ವಚನಗಳ ಪಾಲನೆಯಿಂದ ದೇಶ ಆರಕ್ಷಕ ಠಾಣೆಗಳಿಂದ ಮುಕ್ತವಾಗಲು ಸಾಧ್ಯ
ಶಾಲೆಗಳೆಡೆಗೆ ವಚನಗಳ ನಡಿಗೆಯಲ್ಲಿ ಸುಧಾ ಮೃತ್ಯುಂಜಯಪ್ಪ ಆಶಯ

ಸರಗೂರು: ವಚನಗಳ ಪಾಲನೆ ದೇಶವನ್ನು ಆರಕ್ಷಕ ಠಾಣೆಗಳಿಂದ ಮುಕ್ತಗೊಳಿಸುತ್ತದೆ ಎಂದು ಶರಣು ವಿಶ್ವವಚನ ಫೌಂಡೇಷನ್ ಕೇಂದ್ರೀಯ ಸಂಚಾಲಕರಾದ ಸುಧಾ ಮೃತ್ಯುಂಜಯಪ್ಪ ಅವರು ಹೇಳಿದರು.

ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಡಾ. ಸಿ.ಎನ್ ಮೃತ್ಯುಂಜಯಪ್ಪ ಅವರ ದತ್ತಿ ಅಂಗವಾಗಿ ಸರಗೂರಿನ ಜೆ.ಎಸ್.ಎಸ್ ಹಿ.ಪ್ರಾ.ಶಾಲೆಯಲ್ಲಿ ಹಮ್ಮಿಕೊಂಡಿದ್ದ 125ನೇ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಬಸವಣ್ಣನವರ ಸಪ್ತಸೂತ್ರಗಳಲ್ಲಿ ಅಡಗಿರುವ “ಕಳಬೇಡ, ಕೊಲಬೇಡ” ಎಂಬ ವಚನವು ಕೇವಲ ಧಾರ್ಮಿಕ ಉಪದೇಶವಲ್ಲ; ಅದು ಶಾಂತ, ಸುವ್ಯವಸ್ಥಿತ ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶಕವಾದ ಮಹಾತತ್ವವಾಗಿದೆ.

ವ್ಯಕ್ತಿಯೊಬ್ಬನು ತನ್ನ ದಿನನಿತ್ಯದ ಜೀವನದಲ್ಲಿ ಕಳಬೇಡ ಎಂಬ ತತ್ವವನ್ನು ಅಳವಡಿಸಿಕೊಂಡರೆ ಪರರ ಸಂಪತ್ತಿನ ಮೇಲೆ ಕಣ್ಣಿಡುವ ಮನೋಭಾವ ದೂರವಾಗುತ್ತದೆ. ಅದೇ ರೀತಿ ಕೊಲಬೇಡ ಎಂಬ ತತ್ತ್ವವು ಅಹಿಂಸೆ, ಸಹಿಷ್ಣುತೆ ಮತ್ತು ಮಾನವೀಯತೆಯನ್ನು ಮನಸ್ಸಿನಲ್ಲಿ ಬಿತ್ತುತ್ತದೆ. ಈ ಎರಡು ಮೌಲ್ಯಗಳು ಸಮಾಜದ ಪ್ರತಿಯೊಬ್ಬರ ಬದುಕಿನಲ್ಲಿ ನಿಜವಾಗಿ ಪಾಲನೆಯಾದರೆ ಅಪರಾಧ, ಹಿಂಸಾಚಾರ ಮತ್ತು ಅಶಾಂತಿಗೆ ಕಾರಣವಾಗುವ ಸಂದರ್ಭಗಳು ಸ್ವಯಂ ಕಡಿಮೆಯಾಗುವುದರ ಜೊತೆಗೆ ದೇಶವೇ ಆರಕ್ಷಕ ಠಾಣೆಗಳ ಅವಶ್ಯಕತೆಯಿಂದ ಮುಕ್ತವಾಗುವಷ್ಟು ಶಾಂತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.

ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಮಾತನಾಡಿ ವಚನ ಸಾಹಿತ್ಯವು ಮಾನವನೊಳಗಿನ ಅಜ್ಞಾನ ಅಂಧಕಾರವನ್ನು ಕಳೆಯುವ ಬೆಳಕಿನ ದೀಪವಾಗಿದ್ದು, ಅದನ್ನು ಅಧ್ಯಯನ ಮಾಡಿದರೆ ಮನುಷ್ಯನ ಸಂಪೂರ್ಣ ವ್ಯಕ್ತಿತ್ವವೇ ರೂಪಾಂತರಗೊಳ್ಳುತ್ತದೆ. ವಚನ ಸಾಹಿತ್ಯವನ್ನು ಓದಿ, ಅರ್ಥೈಸಿ, ಬದುಕಿನಲ್ಲಿ ಅಳವಡಿಸಿಕೊಂಡಾಗ ತಲೆಯಲ್ಲಿ ಸದ್ವಿಚಾರ, ಎದೆಯಲ್ಲಿ ಸದ್ಭಾವ, ಕೈಯಲ್ಲಿ ಸತ್ಕಾರ್ಯ ಹಾಗೂ ಬಾಯಲ್ಲಿ ಸವಿ ಮಾತು ಸಹಜವಾಗಿ ಮೂಡುತ್ತದೆ.

