ್ಲಿ ಬಿಡುಗಡೆಯಾದ ‘ಟೈಗರ್’ ಚಿತ್ರದವರೆಗೆ ತೆಲುಗು ತಮಿಳು ಮಲಯಾಳಮ್ ಚಿತ್ರಗಳು ಸೇರಿದಂತೆ ಒಟ್ಟು 123 ಸಿನಿಮಾಗಳಲ್ಲಿ ನಟಿಸಿದ್ದಾರೆ. ರಾಜ್‍ಕುಮಾರ್, ರಾಜೇಶ್, ಪ್ರಭಾಕರ್, ಶ್ರೀನಾಥ್, ಗಂಗಾಧರ್, ಚಂದ್ರಶೇಖರ್, ಜೈಜಗದೀಶ್, ವಿಷ್ಣುವರ್ಧನ್, ಅಂಬರೀಷ್, ಅನಂತನಾಗ್, ಶಂಕರನಾಗ್, ಸೇರಿದಂತೆ ಚಂದನವನ ಚಿತ್ರರಂಗದ ಬಹುತೇಕ ಎಲ್ಲಾ ಹೀರೋಗಳ ಜತೆ ನಟಿಸಿದ ದಾಖಲೆಯೂ ಇವರ ಹೆಸರಲ್ಲಿದೆ.

ಕಡಿಮೆ ಅವಧಿಯಲ್ಲಿ ಹೆಚ್ಚು ಫೇಮಸ್ ಆದ ಇಂತಹ ಅಮೋಘ ಪ್ರತಿಭೆಯ ಅಪ್ರತಿಮ ನಟಿಗೆ ದೊರಕಿದ ನಿರಂತರ ಕಾಲ್‍ ಶೀಟ್ ಹಾದಿಯಲ್ಲಿ ಹಲವಾರು ಹಗರಣದ ಹಳ್ಳಗಳೂ ಹುಟ್ಟಿಕೊಂಡವು. ಅನಿರೀಕ್ಷಿತವಾಗಿ ಆವರಿಸಿಕೊಂಡ ಗಾಳಿಮಾತಿನ ಅಂತೆಕಂತೆ ಸುಳಿಯಲ್ಲಿ ಸಿಲುಕಿದರೂ ಅನಿವಾರ್ಯ ಎಂಬಂತೆ ಸ್ವೀಕರಿಸಿ ಗೆದ್ದ ಧೈರ್ಯವಂತೆ. ಯಾರೇನು ಹೇಳಿದರೂ ಕಿವಿಗೊಡದೆ, ಯಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳದೆ ಹಗರಣಗಳನ್ನು ಗಂಭೀರವಾಗಿ ತೆಗೆದುಕೊಳ್ಳದೆ ಬಂದದ್ದೆಲ್ಲವನ್ನ ನೇರವಾಗಿ ಎದುರಿಸಿದರು.

ತಮ್ಮದೇ ಸ್ವಂತ ನಿರ್ಧಾರದ ಏಕಮುಖ ಹಾದಿಯಲ್ಲಿ ಮುನ್ನುಗ್ಗುತ್ತ ತಮ್ಮ ಜೀವ-ಜೀವನ ಎರಡನ್ನೂ ಧೃಢ ಸಂಕಲ್ಪದಿಂದ ರೂಪಿಸಿಕೊಂಡ ಧೀಮಂತ ನಟಿ. ಸಹೋದ್ಯೋಗಿ ನಟ ಅಶೋಕ್‍ರನ್ನು ವಿವಾಹ ಆಗುತ್ತಾರಂತೆ ಎಂಬ [ಗಾಳಿ]ಸುದ್ಧಿಯು ಧೀರ್ಘಕಾಲ ಹರಡಿದ್ದುಂಟು. ಇವರ ಗಾಡ್‍ಫಾದರ್ ಎಂದೇ ಬಿಂಬಿಸಲಾಗಿದ್ದ ನಿರ್ದೇಶಕ ಪುಟ್ಟಣ್ಣ ಕಣಗಾಲ್‍ರನ್ನು ಮದುವೆಯಾಗಿ ಕೆಲಕಾಲ ನಂತರ ಡೈವೊರ್ಸ್ ಪಡೆದರು.

ಈ ನಡುವೆ 1985ರಲ್ಲಿ ಇವರನ್ನು ವಿಧಾನ ಪರಿಷತ್ ಸದಸ್ಯೆ ಮಾಡುವ ಮೂಲಕ ಪರಿಚಿತರಾದ ಓರ್ವ ರಾಜಕಾರಣಿ ಜತೆ ವಿವಾಹವಾಗುತ್ತಾರೆಂಬ ಅಂತೆಕಂತೆ ಸುದ್ದಿಯೂ ಹರಿದಾಡಿತು…?! ಕಡೆಗೆ ಚಂದ್ರಶೇಖರ ದೇಸಾಯಿಯನ್ನು ವಿವಾಹವಾಗಿ ಇಬ್ಬರು ಮಕ್ಕಳನ್ನು ಪಡೆದರು. ವಿಧಿ ವಿಲಾಸದಂತೆ ಇವರು ತಮ್ಮ 3ನೇ ಮದುವೆ ನಂತರ 20 ವರ್ಷಕಾಲ ವಿದೇಶದಲ್ಲಿದ್ದು ನಂತರ ಬೆಂಗಳೂರಿಗೆ ಹಿಂದಿರುಗಿ ಸಧ್ಯಕ್ಕೆ ತಮ್ಮ ಮಗಳೊಡನೆ ನಿರಾತಂಕವಾಗಿ ವಾಸಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳು ಮತ್ತು ನಟ ನಟಿಯರ ಬಗೆಗಿನ ಮಾಹಿತಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

admin
the authoradmin

ನಿಮ್ಮದೊಂದು ಉತ್ತರ