ಸುಗ್ಗಿ ಹಬ್ಬ ಮಕರ ಸಂಕ್ರಾಂತಿ ಸಡಗರ ತಂದಿದೆ.. ಆ ಸಂಭ್ರಮದಲ್ಲಿ ತೇಲುತ್ತಾ ಹೊಸ ಬಟ್ಟೆ ತೊಟ್ಟು, ಎಳ್ಳು ಬೆಲ್ಲ ಬೀರುತ್ತಾ.. ಖುಷಿಯನ್ನು ಹಂಚೋಣ… ಸಂಭ್ರಮದ ಸಂಕ್ರಾಂತಿಗೆ ಅಕ್ಷರಗಳಲ್ಲಿ ಪದಗಳನ್ನು ಜೋಡಿಸಿ ಕವನದ ಮಾಲೆಯನ್ನು ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ನಮ್ಮ ಮುಂದಿಟ್ಟಿದ್ದಾರೆ… ಅದನ್ನು ನಿಮಗೆ ಅರ್ಪಿಸಿದ್ದೇವೆ… ಓದಿ ಬಿಡಿ..

ಮಕರ ಸಂಕ್ರಾಂತಿ….
ಆದಿತ್ಯಾದಿ ಅರುಣಂಗೆ ವಂದಿಸಲೆಂದು
ಮುಂಜಾನೆ ಎದ್ದು ಗಂಗೆಯಲಿ ಮಿಂದು
ಅಸೂಯೆ ಹೊಟ್ಟೇಕಿಚ್ಚು ಬಿಡೋಣವೆಂದು
ಹಾಲುಕೊಡೊ ಗೋಮಾತೆಗೆ ಬಣ್ಣ ಬಳಿದು
ಹೂಮುಡಿಸಿ ಪೂಜಿಸಿ ಪೊಂಗಲ ತಿನ್ಸಿತಂದು
ಬಸವನ ಎಂಜಲನ್ನ ಮನೆಯವರೆಲ್ಲ ತಿಂದು
ಕಿಚ್ಚುಹಾಯ್ಸಿ ಕುಣಿದು ಮುಸ್ಸಂಜೆಯಲ್ಲಿಂದು
ಹರ್ಷದೆ ರಾತ್ರಿಕಳಿಯೋಣ ಹಾಯ್ಎಂದು
ವರ್ಷವಿಡೀ ವ್ಯವಸಾಯ ಮಾಡಲೈ ತಂದು
ತರಾವರಿ ದವಸ ಧಾನ್ಯಗಳ ಬಿತ್ತನೆ ತಂದು
ಉರಿಬಿಸ್ಲು ರಣಮಳೆ ಬಿರ್ಗಾಳಿ ಛಳಿಗೆಂದೂ
ಜಗ್ಗದೆ ಬಗ್ಗದೆ ಉತ್ತೂ ಬಿತ್ತು ಬೆಳೆ ಬೆಳೆದು
ಕಣಜದಲಿ ರಾಶಿಹಾಕೆ ಪ್ರಕೃತಿ ಮುನಿದುದು
ಯಾವುದೇನೂ ಹಾಳಾಗದೇ ಹೋದ
ಕಾಲದಲ್ಲಿ ಮಾತ್ರ ಸೈ ಎನ್ನಿಸಿಕೊಂಡಿದ್ದುದು
ಸಿರಿವಂತನಾಗದಿದ್ರೂ ಸಾಲದ ಶೂಲದಿಂದ
ತಪ್ಪಿಸಿಕೊಂಡಿದ್ದೆ ಸಾರ್ಥಕ ಪ್ರತಿಫ಼ಲವಾದ್ದು
ಭ್ರಾಂತಿಯಲ್ಲ ಎಂಬುದೇ ನಿತ್ಯಸತ್ಯವಾದುದು!
ಪರಂತು ಬಹುಪಾಲು ಬಹುತೇಕ ಇತಿಹಾಸದ್ದು
ಬೆವರುಹರಿಸಿ ದುಡಿದ ವಿಷಸೇವಿಸಿ ಮಡಿದ
ಬಡರೈತಗೆ ಕಿಲುಬುಕಾಸಿನ ಸಂಕ್ರಮಣವಾಗದ್ದು
ಮೌನದೆ ನೊಗಹೊತ್ತು ಹಸಿದು ಭುವನಉತ್ತು
ರಕ್ತಹರಿಸಿ ಬಸವಳಿದ ಮೂಗ ಬಸವಂಗಿಲ್ಲ
ಶಾಂತಿಯ ಸಂಕ್ರಾಂತಿ ನೆಮ್ಮದಿಯ ವಿಶ್ರಾಂತಿ!
ಇಷ್ಟಾದರೂ…..
