LatestMysore

ಕಾಡಿನಿಂದ ರೈಲ್ವೆ ಕಂಬಿಯ ತಡೆಗೋಡೆ ಮುರಿದು ನಾಡಿಗೆ ಬಂದು ದಾಂಧಲೆ ನಡೆಸುತ್ತಿದ್ದ ಕಾಡಾನೆ ಸೆರೆ…

ಸರಗೂರು(ಸರಗೂರು ದಾಸೇಗೌಡ): ಎರಡು ತಿಂಗಳಿನಿಂದ ಕಾಡು-ನಾಡಿನಲ್ಲಿ ರಂಪಾಟ ಮಾಡಿ ರೈಲ್ವೆ ಕಂಬಿ, ಕಾರು, ಕಟ್ಟಡಗಳು, ರೈತರ ಬೆಳೆಗಳಿಗೆ ಹಾನಿ ಮಾಡಿದಲ್ಲದೆ ಹಾಡಿ ನಿವಾಸಿ ಮಾದ ಎಂಬುವರ ಬಲಿ ಪಡೆದಿದ್ದ 35 ವರ್ಷದ ಗಂಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದ್ದು, ಕಾಡಾನೆಯನ್ನು ರಾಮಪುರ ಸಾಕಾನೆ ಶಿಬಿರಕ್ಕೆ ಬಿಡಲಾಗಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಮೊಳೆಯೂರು ವಲಯ ಅರಣ್ಯ ಪ್ರದೇಶದಿಂದ ರೈಲ್ವೆ ಕಂಬಿ ಮುರಿದು ಮೇವು ಅರಸಿ ಕಾಡಿನಿಂದ ಹೊರ ಬಂದ ಆನೆ ಸರಗೂರು ತಾಲೂಕಿನ ಕಾಟವಾಳು, ಮಠದಕಟ್ಟೆ ಗ್ರಾಮ ಜಮೀನಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿತ್ತು. ಬಿ.ಮಟಕೆರೆ ಗ್ರಾಮದ ಹಾಡಿ ನಿವಾಸಿ ಮಾದ ಎಂಬುವರ ಮೇಲೆ ದಾಳಿ ನಡೆಸಿ, ಕೊಲೆ ಮಾಡಿತ್ತು. ಇದಲ್ಲದೆ ಇನ್ನಿತರ ವಸ್ತುಗಳ ಮೇಲೂ ಹಾನಿ ಮಾಡಿತ್ತು. ಇದರಿಂದಾಗಿ ರೈತರು ಆನೆ ಸೆರೆ ಹಿಡಿಯುವಂತೆ ಮನವಿ ಮಾಡಿದ್ದರು. ಹೀಗಾಗಿ ಮನವಿ ಸ್ಪಂದಿಸಿದ ಅರಣ್ಯ ಇಲಾಖಾಧಿಕಾರಿಗಳು ಆನೆ ಸೆರೆಗೆ ಮುಂದಾದರು.

ಬುಧವಾರ ರಾತ್ರಿಯೂ ರೈಲ್ವೆ ಕಂಬಿ ಮುರಿದು ಕಾಡಿನಿಂದ ಹೊರ ಬಂದ ಕಾಡಾನೆ ಸೆರೆ ಹಿಡಿಯಲು ಮುಂದಾದ ಇಲಾಖಾಧಿಕಾರಿಗಳು ಆನೆ ಇರುವಿಕೆಯ ಜಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಆನೆ ಸೆರೆ ಹಿಡಿಯಲು ಮುಂದಾದರು. ರಾತ್ರಿಯಾದ್ದರಿಂದ ಸೆರೆ ಹಿಡಿಯುವುದನ್ನು ಕೈಬಿಟ್ಟರು. ಗುರುವಾರ ಬೆಳಗ್ಗೆ ಕಾಡಾನೆ ಮಠದಕಟ್ಟೆ, ಕಾಟವಾಳು ಗ್ರಾಮದ ಜಮೀನಿನಲ್ಲಿದ್ದಾಗ ಸಾಕಾನೆಗಳಾದ ದುಬಾರೆ (Dubare) ಸಾಕಾನೆ ಶಿಬಿರದಿಂದ ಏಕಲವ್ಯ, ಸುಗ್ರೀವ, ಪ್ರಶಾಂತ, ಅಯ್ಯಪ್ಪ ಹಾಗೂ ಏಕಲವ್ಯ ಆನೆಗಳ ಸಹಾಯದಿಂದ ಅರವಳಿಕೆ ಚುಚ್ಚುಮದ್ದು ನೀಡಿ ಆನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಬಂಡೀಪುರ ಸಿಎಫ್ ಪ್ರಭಾಕರನ್ ನೇತೃತ್ವದಲ್ಲಿ ಯಡಿಯಾಲ ಎಸಿಎಫ್ ಡಿ.ಪರಮೇಶ್ ಅವರ ಮಾರ್ಗದರ್ಶನದಲ್ಲಿ ಅರವಳಿಕೆ ಚುಚ್ಚುಮದ್ಧು ತಜ್ಞ ಡಾ.ವಾಸೀಂ ಮಿರ್ಜಾ ಅವರು ಆನೆಗೆ ಅರವಳಿಕೆ ಚುಚ್ಚುಮದ್ದು ನೀಡಿ ಸಾಕಾನೆ ಸಹಾಯದಿಂದ ಸೆರೆ ಹಿಡಿದಿದ್ದಾರೆ. ಸೆರೆ ಸಿಕ್ಕ ಆನೆಗೆ ಬಲದ ಕಣ್ಣಿಗೆ ಪೆಟ್ಟಾಗಿದ್ದು, ಬಲದ ಕಣ್ಣು ಕಾಣಿಸುತ್ತಿಲ್ಲ. ಕಾಡಾನೆ ದಾಳಿಯಿಂದಾಗಿ ಸಣ್ಣಪುಟ್ಟ ಗಾಯಗಳಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೊಳೆಯೂರು ಆರ್‌ಎಫ್ ಓ ನಾರಾಯಣ್, ಗುಂಡ್ರೆ ಆರ್‌ಎಫ್‌ ಒ ಅಮೃತೇಶ್, ನುಗು ಆರ್‌ಎಫ್‌ಒ ಅನಿತ್‌ರಾಜ್, ಯಡಿಯಾಲ ಆರ್‌ಎಫ್‌ಒ ಕೃಷ್ಣ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.

admin
the authoradmin

Leave a Reply

Translate to any language you want