ಇನ್ನು ನಾಲ್ಕೈದು ತಿಂಗಳಲ್ಲಿ ವಿಧಾನಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ ಅವರ ಅಧಿಕಾರವಧಿ ಮುಗಿಯಲಿದೆ. ಸದ್ಯ ಬಿಜೆಪಿಯಲ್ಲಿರುವ ಅವರ ಮುಂದಿನ ನಡೆ ಏನು? ಬಿಜೆಪಿಯಲ್ಲಿಯೇ ಇರುತ್ತಾರಾ? ಅಥವಾ ಬೇರೆ ಪಕ್ಷಗಳತ್ತ ಮುಖ ಮಾಡುತ್ತಾರಾ? ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಶುರುವಾಗಿದೆ. ಈಗಾಗಲೇ ಅವರು ಶಾಸಕ, ಸಚಿವ, ಸಂಸದ ಹೀಗೆ ಎಲ್ಲ ರೀತಿಯ ಸೇವೆಗಳನ್ನು ಮಾಡಿದ್ದಾರೂ ಯಾವುದೇ ಪಕ್ಷದಲ್ಲಿ ಗಟ್ಟಿಯಾಗಿ, ಪ್ರಭಾವಿಯಾಗಿ ಉಳಿದು ಕೊಳ್ಳಲು ಸಾಧ್ಯವಾಗಲಿಲ್ಲ. ಸಧ್ಯಕ್ಕೆ ರಾಜಕೀಯದ ಸಂಧ್ಯಾ ಕಾಲದಲ್ಲಿರುವ ಅವರ ಮುಂದಿನ ತೀರ್ಮಾನಗಳು ಹೇಗಿರಬಹುದು ಎಂಬುದೇ ಕುತೂಹಲಕಾರಿಯಾಗಿದೆ.

ಬಿಜೆಪಿಯಲ್ಲಿದ್ದುಕೊಂಡೇ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊರಹಾಕುವ, ಕಾಂಗ್ರೆಸ್ ಪ್ರಭಾವಿ ನಾಯಕ ಸಿಎಂ ಸಿದ್ದರಾಮಯ್ಯರವರ ವಿರುದ್ಧವೇ ಹರಿಹಾಯುವ ಹೀಗೆ ಯಾರನ್ನೂ ಮುಲಾಜಿಲ್ಲದೆ ತರಾಟೆಗೆ ತೆಗೆದುಕೊಳ್ಳುವ ವಿಶ್ವನಾಥ್ ಅವರು ಬಿಜೆಪಿಯಲ್ಲಿಯೇ ಮುಂದುವರೆಯುತ್ತಾರಾ? ಮುಂದಿನ 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ? ಅಥವಾ ಚುನಾವಣಾ ರಾಜಕೀಯದಿಂದ ದೂರ ಉಳಿಯುತ್ತಾರಾ? ಎಂಬಿತ್ಯಾದಿ ಪ್ರಶ್ನೆಗಳು ರಾಜಕೀಯ ಪಡಸಾಲೆಯಲ್ಲಿ ಗಿರಕಿ ಹೊಡೆಯಲಾರಂಭಿಸಿವೆ.

ಸದ್ಯ ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ದೋಸ್ತಿಯಾಗಿದ್ದು, ಇದು ಮುಂದುವರೆದರೆ ವಿಶ್ವನಾಥ್ ಅವರು ಬಿಜೆಪಿಯಲ್ಲಿದ್ದುಕೊಂಡು ಜೆಡಿಎಸ್ ಸಹಕಾರದಲ್ಲಿ ಚುನಾವಣೆಗೆ ಹೋಗುತ್ತಾರಾ? ಅಥವಾ ಜೆಡಿಎಸ್ ಕಡೆಗೆ ವಾಲುತ್ತಾರಾ? ಜೆಡಿಎಸ್ ಬಗ್ಗೆ, ದೇವೇಗೌಡರ ಕುಟುಂಬದ ಬಗ್ಗೆ ಮೆದು ಧೋರಣೆ ತಳೆಯುತ್ತಿರುವುದು ಕಂಡು ಬರುತ್ತದೆ. ಕೆಲವರು ಅವರು ಜೆಡಿಎಸ್ ಸಖ್ಯ ಬೆಳೆಸುತ್ತಾರೆ ಎಂಬಿತ್ಯಾದಿ ಗಾಳಿ ಸುದ್ದಿಗಳನ್ನು ಹರಡಲಾರಂಭಿಸಿದ್ದಾರೆ. ಆದರೆ ಎಲ್ಲದಕ್ಕೂ ಉತ್ತರ ಹೇಳಬೇಕಾದವರು ಅವರೇ ಆಗಿದ್ದಾರೆ.

