ರಾಜ್ಯದ ಜನಕ್ಕೆ ಬೆಲೆ ಏರಿಕೆ ಶಾಕ್… ಗ್ಯಾರಂಟಿ ಯೋಜನೆ ಸರ್ಕಾರಕ್ಕೆ ಹೊರೆ ಶ್ರೀಸಾಮಾನ್ಯನಿಗೆ ಬರೆ

ದಿನ ಬೆಳಗಾದರೆ ಜನ ಬೆಲೆ ಏರಿಕೆ ಬಗ್ಗೆಯೇ ಮಾತನಾಡುತ್ತಿದ್ದಾರೆ… ಕೆಲವರು ಗ್ಯಾರಂಟಿ ಯೋಜನೆಗಳನ್ನು ಬಳಸಿಕೊಳ್ಳುತ್ತಲೇ ಗ್ಯಾರಂಟಿ ಯೋಜನೆಯಿಂದಲೇ ಸರ್ಕಾರ ಜನರ ಮೇಲೆ ತೆರಿಗೆ ಹಾಕುತ್ತಿದೆ ಎಂದು ಹಿಡಿಶಾಪ ಹಾಕುತ್ತಿದ್ದಾರೆ… ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಯಾವುದೇ ವಸ್ತುವಿನ ಬೆಲೆ ಏರಿಕೆಯಾಗಿದೆಯೇ ಹೊರತು ಇಳಿಕೆಯಾಗಲ್ಲ ಎಂಬುದು ಕಟು ಸತ್ಯವಾಗಿದೆ. ಜನಹಿತ ಆಡಳಿತ ಕೊಡುತ್ತೇವೆ ಎಂಬ ವಾಗ್ದಾನದೊಂದಿಗೆ ಅಧಿಕಾರ ಹಿಡಿದ ಕಾಂಗ್ರೆಸ್ ಸರ್ಕಾರ ಇವತ್ತು ಆರ್ಥಿಕ ಸಂಕಷ್ಟದಿಂದ ಹೊರ ಬರಲು ಸಾಧ್ಯವಾಗದೆ ವಿಲವಿಲ ಒದ್ದಾಡುತ್ತಿದೆ.. ಆ ಹೊರೆಯನ್ನು ಜನರ ಮೇಲೆ ಹಾಕಿ ಹಗುರವಾಗಲು ಸರ್ಕಸ್ ಮಾಡುತ್ತಿದೆ..

2023ರಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಲೇ 40ಪೆರ್ಸೆಂಟ್ ಕಮೀಷನ್, ಪೇಸಿಎಂ ಎಂಬಿತ್ಯಾದಿ ಅಭಿಯಾನಗಳನ್ನು ಮಾಡುತ್ತಾ ಜನರಲ್ಲಿ ಸರ್ಕಾರದ ವಿರುದ್ಧ ಜನಾಕ್ರೋಶ ಸೃಷ್ಟಿ ಮಾಡುವಲ್ಲಿ ಯಶಸ್ವಿಯಾದ ಅಂದಿನ ಕೆಪಿಸಿಸಿ ಅಧ್ಯಕ್ಷ ಇಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ತಾನು ಮುಖ್ಯಮಂತ್ರಿಯಾಗುವ ಕನಸು ಕಂಡಿದ್ದರು. ತಮ್ಮ ಹೋರಾಟಕ್ಕೆ ಮೇಕೆದಾಟು ಪಾದಯಾತ್ರೆ ಮೂಲಕ ಮುನ್ನುಡಿ ಬರೆದರು. ನಿತ್ಯವೂ ಅಂದಿನ ಬೊಮ್ಮಾಯಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಾ ಭ್ರಷ್ಟಾಚಾರದ ಆರೋಪಗಳನ್ನು ಮಾಡುತ್ತಾ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಯಾರೂ ಊಹಿಸದ ರೀತಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರೂವರೆ ವರ್ಷಗಳಾಗುತ್ತಿವೆ. ಆದರೆ ಹಿಂದಿನ ಸರ್ಕಾರದ ಭ್ರಷ್ಟಾಚಾರದ ಯಾವುದೇ ತನಿಖೆಯೂ ಆಗಿಲ್ಲ. 40 ಪರ್ಸೆಂಟ್ ಕಮೀಷನ್ ವಿಚಾರದ ಬಗ್ಗೆ ಚಕಾರವೆತ್ತಿಲ್ಲ. ಕೋವಿಡ್ ಸಮಯದಲ್ಲಿ ಅಕ್ರಮವಾಗಿದೆ ಎನ್ನುತ್ತಲೇ ಬಂದರಾದರೂ ಅದರ ತನಿಖೆ ಏನಾಯಿತು ಎಂಬುದಕ್ಕೆ ಉತ್ತರವಿಲ್ಲ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ದಿನಗಳಲ್ಲಿ ಸಚಿವರು, ಶಾಸಕರು ಹಿಡಿತದಲ್ಲಿದ್ದರಾದರೂ ಈಗ ನಾಯಕರ ನಡುವೆ ಭಿನ್ನಮತ ಸ್ಪೋಟಗೊಂಡಿದೆ. ಸಿದ್ದರಾಮಯ್ಯರವರನ್ನು ಸ್ಟಿಂಗ್ ಆಪರೇಷನ್ ಮಾಡಿಸಿ ಅಧಿಕಾರದಿಂದ ಕೆಳಕ್ಕಿಳಿಸಿದರೆಂಬ ವಿರೋಧ ಪಕ್ಷದವರ ಆರೋಪಗಳು ಮತ್ತು ನಡೆಯುತ್ತಿರುವ ವಿದ್ಯಮಾನಗಳು ಅಸಹ್ಯಕಾರಿಯಾಗಿ ಹೈಕಮಾಂಡ್ ಮಟ್ಟಕ್ಕೆ ಹೋಗಿದ್ದು ಇಡೀ ದೇಶ ರಾಜ್ಯದ ಕಡೆಗೆ ನೋಡುವಂತಾಗಿದೆ.

ಇನ್ನು ಜನಸಾಮಾನ್ಯರು ಬೆಲೆ ಏರಿಕೆಯ ಹೊಡೆತದಿಂದ ತತ್ತರಿಸಿದ್ದಾರೆ. ಬರ ಪರಿಸ್ಥಿತಿ ರೈತರು ಮಾತ್ರವಲ್ಲದೆ, ಎಲ್ಲರನ್ನು ಇನ್ನಿಲ್ಲದಂತೆ ಕಿತ್ತು ತಿನ್ನುವ ಕಾಲ ಹತ್ತಿರ ಬಂದಿದೆ. ಇದೇ ಸಮಯದಲ್ಲಿ ಸರ್ಕಾರ ಬೆಲೆ ಏರಿಕೆ ಮಾಡಿ ಜನರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ದಿನಬೆಳಗಾದರೆ ಸ್ಟಿಂಗ್ ಆಪರೇಷನ್ ಚರ್ಚೆ, ಟೀಕೆ, ಆರೋಪಕ್ಕಷ್ಟೆ ಸೀಮಿತವಾದಂತೆ ಕಾಣುತ್ತಿದೆ. ಅದಕ್ಕಿಂತ ಹೆಚ್ಚಾಗಿ ಆಡಳಿತ ಪಕ್ಷದ ನಾಯಕರು ಪ್ರತಿಭಟನೆ ಮಾಡುತ್ತಾ ಬೀದಿಯಲ್ಲಿ ನಿಂತಿದ್ದಾರೆ. ಕೆಪಿಎಸ್ಸಿ ಸೇರಿದಂತೆ ಹಲವು ಹುದ್ದೆ ನೇಮಕದಲ್ಲಿ ಅಕ್ರಮವಾಗಿದೆ ಎಂಬ ಆರೋಪಗಳು ನಿತ್ಯದ ಸುದ್ದಿಯಾಗಿವೆ. ಅಭಿವೃದ್ಧಿ ಕಾರ್ಯಗಳು ಮರೀಚಿಕೆಯಾಗಿವೆ. ಬೆಲೆ ಏರಿಕೆ ಬಗ್ಗೆ ಮಾತನಾಡುತ್ತಿಲ್ಲ.