ಹಸಿಭತ್ತ ಬಿಸಿಬೆಲ್ಲ ವಿಧವಿಧ ದವಸರಾಶಿ
ಹೊಸಬಟ್ಟೆ ಧರಿಸಿದ ಹೆಂಗೆಳೆಯರು ಖುಷಿ
ಚೆಲ್ಲಿದಂತೆ ಚಿನ್ನಬೆಳ್ಳಿಯ ಬೆಳ್ದಿಂಗಳು ಇಂದು
ಎಳ್ಳುಬೀರೆ ನಾಮುಂದು ತಾಮುಂದು ಎಂದು
ಚೆನ್ನೀಚೆಲ್ವೀ ಮನೆಮನೆಗೆ ಓಡಾಡುವರಿಂದು
ಅದೇನಾಗಲೀ ಹೋಗಲಿ ಸಂಕ್ರಾಂತಿ ಬರಲಿ
ಸದಾ ಸಂಪತ್ಭರಿತ ಸಂಕ್ರಮಣವನ್ನು ತರಲಿ!…………

ಸಂಕಟ-ಸಂಕ್ರಾಂತಿ……………
ಮಕರಸಂಕ್ರಾಂತಿ ಮಾಸದಲ್ಲಿ
ಮಣ್ಣಿನಮಕ್ಕಳು ನಗಲಿಲ್ಲ
ಎಳ್ಳುಬೆಲ್ಲ ಬೆಳೆದವಗಿಲ್ಲಿ
ಎಳ್ಳಷ್ಟೂಬೆಲೆ ಇಲ್ಲವಲ್ಲ
ಯೋಧ-ರೈತ
ಆಳಿಬಾಳಿದ ನಾಡಲ್ಲಿ
ಕ್ರೋಧ-ಕ್ರೌರ್ಯ
ದಬ್ಬಾಳಿಕೆ ಆಳುತ್ತಿದೆಯಲ್ಲ
ಉತ್ತುಬಿತ್ತು ಬೆಳೆದವರಿಗೇ
ಬರುತ್ತದೆ ಬರಗಾಲ
ಕಿತ್ತುಕಿತ್ತು ತಿನ್ನೋರಿಗೇ
ಸಿಗುತ್ತದೆ ಸುಗ್ಗಿಎಲ್ಲ!
ಮಹಾತ್ಮ ಗಾಂಧಿಜೀಯ
ರಾಮರಾಜ್ಯದ ಕನಸು
ಕನಸಾಗೇ ಉಳಿಯಿತಲ್ಲ
ಗಾಂಧಿಟೋಪಿ ದಲ್ಲಾಳಿಯ
ರಾವಣರಾಜ್ಯದ ನನಸು
ಊರ್ಜಿತವೇ ಆಗುತಿದೆಯಲ್ಲ
ಭಾರತದ ಭವಿಷ್ಯತ್ಕಾಲ
ನೆನೆದರೆ ಭಯಾನಕ ಹೌದಲ್ಲ?
ಭರತಭೂಮಿ ಪ್ರಜೆಗಳಿಗೆ
ರಕ್ತಕಣ್ಣೀರೇ ಇನ್ನೆಲ್ಲ..!

ಸಂಕ್ರಾತಿಗೆ ಹಸಿರು ತೋರಣ
ಹೇಮಂತ-ಶಿಶಿರ ಋತುಗಳಲ್ಲಿನ
ಮಾರ್ಗಶಿರ-ಪುಷ್ಯ ಮಾಸಮಿಲನ
ದಕ್ಷಿಣಾಯಣದಿಂದ ಉತ್ತರಾಯಣಕ್ಕೆ
ಪಥಸಂಚಲನ ಸೂರ್ಯನ ಪಯಣ
ಧನುಸ್ಸು ರಾಶಿಯಿಂದ ಮಕರ-ಕ್ಕೆ
ಆದಿತ್ಯನ ಬದಲಾದ ಪಾದಾರ್ಪಣ
ಹೊಸ ಕ್ರೈಸ್ತವರ್ಷದ ಮೊಟ್ಟಮೊದಲ
ಹಿಂದೂಹಬ್ಬ ಪ್ರಾರಂಭ ಶುಭಲಾಭಫಲ
ಹೊಸಅಕ್ಕಿ ಪೊಂಗಲು ಹಸಿರು ತೋರಣ
ಇದಕ್ಕೂಇದೆ ಪ್ರಬಲ ವೈಜ್ಞಾನಿಕ ಕಾರಣ
ಎಲ್ಲೆಲ್ಲೂ ಎಳ್ಳು-ಬೆಲ್ಲದ ಸಮ್ಮಿಶ್ರಣ
ಏರು ಎತ್ತು-ಹಸುಗಳಿಗೆ ಹೊಸಬಣ್ಣ
ಕಬ್ಬುಬಾಳೆ ಸುಗ್ಗಿಹುಗ್ಗಿ ಬಾಯಿಚಪ್ಪರಿಸುತ
ಮಂಜಿನ ಇಬ್ಬನಿಯಲಿ ಕಿಚ್ಚುಹಾಯಿಸುತ
ಎಳ್ಳುಬೆಲ್ಲ ತಿನ್ನುತ ಒಳ್ಳೇ ಮಾತನಾಡುತ
ಎಲ್ಲೆಡೆ ಸುಖ ಶಾಂತಿ ನೆಮ್ಮದಿ ಹರಡುತ
ಭೂಮಿಪುತ್ರನ ಜತೆಗೂಡಿ ಭಾರತೀಯರು
ಭೇದ ಭಾವ ತೊರೆದು ಆಚರಿಸೋಣ ಎಲ್ಲರು…

ಪುಣ್ಯಕೋಟಿಯೇ ನಿನಗೆ ನಮನ..
