ArticlesLatest

ಪ್ರತಿಭೆ ಇಲ್ಲದವರನ್ನು ಪ್ರತಿಭಾವಂತರಾಗಿ ಮಾಡುವುದೇ ನಿಜವಾದ ಶಿಕ್ಷಣ ಧರ್ಮ… ಏನಂತೀರಾ?

ಇದು ಸಾಮಾಜಿಕ ಕಾಳಜಿಯ ಲೇಖನಗಳ ಸರಮಾಲೆ-49

ಶಿಕ್ಷಕ ಅಂದರೆ ಕೇವಲ ಶಿಕ್ಷಕರಲ್ಲ. ಅವರಿಗೆ ನಮ್ಮ ಸಂಸ್ಕೃತಿಯಲ್ಲಿ ಗುರುವಿನ ಸ್ಥಾನವನ್ನು ನೀಡಲಾಗಿದೆ. ಗುರು ಬ್ರಹ್ಮ, ಗುರು ವಿಷ್ಣು, ಗುರುದೇವೋ ಮಹೇಶ್ವರ ಎಂಬ ಮಾತಿದೆ. ತಾಯಿ ಜನ್ಮ ಕೊಟ್ಟರೆ, ಗುರು ಬದುಕನ್ನು ಕಟ್ಟಿಕೊಡುತ್ತಾನೆ. ಅಂತಹ ಪವಿತ್ರ ಸ್ಥಾನದಲ್ಲಿರುವವರ ಬಗ್ಗೆ ಮಾತನಾಡುವಾಗ ಗೌರವದಿಂದಲೇ ಮಾತನಾಡಬೇಕು.

ಶಾಲೆ ಎಂದರೆ ಭವಿಷ್ಯದ ಕನಸುಗಳನ್ನು ಕಟ್ಟುವ ದೇವಾಲಯ. ಆ ದೇವಾಲಯದ ಅರ್ಚಕರು ಶಿಕ್ಷಕರು. ಇಂದು ಬಹುತೇಕ ಶಿಕ್ಷಕರು ತಮ್ಮ ಜೀವನವನ್ನೇ ಮಕ್ಕಳಿಗಾಗಿ ಮುಡಿಪಾಗಿಟ್ಟಿದ್ದಾರೆ. ಆದರೆ ಕೆಲವು ಸಣ್ಣ ಲೋಪದೋಷಗಳಿಂದ ಮಕ್ಕಳ ಮನಸ್ಸು ನೊಂದು ಹೋಗುವ ಸಾಧ್ಯತೆ ಇದೆ. ಅದನ್ನು ನಾವು ಪ್ರೀತಿಯಿಂದ ಸರಿಪಡಿಸಿಕೊಳ್ಳಬೇಕಾಗಿದೆ.

ಒಂದು ಸಣ್ಣ ಅವಕಾಶ ಸಿಗಲಿಲ್ಲ ಎಂದರೆ ಮಗುವಿನ ಮನಸ್ಸಿನಲ್ಲಿ ಎಂತಹ ನೋವು ಉಂಟಾಗುತ್ತದೆ? ಇಡೀ ವರ್ಷ ತಯಾರಿ ನಡೆಸಿ, ವೇದಿಕೆ ಹತ್ತುವ ಕನಸು ಕಂಡ ಮಗುವಿಗೆ ಕೊನೆ ಕ್ಷಣದಲ್ಲಿ ಅವಕಾಶ ನಿರಾಕರಿಸಿದರೆ, ಆ ಮಗು ತನ್ನ ಮೇಲೆಯೇ ನಂಬಿಕೆ ಕಳೆದುಕೊಳ್ಳುತ್ತದೆ. ಗುರುಗಳಿಂದಲೇ ತಿರಸ್ಕಾರವಾಯಿತು ಎಂಬ ಭಾವನೆ ಆ ಪುಟ್ಟ ಮನಸ್ಸನ್ನು ಜೀವನಪೂರ್ತಿ ಕಾಡಬಹುದು.