ಸುಮಾರು ಐದು ದಶಕಗಳ ಅವರ ರಾಜಕೀಯ ಜೀವನದಲ್ಲಿ ಹಲವು ರೀತಿಯ ಏಳು ಬೀಳುಗಳನ್ನು ಕಂಡಿದ್ದಾರೆ. ಶಾಸಕರಾಗಿ, ಸಚಿವ, ಸಂಸತ್ ಸದಸ್ಯರಾಗಿ ಜವಬ್ದಾರಿಗಳನ್ನು ನಿಭಾಯಿಸಿದ್ದಾರೆ. ಸಚಿವರಾಗಿ ನೆನಪಾಗಿ ಉಳಿಯುವ ಕಾರ್ಯಗಳನ್ನು ಮಾಡಿದ್ದಾರೆ. ಹೀಗಿದ್ದರೂ ಅವರು ಒಂದು ಪಕ್ಷದಲ್ಲಿ ಗಟ್ಟಿಯಾಗಿ ನೆಲೆಯೂರಲಿಲ್ಲ. ಇದಕ್ಕೆ ಕಾರಣವಾಗಿರುವುದು ಕಂಡಿದ್ದನ್ನು ಕಂಡಂತೆ ಹೇಳುವ ನಿಷ್ಠೂರವಾದಿತನ ಎಂದರೆ ತಪ್ಪಾಗಲಾರದು. ಇವತ್ತು ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಲ್ಲಿ ನೆಲೆಕಂಡುಕೊಂಡು ಮುಖ್ಯಮಂತ್ರಿ ಆಗಿದ್ದಾರೆಂದರೆ ಅದರಲ್ಲಿ ವಿಶ್ವನಾಥ್ ಅವರ ಶ್ರಮವೂ ಇಲ್ಲದಿಲ್ಲ.

ಇವತ್ತು ಅವರಿಗೆ ರಾಜ್ಯ ಮತ್ತು ಕೇಂದ್ರ ಎರಡು ರಾಜಕೀಯದ ಬಗ್ಗೆಯೂ ಅರಿವಿದೆ. ಕೆ.ಆರ್.ಕ್ಷೇತ್ರದಲ್ಲಿ ತನ್ನದೇ ಆದ ಹಿಡಿತ ಸಾಧಿಸಿರುವ ಅವರು, ಎಲ್ಲ ಸಮುದಾಯದ ನಾಯಕರೊಂದಿಗೆ ಒಡನಾಟ ಹೊಂದಿದ್ದಾರೆ. ವೈಯಕ್ತಿಕ ಜನಮನ್ನಣೆಯೂ ಅವರಿಗಿದೆ. 2014ರಲ್ಲಿ ನಡೆದ ಲೋಕಸಭಾ ಚುನಾವಣೆಯ ಸೋಲಿನ ಬಳಿಕ ಅವರು ಕಾಂಗ್ರೆಸ್ ನಲ್ಲಿ ಮೂಲೆ ಗುಂಪಾಗಿದ್ದರು. ಅವತ್ತು ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಮನಸ್ಸು ಮಾಡಿದ್ದರೆ ವಿಶ್ವನಾಥ್ ಅವರಿಗೆ ಒಂದೊಳ್ಳೆಯ ಹುದ್ದೆಯನ್ನು ನೀಡಬಹುದಿತ್ತು. ಆದರೆ ಹಾಗೆ ಆಗಲಿಲ್ಲ. ಹೀಗಾಗಿ ಅವತ್ತಿನ ದಿನಗಳು ಒಂಥರಾ ರಾಜಕೀಯ ಸನ್ಯಾಸದ ದಿನಗಳಾಗಿತ್ತು. ಇಂಥ ಸಂದರ್ಭದಲ್ಲಿ ಅವರನ್ನು ಜೆಡಿಎಸ್ ಗೆ ಸೇರಿಸಿಕೊಂಡು ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಗೆಲ್ಲಿಸಿಕೊಂಡು ಬರುವಲ್ಲಿ ಸಹಾಯ ಮಾಡಿದ್ದು ಜೆಡಿಎಸ್ ವರಿಷ್ಠ ಹೆಚ್.ಡಿ,ದೇವೇಗೌಡರು ಎನ್ನುವುದರಲ್ಲಿ ಎರಡು ಮಾತಿಲ್ಲ.

