ArticlesLatest

ದೀಪಾವಳಿಹಬ್ಬ… ಕತ್ತಲೆಯಿಂದ ಬೆಳಕಿನೆಡೆಗೆ ಸಾಗೋಣ… ಎಲ್ಲರ ಬದುಕು ಸದಾ ಪ್ರಜ್ವಲಿಸಲಿ…

“ತಮಸೋಮ ಜ್ಯೋತಿರ್ಗಮಯ…..” ಎಂಬ ಪವಮಾನ ಮಂತ್ರವು ೧೦೮ ಆದಿಮೂಲ ಉಪನಿಷತ್‌ಗಳ ಪೈಕಿ ಒಂದಾದ ‘ಬೃಹದಾರಣ್ಯಕ’ ಉಪನಿಷತ್ತಿನ ಪವಿತ್ರ ಶ್ಲೋಕ. ಪ್ರತಿಯೊಂದು ಯಜ್ಞ-ಯಾಗ ಕೈಗೊಳ್ಳುವಾಗ ಅಗ್ನಿದೇವನಿಗೆ ಅರ್ಪಿಸುವ ಗೌರವ ವಂದನೆ. ಇದು ಅನಾದಿ ಕಾಲದಿಂದ ಪ್ರತೀತಿಯಲ್ಲಿರುವ ವೇದಿಕಾ ಪದ್ಧತಿ ಗಳಲ್ಲೊಂದು.

ದಾನವ-ಮಾನವರು ತ್ರಿಮೂರ್ತಿಗಳಿಗೆ, ಕೋಟಿದೇವತೆಗಳಿಗೆ ಯಾವುದಾದರು ಹರಕೆ ಸಲ್ಲಿಸಲು ಅಥವ ಅವರಿಂದ ಏನಾದರು ವರ ಪಡೆಯಲು ಅಗ್ನಿಯ ಮೂಲಕವೆ ಎಂಬುದು ಯಾರ ಉವಾಚ?! ಈನಿಯಮ ಪಾಲಿಸದೆ ತಮ್ಮ ಭಕ್ತಿಶಕ್ತಿಯಿಂದ ನೇರವಾಗಿ ದೈವ ಸಾಕ್ಷಾತ್ಕಾರ ಕಂಡುಕೊಂಡ; ಗೋರಕುಂಬಾರ, ಬೇಡರಕಣ್ಣಪ್ಪ, ಕನಕದಾಸ, ಕಾಳಿದಾಸ, ಪುರಂದರದಾಸ ಮುಂತಾದವರು ನಿಜಭಕ್ತ ರಾದರು!

ಅಗ್ನಿ ಮೂಲಕ ಹಾದಿಯನ್ನು ಹಿಂದಿಕ್ಕಿ ಮುಕ್ತಿ ಪಡೆದವರಲ್ಲಿ ಮಂತ್ರಾಲಯದ ಗುರು ರಾಘವೇಂದ್ರ, ಜಾತ್ಯಾತೀತ ಶ್ರೇಷ್ಠ ಶಿರಡಿ ಸಾಯಿಬಾಬ, ನಿಸ್ವಾರ್ಥ ಸಂತ ಶಿಶುನಾಳ ಷರೀಫ಼ ಮುಂತಾದವರಲ್ಲದೇ ಇನ್ನೂ ಅನೇಕ ಸಾಧಕರು ಅವರವರ ಹಾದಿ ಮೂಲಕ ಲೋಕ ಕಲ್ಯಾಣಕ್ಕೆ ಸಕಲವನ್ನು ಸಮರ್ಪಿಸಿ ನಿಸ್ವಾರ್ಥ ಮೂರ್ತಿಗಳಾಗಿ ಮುಕ್ತಿ ಪಡೆಯಲಿಲ್ಲವೆ? ಇಂಥ ಸಾರ್ಥಕರಲ್ಲಿ ಇನ್ನಷ್ಟು ಉತ್ತಮ ಉದಾಹರಣೆ…