ಭವಿಷ್ಯ ರೂಪಿಸಬೇಕಾದ ಶಾಲೆಗಳಲ್ಲಿ ಭವಿಷ್ಯವನ್ನೇ ಕಳೆದುಕೊಂಡ ಭಾವನೆ ಮಗುವಿಗೆ ಬರಬಾರದಲ್ಲವೇ? ಶಾಲೆಗಳು ಸ್ಪರ್ಧೆಯ ಅಖಾಡವಾಗಬಾರದು, ಅವು ಅವಕಾಶಗಳ ವೇದಿಕೆಯಾಗಬೇಕು. ಶಾಲೆ ಗೆದ್ದರೆ ಸಾಲದು, ಅಲ್ಲಿರುವ ಪ್ರತಿಯೊಂದು ಮಗುವೂ ಗೆಲ್ಲಬೇಕು, ಅದೇ ಗುರುವಿನ ನಿಜವಾದ ಗೆಲುವು.

ಒಂದು ಕ್ಷೇತ್ರದಲ್ಲಿ ಅವಕಾಶ ಸಿಗಲಿಲ್ಲ ಎಂದ ಮಾತ್ರಕ್ಕೆ ಆ ಮಗುವಿನ ಕಥೆ ಮುಗಿದಂತೆ ಅಲ್ಲ. ನಿಜವಾದ ಗುರುಗಳು ಮಾಡಬೇಕಾದದ್ದು ಒಂದು ಬಾಗಿಲು ಮುಚ್ಚಿದರೆ ಮತ್ತೊಂದು ಬಾಗಿಲು ತೆರೆಯುವುದು. ಹಾಡಲು ಬರದ ಮಗುವಿಗೆ ಚಿತ್ರ ಬಿಡಿಸಲು ಹೇಳಿ, ಮಾತನಾಡಲು ಅಂಜುವ ಮಗುವಿಗೆ ಕ್ರೀಡೆಯಲ್ಲಿ ಅವಕಾಶ ಕೊಡಿ.

ವಿಶೇಷವಾಗಿ ಸರ್ಕಾರಿ ಶಾಲೆಗಳ ಬಗ್ಗೆ ಮಾತನಾಡಬೇಕೆಂದರೆ, ಇಂದು ಅಲ್ಲಿ ಓದುತ್ತಿರುವುದು ಬಹುತೇಕ ಬಡ ಕಾರ್ಮಿಕ ವರ್ಗದ, ತೋಟದಲ್ಲಿ, ಗದ್ದೆಯಲ್ಲಿ ಕೂಲಿ ಮಾಡಿ ಜೀವನ ಸಾಗಿಸುವ ಕುಟುಂಬಗಳ ಮಕ್ಕಳು. ಅವರ ಮನೆಯಲ್ಲಿ ಹೇಳಿಕೊಡಲು ಯಾರೂ ಇರುವುದಿಲ್ಲ. ಅವರಿಗೆ ಶಿಕ್ಷಕರೇ ತಾಯಿ, ತಂದೆ, ದೇವರು, ಸರ್ವಸ್ವವೂ. ಅಂತಹ ಅಮಾಯಕ ಮಕ್ಕಳ ವಿಷಯದಲ್ಲಿ ನಾವು ಇನ್ನಷ್ಟು ಜಾಗರೂಕರಾಗಿರಬೇಕು.

ಇನ್ನು ಖಾಸಗಿ ಶಾಲೆಗಳ ವಿಚಾರಕ್ಕೆ ಬಂದರೆ, ಅಲ್ಲಿ ಪೋಷಕರು ತಮ್ಮ ಕಷ್ಟದ ದುಡಿಮೆಯ ಹಣವನ್ನು ಫೀಸಾಗಿ ಕಟ್ಟಿ ನಂಬಿಕೆಯಿಂದ ಸೇರಿಸಿರುತ್ತಾರೆ. ಫೀಸು ಕಟ್ಟುವ ಪ್ರತಿಯೊಬ್ಬ ಪೋಷಕರ ನಿರೀಕ್ಷೆಯೂ ಒಂದೇ – ನನ್ನ ಮಗುವಿಗೂ ಒಂದು ಅವಕಾಶ ಸಿಗಲಿ ಎಂದು. ದುಡ್ಡು ಕೊಟ್ಟು ಕೂಡ ತಮ್ಮ ಮಗು ಮೂಲೆಯಲ್ಲಿ ಪ್ರೇಕ್ಷಕನಾಗಿ ಕೂರಬೇಕಾದರೆ ಆ ಪೋಷಕರ ಮನಸ್ಸಿಗೆ ಎಷ್ಟು ನೋವಾಗಬಹುದು?

