Articles

ನಾಗರಹೊಳೆಯಲ್ಲಿ ರಾಷ್ಟ್ರೀಯ ಹುಲಿ ಗಣತಿ ಕಾರ್ಯ ಆರಂಭ… ಗಣತಿ ಕಾರ್ಯ ನಡೆಯುವುದು ಹೇಗೆ?

ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): 2025-26ನೇ ಸಾಲಿನ ರಾಷ್ಟ್ರೀಯ ಹುಲಿ ಗಣತಿ ಕಾರ್ಯ ಜ.5ರಿಂದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆರಂಭಗೊಂಡಿದ್ದು ಜ.12ರವರೆಗೆ ಎಂಟು ದಿನಗಳವರೆಗೆ ನಡೆಯಲಿದ್ದು, ಉದ್ಯಾನವನದ ಅಧಿಕಾರಿಗಳು ಮತ್ತು ಸಿಬ್ಬಂದಿ 6ನೇ ರಾಷ್ಟ್ರೀಯ ಹುಲಿ ಗಣತಿ ಕಾರ್ಯಕ್ಕೆ ಅಗತ್ಯ  ಸಿದ್ಧತೆಗಳೊಂದಿಗೆ ಕಾರ್ಯೋನ್ಮುಖರಾಗಿದ್ದಾರೆ.

ಪ್ರತಿ ನಾಲ್ಕು ವರ್ಷಕ್ಕೊಮ್ಮೆ ರಾಷ್ಟ್ರ ಮಟ್ಟದಲ್ಲಿ ನಡೆಸಲಾಗುವ ಈ ಸಮೀಕ್ಷೆಯು ಭಾರತ ಅರಣ್ಯಗಳಲ್ಲಿರುವ ಹುಲಿಗಳ ಸಂಖ್ಯೆ, ಅವುಗಳ ವಾಸಸ್ಥಾನದ ಸ್ಥಿತಿಗತಿ ಹಾಗೂ ಬೇಟೆ ಪ್ರಾಣಿಗಳ ಲಭ್ಯತೆ ಇತ್ಯಾದಿ ವಿಷಯಗಳನ್ನು ಅಂದಾಜಿಸ ಲಾಗುತ್ತಿದೆ. ಭಾರತದ ಸರ್ಕಾರದ ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರ (ಎನ್‌ಟಿಸಿಎ) ಮತ್ತು ವನ್ಯಜೀವಿ ಸಂಸ್ಥೆ (ವೈಲ್ಡ್ ಲೈಫ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ) ಸಂಯೋಜನೆಯಲ್ಲಿ ಮತ್ತು ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ ಸಹಭಾಗಿತ್ವ ಯದಲ್ಲಿ ಹುಲಿ ಗಣತಿ ಕಾರ್ಯ ಆಯೋಜಿಸಲಾಗಿದೆ.

140 ವ್ಯಾಘ್ರಗಳ ಅತ್ಯಂತ ಪ್ರಮುಖ ಹುಲಿ ವಾಸಗಳಲ್ಲಿ ಒಂದಾಗಿರುವ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶವು ಕರ್ನಾಟಕದ ನೀಲಗಿರಿ ಬಯೋಸ್ಪಿಯರ್ ರಿಸರ್ವ್ ಭಾಗವಾಗಿದೆ. 2021-22ರಲ್ಲಿ ನಡೆದ ಹುಲಿ ಗಣತಿಯಂತೆ ನಾಗರಹೊಳೆಯಲ್ಲಿ ಅಂದಾಜು 140 ಹುಲಿಗಳನ್ನು ಗುರುತಿಸಲಾಗಿದೆ. ಹುಲಿ ಸಾಂದ್ರತೆಯು ಪ್ರತಿ ಚದರ ಕಿ.ಮೀ.ಗೆ 11.15 ಹುಲಿಗಳನ್ನು ಹೊಂದಿದೆ ಎಂದು ತಿಳಿಸಲಾಗಿದೆ.2018ರಲ್ಲಿ ನಡೆದ ನಾಲ್ಕನೇ ಅಖಿಲ ಭಾರತ ಮಟ್ಟದ ಗಣತಿ ಕಾರ್ಯ ವೇಳೆ ನಾಗರಹೊಳೆ ಉದ್ಯಾನವನದಲ್ಲಿ 125 ಹುಲಿಗಳನ್ನು ಗುರುತಿಸಲಾಗಿತ್ತು. ಹುಲಿಗಳ ಸಂಖ್ಯೆಯ ನಿಖರ ಅಂದಾಜು, ಅದರ ವಿತರಣಾ ವ್ಯಾಪ್ತಿಗುರುತಿಸುವುದು, ಹುಲಿ ವಾಸಸ್ಥಳದ ಸ್ಥಿತಿ ಮತ್ತು ಪರಿಸರದ ಗುಣಮಟ್ಟದ ಮೌಲ್ಯಮಾಪನ, ಹುಲಿ ಸಂರಕ್ಷಣಾ ವಲಯಗಳ ನಡುವಿನ ಸಹಜ ಸಂಪರ್ಕ ಮಾರ್ಗಗಳ ಗುರುತಿಸುವಿಕೆ ಹಾಗು ವಿಶ್ಲೇಷಣೆಯೇ ಗಣತಿಯ ಮೂಲ ಉದ್ದೇಶವಾಗಿದೆ.

