Mysore

ಅವೈಜ್ಞಾನಿಕ  ‘ಬೃಹತ್ ಮೈಸೂರು’ ವಿಸ್ತರಣೆ ಯೋಜನೆಗೆ ನಾಗರಿಕರು ಆಕ್ಷೇಪಣೆ ಸಲ್ಲಿಸಿದ್ದೇಕೆ? ಆತಂಕವೇನು?

ಮೈಸೂರು:  ಮೈಸೂರಿನ ಪ್ರಜ್ಞಾವಂತ ನಾಗರಿಕರು ಮತ್ತು ನಾಗರಿಕ ಸಮಾಜದ ಸಂಘಟನೆಗಳ ಒಕ್ಕೂಟವು ಪ್ರಸ್ತಾವಿತ ‘ಬೃಹತ್ ಮೈಸೂರು’ಮಹಾನಗರ ಪಾಲಿಕೆ (Greater Mysuru) ವಿಸ್ತರಣೆ ಯೋಜನೆಗೆ ಸಂಬಂಧಿಸಿದಂತೆ  ವಿಸ್ತೃತ ಆಕ್ಷೇಪಣೆಯನ್ನು ಸಲ್ಲಿಸಿತು.    ಪ್ರಸ್ತುತ ಹೊರಡಿಸಲಾಗಿರುವ ಅಧಿಸೂಚನೆಯನ್ನು ತಕ್ಷಣ  ಹಿಂಪಡೆದು, ವೈಜ್ಞಾನಿಕ ಹಾಗೂ ಜನಸಹಭಾಗಿತ್ವದ ಮೂಲಕ  ಬೃಹತ್ ಮೈಸೂರು ಮಹಾನಗರಪಾಲಿಕೆ ರಚಿಸುವಂತೆ ಸರ್ಕಾರವನ್ನು ಆಗ್ರಹಿಸಲಾಯಿತು.

ಭವಿಷ್ಯದರ್ಶಿ ಮಹಾ ಮೈಸೂರು  ಸಂಘಟನೆಯ ಪ್ರವರ್ತಕ, ಬಿಜೆಪಿ ಹಿರಿಯ ನಾಯಕ ಖ್ಯಾತ ನರರೋಗ ತಜ್ಞ  ಡಾ. ಸುಶ್ರುತ ಗೌಡ  ನೇತೃತ್ವದ ನಗರದ ಪ್ರಜ್ಞಾವಂತ ನಾಗರೀಕರತಂಡ    ಬೆಂಗಳೂರಿನಲ್ಲಿ ನಗರಾಭಿವೃದ್ಧಿ ಇಲಾಖೆಯ ಪೌರಾಡಳಿತ ನಿರ್ದೇಶನಾಲಯದ (DMA) ಸಹಾಯಕ ನಿರ್ದೇಶಕರಾದ  ಶೈಲಾ ಕೆ. ಡಿ. (ಕೆ.ಎಂ.ಎ.ಎಸ್) ಅವರನ್ನು ಭೇಟಿ ಮಾಡಿ ಆಕ್ಷೇಪಣೆ ಸಲ್ಲಿಸಿತು.

ನಮ್ಮ ಮೈಸೂರು ಫೌಂಡೇಶನ್, ಕ್ರಿಸ್ಟಲ್ ಗ್ರೀನ್ ಬಡ್ಸ್, ಕ್ರೆಡಿಟ್-ಐ ಸಂಸ್ಥೆ, ರಾಷ್ಟ್ರೀಯ ಮಾನವ ಹಕ್ಕುಗಳ ಮತ್ತು ಸಾಮಾಜಿಕ ನ್ಯಾಯ ಸಮಿತಿ, ಕನ್ನಡ ರಕ್ಷಣಾ ವೇದಿಕೆ, ಮೈಸೂರು ಗ್ರಾಹಕರ ಪರಿಷತ್ತು, ಮಿಷನ್ ಮೋದಿ ಡೆಮಾಕ್ರಸಿ ಡೆವಲಪ್‌ಮೆಂಟ್ ಟ್ರಸ್ಟ್, ಯೂತ್ ಫಾರ್ ನೇಷನ್ (YFN), ಮತ್ತು ಹಲವಾರು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ಸ್ವಸಹಾಯ ಸಂಘಗಳ ಪ್ರತಿನಿಧಿಗಳು  ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಅಭಿವೃದ್ಧಿಗೆ ವಿರೋಧವಿಲ್ಲ, ಆದರೆ ಅವೈಜ್ಞಾನಿಕ ವಿಸ್ತರಣೆಗೆ ಆಕ್ಷೇಪ

