LatestNews

ಬಸವಣ್ಣನವರ ಸಪ್ತ ಸೂತ್ರಗಳು ಮಕ್ಕಳ ಬದುಕಿಗೆ ನೈತಿಕತೆಯ ಬೆಳಕು: ಅಮರವಾಣಿ ಐದನಾಳ

ರಾಯಚೂರು : ಬಸವಣ್ಣನವರ ಸಪ್ತ ಸೂತ್ರಗಳು ಮಕ್ಕಳ ಬದುಕಿಗೆ ನೈತಿಕತೆಯ ಬೆಳಕು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕ, ಲಿಂಗಸುಗೂರಿನ ಅಧ್ಯಕ್ಷೆ ಅಮರವಾಣಿ ಐದನಾಳ ಹೇಳಿದರು.

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಯರಡೋಣ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕೊಪ್ಪಳದ ರುದ್ರಪ್ಪ ಬೆಲ್ಲದ ಮತ್ತು ಮತ್ತು ಲಲಿತಾ ಬೆಲ್ಲದ ಹಾಗೂ ಧಾರವಾಡ ನವಲಗುಂದ ವಿನಾಯಕಪೇಟೆಯ ಎಂ ಎಲ್ ಪಾಟೀಲ್ ಮತ್ತು ಸಾವಿತ್ರಮ್ಮ ಅವರ ದತ್ತಿ ಅಂಗವಾಗಿ ಆಯೋಜಿಸಿದ್ದ 132ನೇ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ  ಮಾತನಾಡಿದರು.

ಹನ್ನೆರಡನೇ ಶತಮಾನವು ಭಾರತದ ಇತಿಹಾಸದಲ್ಲಿ ಸುವರ್ಣಯುಗವಾಗಿದ್ದು, ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ರಾಂತಿಯು ಮಾನವ ಸಮಾಜದ ಉದ್ಧಾರಕ್ಕೆ ಹೊಸ ದಿಕ್ಕು ನೀಡಿತು. ಸಮಾನತೆ, ಸ್ವಾತಂತ್ರ್ಯ, ಸಹೋದರತ್ವ ಹಾಗೂ ಜಾತಿರಹಿತ ಸಮಾಜದ ನಿರ್ಮಾಣಕ್ಕೆ ಬಸವಣ್ಣನವರು ಹಾಕಿಕೊಟ್ಟ ತಳಹದಿ ಇಂದಿಗೂ ಪ್ರಸ್ತುತವಾಗಿದೆ.

ಕಾಯಕ ಮತ್ತು ದಾಸೋಹದ ತತ್ವಗಳ ಮೂಲಕ ಸತ್ಯ, ಪ್ರಾಮಾಣಿಕತೆ ಹಾಗೂ ಸೇವಾಮನೋಭಾವದ ಬದುಕನ್ನು ರೂಪಿಸಿಕೊಳ್ಳಲು ಶರಣರು ಮಾರ್ಗದರ್ಶನ ಮಾಡಿದರು. ಬಸವಣ್ಣನವರ ಸಪ್ತ ಸೂತ್ರಗಳಾದ ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರು ಅಳಿಯಲು ಬೇಡ ಎಂಬ ತತ್ವಗಳನ್ನು ವಿದ್ಯಾರ್ಥಿಗಳಿಗೆ ಸರಳವಾಗಿ ವಿವರಿಸಿದರು.

ಕಳ್ಳತನವೆಂದರೆ ಕೇವಲ ವಸ್ತುಗಳನ್ನು ಕದಿಯುವುದಲ್ಲ; ಪ್ರಾಮಾಣಿಕ ದುಡಿಮೆಯಿಲ್ಲದೆ ಪರರ ಸಂಪತ್ತಿನ ಮೇಲೆ ಆಸೆಪಡುವುದೂ ತಪ್ಪು. ಕೊಲೆ ಎಂದರೆ ಜೀವಹರಣ ಮಾತ್ರವಲ್ಲ, ಮಾತು ಮತ್ತು ವರ್ತನೆಯ ಮೂಲಕ ಇತರರ ಮನಸ್ಸಿಗೆ ನೋವುಂಟುಮಾಡುವುದೂ ಹಿಂಸೆಯೇ. ಸತ್ಯ ನುಡಿಯುವುದು, ಕೋಪವನ್ನು ನಿಯಂತ್ರಿಸುವುದು, ಎಲ್ಲರನ್ನೂ ಗೌರವಿಸುವುದು, ಅಹಂಕಾರ ತೊರೆಯುವುದು ಹಾಗೂ ಪರನಿಂದೆ ಮಾಡದೆ ಬದುಕುವುದು ನೈತಿಕ ಜೀವನದ ಪ್ರಮುಖ ಲಕ್ಷಣಗಳಾಗಿವೆ.