ಗುರು ಎಂದರೆ ಜ್ಞಾನ ಕೊಡುವವನು ಮಾತ್ರವಲ್ಲ, ಸಂಸ್ಕಾರ ಕೊಡುವವನು. ಪಾಠವನ್ನು ಯಾವುದೇ ಪುಸ್ತಕದಿಂದ ಕಲಿಯಬಹುದು. ಆದರೆ ಸಮಾನತೆಯನ್ನು, ಮಾನವೀಯತೆಯನ್ನು ಕಲಿಸಬೇಕಾದವರು ಗುರುಗಳು. ಶಾಲೆಯಲ್ಲಿ ಎಲ್ಲರನ್ನು ಸಮಾನವಾಗಿ ಕಂಡಾಗಲೇ, ಮಕ್ಕಳು ಸಮಾಜದಲ್ಲಿ ಸಮಾನತೆಯನ್ನು ಕಲಿಯಲು ಸಾಧ್ಯ.

ಇಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕಾದ ಮುಖ್ಯ ಸತ್ಯವೊಂದಿದೆ. ಪ್ರತಿಭೆ ಇರುವವರಿಗೆ ಪ್ರೋತ್ಸಾಹ ಕೊಡುವುದು ದೊಡ್ಡ ವಿಷಯವೇ ಅಲ್ಲ. ಈಗಾಗಲೇ ಚೆನ್ನಾಗಿ ಹಾಡುವ ಮಗುವಿಗೆ ಮೈಕ್ ಕೊಡುವುದು ಸುಲಭ. ಅದನ್ನು ಯಾರು ಬೇಕಾದರೂ ಮಾಡಬಹುದು.

ಆದರೆ ನಿಜವಾದ ಸಾಧನೆ ಇರುವುದು ಪ್ರತಿಭೆ ಇಲ್ಲದವರನ್ನು ಪ್ರತಿಭಾವಂತರಾಗಿ ಮಾಡುವುದರಲ್ಲಿ. ವೇದಿಕೆ ಅಂದರೆ ಭಯಪಡುವ ಮಗುವನ್ನು ಧೈರ್ಯವಾಗಿ ವೇದಿಕೆ ಹತ್ತುವಂತೆ ಮಾಡುವುದು, ತೊದಲುವ ಮಗುವನ್ನು ನಿರರ್ಗಳವಾಗಿ ಮಾತನಾಡುವಂತೆ ಮಾಡುವುದು – ಇದೇ ನಿಜವಾದ ಗುರುವಿನ ಲಕ್ಷಣ.

ಈಗಾಗಲೇ ಬೆಳಗುತ್ತಿರುವ ದೀಪಕ್ಕೆ ಎಣ್ಣೆ ಹಾಕುವುದು ಸುಲಭ, ಆದರೆ ಆರಿಹೋಗಿರುವ ದೀಪವನ್ನು ಬೆಳಗಿಸುವುದೇ ನಿಜವಾದ ಸಾಧನೆ. ಒಬ್ಬ ಹಿಂದುಳಿದ ಮಗುವನ್ನು ಮುಂದೆ ತಂದು ನಿಲ್ಲಿಸಿದಾಗ ಆ ಗುರುವಿಗೆ ಸಿಗುವ ತೃಪ್ತಿ ನೂರು ಪ್ರತಿಭಾವಂತ ಮಕ್ಕಳಿಗೆ ಬಹುಮಾನ ಕೊಡಿಸಿದಾಗಲೂ ಸಿಗುವುದಿಲ್ಲ.