ಈ ಸಂದರ್ಭದಲ್ಲಿ ಮಾತನಾಡಿದ   ಡಾ. ಸುಶ್ರುತ ಗೌಡ  ನಾವು ಅಭಿವೃದ್ಧಿಗೆ ವಿರುದ್ಧವಾಗಿಲ್ಲ. ನಗರಗಳು ಬೆಳೆಯಬೇಕು ಮತ್ತು ಮೂಲಸೌಕರ್ಯಗಳು ಸುಧಾರಿಸಬೇಕು. ಆದರೆ, ಸರಿಯಾದ ಪೂರ್ವತಯಾರಿ-  ಯೋಜನೆ, ವೈಜ್ಞಾನಿಕ ದತ್ತಾಂಶ ಮತ್ತು ಪ್ರಜಾಸತ್ತಾತ್ಮಕ ಮಾದರಿಯ  ಸಮಾಲೋಚನೆ ಇಲ್ಲದ, ಏಕಪಕ್ಷೀಯ ಅವೈಜ್ಞಾನಿಕ  ಅಭಿವೃದ್ಧಿಯು ಪ್ರಗತಿಯಲ್ಲ. ಇದು ಭವಿಷ್ಯದಲ್ಲಿ  ಒಳ್ಳೆಯದಕ್ಕಿಂತ ಹೆಚ್ಚು ಹಾನಿಯನ್ನು ಉಂಟು ಮಾಡಬಹುದು,” ಎಂದು ಅವರು ಎಚ್ಚರಿಸಿದರು.

ಪ್ರಸ್ತುತ ಹೊರಡಿಸಲಾಗಿರುವ  ಪ್ರಸ್ತಾವನೆಯಲ್ಲಿ ಪಾರದರ್ಶಕತೆ ಮತ್ತು ಸಮರ್ಪಕ ಸಿದ್ಧತೆಯ ಕೊರತೆಯಿದೆ. ಈ ವಿಸ್ತರಣೆಯನ್ನು  ಹಂತ ಹಂತವಾಗಿ ಮತ್ತು ಸಾರ್ವಜನಿಕ ಸಹಭಾಗಿತ್ವದೊಂದಿಗೆ ಯೋಜಿಸಬೇಕು. ದುರದೃಷ್ಟವಶಾತ್, ಪ್ರಸ್ತುತ ಬೃಹತ್ ಮೈಸೂರು ಪ್ರಸ್ತಾವನೆಯು ಈ ಮೂಲಭೂತ ತತ್ವಕ್ಕೆ ವಿರುದ್ಧವಾಗಿದೆ ಎಂದು ಅವರು ಟೀಕಿಸಿದರು.

ಮೈಸೂರು ಗ್ರಾಹಕರ ಪರಿಷತ್ತಿನ  ಸ್ಥಾಪಕ ಅಧ್ಯಕ್ಷ  ಡಾ. ಭಾಮಿ ವಿ  ಶೆಣೈ ಮಾತನಾಡಿ, ಯೋಜನೆಯ ಪರಿಸರ ಪರಿಣಾಮಗಳ ಮೌಲ್ಯಮಾಪನ ನಡೆದಿಲ್ಲ ಎಂದು ದೂರಿದರು.  ಯಾವುದೇ ಪರಿಸರ ಪ್ರಭಾವದ ಮೌಲ್ಯಮಾಪನ (EIA) ವರದಿ ಸಾರ್ವಜನಿಕವಾಗಿ ಲಭ್ಯವಿಲ್ಲ. ಅಗತ್ಯ ಮುನ್ನೆಚ್ಚರಿಕೆಗಳಿಲ್ಲದೆ ಈ ಯೋಜನೆಯನ್ನು ಜಾರಿಗೆ ತಂದರೆ ಕೆರೆಗಳು, ಜೌಗು ಪ್ರದೇಶಗಳು, ಹಸಿರು ವಲಯಗಳು ಮತ್ತು ವನ್ಯಜೀವಿ ಕಾರಿಡಾರ್‌ಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ  ಎಂದು ಎಚ್ಚರಿಸಿದರು.