ಮಕ್ಕಳಲ್ಲಿ ಬಾಲ್ಯದಿಂದಲೇ ಮಾನವೀಯ ಮೌಲ್ಯಗಳನ್ನು ಬೆಳೆಸಿದರೆ ಸುಸಂಸ್ಕೃತ ಹಾಗೂ ಸಮೃದ್ಧ ಸಮಾಜ ನಿರ್ಮಾಣ ಸಾಧ್ಯ. ಶಿಕ್ಷಣ ಮತ್ತು ಮಾನವೀಯ ಮೌಲ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಪ್ರೀತಿ, ಶಿಸ್ತು, ಗೌರವ, ಏಕಾಗ್ರತೆ ಮತ್ತು ಜ್ಞಾನ ಇವು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಾದ ಗುಣಗಳಾಗಿವೆ. ಮಗುವಿನ ಶಿಸ್ತಿನ ಬದುಕಿಗೆ ತಾಯಿ ಮೊದಲ ಗುರುವಾಗಿದ್ದು, ಅದರ ಮುಂದಿನ ವ್ಯಕ್ತಿತ್ವ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರವೂ ಅತ್ಯಂತ ಮಹತ್ವದ್ದಾಗಿದೆ.

ವಿನಯ, ಸಂಯಮ ಮತ್ತು ಪ್ರಾಮಾಣಿಕತೆಯಂತಹ ಸದ್ಗುಣಗಳನ್ನು ಮಕ್ಕಳಲ್ಲಿ ಬೆಳೆಸುವ ಮೂಲಕ ಅವರ ಬದುಕಿಗೆ ಭದ್ರ ಬುನಾದಿ ಹಾಕಬೇಕು. ವಚನಗಳು ಕೇವಲ ಸಾಹಿತ್ಯದ ಸಾಲುಗಳಲ್ಲ; ಅವು ಅನುಭಾವದ ನೆಲೆಯಲ್ಲಿ ಹುಟ್ಟಿದ ಶರಣರ ಹೃದಯದ ಶಾಸನಗಳಾಗಿವೆ. ಪ್ರತಿಯೊಂದು ಮನೆಯಲ್ಲೂ ತಾಯಂದಿರು ಮಕ್ಕಳಿಗೆ ವಚನಗಳನ್ನು ಕಲಿಸುವ ಪರಂಪರೆ ಬೆಳೆಸಬೇಕು. ಶಾಲೆಗಳಲ್ಲಿ ಶಿಕ್ಷಕರು ಈ ಕಾರ್ಯವನ್ನು ಮುಂದುವರಿಸಿದಾಗ ಮಕ್ಕಳು ತಮ್ಮ ಮನೆ, ಕುಟುಂಬ ಹಾಗೂ ಸಮಾಜದ ಹಿತವನ್ನು ಕಾಪಾಡುವ ಉತ್ತಮ ನಾಗರಿಕರಾಗಿ ರೂಪುಗೊಳ್ಳಲು ಸಾಧ್ಯ ಎಂದರು.

