LatestState

ಪರಿಸರ ಸಂರಕ್ಷಣೆಯೊಂದಿಗೆ ಹುಟ್ಟುಹಬ್ಬಾಚರಣೆ ಸಮಾಜಕ್ಕೆ ಮಾದರಿ: ಅಂಕೇಗೌಡ

 ಮಂಡ್ಯ: ಇಂದಿನ ದಿನಗಳಲ್ಲಿ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುವುದು ಸಾಮಾನ್ಯವಾಗಿದೆ. ಆದರೆ, ಹುಟ್ಟುಹಬ್ಬದ ಸಂಭ್ರಮವನ್ನು ಪರಿಸರ ಸಂರಕ್ಷಣೆಯೊಂದಿಗೆ ಬೆಸೆಯುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಾರ್ಯವನ್ನು ರಂಗಕರ್ಮಿ ಚಂದ್ರು ಮಂಡ್ಯ ಅವರು ಮಾಡಿದ್ದಾರೆ ಎಂದು ಮದ್ದೂರು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬ್ಯಾಡರಹಳ್ಳಿ ಅಂಕೇಗೌಡ ಹೇಳಿದರು .

ಮದ್ದೂರು ತಾಲೂಕಿನ ಮಲ್ಲನಕುಪ್ಪೆ ಗ್ರಾಮದ ರಂಗಕರ್ಮಿ ಚಂದ್ರು ಮಂಡ್ಯ ತಮ್ಮ ಮಗ ಅದ್ವಯ್ ಚಂದ್ರ ಅವರ ಹುಟ್ಟುಹಬ್ಬದ ಅಂಗವಾಗಿ ತಮ್ಮೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ಅರ್ಥಪೂರ್ಣವಾಗಿ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಕೇವಲ ವೈಯಕ್ತಿಕ ಸಂಭ್ರಮಕ್ಕೆ ಸೀಮಿತವಾಗದೆ, ಪ್ರಕೃತಿಯ ಉಳಿವು ಮತ್ತು ಮುಂದಿನ ಪೀಳಿಗೆಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹಮ್ಮಿಕೊಂಡ ಈ ಕಾರ್ಯ ಪರಿಸರ ಪ್ರೇಮಕ್ಕೆ ಸಾಕ್ಷಿಯಾಗಿದೆ. ಇಂದಿನ ದಿನಗಳಲ್ಲಿ ಪರಿಸರ ಮಾಲಿನ್ಯ, ಜಾಗತಿಕ ತಾಪಮಾನ ಏರಿಕೆ, ಅರಣ್ಯ ನಾಶ ಹಾಗೂ ಹವಾಮಾನ ವೈಪರೀತ್ಯದಂತಹ ಸಮಸ್ಯೆಗಳು ಹೆಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ ಗಿಡಗಳನ್ನು ನೆಡುವುದು ಮತ್ತು ಅವುಗಳನ್ನು ಪೋಷಿಸಿ ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಮಗನ ಹುಟ್ಟುಹಬ್ಬವನ್ನು ಗಿಡ ನೆಡುವ ಮೂಲಕ ಆಚರಿಸಿರುವುದು ಪರಿಸರ ಕಾಳಜಿಯ ಜೊತೆಗೆ ಸಮಾಜಮುಖಿ ಚಿಂತನೆಯನ್ನೂ ಪ್ರತಿಬಿಂಬಿಸುತ್ತದೆ ಬ್ಯಾಡರಹಳ್ಳಿ ಅಂಕೇಗೌಡ ಅಭಿಪ್ರಾಯಪಟ್ಟರು

ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ರಾಜೇಂದ್ರ ಮಾತನಾಡಿ ಮಕ್ಕಳ ಹುಟ್ಟುಹಬ್ಬದ ಸಂದರ್ಭದಲ್ಲಿ ದುಂದು ವೆಚ್ಚದ ಆಚರಣೆಗಳಿಗೆ ಆದ್ಯತೆ ನೀಡುವ ಬದಲು, ಸಮಾಜಕ್ಕೆ ಉಪಯುಕ್ತವಾದ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಮಕ್ಕಳಲ್ಲಿ ಪ್ರಕೃತಿ ಪ್ರೀತಿ, ಪರಿಸರ ಜಾಗೃತಿ ಮತ್ತು ಸಾಮಾಜಿಕ ಜವಾಬ್ದಾರಿಯ ಮನೋಭಾವವನ್ನು ಬೆಳೆಸಬಹುದು ಎಂಬ ಸಂದೇಶವನ್ನು ಈ ಆಚರಣೆ ಸಾರುತ್ತದೆ ಹೇಳಿದರು

ಪ್ರಾಂಶುಪಾಲರಾದ ಸೋಮ ಶೆಟ್ಟಿ ಮಾತನಾಡಿ ಒಂದು ಗಿಡ ನೆಡುವುದು ಎಂದರೆ ಕೇವಲ ಸಸಿಯೊಂದನ್ನು ಮಣ್ಣಿನಲ್ಲಿ ನೆಡುವುದಲ್ಲ, ಅದು ಭವಿಷ್ಯದ ಪೀಳಿಗೆಗೆ ಶುದ್ಧ ಗಾಳಿ, ನೆರಳು ಮತ್ತು ಉತ್ತಮ ಪರಿಸರವನ್ನು ಉಡುಗೊರೆಯಾಗಿ ನೀಡುವ ಸಂಕೇತವಾಗಿದೆ. ನೆಟ್ಟ ಗಿಡಗಳನ್ನು ನಿರಂತರವಾಗಿ ಆರೈಕೆ ಮಾಡಿ ಬೆಳೆಸಿದಾಗ ಮಾತ್ರ ಈ ಕಾರ್ಯದ ಉದ್ದೇಶ ಸಾರ್ಥಕವಾಗುತ್ತದೆ

ರಂಗಭೂಮಿಯ ಮೂಲಕ ಸಾಮಾಜಿಕ ಮೌಲ್ಯಗಳು, ಮಾನವೀಯತೆ ಮತ್ತು ಜನಜಾಗೃತಿಯ ಆಶಯಗಳನ್ನು ಅಭಿವ್ಯಕ್ತಿಸುವ ರಂಗಕರ್ಮಿ ಚಂದ್ರು ಮಂಡ್ಯ ಅವರು, ತಮ್ಮ ಮಗನ ಹುಟ್ಟು ಹಬ್ಬವನ್ನು ಪರಿಸರ ಸ್ನೇಹಿ ಕಾರ್ಯದೊಂದಿಗೆ ಆಚರಿಸಿರುವುದು ಇತರರಿಗೂ ಪ್ರೇರಣೆಯಾಗಬಲ್ಲದು ಎಂದು ಹೇಳಿದರು

ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ಆಶಾ ಉಪನ್ಯಾಸಕರಾದ ಜೆ. ಸಿ. ಪುರುಷೋತ್ತಮ್, ಕೌಸಲ್ಯ, ಗಂಗಮ್ಮ ಸಹಶಿಕ್ಷಕರರಾದ ಬಿಂದು, ನಂಜೇಶ್, ಕಾಲೇಜಿನ ಹಳೆಯ ವಿದ್ಯಾರ್ಥಿ ಮನೋಜ್ ಕೆ. ಉಪಸ್ಥಿತರಿದ್ದರು

admin
the authoradmin

ನಿಮ್ಮದೊಂದು ಉತ್ತರ