ರಾಮಕೃಷ್ಣ ಪರಮಹಂಸ, ಸ್ವಾಮಿವಿವೇಕಾನಂದ, ಕಿತ್ತೂರುಚೆನ್ನಮ್ಮ, ಸಂಗೊಳ್ಳಿರಾಯಣ್ಣ, ಲಾಲ್-ಬಾಲ್-ಪಾಲ್ ಗಾಂಧೀಜಿ ನೇತಾಜಿ ಸರ್ದಾರಪಟೇಲ್, ಲಾಲಬಹದ್ದೂರಶಾಸ್ತ್ರಿ, ರವೀಂದ್ರನಾಥಠಾಗೂರ್ ಕುವೆಂಪು ಕೆಂಗಲ್ ಹನುಮಂತಯ್ಯ, ನರೇಂದ್ರಮೋದಿ, ಮುಂತಾದ ಕೆಲವರು ಯಾವುದೇ ಪರಮಾತ್ಮನಿಗಿಂತ ಕಡಿಮೆಯೇನಿಲ್ಲ? ಇವರೆಲ್ಲರು ಒಂದಿಲ್ಲೊಂದುರೀತಿ, ಕತ್ತಲೆಯಲ್ಲಿ ಇದ್ದವರನ್ನು ಬೆಳಕಿನೆಡೆಗೆ ಕರೆತಂದವರೇ ಆಗಿದ್ದು ಭಕ್ತಿಶಕ್ತಿ ಮುಕ್ತಿ ಪವಿತ್ರತೆ ದೇಶಪ್ರೇಮ ಮುಂತಾದವು ಮಾರ್ಕೆಟಲ್ಲಿ ಸಿಗುವಂಥದ್ದಲ್ಲವೆಂದು ತೋರಿಸಿಕೊಟ್ಟರು! ಇವರನ್ನು ಪುಷ್ಟೀಕರಿಸುವಂಥ ವಿವೇಕಾನಂದರ ವಾಣಿ:-

[1]ಸಾಧನೆ ಮಾಡಲು ಹೊರಡುವ ಹಾದಿಯಲ್ಲಿ ಬೆಕ್ಕುಗಳಿಗಿಂತ ಹೆಚ್ಚಾಗಿ ಜನಗಳೆ ಅಡ್ಡ ಬರುತ್ತಾರೆ. [2]ನಿಮ್ಮನ್ನು ನೀವು ಜಯಿಸಿದಾಗ ಜಗತ್ತೇ ನಿಮ್ಮದಾಗುತ್ತದೆ. [3]ಮಾನವನಲ್ಲಿ ಅಡಗಿರುವ ದೈವತ್ವ ಪ್ರಕಾಶನ ಪಡಿಸುವುದೇ ಧರ್ಮ

[4]ಬಡವರು-ಅಶಕ್ತರು-ರೋಗಿಗಳಲ್ಲಿ ಶಿವನನ್ನು ಕಾಣುವವರೇ ನಿಜವಾದ ಶಿವಭಕ್ತರು [5]ಜ್ಞಾನಿಗಳು ಮೊದಲು ತಮ್ಮಲ್ಲಿರುವ ದೋಷವನ್ನು ಕಂಡುಕೂಳ್ಳುವರು.

ಅಶ್ವಯುಜ ಅಮಾವಾಸ್ಯೆ ಹಿಂದಿನ ದಿನ ನರಕಾಸುರನ ಸಂಹಾರಗೈದ ಪ್ರಯುಕ್ತ ‘ನರಕ ಚತುರ್ದಶಿ’ಯಂದು ಕಷ್ಟ ಕಾರ್ಪಣ್ಯ ನಷ್ಟ ನೋವು ಎಂಬ ನರಕಗಳನ್ನು ನಾಶಗೊಳಿಸಿ ದರಿದ್ರ ಲಕ್ಷ್ಮಿಯನ್ನು ಓಡಿಸಿ ಹಳೆ ಕೊಳೆಗಳನ್ನು ತೆಗೆದೊಗೆದು ಮನ-ಮನೆ ಪರಿಶುದ್ಧಗೊಳಿಸಿ ಸುಖ ಸಂತೋಷ ನೆಮ್ಮದಿ ಬರಮಾಡಿಕೊಂಡು ಧನಲಕ್ಷ್ಮಿಯನ್ನು ಪೂಜಿಸಲಾಗುತ್ತದೆ.