ಶಾಲೆಯ ಮುಖ್ಯ ಶಿಕ್ಷಕ ಮಾರುತಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಶರಣರ ವಚನಗಳು ಮಕ್ಕಳಲ್ಲಿ ನೈತಿಕತೆ, ಮಾನವೀಯತೆ ಮತ್ತು ಸಮಾನತೆಯ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಶರಣು ವಿಶ್ವವಚನ ಫೌಂಡೇಷನ್ ನಡೆಸುತ್ತಿರುವ ಈ ಅಭಿಯಾನವು ಶಾಲಾ ಮಕ್ಕಳ ಬದುಕಿನಲ್ಲಿ ವಚನ ಸಂಸ್ಕೃತಿಯ ಬೆಳಕು ಹರಡಲು ಸಹಾಯಕವಾಗಿದೆ ಎಂದರು.

ಶರಣು ವಿಶ್ವವಚನ ಫೌಂಡೇಷನ್ ರಾಯಚೂರು ಜಿಲ್ಲಾ ಘಟಕದ ಅಧ್ಯಕ್ಷ ಬೆಟ್ಟಪ್ಪ ಕಸ್ತೂರಿ ಅತ್ತನೂರು ಅವರು ಮಾತನಾಡಿ, ಮೈಸೂರಿನ ವಚನ ಕುಮಾರಸ್ವಾಮಿ ಹಾಗೂ ರೂಪ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಶರಣು ವಿಶ್ವವಚನ ಫೌಂಡೇಷನ್ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಚನ ಸಾಹಿತ್ಯದ ಪ್ರಸಾರ ಮತ್ತು ಪ್ರಚಾರಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದೆ. ಶಾಲೆಗಳ ಕಡೆಗೆ ವಚನಗಳ ನಡಿಗೆ, ವಚನ ಗ್ರಾಮ, ವಿದ್ಯಾರ್ಥಿ ನಿಲಯಗಳ ಕಡೆಗೆ ವಚನಗಳ ನಡಿಗೆ, ಅನಾಥಾಶ್ರಮಗಳು ಸೇರಿದಂತೆ ಹತ್ತು ಹಲವು ಆಯಾಮಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಚನ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸುತ್ತಿದೆ.

ವಿವಿಧೆಡೆ ವಚನ ಪಾಠಶಾಲೆಗಳನ್ನು ಸ್ಥಾಪಿಸಿ ಮಕ್ಕಳಲ್ಲಿ ವಚನ ಅಧ್ಯಯನ, ಚಿಂತನೆ ಹಾಗೂ ಶರಣ ಸಂಸ್ಕಾರವನ್ನು ಬೆಳೆಸುವ ಮಹತ್ವದ ಕಾರ್ಯ ಮಾಡುತ್ತಿದೆ. ಮುಂದಿನ ಪೀಳಿಗೆಗೆ ಶರಣರ ಆದರ್ಶಗಳು ಮತ್ತು ಬಸವತತ್ವಗಳನ್ನು ತಲುಪಿಸುವ ಫೌಂಡೇಷನ್‌ನ ಈ ಸೇವಾಕಾರ್ಯ ಶ್ಲಾಘನೀಯವಾಗಿದೆ ಎಂದರು.

ನಂತರ ವಚನ ವಾಚನ ಮಾಡಿದ 25 ವಿದ್ಯಾರ್ಥಿಗಳಿಗೆ ವಚನದೀವಿಗೆ ಪ್ರಮಾಣಪತ್ರ ಮತ್ತು ವಚನ ಪುಸ್ತಕ ನೀಡಲಾಯಿತು. ಗಂಗಮ್ಮ ಅವರು ವಚನ ಪ್ರಾರ್ಥನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಂಕರ್ ಅರಳಿ ಕಾರ್ಯಕ್ರಮ ನಿರೂಪಿಸಿದರು.   ಮೌನಾನುದ್ದೀನ್ ಬೂದಿಹಾಳ, ಜಿಲ್ಲಾ ಉಪಾಧ್ಯಕ್ಷ ವೀರೇಶ್ ಹಿರೇನಗನೂರು ಹಾಗೂ ಲಿಂಗಸುಗೂರು ತಾಲ್ಲೂಕು ಅಧ್ಯಕ್ಷ ಶರಣಪ್ಪ ಹೊಳೆಯಾಚೆ ಉಪಸ್ಥಿತರಿದ್ದರು.

admin
the authoradmin

ನಿಮ್ಮದೊಂದು ಉತ್ತರ