LatestNews

ಕುಶಾಲನಗರದ ಪೊಲೀಸ್ ಜನ ಸಂಪರ್ಕ ಸಭೆಯಲ್ಲಿ  ಎಸ್ಪಿ ಬಿಂದುಮಣಿ  ಹೇಳಿದ್ದೇನು?

ಕುಶಾಲನಗರ (ರಘುಹೆಬ್ಬಾಲೆ): ಕೊಡಗು ಜಿಲ್ಲೆಯಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಾರ್ವಜನಿಕರ ಸಹಕಾರ ತುಂಬ ಅಗತ್ಯವಾಗಿದೆ ಎಂದು  ಹೇಳಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರು ಕಾನೂನು ಉಲ್ಲಂಘಿಸಿದವರ  ಮೇಲೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ.

ಕೊಡಗು ಜಿಲ್ಲಾ ಪೊಲೀಸ್ ಸೋಮವಾರಪೇಟೆ ಉಪ ವಿಭಾಗ ಹಾಗೂ ಕುಶಾಲನಗರ ಪೊಲೀಸ್ ಠಾಣೆ ಆಶ್ರಯದಲ್ಲಿ ಇಲ್ಲಿನ ರೈತ ಸಹಕಾರ ಭವನದಲ್ಲಿ ಏರ್ಪಡಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಕಾನೂನು ಪಾಲನೆ ಪ್ರತಿಯೊಬ್ಬರ ಕರ್ತವ್ಯ.  ಕಾನೂನು ಉಲ್ಲಂಘಿಸಿದವರ  ಮೇಲೆ ಕಾನೂನು ಕ್ರಮ ಕೈಗೊಳ್ಳುವುದು ಪೊಲೀಸ್ ಕೆಲಸ. ಆದ್ದರಿಂದ ಸಾರ್ವಜನಿಕರಿಂದ  ಸಲಹೆ, ಸಹಕಾರ ನಿರೀಕ್ಷೆ ಮಾಡುತ್ತೇವೆ.ಆಗ ಮಾತ್ರ ಪೊಲೀಸರು ಅಪರಾಧ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದರು.

ಜಿಲ್ಲೆಯಲ್ಲಿ ಶಾಲಾ, ಕಾಲೇಜುಗಳ ಸರಹದ್ದಿನಲ್ಲಿ ಗಾಂಜಾ ಮತ್ತಿತರ ಮಾದಕ ದ್ರವ್ಯಗಳ ಬಳಕೆ, ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸ್ ಇಲಾಖೆಯ ಗಮನದಲ್ಲಿದೆ. ಕಳೆದ ಹಲವು ತಿಂಗಳಿಂದ ಈ ಬಗ್ಗೆ ಅನೇಕ ಪ್ರಕರಣಗಳನ್ನು ಭೇದಿಸಿ ಅವರ ಮೇಲೆ ಕ್ರಮ ಕೈಗೊಳ್ಳಲಾಗಿದೆ.  ಅನಕ್ಷರಸ್ಥರು ಯಾರು ಸೈಬರ್ ಕ್ರೈಂ ಕೃತ್ಯದಲ್ಲಿ ತೊಡಗಿಸಿಕೊಂಡಿಲ್ಲ.ವಿದ್ಯಾವಂತರು, ಬುದ್ಧಿವಂತ ಎನಿಸಿದ ವ್ಯಕ್ತಿಗಳೇ ಈ ಕೃತಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಬಗ್ಗೆ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತಿದ್ದೇವೆ ಎಂದರು.

ಕುಶಾಲನಗರ, ಸೋಮವಾರಪೇಟೆ, ಸುಂಟಿಕೊಪ್ಪ, ಶನಿವಾರಸಂತೆ ಪ್ರದೇಶಗಳ ಕಾನೂನು ವ್ಯವಸ್ಥೆ ಮತ್ತಷ್ಟು ಸುಧಾರಣೆ ಮಾಡಲು ತಂತ್ರಜ್ಞಾನದ ಎ ಎನ್ ಪಿ ಆರ್ ಕ್ಯಾಮೆರಾ ಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ಅಳವಡಿಸುವ ಮೂಲಕ ರಸ್ತೆ ಅಪಘಾತ ಹಾಗೂ ಅಪರಾಧ ಕೃತ್ಯಗಳ ಮೇಲೆ ನಿಗವಹಿಸಲಾಗಿದೆ ಎಂದು ಹೇಳಿದರು.

ಡಿವೈಎಸ್ಪಿ ಚಂದ್ರಶೇಖರ್ ಮಾತನಾಡಿ, ಜಿಲ್ಲೆಯಲ್ಲಿ ಮಾದಕ ದ್ರವ್ಯಗಳನ್ನು ಮಾರುವ ಸಂಗ್ರಹಿಸುವ ಬಳಸುವವರನ್ನು ಕಠಿಣ ಕಾನೂನು ವ್ಯಾಪ್ತಿಗೆ ತರಲಾಗುವುದು. ಮಾದಕ ವ್ಯಸನಿಗಳನ್ನು ಸರ್ಕಾರದ ವೆಚ್ಚದಲ್ಲಿ ವ್ಯಸನ ಮುಕ್ತ ಕೇಂದ್ರಗಳಿಗೆ ಕಳುಹಿಸಿ ಸುಧಾರಣೆ ಮಾಡಲಾಗುವುದು ಎಂದು ತಿಳಿಸಿದರು.

ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ, ಆಟೋ ನಿಲ್ದಾಣದ ಸಮಸ್ಯೆ, ಬೀದಿಬದಿ ವ್ಯಾಪಾರಿಗಳ ಸಮಸ್ಯೆ ಹಾಗೂ ಗಾಂಜಾ ಮಾರಾಟ ಸೇರಿದಂತೆ ಇನ್ನಿತರ ಸಮಸ್ಯೆಗಳ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದರು. ಕೂಡಿಗೆ ಸರ್ಕಲ್ ನಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ. ಗಂಧದಕೋಟೆ ಮದ್ಯದ ಅಂಗಡಿಗಳ ಮುಂದೆ ರಸ್ತೆ ಬದಿ ವಾಹನಗಳನ್ನು ನಿಲ್ಲಿಸುವುದು ಅಪಘಾತಗಳಿಗೆ ಕಾರಣವಾಗಿದೆ.  ಉತ್ತರ ಭಾರತ ರಾಜ್ಯಗಳಿಂದ ಬಂದಿರುವ ಕೂಲಿ ಕಾರ್ಮಿಕರಿಂದ ಕಾನೂನುಬಾಹಿರ ಕೃತ್ಯಗಳು ನಡೆಯುತ್ತಿವೆ ಆದ್ದರಿಂದ ಪೊಲೀಸ್ ಇಲಾಖೆ ಈ ಬಗ್ಗೆ ತೀವ್ರ ನಿಗವಹಿಸುವಂತೆ ಸಲಹೆ ನೀಡಿದರು.

ಈ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೆ.ಎಸ್.ನಾಗೇಶ್, ಕೊಡಗು ಅಭಿವೃದ್ಧಿ ಸಮಿತಿಯ ದಾವುದ್, ಮಹಿಳಾ ಸಮಾಜದ ಅಧ್ಯಕ್ಷ ಸಲಿನಾ ಪೇದ್ರು ವಿವಿಧ ಸಂಘಸಂಸ್ಥೆಗಳ ಮುಖಂಡರು ಹಾಗೂ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.

admin
the authoradmin

ನಿಮ್ಮದೊಂದು ಉತ್ತರ

Translate to any language you want