ಅಮಾವಾಸ್ಯೆ ಮರುದಿನ ಕಾರ್ತಿಕ ಮಾಸದ ಪಾಡ್ಯಮಿಯಂದು ವಿಷ್ಣುವಿನ ಅವತಾರದ ವಾಮನನಿಂದ ವರಪಡೆದ ಬಲಿ ಚಕ್ರವರ್ತಿಯ ಆಸೆಯಂತೆ ಅಜ್ಞಾನ, ಅಹಂಕಾರದ ಅಂಧಕಾರ ಅಳಿಸಿ ಸುಜ್ಞಾನ, ಸದಾಚಾರವೆಂಬ ಬೆಳಕು ಮೂಡಿಸಲು ಪ್ರತಿಯೊಂದು ಮನೆಯ ಒಳ-ಹೊರಗೆ ಹಣತೆಗಳ ಪ್ರಕಾಶದ ಹಬ್ಬವು ಕಣ್ಮನ ಸೂರೆಗೊಳ್ಳುತ್ತದೆ.

ಜಾನಪದ ರೀತಿ ಅಥವ ಆದಿನಿವಾಸಿ ಯಾ ಸ್ಥಳೀಯಪದ್ಧತಿ ಪ್ರಕಾರ ೩ ದಿನದ ಹಬ್ಬ:- ಮೊದಲದಿನ ಎಲ್ಲಬಗೆಯ ಕಸಕಲ್ಮಶ ತೆಗೆದುಬಿಸಾಡುವ ಶುಚಿತ್ವದಿನ, ಎರಡನೇದಿನ ನೀರುತುಂಬಿಸಿ ಲಕ್ಷ್ಮಿಯನ್ನು ಬರಮಾಡಿ ಕೊಳ್ಳುವ ದಿನ, ೩ನೇದಿನ ದೀಪ ಹಚ್ಚುವ ಮೂಲಕ ನವಜ್ಯೋತಿ ಬೆಳಗಿಸಿ ಹೊಸಬಟ್ಟೆ ಧರಿಸಿ ಸಿಹಿತಿಂಡಿ ಹಂಚಿ ಸವಿಮಾತು ನುಡಿದು ಶುಭಲಾಭ ಕೋರುತ್ತ ಸಂಭ್ರಮಿಸುವ ದಿನ!

ಈ ಬಗೆಯಲ್ಲಿ ಪ್ರತಿಯೊಬ್ಬ ಮನುಷ್ಯನು ಹಿಂದಿನ ವರ್ಷದ ದುಃಖ ದುಮ್ಮಾನಗಳನ್ನ ಮಾಯವಾಗಿಸಿ ಮುಂಬರುವ ಹೊಸ ವರ್ಷದಲ್ಲಿ ಹರುಷದ ಹೊನಲು ಹರಿಸುವಂತೆ ದೇವರನ್ನು ಬೇಡುವ ಮತ್ತು ದೀಪದಿಂದ ದೀಪ ಹಚ್ಚುವ ರೀತಿ ಒಬ್ಬರು ಮತ್ತೊಬ್ಬರಿಗೆ ಜಾತಿ ಮತ ಧರ್ಮ ವರ್ಣಗಳ ಭೇದಭಾವ ತೊರೆದು ಕೈಲಾದಷ್ಟು ಸಹಾಯ ಸಹಕಾರ ನೀಡಲು ಪ್ರತಿಜ್ಞೆ ಮಾಡುವ ಹಬ್ಬವೇ ದೀಪಾವಳಿ?!