ನಿಯೋಗ ಸರ್ಕಾರಕ್ಕೆ ಸಲ್ಲಿಸಿದ ಆಕ್ಷೇಪಣೆಗಳೇನು?

ಗ್ರಾಮ ಸಭೆ ಮತ್ತು ವಾರ್ಡ್ ಸಮಿತಿಗಳ ಕಡೆಗಣನೆ,  ಮಾಸ್ಟರ್ ಪ್ಲಾನ್ ಅಲಭ್ಯತೆ, ಸದ್ಯ ಮೈಸೂರು ನಗರ ಎದುರಿಸುತ್ತಿರುವ  ನೀರಿನ ಅಭಾವ, ಒಳಚರಂಡಿ ಅವ್ಯವಸ್ಥೆ,  ಪ್ರವಾಹ, ಸಂಚಾರ ದಟ್ಟಣೆ ಮತ್ತು ಘನತ್ಯಾಜ್ಯ ವಿಲೇವಾರಿಯಂತಹ  ಸಮಸ್ಯೆಗಳನ್ನು ಬಗೆಹರಿಸದೆ ನಗರ  ವಿಸ್ತರಣೆ ಮಾಡುತ್ತಿರುವುದು,  ರೈತರು ಮತ್ತು ಗ್ರಾಮೀಣ ಜೀವನೋಪಾಯದ ಮೇಲೆ  ಪ್ರತಿಕೂಲ ಪರಿಣಾಮ ಸಾಧ್ಯತೆ,  ಹೆಚ್ಚಿನ ತೆರಿಗೆ ಮತ್ತು ಸೌಲಭ್ಯಗಳ ಮೇಲಣ  ಶುಲ್ಕದಿಂದ ಜೀವನ ವೆಚ್ಚ ಏರಿಕೆ,  ನೀರಿನ ಭದ್ರತೆ ಮತ್ತು ಸುಸ್ಥಿರತೆಯ ಬಗ್ಗೆ ಸ್ಪಷ್ಟತೆ ಕೊರತೆ,  ಚಾಮುಂಡಿ ಬೆಟ್ಟ ಮತ್ತು ಪರಿಸರ ಸೂಕ್ಷ್ಮ ವಲಯಗಳಿಗೆ ಅಪಾಯ ಸಾಧ್ಯತೆ, ವಿಪತ್ತು ನಿರ್ವಹಣೆ ಮತ್ತು ಸಾರ್ವಜನಿಕ ಆರೋಗ್ಯ ಸಿದ್ಧತೆಯ ಕೊರತೆ.  ಪಾರದರ್ಶಕತೆ ಇಲ್ಲದೆ ಸಾರ್ವಜನಿಕ ಖಜಾನೆಯ ಮೇಲೆ ಬೀಳುವ ಆರ್ಥಿಕ ಹೊರೆ, ಈ ವಿಸ್ತರಣೆಯು  ಭೂ-ಮಾಫಿಯಾದ ಹಿತಾಸಕ್ತಿಯಿಂದ ಪ್ರೇರಿತವಾಗಿದೆ ಎಂಬ ಆತಂಕವನ್ನು ಹೊರ ಹಾಕಲಾಗಿದೆ.