ಆದರೆ ಅವತ್ತು ಅತಂತ್ರ ಸ್ಥಿತಿ ನಿರ್ಮಾಣವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರವಾಗಿ ಅಧಿಕಾರ ನಡೆಸಿದಾಗ ಹಿರಿಯ ನಾಯಕರಾಗಿದ್ದ ವಿಶ್ವನಾಥ್ ಅವರಿಗೆ ಸಂಪುಟಲ್ಲಿ ಸ್ಥಾನಮಾನ ನೀಡಬಹುದಿತ್ತು. ಆದರೆ ನೀಡದೆ ಬದಿಗೆ ತಳ್ಳಲಾಗಿತ್ತು. ಇದು ಅವರ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಸಿಡಿದೆದ್ದರು. ಅದರ ಪರಿಣಾಮ ಸಮ್ಮಿಶ್ರ ಸರ್ಕಾರ ಬಿದ್ದು ಹೋಯಿತು. ಆದರೆ ಹೆಚ್.ವಿಶ್ವನಾಥ್ ಅವರ ನಸೀಬು ನೆಟ್ಟಗಿರಲಿಲ್ಲ. ಜೆಡಿಎಸ್ ಗೆ ರಾಜೀನಾಮೆ ನೀಡಿ ಮತ್ತೆ ಬಿಜೆಪಿಯಿಂದ ಹುಣಸೂರಿನ ಉಪಚುನಾವಣೆಗೆ ನಿಂತರೂ ಗೆಲ್ಲಲು ಸಾಧ್ಯವಾಗಲಿಲ್ಲ. ಹೀಗಾಗಿ ಅವತ್ತು ಅಧಿಕಾರಕ್ಕೆ ಬಂದ ಬಿಜೆಪಿ ಎಂಎಲ್ ಸಿ ಮಾಡಿ ಕೈತೊಳೆದುಕೊಂಡಿತ್ತು. ಆದರೆ ಸಂಪುಟದಲ್ಲಿ ಯಾವುದೇ ಸ್ಥಾನಮಾನ ನೀಡಲಿಲ್ಲ.

ಬಿಜೆಪಿಯಲ್ಲಿದ್ದರೂ ಬಿಜೆಪಿ ನಾಯಕರ ವಿರುದ್ಧ ಮಾತನಾಡುವಲ್ಲಿ ಹಿಂದೆ ಬಿದ್ದಿಲ್ಲ. ಸದ್ಯ ಅಧಿಕಾರದಲ್ಲಿರುವ ಕಾಂಗ್ರೆಸ್ ನ್ನು ಅದರಲ್ಲೂ ಸಿಎಂ ಸಿದ್ದರಾಮಯ್ಯರನ್ನು ಟೀಕಿಸುತ್ತಲೇ ಬರುತ್ತಿರುವ ವಿಶ್ವನಾಥ್ ಅವರ ನಡೆ ಜುಲೈ ನಂತರ ಹೇಗಿರುತ್ತದೆ ಎಂಬುದೇ ಕುತೂಹಲಕಾರಿಯಾಗಿದೆ.
B M Lavakumar








