ಹುಣಸೂರು(ನಂಜಾಪುರ ಮನುಕುಮಾರ್): ಜಿಲ್ಲಾ ಪಂಚಾಯಿತಿ ಚುನಾವಣೆಯ ಮೀಸಲಾತಿ ಕರಡು ಪಟ್ಟಿಯಲ್ಲಿ ಹುಣಸೂರು ತಾಲೂಕಿನ ಪರಿಶಿಷ್ಟ ಜಾತಿಗೆ ಪ್ರಾತಿನಿಧ್ಯ ನೀಡದಿರುವುದನ್ನು ಖಂಡಿಸಿ ಶುಕ್ರವಾರ ಕರೆ ನೀಡಿದ್ದ ಹುಣಸೂರು ಬಂದ್ ಯಶಸ್ವಿಯಾಯಿತು. ಬಂದ್ಗೆ ಬೆಂಬಲವಾಗಿ ನಗರದ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಆದರೆ, ಸಾರಿಗೆ ಬಸ್ಗಳು ಸೇರಿದಂತೆ ವಾಹನಗಳ ಸಂಚಾರ ಎಂದಿನಂತೆ ನಡೆಯಿತು.
ಹುಣಸೂರು ತಾಲೂಕಿನ ಆರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪೈಕಿ ಪರಿಶಿಷ್ಟ ಜಾತಿಗೆ ಒಂದೂ ಕ್ಷೇತ್ರವನ್ನು ಮೀಸಲಿಡದಿರುವುದನ್ನು ವಿರೋಧಿಸಿ ವಿವಿಧ ಪ್ರಗತಿಪರ ಸಂಘಟನೆಗಳು ಹಾಗೂ ವಿವಿಧ ಜಾತಿ, ಸಮುದಾಯಗಳ ಮುಖಂಡರು ಬಂದ್ನಲ್ಲಿ ಪಾಲ್ಗೊಂಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಸಂವಿಧಾನ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಜೆಎಲ್ಬಿ ರಸ್ತೆ ಹಾಗೂ ಕಾರ್ಖಾನೆ ರಸ್ತೆಯ ಮೂಲಕ ಸಾಗಿ, ಹೊಸ ಬಸ್ ನಿಲ್ದಾಣದ ಸಮೀಪದ ಕಲ್ಪತರು ವೃತ್ತ ತಲುಪಿತು. ಅಲ್ಲಿ ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಾಕಾರರು, ಪರಿಶಿಷ್ಟ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಮೀಸಲಾತಿ ಪಟ್ಟಿಯಿಂದ ದಿಗ್ಭ್ರಮೆ: ಡಾ. ಪುಷ್ಪ ಅಮರನಾಥ್
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ.ಪುಷ್ಪ ಅಮರನಾಥ್ ಮಾತನಾಡಿ, ಜಿಲ್ಲಾ ಪಂಚಾಯಿತಿ ಮೀಸಲಾತಿ ಕರಡು ಪಟ್ಟಿಯನ್ನು ಕಂಡು ತಮಗೆ ದಿಗ್ಭ್ರಮೆಯಾಗಿದೆ. ಹುಣಸೂರು ತಾಲೂಕಿನ ಪರಿಶಿಷ್ಟ ಜಾತಿಗೆ ಒಂದೇ ಒಂದು ಸ್ಥಾನ ನೀಡದಿರುವುದು ಬೇಸರ ತಂದಿದೆ. ಈ ವಿಚಾರ ತಿಳಿದ ತಕ್ಷಣ ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಅವರಿಗೆ ಕರೆ ಮಾಡಿ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದರು.
ನಾನು ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ನಮ್ಮ ಸಮುದಾಯದ ಯಾರಾದರೂ ಜನಪ್ರತಿನಿಧಿಯಾಗಬೇಕು ಎಂಬ ಆಸೆ ಇದೆ. ಈ ವಿಚಾರವಾಗಿ ಮಾಜಿ ಶಾಸಕರೊಂದಿಗೆ ಮಾತನಾಡಿದಾಗ, ನಿಮಗೆ ಎಷ್ಟು ನೋವಾಗಿದೆಯೋ ಮಾಜಿ ಶಾಸಕನಾಗಿ ನನಗೂ ಅಷ್ಟೇ ನೋವಾಗಿದೆ ಎಂದು ಅವರು ತಿಳಿಸಿದರು ಎಂದು ಹೇಳಿದರು.