ನಮ್ಮ ಮೈಸೂರು ಫೌಂಡೇಶನ್‌ನ ದಶರಥ್ ಮಾತನಾಡಿ, “ರೈತರು ಅನಿವಾರ್ಯವಾಗಿ ಭೂಮಿ ಮಾರಾಟ ಮಾಡಬೇಕಾಗುತ್ತದೆ ಮತ್ತು ಕೃಷಿ ಕಾರ್ಮಿಕರು ಜೀವನೋಪಾಯ ಕಳೆದುಕೊಳ್ಳುತ್ತಾರೆ. ಇದು ಗ್ರಾಮೀಣ-ನಗರ ಅಸಮಾನತೆಯನ್ನು ಹೆಚ್ಚಿಸುತ್ತದೆ ಮತ್ತು ಆಹಾರ ಭದ್ರತೆಗೆ ಸಂಚಕಾರ ತರುತ್ತದೆ,” ಎಂದರು. ನಿಮಿಷಾಂಬ ಸ್ವಸಹಾಯ ಸಂಘದ ಸುಜಾತಾ ಎಸ್. ಅವರು, ಸಾಮಾನ್ಯ ನಾಗರಿಕರು ಹೆಚ್ಚಿನ ತೆರಿಗೆ ಮತ್ತು ಶುಲ್ಕಗಳ ಹೊರೆ ಹೊರಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಸ್ತುತ ಬೃಹತ್ ಮೈಸೂರು ಅಧಿಸೂಚನೆಯನ್ನು ಹಿಂಪಡೆಯಬೇಕು, ಕಡ್ಡಾಯವಾಗಿ ಗ್ರಾಮ ಸಭೆ ಮತ್ತು ವಾರ್ಡ್ ಸಮಿತಿ ಸಮಾಲೋಚನೆ ನಡೆಸಬೇಕು,  ವೈಜ್ಞಾನಿಕ ಮಹಾಯೋಜನೆಯನ್ನು (2031 ಮತ್ತು ಅದಕ್ಕೂ ಮೀರಿದ) ಪ್ರಕಟಿಸಬೇಕು,  ಪರಿಸರ ಮತ್ತು ಆರೋಗ್ಯ ಪ್ರಭಾವದ ಮೌಲ್ಯಮಾಪನಗಳನ್ನು ಬಿಡುಗಡೆ ಮಾಡಬೇಕು,  ಸಾರ್ವಜನಿಕ ವಿಚಾರಣೆಗಳನ್ನು (Public Hearings) ನಡೆಸಬೇಕು, ರೈತರು, ಕೆರೆಗಳು, ಹಸಿರು ವಲಯ ಮತ್ತು ಚಾಮುಂಡಿ ಬೆಟ್ಟದ ಪರಿಸರ ವಲಯಗಳನ್ನು ಸಂರಕ್ಷಿಸಬೇಕು, . ವಿಸ್ತರಣೆಯ ಮೊದಲು ಮೈಸೂರಿನ ಹಾಲಿ ಮೂಲಸೌಕರ್ಯಗಳನ್ನು ಬಲಪಡಿಸಬೇಕು,  ಸ್ಥಳೀಯ ಸಂಸ್ಥೆಗಳ ಪ್ರಜಾಸತ್ತಾತ್ಮಕ ಒಪ್ಪಿಗೆಯೊಂದಿಗೆ ಮಾತ್ರ ಮುಂದುವರಿಯಬೇಕು ಎಂದು ಈ ಸಂದರ್ಭದಲ್ಲಿ  ರಾಜ್ಯ ಸರಕಾರವನ್ನು ಆಗ್ರಹಿಸಲಾಗಿದೆ.

ಮೈಸೂರಿನ ಭವಿಷ್ಯವನ್ನು ದೂರದೃಷ್ಟಿಯಿಂದ ರೂಪಿಸಬೇಕು ಎಂದು ನಾಗರಿಕ ತಂಡ ಹೇಳಿದ್ದು,”ನಿಜವಾದ ಅಭಿವೃದ್ಧಿಯು ಒಳಗೊಳ್ಳುವಿಕೆಯನ್ನ ಹೊಂದಿರಬೇಕು. ಮೈಸೂರಿನ ಭವಿಷ್ಯವನ್ನು ಅವಸರದಲ್ಲಿ ಅಥವಾ ಕೆಲವೇ ಹಿತಾಸಕ್ತಿಗಳಿಗಾಗಿ ನಿರ್ಧರಿಸಬಾರದು. ಅದು ಜನರ ಇಚ್ಛೆ ಮತ್ತು ಕಲ್ಯಾಣವನ್ನು ಪ್ರತಿಬಿಂಬಿಸಬೇಕು,” ಎಂದು ಡಾ. ಸುಶ್ರುತ ಗೌಡ  ಹೇಳಿದ್ದಾರೆ.

admin
the authoradmin

ನಿಮ್ಮದೊಂದು ಉತ್ತರ

Translate to any language you want