ಇನ್ನು ಕಾಂಗ್ರೆಸ್ ನಾಯಕರ ಮಾತು ನಂಬಿ ಮತಹಾಕಿದಕ್ಕೆ ಶ್ರೀಸಾಮಾನ್ಯರು ಅನುಭವಿಸುವಂತಾಗಿದೆ. ಬಹುತೇಕ ಜನರು ನಿಮ್ಮ ಗ್ಯಾರಂಟಿ ಯೋಜನೆಯೂ ಬೇಡ ನಿಮ್ಮ ಸಹವಾಸವೂ ಬೇಡ ಎಂಬ ಸ್ಥಿತಿಗೆ ಬಂದು ನಿಂತಿದ್ದಾರೆ. ಅಧಿಕಾರಕ್ಕೆ ಬಂದ ಆರಂಭದಲ್ಲಿ ಯಾವುದೇ ಕಂಡೀಷನ್ ಇಲ್ಲದೆ ಯೋಜನೆಗಳನ್ನು ಘೋಷಣೆ ಮಾಡಿ ಅದರ ಹೊಡೆತ ರಾಜ್ಯ ಖಜಾನೆ ಮೇಲೆ ಆದ ಬಳಿಕ ಈಗ ಎಚ್ಚೆತ್ತುಕೊಂಡಿರುವ ಸರ್ಕಾರ ಪರಿಷ್ಕರಣೆ ನೆಪದಲ್ಲಿ ಫಲಾನುಭವಿಗಳಿಂದ ಯೋಜನೆಯನ್ನು ಕಿತ್ತುಕೊಳ್ಳುತ್ತಿದೆ. ಇದರಾಚೆಗೆ ಅಧಿಕಾರಕ್ಕೆ ಬಂದಲ್ಲಿಂದ ಇಲ್ಲಿತನಕ ಯಾವ ರೀತಿಯಲ್ಲಿ ಬೆಲೆ ಏರಿಕೆ ಮಾಡಿದ್ದಾರೆ ಎಂಬುದನ್ನು ಗಮಿಸಿದರೆ ಬೆಚ್ಚಿ ಬೀಳುವಂತಾಗಿದೆ. ಹಾಲು ಹಾಗೂ ಬಸ್ ಪ್ರಯಾಣದರವನ್ನು ಇತಿಹಾಸದಲ್ಲಿಯೇ ಯಾರು ಯಾವತ್ತು ಮಾಡದಷ್ಟು ಏರಿಕೆಯನ್ನು ಮಾಡಿ ಜನರ ಆಕ್ರೋಶಕ್ಕೆ ಒಳಗಾಗಿದೆ. ಅದರಲ್ಲೂ ಕಳೆದ ಒಂದು ವರ್ಷದ ಅವಧಿಯಲ್ಲಿ ಮಾಡಿರುವ ಅಗತ್ಯವಸ್ತುಗಳ ಬೆಲೆ ಏರಿಕೆ ಜನ ಸಂಕಷ್ಟದಲ್ಲಿಯೇ ದಿನಕಳೆಯುವಂತೆ ಮಾಡಿದೆ.

ಜನರ ಆರ್ಥಿಕ ಸ್ಥಿತಿ ದುಸ್ಥಿತಿಯಲ್ಲಿದೆ. ದುಡಿಮೆಗೆ ತಕ್ಕ ಪ್ರತಿಫಲ ಸಿಗದ ಕಾಲದಲ್ಲಿ, ರೈತರು ಮಳೆಯಿಲ್ಲದೆ ಬರದಸ್ಥಿತಿ ಎದುರಿಸುತ್ತಿರುವ ಕೆಟ್ಟ ಪರಿಸ್ಥಿತಿಯಲ್ಲಿ ಬೆಲೆ ಏರಿಕೆ ಸರಪಟಾಕಿಯನ್ನು ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಸಿಡಿಸಿದೆ. ಇದು ಇಲ್ಲಿಗೆ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಸರ್ಕಾರಕ್ಕೆ ಮದ್ಯವೂ ಆದಾಯದ ಮೂಲವಾಗಿದ್ದು, ಮದ್ಯದ ಮೇಲೆ ಶೇ.20ರಷ್ಟು ತೆರಿಗೆ ಹೆಚ್ಚಾಗಿದೆ. ಅದರಂತೆ ಬಿಯರ್ ಮೇಲೆ ಶೇ.10ರಷ್ಟು ತೆರಿಗೆ ಹೆಚ್ಚಾಗಿದೆ. ಬಸ್ ಟಿಕೆಟ್ ದರ ಹೆಚ್ಚಳವಾಗಿದೆ. ಬಿಎಂಟಿಸಿ ಹಾಗೂ ಕೆಎಸ್ ಆರ್ ಟಿಸಿ ಬಸ್ಗಳಿಗೆ ಶೇ.15ರಷ್ಟು ಟಿಕೆಟ್ ದರ ಏರಿಕೆಯಾಗಿದೆ. ಇದರ ಬಿಸಿ ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ತಟ್ಟದೆ ಇದ್ದರೂ ಪ್ರತಿದಿನ ಪ್ರಯಾಣ ಮಾಡುವ ಪುರುಷರು ಸಂಕಷ್ಟ ಎದುರಿಸಲೇ ಬೇಕಾಗಿದೆ. ಡೀಸೆಲ್ ದರವೂ ಹೆಚ್ಚಳವಾಗಿದೆ. ಪ್ರತಿ ಲೀಟರ್ಗೆ ರೂ.2 ಹೆಚ್ಚಳವಾಗಿದೆ. ಈಗಾಗಲೇ ವಿದ್ಯುತ್ ಬಿಲ್ ದರವೂ ಪ್ರತಿ ಯುನಿಟ್ಗೆ 36 ಪೈಸೆ ಹೆಚ್ಚಳವಾಗಿದೆ. ಇದೂ ಸಾಲದೆಂದು ಸ್ಥಿರ ಶುಲ್ಕವೂ ಹೆಚ್ಚಿಸಲಾಗಿದೆ.
ಜೂನ್ 2024ರಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ರೂ.3ರಷ್ಟು ಏರಿಕೆಯಾಯಿತು. ಇದೀಗ ಮತ್ತೆ ಏರಿಕೆಯಾಗುವ ಸಾಧ್ಯತೆಯೂ ಇದೆ. ಆಸ್ತಿ ಮಾರಾಟದ ಮಾರ್ಗಸೂಚಿ ಮೌಲ್ಯ ಶೇ.15ರಿಂದ 30ರಷ್ಟು ವರೆಗೆ ಹೆಚ್ಚಳವಾಗಿದೆ. ಇದರಿಂದ ಆಸ್ತಿ ಕೊಳ್ಳುವವರಿಗೆ ಬರೆ ಎಳೆದಂತಾಗಿದೆ. ಹ್ಯಾಚ್ಬ್ಯಾಕ್ ಕಾರುಗಳು ಈಗ ಐಷಾರಾಮಿ ಕ್ಯಾಬ್ಗಳಾಗುತ್ತಿವೆ. ಇದರಿಂದ ಕಾರು ಬಾಡಿಗೆ ದರವೂ ಹೆಚ್ಚಾಗುತ್ತಿದೆ. ಏಕೆಂದರೆ ಕಾರುಗಳ ನಿರ್ವಹಣಾ ವೆಚ್ಚ ದುಬಾರಿಯಾಗಿದೆ.
ಕೈಗಾರಿಕಾ ಬಳಕೆಗಾಗಿ ವಿದ್ಯುತ್, ನೀರು ಮತ್ತು ಇಂಧನದ ದರಗಳು ಹೆಚ್ಚಳ. ಖಾಸಗಿ ಬಸ್ಗಳ ಬಾಡಿಗೆ ಹೆಚ್ಚಳದಿಂದ ಪ್ರಯಾಣದ ಖರ್ಚು ದುಬಾರಿ. ಖಾಸಗಿ ಪದವಿ ಕಾಲೇಜುಗಳಲ್ಲಿ ಶೇ.10ರಷ್ಟು ಶುಲ್ಕ ಏರಿಕೆಯಾಗಿದೆ. ಇದರಿಂದ ಶಿಕ್ಷಣ ಕ್ಷೇತ್ರಕ್ಕೂ ಬೆಲೆ ಏರಿಕೆಯ ಬಿಸಿ ತಟ್ಟಿದೆ. ರೂ.25 ಲಕ್ಷ ಮೀರಿದ ವಿದ್ಯುತ್ ವಾಹನಗಳಿಗೆ ಶೇ.10ರಷ್ಟು ಲೈಫ್ ಟೈಮ್ ಟ್ಯಾಕ್ಸ್ ವಿಧಿಸಲಾಗಿದೆ. ಬೆಂಗಳೂರು ಮೆಟ್ರೋ ಶೇ.71ರಷ್ಟು ಬಾಡಿಗೆ ಏರಿಕೆ ಮೂಲಕ ಇತಿಹಾಸದಲ್ಲೇ ಅತಿಹೆಚ್ಚು ದರವಾಗಿದೆ.