ಈ ಬಾರಿ ಗಣತಿ ಕಾರ್ಯದಲ್ಲಿ ಇಲಾಖೆಯ 300 ಜನರು ಮತ್ತು ಪೊನ್ನಂಪೇಟೆಯ ಫಾರೆಸ್ಟ್ರಿ ಕಾಲೇಜಿನ 30 ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದು, ಹೊರಗಿನಿಂದ ಸ್ವಯಂ ಸೇವಕರನ್ನು ಸೇರ್ಪಡೆಗೊಳಿಸಿಲ್ಲ. ನ.15ರಿಂದ ಡಿ.12ರವರೆಗೆ ಗಣತಿಯಲ್ಲಿ ಪಾಲ್ಗೊಳ್ಳುವವ ರಿಗೆ ಮಾಸ್ಟರ್ ಟ್ರೇನರ್‌ಗಳಿಂದ ಮಾಕ್ ಟ್ರೇನಿಂಗ್ ನೀಡಲಾಗಿದೆ. ರಾಷ್ಟ್ರ ಮಟ್ಟದ ಗಣತಿ ಕಾರ್ಯದಲ್ಲಿ ಈ ಹಿಂದೆ ಹುಲಿ ಬಳಸುತ್ತಿದ್ದ ಡೇಟಾ ಶೀಟ್‌ಗಳನ್ನು ಬಳಸದೇ ಎಂ-ಸ್ಟೆಪ್ಸ್ ಎನ್ನುವ ಇಕಾಲಾಜಿಕಲ್ ಆಪ್ ಬಳಸಲಾಗುತ್ತಿದ್ದು, ಗಣತಿ ಕಾರ್ಯದಲ್ಲಿ ಹೆಚ್ಚಿನ ಮಟ್ಟದ ನಿಖರತೆ ಸಿಗಲಿದೆ. ಗಣತಿ ಕಾರ್ಯದ ಮೊದಲ ಹಂತವು ಜ.5ರಿಂದ 7ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ.

ಮೊದಲ ಹಂತದಲ್ಲಿ ಮಾಂಸಾಹಾರಿ ಮತ್ತು ದೊಡ್ಡ ಸಸ್ಯಹಾರಿ(ಆನೆ ಮತ್ತು ಕಾಟಿ)ಗಳ ಓಡಾಟಗಳ ಕುರಿತಾದ ಗುರುತುಗಳು, ಅವುಗಳ ಹಿಕ್ಕೆ, ಲದ್ದಿ, ಪಾದದ ಗುರುತು, ಮರಕ್ಕೆ ಪರಚಿದ ಗುರುತುಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆಸಲಾಗುತ್ತದೆ. ಅಲ್ಲದೆ ಕರಡಿ, ಆನೆ, ಸಂಬಾರ ಜಿಂಕೆ ಮತ್ತು ಮಚ್ಚೆಯುಳ್ಳ ಜಿಂಕೆ ಪ್ರಾಣಿಗಳ ಮಲ ಸಂಗ್ರಹಿಸಲು ಅವಶ್ಯ ಕಿಟ್‌ಗಳನ್ನು ಒದಗಿಸಲಾಗಿದೆ. ಗಣತಿದಾರರು ದಿನಕ್ಕೆ ಕನಿಷ್ಠ 5ಕಿ.ಮೀ.ದೂರದ ನಡಿಗೆ ಯೊಂದಿಗೆ ಗಣತಿಕಾರ್ಯ ಕೈಗೊಳ್ಳಲಿದ್ದಾರೆ. ಕಾನನದಲ್ಲಿ 496 ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಎರಡನೇ ಹಂತವು ಜ.9ರಿಂದ 12ವರೆ ನಡೆಯಲಿದ್ದು, ಲೈನ್ ಟ್ರಾನ್ಸಾಕ್ಸ್ ಇಲಾಖೆ ರೂಪಿಸಿರುವ ಕಾಲುದಾರಿಯಲ್ಲಿ ಕಾಲ್ನಡಿಗೆ ಮೂಲಕ ವನ್ಯಜೀವಿಗಳ ಆವಾಸಸ್ಥಾನ ಗಮನಿಸ ಲಾಗುತ್ತದೆ. ಉದ್ಯಾನವನದಲ್ಲಿ 91 ಬೀಟ್(ಗಸ್ತು) ಗಳಿದ್ದು, 106ಲೈನ್ ಟ್ರಾನ್ಸಾಕ್ಟ್‌ಗಳನ್ನು ನಿರ್ಮಿಸಲಾಗಿದೆ.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರಾದ ಪಿ.ಎ.ಸೀಮಾ ಮಾತನಾಡಿ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂಬಾಸಿಡರ್ ಎಂದೇ ಗುರುತಿಸಲ್ಪಡುವ ಹುಲಿ ಗಣತಿ ಕಾರ್ಯಕ್ಕೆ ಎಲ್ಲ ಸಿದ್ಧತೆಗಳೂ ಸಂಪನ್ನೊ ಗೊಂಡಿದ್ದು, ಮೊದಲ ಹಂತದ ಗಣತಿ ಕಾರ್ಯಕ್ಕೆ ಸಿಬ್ಬಂದಿ ಅಣಿಯಾಗಿದ್ದಾರೆ. ಹುಲಿ ಸಂಖ್ಯೆಯಲ್ಲಿನ ಹೆಚ್ಚಳ ಮತ್ತು ಆವಾಸಸ್ಥಾನಗಳ ಪರಿಸ್ಥಿತಿಯನ್ನು ಅರಿಯುವುದು ಬಹುಮುಖ್ಯವಾಗಿದ್ದು, ಆ ಮೂಲಕ ಮಾನವ ವನ್ಯಜೀವಿ ಸಂಘರ್ಷಕ್ಕೆ ಸಾಕಷ್ಟು ಪರಿಹಾರಗಳನ್ನು ಕಂಡುಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.

admin
the authoradmin

ನಿಮ್ಮದೊಂದು ಉತ್ತರ

Translate to any language you want