ಇದು ಹೊರಗಿನಿಂದ ಕಲಿಸುವ ಶಿಸ್ತು ಅಲ್ಲ; ಒಳಗಿನಿಂದ ಬೆಳೆಯುವ ಸಂಸ್ಕಾರವಾಗಿದೆ. ವಚನಗಳು ಮನುಷ್ಯನ ಚಿಂತನೆಗೆ ಶುದ್ಧತೆ ನೀಡುತ್ತವೆ; ಶುದ್ಧ ಚಿಂತನೆಯಿಂದ ಶುದ್ಧ ಜೀವನ ನಿರ್ಮಾಣವಾಗುತ್ತದೆ. ಮಾನವನ ಜೀವನವೂ ಗಣಿತದ ಮೂಲಕ್ರಿಯೆಗಳಂತೆ ಸರಳವೂ ಗಂಭೀರವೂ ಆಗಿದೆ ಎಂದು ಅವರು ತಾತ್ವಿಕವಾಗಿ ವಿವರಿಸಿದರು. ಮಿತ್ರರನ್ನು ಸಂಕಲನ ಮಾಡಿ ಒಳ್ಳೆಯವರನ್ನು ಬದುಕಿಗೆ ಸೇರಿಸಿಕೊಳ್ಳಬೇಕು. ಶತ್ರುಗಳನ್ನು ವ್ಯವಕಲನ ಮಾಡಿ ದ್ವೇಷ, ಅಸೂಯೆ ಮತ್ತು ವೈಮನಸ್ಯವನ್ನು ಜೀವನದಿಂದ ತೆಗೆದುಹಾಕಬೇಕು.

ಸದ್ಗುಣಗಳನ್ನು ಗುಣಾಕಾರ ಮಾಡಿ ದಯೆ, ಪ್ರಾಮಾಣಿಕತೆ, ಶ್ರಮ ಮತ್ತು ಸಹಾನುಭೂತಿಯನ್ನು ನಿರಂತರವಾಗಿ ಹೆಚ್ಚಿಸಬೇಕು. ದುರ್ಗುಣಗಳನ್ನು ಭಾಗಾಕಾರ ಮಾಡಿ ಅಹಂಕಾರ, ಲೋಭ ಮತ್ತು ಕ್ರೋಧವನ್ನು ಕಡಿಮೆ ಮಾಡಬೇಕು. ಈ ಜೀವನ ಗಣಿತ ಸರಿಯಾಗಿ ನಡೆದರೆ ಬದುಕು ಸಮತೋಲನದ ಸುಂದರ ಸಮೀಕರಣವಾಗುತ್ತದೆ.

ಸ್ವರ್ಗ ಮತ್ತು ನರಕ ಯಾವುದೋ ಪರಲೋಕದ ಕಲ್ಪನೆಗಳಲ್ಲ. ಅವು ನಮ್ಮ ದಿನನಿತ್ಯದ ಬದುಕಿನಲ್ಲೇ ಅಡಗಿವೆ ಎಂಬುದನ್ನು ವಚನ ಸಾಹಿತ್ಯ ಸ್ಪಷ್ಟವಾಗಿ ಹೇಳುತ್ತದೆ. ನಾವು ಬದುಕಿರುವ ಜೀವಿತಾವಧಿಯಲ್ಲಿ ಸಂಭವಿಸುವ ಒಳ್ಳೆಯ ಘಟನೆಗಳೇ ಸ್ವರ್ಗ, ಮನಸ್ಸಿಗೆ ಶಾಂತಿ ನೀಡುವ ಕ್ಷಣಗಳೇ ಸ್ವರ್ಗದ ಅನುಭವ. ಅದೇ ರೀತಿ ಕೆಟ್ಟ ಘಟನೆಗಳೇ ನರಕ; ದ್ವೇಷ, ಅಶಾಂತಿ ಮತ್ತು ಪಶ್ಚಾತ್ತಾಪದಿಂದ ತುಂಬಿದ ಕ್ಷಣಗಳೇ ನರಕದ ಅನುಭವವಾಗುತ್ತದೆ. ಆದ್ದರಿಂದ ಪ್ರತಿದಿನವೂ ಸ್ವರ್ಗದಂತೆ ಬದುಕುವ ಜವಾಬ್ದಾರಿ ನಮ್ಮದಾಗಬೇಕು ಎಂದರು.

ನಂತರ ಶರಣರ ವೇಷ ಧರಿಸಿ ವಚನ ವಾಚನ ಮತ್ತು ಗಾಯನ ಮಾಡಿದ ಎಲ್ಲಾ 50 ವಿದ್ಯಾರ್ಥಿಗಳಿಗೆ ವಚನಗ್ರಾಮ ಪುಸ್ತಕ ಮತ್ತು ವಚನ ದೀವಿಗೆ ಪ್ರಮಾಣ ಪತ್ರ ನೀಡುವುದರ ಜೊತೆಗೆ ಉತ್ತಮ ವಾಚನ ಮಾಡಿದವರಿಗೆ ನಗದು ಬಹುಮಾನ ನೀಡಲಾಯಿತು. ಇದೇ ಸಂದರ್ಭದಲ್ಲಿ ಅನೇಕ ವಿದ್ಯಾರ್ಥಿಗಳು ಸ್ವರಚಿತ ಆಧುನಿಕ ವಚನ ವಾಚನ ಮಾಡಿದರು.ಕಾರ್ಯಕ್ರಮದಲ್ಲಿ ಜೆ.ಎಸ್.ಎಸ್. ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕ ಎನ್. ಜಯಣ್ಣ, ಶರಣು ವಿಶ್ವವಚನ ಫೌಂಡೇಷನ್ ಕೇಂದ್ರೀಯ ಸಂಚಾಲಕ ವಿ. ಲಿಂಗಣ್ಣ, ಉಪಾಧ್ಯಕ್ಷ ಶಿವಪುರ ಉಮಾಪತಿ, ಸ್ನೇಹಸ್ತ್ರೀ ಸಮಾಜದ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







