Mysore

ಕೇರ್ಗಳ್ಳಿ ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ವಿದ್ಯಾಲಯದಲ್ಲಿ ಶಾಲೆಗಳೆಡೆಗೆ ವಚನಗಳ ನಡಿಗೆ

ವಚನಗಳ ಬೆಳಕಿನಲ್ಲಿ ಮೌಲ್ಯ ಶಿಕ್ಷಣದ ಹೊಸ ದಾರಿ ಇದೆ... ಸಾಹಿತಿ ಎಂ.ಎ ನೀಲಾಂಬಿಕಾ

ಮೈಸೂರು: ವಚನಗಳ ಬೆಳಕಿನಲ್ಲಿ ಮೌಲ್ಯ ಶಿಕ್ಷಣದ ಹೊಸ ದಾರಿ ಇದೆ ಎಂದು ಸಾಹಿತಿ ಎಂ.ಎ ನೀಲಾಂಬಿಕಾ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್‌ನ ವತಿಯಿಂದ ಎಚ್.ಎಸ್.ಮಹೇಶ್ವರಿ, ಎಚ್.ಎಸ್. ರಾಜು ಹಾಗೂ ಸಾಹಿತಿ ಎಂ.ಎ. ನೀಲಾಂಬಿಕಾ ಅವರ ದತ್ತಿ ಅಂಗವಾಗಿ ಮೈಸೂರು ತಾ. ಕೇರ್ಗಳ್ಳಿ ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ವಿದ್ಯಾಲಯದಲ್ಲಿ ಆಯೋಜಿಸಿದ್ದ 124 ನೇ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸತ್ಯ, ಪ್ರಾಮಾಣಿಕತೆ, ಶ್ರಮ ಹಾಗೂ ಸಮಾನತೆಯ ಮೌಲ್ಯಗಳನ್ನು ಬದುಕಿನ ಮೂಲಸಿದ್ಧಾಂತವಾಗಿ ಸಾರುವ ವಚನ ಸಾಹಿತ್ಯವನ್ನು ಮಕ್ಕಳು  ಹೃದಯದಲ್ಲಿ ಇಟ್ಟುಕೊಂಡು ಜೀವನ ನಿರ್ವಹಣೆಗೆ ಬಳಸಿಕೊಳ್ಳಬೇಕು.  ವಚನ ಸಾಹಿತ್ಯವು ಮಕ್ಕಳಲ್ಲಿ ಸಂಸ್ಕಾರವನ್ನು ರೂಡಿಸಿ, ಬದುಕಿಗೆ ದಿಕ್ಕು ನೀಡುವ ಶಕ್ತಿಯಾಗಿದೆ. ಪಠ್ಯ ವಿಷಯಗಳಿಗಿಂತಲೂ ಜೀವನ ಮೌಲ್ಯಗಳನ್ನು ಕಲಿಸುವಲ್ಲಿ ವಚನಗಳ ಪಾತ್ರ ಅತ್ಯಂತ ಮಹತ್ವದ್ದು ಎಂದು ತಿಳಿಸಿದರು.

ನಿವೃತ್ತ ಅಭಿಯಂತರ ಎಚ್.ಎಸ್. ರಾಜು ಅವರು ಮಾತನಾಡಿ, “ಶಿಕ್ಷಣವೆಂದರೆ ಅಂಕಗಳ ಸೀಮಿತವಲ್ಲ; ಮೌಲ್ಯ ಶಿಕ್ಷಣವಿಲ್ಲದೆ ಶಿಕ್ಷಣ ಅಪೂರ್ಣ. ವಚನ ಸಾಹಿತ್ಯವು ಶಿಸ್ತು, ನೈತಿಕತೆ ಮತ್ತು ಮಾನವೀಯತೆಯನ್ನು ಮಕ್ಕಳಲ್ಲಿ ಬೆಳೆಸುತ್ತದೆ” ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಅವರು ಮಾತನಾಡಿ, “ವಚನ ಸಾಹಿತ್ಯವು ಸತ್ಯ ಮತ್ತು ಪ್ರಾಮಾಣಿಕತೆಯನ್ನೇ ಜೀವನದ ಉಸಿರಾಗಿ ಸಾರುತ್ತದೆ. ಮಹಾತ್ಮ ಗಾಂಧೀಜಿಯವರು ತಾವು ಮಾಡಿದ ತಪ್ಪನ್ನು ಅರಿತು ತಂದೆಗೆ ಕ್ಷಮೆಯಾಚಿಸಿ ಮತ್ತೆ ತಪ್ಪುಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡಿದ ಘಟನೆಯೇ ಅವರನ್ನು ಮಹಾತ್ಮರನ್ನಾಗಿಸಿತು. ಇದೇ ಆತ್ಮತತ್ತ್ವ ವಚನಗಳಲ್ಲೂ ಅಡಗಿದೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ವಚನ ವಾಚನ ಮತ್ತು ಗಾಯನ ಮಾಡಿದ 20 ಹೆಣ್ಣು ಮಕ್ಕಳಿಗೆ  ವಚನಗ್ರಾಮ ಪುಸ್ತಕ ಹಾಗೂ ವಚನ ದೀವಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್ ಅಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ದತ್ತಿ ದಾಸೋಹಿ ಎಚ್.ಎಸ್ ಮಹೇಶ್ವರಿ, ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ, ಕೇಂದ್ರೀಯ ಸಂಚಾಲಕ ವಿ. ಲಿಂಗಣ್ಣ, ಉಪಾಧ್ಯಕ್ಷ ಶಿವಪುರ ಉಮಾಪತಿ, ಸಿದ್ದೇಶ್ವರಿ, ಮುಖ್ಯಶಿಕ್ಷಕಿ ಎ.ಆರ್ ಅಂಬಿಕ ಸಹಶಿಕ್ಷಕರುಗಳಾದ ಎಂ. ಸುಚಿತ್ರ, ಎಚ್.ಕೆ ಸೌಮ್ಯ, ಕೆ.ಬಿ  ಗೀತಾ, ಎಂ. ಅಪರ್ಣ, ಸುನಂದ, ದೇವಿಕ, ವಿ. ಸುಮ ಉಪಸ್ಥಿತರಿದ್ದರು.

admin
the authoradmin

ನಿಮ್ಮದೊಂದು ಉತ್ತರ

Translate to any language you want