ಮೀಸಲಾತಿ ಹಂಚಿಕೆಯಲ್ಲಿ ಯಾವ ಹಂತದಲ್ಲಿ ಲೋಪವಾಗಿದೆ ಎಂಬುದನ್ನು ಪರಿಶೀಲಿಸಿ, ಅನ್ಯಾಯ ಸರಿಪಡಿಸಲು ಕ್ರಮ ಕೈಗೊಳ್ಳಬೇಕಿದೆ. ಈ ವಿಚಾರವನ್ನು ಇಲ್ಲಿಗೇ ಬಿಡುವುದಿಲ್ಲ. ಹೋರಾಟದ ಮೂಲಕ ಪರಿಶಿಷ್ಟ ಜಾತಿಗೆ ಮೀಸಲಾತಿ ದೊರಕಿಸಿಕೊಡುವ ಜವಾಬ್ದಾರಿ ನಮ್ಮ ಮೇಲಿದೆ. ವಿವಿಧ ಜಾತಿ, ಧರ್ಮಗಳ ಜನರು ನೀಡಿರುವ ಬೆಂಬಲಕ್ಕೆ ಋಣಿಯಾಗಿದ್ದೇನೆ ಎಂದರು.
ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ಅವರು ಇದೇ ವಿಚಾರವಾಗಿ ಬೆಂಗಳೂರಿಗೆ ತೆರಳಿ ಪ್ರಯತ್ನ ನಡೆಸುತ್ತಿದ್ದಾರೆ. ಅವರು ಪ್ರತಿಭಟನೆಗೆ ಬಂದಿಲ್ಲ ಎಂದು ಜನರು ತಪ್ಪು ಸಂದೇಶ ನೀಡಬಾರದು ಎಂದು ಮನವಿ ಮಾಡಿದರು.

ಮೀಸಲಾತಿ ನಮ್ಮ ಹಕ್ಕು, ಭಿಕ್ಷೆಯಲ್ಲ: ಶಾಸಕ ಹರೀಶ್ ಗೌಡ
ಶಾಸಕ ಜಿ.ಡಿ. ಹರೀಶ್ ಗೌಡ ಮಾತನಾಡಿ, ಹುಣಸೂರು ತಾಲೂಕಿನ ಪರಿಶಿಷ್ಟ ಸಮುದಾಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಜಾತ್ಯತೀತವಾಗಿ, ಪಕ್ಷಾತೀತವಾಗಿ ಹೋರಾಟ ನಡೆಸಲಾಗುತ್ತಿದೆ. ಇಂತಹ ಹೋರಾಟದಲ್ಲಿ ವಿವಿಧ ಪಕ್ಷಗಳ ಮುಖಂಡರು ಹಾಗೂ ಜನಪ್ರತಿನಿಧಿಗಳು ಪಾಲ್ಗೊಂಡಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಕಂಡ ಸರ್ವಜನಾಂಗದ ಶಾಂತಿಯ ತೋಟದ ಕನಸಿಗೆ ವಿರುದ್ಧವಾಗಿ ಪರಿಶಿಷ್ಟ ಸಮುದಾಯಕ್ಕೆ ಅನ್ಯಾಯವಾಗಿರುವುದು ಬೇಸರದ ಸಂಗತಿ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನೀಡಿರುವ ಮೀಸಲಾತಿ ಯಾರೊಬ್ಬರ ದಯೆಯೂ ಅಲ್ಲ, ಸರ್ಕಾರದ ಕೊಡುಗೆಯೂ ಅಲ್ಲ; ಅದು ನಮ್ಮ ಹಕ್ಕು ಎಂದು ಪ್ರತಿಪಾದಿಸಿದರು.