ಹಾಲು, ಮೊಸರು, ಮಜ್ಜಿಗೆ ದರಗಳಲ್ಲಿ ದಾಖಲೆಯ ಏರಿಕೆಯಾಗಿದೆ. ಹಾಗೆಯೇ ನಂದಿನಿ ಉತ್ಪನ್ನಗಳ ಬೆಣ್ಣೆ ತುಪ್ಪದ ಬೆಲೆಯೂ ಹೆಚ್ಚಾಗಲಿದೆ. ಸೇವೆಗಳು ಮತ್ತು ಚಿತ್ರಮಂದಿರ ಟಿಕೆಟ್ಗಳಿಗೆ ಶೇ.2ರಷ್ಟು ಸೆಸ್ ವಿಧಿಸಲಾಗಿದೆ. ವಾಸಸ್ಥಳ ಮತ್ತು ವ್ಯಾಪಾರಿಕ ಪ್ರದೇಶಗಳಲ್ಲಿ ಪಾರ್ಕಿಂಗ್ ಶುಲ್ಕ ಜತೆಗೆ ಮನೆ ಕಂದಾಯವೂ ಹೆಚ್ಚಾಗಿದೆ. ಕ್ವಾರಿ ಚಾರ್ಜ್ ಹೆಚ್ಚಳದಿಂದ ಕಟ್ಟಡ ನಿರ್ಮಾಣದ ವೆಚ್ಚ ಗಗನಕ್ಕೆ ಏರಿದೆ. ಬಾಡಿಗೆ ದಾಖಲೆಗಳ ಸ್ಟಾಂಪ್ ಡ್ಯೂಟಿ ಶೇ.200ರಿಂದ 500ರಷ್ಟು ಹೆಚ್ಚಳ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಶೇ.3ರಿಂದ 5ರಷ್ಟು ವರೆಗೆ ಏರಿಕೆ. ಎಲ್ಪಿಜಿ ಸಿಲಿಂಡರ್ ಬೆಲೆ ರೂ 50 ಹೆಚ್ಚಳವಾಗಿದೆ. ಇದರಿಂದ ಜನಸಾಮಾನ್ಯರಿಗೆ ದೊಡ್ಡ ಹೊಡೆತವೇ ಆಗಿದೆ. ಹೊಸ ವಾಹನ ನೋಂದಣಿಗೆ ₹500-₹1000 ಹೆಚ್ಚುವರಿ ಶುಲ್ಕ ವಿಧಿಸಲಾಗಿದೆ. ನೀರಿನ ಬಿಲ್ ದರ ಏರಿಕೆಯಿಂದ ಮನೆ ಬಳಕೆದಾರರಿಗೆ ಹೊರೆಯಾಗಿದೆ. ಬರದ ಕಾರಣ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾದರೂ ಅಚ್ಚರಿಯಿಲ್ಲ.
ಖಾಸಗಿ ಆಸ್ಪತ್ರೆಗಳಲ್ಲಿ ಎಲ್ಲ ರೀತಿಯ ತಪಾಸಣೆ, ಪರೀಕ್ಷೆ ವೆಚ್ಚವೂ ಹೆಚ್ಚಾಗಿದೆ. ತರಕಾರಿ, ಹಣ್ಣುಗಳು, ಶಾಲಾ ಫೀಸ್ ಗಳಲ್ಲಿ ಏರಿಕೆಯಿಂದ ದಿನನಿತ್ಯದ ಖರ್ಚು ಹೆಚ್ಚಾಗಿದೆ. ಬರ್ತ್ ಅಂಡ್ ಡೆತ್ ಸರ್ಟಿಫಿಕೆಟ್ ಗಳಿಗೂ ಶುಲ್ಕ ಏರಿಸಲಾಗಿದೆ. ಒಟ್ಟಾರೆಯಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಮೇಲೆಯೇ ತೆರಿಗೆಯ ಬರೆಯನ್ನು ಹಾಕುತ್ತಾ ಬಂದಿದೆ. ಅದರಲ್ಲೂ ರಾಜ್ಯ ಸರ್ಕಾರದ ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳು ಸರ್ಕಾರದ ಬೊಕ್ಕಸವನ್ನು ಖಾಲಿ ಮಾಡಿದ್ದು ಮಾತ್ರವಲ್ಲದೆ ಜನರ ಮೇಲೆ ಹೊರೆ ಬೀಳುವಂತೆ ಮಾಡಿದೆ.