ಸಾಂಸ್ಕೃತಿಕ ಚಟುವಟಿಕೆಗಳು ಎಂದರೆ ಕೇವಲ ಮನರಂಜನೆಯಲ್ಲ, ಅದು ಮಗುವಿನ ವ್ಯಕ್ತಿತ್ವ ವಿಕಸನದ ಕೇಂದ್ರ. ಆ ವೇದಿಕೆಯಲ್ಲಿ ಎಲ್ಲ ಮಕ್ಕಳೂ ಸಮಾನರು. ಒಂದೇ ಮಕ್ಕಳನ್ನು ಪದೇ ಪದೇ ಹಾಡಿಸಿ ಉಳಿದ ಮಕ್ಕಳನ್ನು ಪ್ರೇಕ್ಷಕರನ್ನಾಗಿ ಮಾಡುವುದು ಎಷ್ಟು ಸರಿ?

ಇದು ಒಂದು ಸಾಮಾಜಿಕ ಚಿಂತನೆ. ಇಂತಹ ಸನ್ನಿವೇಶಗಳು ನಮ್ಮ ಶಾಲೆಗಳಲ್ಲಿ  ಬರಬಾರದು ಎಂಬ ಕಳಕಳಿಯ ಚಿಂತನೆ ಇದು. ನಮ್ಮ ಶಿಕ್ಷಣ ವ್ಯವಸ್ಥೆ ಇನ್ನಷ್ಟು ಉತ್ತಮವಾಗಲಿ ಎಂಬ ಆಶಯವಷ್ಟೇ. ನಮ್ಮ ಮಕ್ಕಳಿಗಾಗಿ ನಾವೆಲ್ಲರೂ ಒಟ್ಟಾಗಿ ಯೋಚಿಸಬೇಕಾದ ವಿಷಯ ಇದು.

ಎಲ್ಲರನ್ನು ಸಮಾನವಾಗಿ ಕಾಣುವುದು ಇದೇ ನಿಜವಾದ ಗುರುವಿನ ಧರ್ಮ. ಪಕ್ಷಪಾತವಿಲ್ಲದ ಮನಸ್ಸು, ಪ್ರತಿಭೆಯನ್ನು ಸೃಷ್ಟಿಸುವ ಕೈಗಳು ಇದ್ದಾಗ ಮಾತ್ರ ಶಿಕ್ಷಕರು ನಿಜವಾದ ಗುರುವಾಗುತ್ತಾರೆ. ಅಂತಹ ಗುರುಗಳು ಇರುವ ತನಕ ಈ ಸಮಾಜಕ್ಕೆ ಯಾವುದೇ ಕೊರತೆ ಇಲ್ಲ.

ಈ ನೆಲದಲ್ಲಿ ಯಾವುದೇ ಮಗು ತನ್ನ ಪ್ರತಿಭೆಗೆ ಅವಕಾಶ ಸಿಗಲಿಲ್ಲ ಎಂದು ಕಣ್ಣೀರು ಹಾಕಬಾರದು. ಶಾಲೆಗಳು ಮಕ್ಕಳ ಭವಿಷ್ಯವನ್ನು ಕಿತ್ತುಕೊಳ್ಳುವ ಜಾಗವಾಗಬಾರದು, ಭವಿಷ್ಯವನ್ನು ಕಟ್ಟಿಕೊಡುವ ಗುರುಕುಲವಾಗಬೇಕು. ಬನ್ನಿ, ಗುರುಗಳ ಸ್ಥಾನಕ್ಕೆ ಗೌರವ ಕೊಡುತ್ತಲೇ, ಪಕ್ಷಪಾತವಿಲ್ಲದ ಶಾಲೆಗಳನ್ನು ಕಟ್ಟೋಣ, ಸಮಾನತೆಯ ಸಮಾಜವನ್ನು ನಿರ್ಮಿಸೋಣ.

 

admin
the authoradmin

ನಿಮ್ಮದೊಂದು ಉತ್ತರ