ಸರ್ಕಾರದಲ್ಲಿ ಅಧಿಕಾರದಲ್ಲಿರುವವರೇ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಉತ್ತಮ ಬೆಳವಣಿಗೆ. ಮೀಸಲಾತಿ ವಿಚಾರದಲ್ಲಿ ಸರ್ಕಾರದ ಗಮನ ಸೆಳೆದು ನ್ಯಾಯ ದೊರಕಿಸಿಕೊಡುವ ಪ್ರಯತ್ನ ಮಾಡಲಾಗುವುದು. ಈ ಸಂಬಂಧ ಕಾನೂನು ತಜ್ಞರೊಂದಿಗೂ ಈಗಾಗಲೇ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಮೈಸೂರು ಜಿಲ್ಲೆಯ 46 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪೈಕಿ ಮಹಿಳೆಯರಿಗೆ ಮೀಸಲಾದ ಸ್ಥಾನಗಳೂ ಸೇರಿದಂತೆ ಕೇವಲ 10 ಸ್ಥಾನಗಳನ್ನು ಪರಿಶಿಷ್ಟ ಸಮುದಾಯಕ್ಕೆ ನೀಡಲಾಗಿದೆ ಎಂದು ಅವರು ಆರೋಪಿಸಿದರು. ಪರಿಶಿಷ್ಟ ಜನಸಂಖ್ಯೆಯ ದೃಷ್ಟಿಯಿಂದ ಹುಣಸೂರು ತಾಲೂಕು ಐದನೇ ಸ್ಥಾನದಲ್ಲಿದ್ದರೂ ಇಲ್ಲಿ ಒಂದೇ ಒಂದು ಕ್ಷೇತ್ರವನ್ನು ಮೀಸಲಿಡದಿರುವುದು ಅನ್ಯಾಯವಾಗಿದೆ ಎಂದರು.
“ನಾವು ಮೀಸಲಾತಿಗಾಗಿ ಭಿಕ್ಷೆ ಬೇಡುತ್ತಿಲ್ಲ; ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ಈ ಅನ್ಯಾಯ ಸರಿಪಡಿಸಲು ಮತ್ತೆ ಬಂದ್, ಪ್ರತಿಭಟನೆ ನಡೆಸಬೇಕಾದ ಪರಿಸ್ಥಿತಿ ಬರಬಾರದು. ಸರ್ಕಾರವೇ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ಒದಗಿಸಬೇಕು” ಎಂದು ಆಗ್ರಹಿಸಿದರು.
ಮೀಸಲಾತಿ ಹಂಚಿಕೆಯಲ್ಲಿನ ಲೋಪಕ್ಕೆ ಚುನಾವಣಾ ಆಯೋಗವನ್ನು ಹೊಣೆ ಮಾಡುವುದು ಸರಿಯಲ್ಲ. ಚುನಾವಣೆ ನಡೆಸುವುದು ಚುನಾವಣಾ ಆಯೋಗದ ಜವಾಬ್ದಾರಿಯಾದರೆ, ಮೀಸಲಾತಿ ನಿಗದಿಪಡಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಸರ್ಕಾರ ಸೂಕ್ತ ರೀತಿಯಲ್ಲಿ ಮೀಸಲಾತಿ ನೀಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಮನವಿ ಸ್ವೀಕರಿಸಿದ ಉಪವಿಭಾಗಾಧಿಕಾರಿ ಮಂಜುನಾಥ್, ಯೋಜನಾ ಪ್ರಾಧಿಕಾರದ ( ಹುಡಾ) ಅದ್ಯಕ್ಷ ಹೆಚ್.ಪಿ.ಅಮರ್ ನಾಥ್, ಕಮಿಟಿಯ ಪ್ರಮುಖ ದೇವರಾಜ್ ಒಡೆಯರ್, ಡಿ.ವೈ.ಎಸ್.ಪಿ. ರವಿ, ಸೇರಿದಂತೆ ವಿವಿಧ ಸಂಘಟನೆಗಳ ಅಧ್ಯಕ್ಷರುಗಳಾದ, ಡಿ.ಕೆ.ಕುನ್ನೇಗೌಡ, ಹೋನ್ನಪ್ಪ, ಸತ್ಯಪ್ಪ, ಹರಿಹರಾನಂದಸ್ವಾಮಿ, ಡಿ.ಕುಮಾರ್, ಬಸವಲಿಂಗಯ್ಯ, ನಿಂಗರಾಜ್ ಮಲ್ನಾಡಿ, ಹೆಜ್ಜೂರ್ ರಮೇಶ್ ,ಪುಟ್ಟಸ್ವಾಮಿ, ನಾಗರಾಜ್ ಮಲ್ನಾಡಿ, ಮಹದೇವ್, ಇಂಟಕ್ ರಾಜ್, ಪುಟ್ಟರಾಜು, ಪ್ರಭಾಕರ್, ತರಿಕಲ್ಲು ರಾಜು, ಪ್ರಸನ್ನ, ಮುಖಂಡರು ಹಾಗೂ ವಿವಿಧ ಸಮುದಾಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ಮಂಜುನಾಥ್ ಅವರು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.