ರಾಜ್ಯದಲ್ಲಿ ಬೆಲೆ ಏರಿಕೆ, ಭ್ರಷ್ಟಾಚಾರ ಸೇರಿದಂತೆ ಹತ್ತು ಹಲವು ವಿಚಾರಗಳು ಮುನ್ನಲೆಯಲ್ಲಿದ್ದರೂ ವಿರೋಧಪಕ್ಷವಾಗಿರುವ ಬಿಜೆಪಿ ಮತ್ತು ಜೆಡಿಎಸ್ ಪರಿಣಾಮಕಾರಿಯಾಗಿ ಹೋರಾಟ ಮಾಡದಿರುವುದು ಆಡಳಿತರೂಢರನ್ನು ತಾವು ಏನು ಮಾಡಿದರೂ ನಡೆಯುತ್ತದೆ ಎಂಬ ಮನಸ್ಥಿತಿಗೆ ತಳ್ಳಿದೆ. ಇದು ಹೀಗೆಯೇ ಮುಂದುವರೆದರೆ ಕರ್ನಾಟಕ ಜನರು ಇನ್ಯಾವ ರೀತಿಯ ಸಂಕಷ್ಟಗಳನ್ನು ಎದುರಿಸಬೇಕಾಗಿ ಬರುತ್ತೋ ಆ ದೇವರಿಗೆ ಗೊತ್ತು…
ಚುನಾವಣೆಯಲ್ಲಿ ಜನಾಕ್ರೋಶ ಸಾಬೀತು…
ಆಡಳಿತರೂಢ ಕಾಂಗ್ರೆಸ್ ರಾಜ್ಯದಲ್ಲಿ ಎರಡು ಪದವೀಧರ ಕ್ಷೇತ್ರ ಹಾಗೂ ಎರಡು ಶಿಕ್ಷಕರ ಕ್ಷೇತ್ರ ಸೇರಿದಂತೆ ಒಟ್ಟು ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸೋಲು ಕಂಡಿದೆ. ಇಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಗೆಲುವು ಕಂಡಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ಬರಲಿದ್ದು ಅದನ್ನು ಎದುರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಈಗಿರುವ ಜನಾಕ್ರೋಶ ಮುಂದುವರೆದರೆ ಅದರ ಪರಿಣಾಮಗಳು ಮತವಾಗಿ ಪರಿವರ್ತನೆಯಾದರೆ ನಿಜಕ್ಕೂ ಸಂಕಷ್ಟವೇ.. ಸದ್ಯ ಸರ್ಕಾರ ದಸರಾಕ್ಕೆ ಹಾಲು, ದೀಪಾವಳಿಗೆ ಬಸ್ ದರ ಜಾಸ್ತಿ ಮಾಡಿ ಜನರಿಂದ ಹಿಡಿಶಾಪ ಹಾಕಿಸಿಕೊಳ್ಳುತ್ತಿದ್ದು ಜನರ ಬಾಯಿಮುಚ್ಚಿಸುವ ಸಲುವಾಗಿ ಇದೀಗ ಗೃಹಲಕ್ಷ್ಮಿಯ ಮೂರು ಕಂತುಗಳನ್ನು ಫಲಾನುಭವಿಗಳ ಖಾತೆಗೆ ಹಾಕುತ್ತಿದೆ. ಆದರೆ ಜನ ಯಾವ ರೀತಿಯಲ್ಲಿ ಆಲೋಚನೆ ಮಾಡುತ್ತಾನೆ ಎಂಬುದು ಮುಂದೆ ಗೊತ್ತಾಗಲಿದೆ…
LK Kodagu