ಪುಣ್ಯಕೋಟಿ ಗೋವಿನೆಂಜಲು ಶ್ರೇಷ್ಠ
ಅರೆಬರೆ ಛಳಿ ಚುರುಚರು ಬಿಸಿಲು
ಕಪ್ಪುಬಿಳಿ ಮಿಶ್ರಿತಮೇಘ ಮುಗಿಲು
ಮಾಘಿಕಾಲದೆ ಶ್ರೇಷ್ಠ ಗೋವಿನೆಂಜಲು
ಮನುಷ್ಯಪ್ರಾಣಿಗೆ ಧನ್ವಂತರಿ ಮಜಲು
ಪರಮಪಾವನ ಆರೋಗ್ಯದ ಹೊನಲು
ನಂದಿಯಗಂಜಲ antibiotic
ಪುಣ್ಯಕೋಟಿ ಸಗಣಿ antiseptic
ಗೋವಿನೆಂಜಲು immunity
ಏಕೆಂದರೆ:
ಧರೆಗಳಿದ ಸ್ವರ್ಗಲೋಕದ ಅಪ್ಸರೆಯರು
ಭುವನ ಸುಂದರಿ ವಿಶ್ವ ಸುಂದರಿಯರು
ಆರರಿಂದ ಅರವತ್ತರವರ್ಗೆ ಸ್ತ್ರೀಪುರುಷರು
ವಯೋತಾರತಮ್ಯ ಇಲ್ಲದಂತೆ ವರ್ಷನೂರು
ಆಯುಷ್ಯದವರಂತೆ ಕಾಣುವರು ಎಲ್ಲರೂ
ಧನುರ್ಮಾಸದ ಜಢ ವಾತಾವರಣದಲಿ
ಚಿತ್ರವಿಚಿತ್ರ ಪ್ರಾಕೃತಿಕ ಜಗದ ನಿಯಮದಲಿ
ಅಡಿಯಿಂದ ಮುಡಿವರೆಗು ಬದಲೋಬದಲಿ
ಮುಖಾರವಿಂದ ಮೈಕೈ ಚರ್ಮದ ಪದರದಲಿ
ಕಾಣುತ್ತದೆ ಮಹತ್ತರ ಬದಲಾವಣೆಯಲ್ಲಿ
ಕುರೂಪವು ಆಳುತ್ತಲೆ ಮೆರೆಯುವುದಿಲ್ಲಿ
ಸುಕ್ಕು ಒರಟು ಕೆರೆತ ಕಡಿತ ತುರಿತ ಜರ್ಝರಿತ
ಅಲಂಕಾರಿಕ ಸೌಂದರ್ಯದ ಪ್ರತಿಷ್ಠೆಗಳಿಗೆ ತಿವಿತ
ಅಹಂಕಾರಿ ಶೃಂಗಾರಪುರುಷರ ಆರಾಧನೆ ಸ್ಥಿಮಿತ
ದುರಹಂಕಾರಿ ಮಹಿಳೆಯರ ಗರ್ವಭಂಗ ತ್ವರಿತ
ಅತ್ಯಾ(ವ್ಯಭಿ)ಚಾರ ಢಂಬಾಚಾರ ನಿಯಮಿತ
ಅ(ರೆ)ಜ್ಞಾನದ ವಿಜ್ಞಾನಿಗೆ ಸವಾಲೊಡ್ಡುತ್ತ
ಅಲ್ಪ ಜ್ಞಾನಿ ತಿಕ್ಕಲನಿಗು ಬುದ್ದಿ ಕಲಿಸುತ್ತ
ದ್ವಂದ್ವಮತಿ ವಿತಂಡವಾದ ತರ್ಕ ಸ್ವಪ್ರತಿಷ್ಠೆಯತ್ತ
ನಡೆಯುತ್ತ ಓಡುತ್ತ ವಾಲಾಡುವವರನ್ನು
ಕಾಲಲ್ಲಿ ಒದ್ದು ಕೊಂಬಿನಿಂದ ತಿವಿದು
ಸರಿ ಬುದ್ದಿ ಕಲಿಸುವನು: ನಂದಿ?
ನಂಬಿಕೆ ಭಕ್ತಿ ಶ್ರದ್ಧೆ ಉಳ್ಳ ಜ್ಞಾನಿಯತ್ತ
ಹಾಲು ಮೊಸರು ಅಮೃತಸುಧೆಯನಿತ್ತು
ಸದಾ ಪೊರೆಯುವಳು: ನಂದಿನಿ!