ಒಳಿತು-ಕೆಡಕುಗಳ ಪರಿಧಿಯಲ್ಲಿ ವಿವೇಕ ಚಿತ್ತರಾಗಿ ಸಹಬಾಳ್ವೆ ನಡೆಸುವ ಬದಲು, ಶಬ್ಧಮಾಲಿನ್ಯ, ವಾಯುಮಾಲಿನ್ಯ, ಜಲಮಾಲಿನ್ಯ, ಮುಂತಾದ ಪರಿಸರ ಹಾಳು ಮಾಡುವ ಕಾರ್ಯಗಳ ಜತೆಗೆ ವೃದ್ಧರ, ಮಕ್ಕಳ, ಮಹಿಳೆಯರ, ವಿಶೇಷವಾಗಿ ದುರ್ಬಲ (ಹೃದಯ) ರೋಗಿಗಳ ಸಾವಿಗೂ ಕಾರಣವಾಗುವ ಮಾರಕ ಕೆಲಸಗಳನ್ನು ಕೇವಲ ಟನ್ ಗಟ್ಟ್ಟಲೆ ಪಟಾಕಿ ಸುಡುವ ಮೂಲಕ ಆಚರಿಸುವುದು ಮತ್ತು ವಿಕಾರದ ಅಕಾರ್ಯವನ್ನು ಅಹಂಕಾರದಿಂದ, ಡೌಲು-ಡಂಭಾಚಾರದಿಂದ ಯಾರನ್ನೊ ಮೆಚ್ಚಿಸಲು, ಯಾವುದನ್ನೊ ಬಹಿರಂಗ ಪಡಿಸಲು ಘನಂದಾರಿ ಕೈಂಕರ್ಯ ಕೈಗೊಳ್ಳುವುದು ಎಷ್ಟರಮಟ್ಟಿಗೆ ಸರಿ?

ಯಾರನ್ನು ಯಾವ ಕತ್ತಲೆಯಿಂದ ಯಾವ ಬೆಳಕಿನೆಡೆಗೆ ಕರೆದೊಯ್ದ ಅರ್ಥ ಬರುತ್ತದೆ? ಶ್ರೀಸಾಮಾನ್ಯನ ಜೀವವಾದ ಗಾಳಿ ನೀರು ಹಸಿರು ಪ್ರಕೃತಿ ಜತೆ ಚೆಲ್ಲಾಟ ಆಡುತ್ತ ಎಲ್ಲರ ಸುಖ ಸಂತೋಷ ನೆಮ್ಮದಿ ಹಾಳು ಮಾಡುವುದು ಯಾವ ನ್ಯಾಯ, ಯಾರ ಪುರುಷಾರ್ಥಕ್ಕೆ? ಹೀಗೆಲ್ಲ ಮಾಡಲೇ ಬೇಕೆಂದು ಯಾವುದೇ ವೇದ, ಉಪನಿಷತ್, ಧರ್ಮಗ್ರಂಥದಲ್ಲಿ ಬರೆಯಲಾಗಿ(ಲ್ಲ)ದೆ…!

ಇತ್ತೀಚೆಗಂತೂ ಯುವಪೀಳಿಗೆ ಹತ್ತು ಹಲವು ಅಡ್ಡದಾರಿ ಹಿಡಿದು ಬೆಳಕಿನಿಂದ ಕತ್ತಲೆಯೆಡೆಗೆ ಸಾಗುತ್ತಿರುವುದು ಅತ್ಯಂತ ವಿಷಾದನೀಯ. ಇಂಥ ದುರಂತಕ್ಕೆ ಕಾರಣವಾದ ಕೆಲವು ಉದಾಹರಣೆ… ಅತಿಯಾದ ಟಿವಿ-ಮೊಬೈಲ್ ಬಳಕೆಯಿಂದ ಯುವಕರಲ್ಲಿ ವ್ಯಸನತೆ, ಮಕ್ಕಳಲ್ಲಿ ಖಿನ್ನತೆ, ದಿನೇದಿನೇ ಹೆಚ್ಚಾಗುತ್ತಿರುವುದು? ಹದಿ ವಯಸ್ಸಲ್ಲೆ ಧೂಮಪಾನ ಮದ್ಯಪಾನ ತಂಬಾಕು ಡ್ರಗ್ಸ್ ಸೇವನೆ ಮುಂತಾದ ದುಷ್ಟಚಟಕ್ಕೆ ಬಲಿಯಾಗಿ ಅಕಾಲಮರಣಕ್ಕೆ ಅಥವಾ ಆತ್ಮಹತ್ಯೆಗೆ ಶರಣಾಗುತ್ತಿರುವುದು! ಎಲ್ಲಕ್ಕೂ ಮಿಗಿಲಾಗಿ ಭಯೋತ್ಪಾದಕತೆ, ದೇಶದ್ರೋಹ ಸಂಘಸಂಸ್ಥೆ ಸೇರಿ ತರಬೇತಿ ಪಡೆದು ತನ್ನದೆ ದೇಶ ಭಾಷೆ ಸಂಸ್ಕೃತಿ ಪರಂಪರೆ ಬಂಧುಮಿತ್ರ ಬಳಗಕ್ಕೆ ತಾನೇ ಕಂಟಕನಾಗುವುದು? ಇಂಥ ದುಷ್ಕೃತ್ಯಗಳು ಅದ್ಹೇಗೆ “ದೀಪದಿಂದ ದೀಪಬೆಳಗು” ವಾಕ್ಯಕ್ಕೆ ಅನ್ವರ್ಥವಾಗುತ್ತದೆ?

ಉತ್ತರ ಭಾರತದಲ್ಲಿ ದೀವಾಲಿ ಹೆಸರಲ್ಲಿ ರಾವಣ ಸಂಹಾರ ದಿನವನ್ನಾಗಿ ಆಚರಿಸುವ ಪದ್ಧತಿಯುಂಟು? ಆದರೆ ರಾವಣ ಒಬ್ಬನನ್ನೇ ಏಕೆ ಟಾರ್ಗೆಟ್ ಮಾಡಬೇಕು? ಹಾಗೆ ನೋಡಿದರೆ ರಾವಣ ಅತ್ಯಂತ ಮಾತೃಭಕ್ತಿ ಉಳ್ಳವನು, ತನ್ನ ಕುಟುಂಬದ ಹಾಗೂ ಪ್ರಜೆಗಳ ಕ್ಷೇಮ ಕಾಪಾಡುವ ಉತ್ತಮ ಚಕ್ರವರ್ತಿಯಾಗಿದ್ದನು ಇಂತಹ ದಶಕಂಠ ಲಂಕೇಶನಿಗಿಂತಲೂ ಕೆಟ್ಟ ಚಾರಿತ್ರ್ಯವುಳ್ಳ ಕೀಚಕ  ಕಂಸ ಜರಾಸಂಧ ಶಿಶುಪಾಲ ಮುಂತಾದವರನ್ನು ಸುಡುವುದರಿಂದ ಹೊರಗಿಟ್ಟಿದ್ದೇಕೆ?  ಮೂರು ಲೋಕಕ್ಕು ತಾವೇ ದೇವರು, ತಮ್ಮನ್ನೆ ಪೂಜಿಸಬೇಕೆಂದು ಲೋಕ ಕಂಟಕರಾಗಿದ್ದ ಹಿರಣ್ಯಾಕ್ಷ  ಹಿರಣ್ಯ ಕಶ್ಯಪ ಮುಂತಾದವರ ಪುತ್ಥಳಿ ಸುಡುವ ಪದ್ಧತಿ ಜಾರಿಯಲ್ಲಿಲ್ಲವೇಕೆ? ಕೇವಲ ರಾವಣನನ್ನೇ ಸುಟ್ಟುಬೂದಿ ಮಾಡುವರೇಕೆ? ಇನ್ನು ಇತ್ಯಾದಿಗಳ ಬಗ್ಗೆ ತರ್ಕ ಏನೇಇರಲಿ, ಭಾರತೀಯರು ನಾವೆಲ್ಲ ಅನವರತ ಒಂದಾಗಿ ಬಾಳೋಣ, ಮಾನವರಾಗಿ ಬದುಕೋಣ, ಕತ್ತಲೆಯಿಂದ ಬೆಳಕಿನೆಡೆಗೆ ಸಾಗುತ್ತ ಸತ್  ಸಂಕಲ್ಪದಿಂದ ದೀಪಾವಳಿ ಆಚರಿಸೋಣ!

admin
the authoradmin

ನಿಮ್ಮದೊಂದು ಉತ್ತರ