ಹೆಚ್ ವಿಶ್ವನಾಥ್ ಅವರ ರಾಜಕೀಯ ಬದುಕನ್ನು ಗಮನಿಸಿದರೆ ಅವರೊಬ್ಬ ನಿಷ್ಠುರವಾದಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದಕ್ಕಿಂತ ಹೆಚ್ಚಾಗಿ ಅವರು ನಂಬಿದವರೇ ಅವರಿಗೆ ಮುಳುವಾದರು ಎನ್ನುವುದು ಅಷ್ಟೇ ಸತ್ಯ. ಅವರಿಗೆ ಮೊದಲ ಶಾಕ್ ನೀಡಿದ್ದು ಎರಡು ದಶಕಗಳ ಹಿಂದೆ ನಡೆದ 2004ರ ವಿಧಾನಸಭಾ ಚುನಾವಣೆ ಎಂದರೆ ತಪ್ಪಾಗಲಾರದು.
ಅವತ್ತು ಆತಂತ್ರ್ಯ ವಿಧಾನಸಭೆ ಬರುವ ಮುನ್ಸೂಚನೆ ಸಿಕ್ಕಿತ್ತು. ಹೀಗಾಗಿ ಚುನಾವಣೆಗೆ ಮುನ್ನವೇ ಕಾಂಗ್ರೆಸ್ ಜೆಡಿಎಸ್ ಸಮಿಶ್ರ ಸರ್ಕಾರ ರಚನೆ ಮಾಡಿ ಎಚ್ ವಿಶ್ವನಾಥ್ ಅವರೇ ಮುಂದಿನ ಮುಖ್ಯಮಂತ್ರಿಯಾಗಲಿದ್ದು, ಈ ಬಗ್ಗೆ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡರ ಜೊತೆಯು ಚರ್ಚೆ ನಡೆದಿದೆ ಎಂಬ ಗುಸು-ಗುಸು ಸುದ್ದಿ ಹರಿದಾಡಿತ್ತು. ಇದೊಂದು ಗಾಳಿ ಸುದ್ಧಿ ಹೆಚ್. ವಿಶ್ವನಾಥ್ ಅವರ ರಾಜಕೀಯ ಬದುಕಿನ ಮೇಲೆ ಪರಿಣಾಮ ಬೀರಿತು.

ಅವತ್ತು ವಿಧಾನಸಭಾ ಚುನಾವಣೆ ನಡೆದು ಫಲಿತಾಂಶ ಬಂದಾಗ ಕೆ.ಆರ್.ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಹೆಚ್ ವಿಶ್ವನಾಥ್ ಅವರಿಗೆ ದೊಡ್ಡ ಅಘಾತ ನೀಡಿತು. ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ವಿಶ್ವನಾಥ್ ಅವರು ಜೆಡಿಎಸ್ ಅಭ್ಯರ್ಥಿ ಮಂಚನಹಳ್ಳಿ ಮಹದೇವ್ ವಿರುದ್ಧ ಕೇವಲ ಅತ್ಯಲ್ಪ ಮತಗಳಿಂದ ಸೋತು ಹೋಗಿದ್ದರು. ಆದರೆ ಪಕ್ಷದಲ್ಲಿ ತಮ್ಮ ನಾಯಕತ್ವವನ್ನು ಉಳಿಸಿಕೊಂಡೇ ಬಂದಿದ್ದರು. ಇದಾದ ನಂತರ ಜೆಡಿಎಸ್ ನಿಂದ ಹೊರ ಬಂದ ಸಿದ್ದರಾಮಯ್ಯರವರನ್ನು ಕಾಂಗ್ರೆಸ್ ಗೆ ಸೇರಿಸಿಕೊಳ್ಳುವಲ್ಲಿಯೂ ವಿಶ್ವನಾಥ್ ಪ್ರಮುಖ ಪಾತ್ರ ವಹಿಸಿದ್ದರು.
ಇಷ್ಟೇ ಅಲ್ಲದೆ, ಎಸ್ಎಂ ಕೃಷ್ಣ ಸೇರಿದಂತೆ ಹಲವಾರು ನಾಯಕರ ಜೊತೆಗೂಡಿ ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯನವರನ್ನು ಸೇರಿಸಿಕೊಂಡಿದ್ದಲ್ಲದೆ, ನಂತರದ ಬೆಳವಣಿಗೆಯಲ್ಲಿ ವಿರೋಧ ಪಕ್ಷದ ಸ್ಥಾನವನ್ನು ಕೊಡಿಸುವ ಹೊಣೆಗಾರಿಕೆಯನ್ನು ಅವರೇ ಹೊತ್ತು ಕೊಂಡಿದ್ದರು. ಜತೆಗೆ ಪಕ್ಷದ ನಾಯಕತ್ವವನ್ನು ಸಿದ್ದರಾಮಯ್ಯನವರಿಗೆ ತ್ಯಾಗ ಮಾಡಿದ್ದರು. ಜೆಡಿಎಸ್ ಅಭ್ಯರ್ಥಿಯಾಗಿ ತಮ್ಮ ವಿರುದ್ಧ ಸ್ಪರ್ಧಿಸಿ ಗೆದ್ದು ಶಾಸಕ ಸ್ಥಾನ ಲಭಿಸಲು ಅಡ್ಡಗಾಲಾಗಿದ್ದ ಮಂಚನಹಳ್ಳಿ ಮಹದೇವ್ ಅವರು ಬದಲಾದ ರಾಜಕೀಯದಲ್ಲಿ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದರು. ಇದರ ಪರಿಣಾಮ ಮಂಚನಹಳ್ಳಿ ಮಹದೇವ್ ಮಾತ್ರವಲ್ಲ ವಿಶ್ವನಾಥ್ ಅವರ ರಾಜಕೀಯದ ಮೇಲೂ ಪರಿಣಾಮ ಬೀರಿತು.

ಮಂಚನಹಳ್ಳಿ ಮಹದೇವ್ ಜೆಡಿಎಸ್ ಬಿಟ್ಟು ಹೋಗುತ್ತಿದ್ದಂತೆಯೇ ಹೊಸ ನಾಯಕನ ಉದಯವಾಗಿತ್ತು. ಆ ನಾಯಕನೇ ಸಾ.ರಾ.ಮಹೇಶ್.. ಅಲ್ಲಿ ಸಾ ರಾ ಮಹೇಶ್ ಬಿಜೆಪಿ ಬಿಟ್ಟು ಜೆಡಿಎಸ್ ಸೇರಿ ಯುವನಾಯಕನಾಗಿ ಬೆಳೆದು ನಿಂತಿದ್ದರು. ಅದರ ಪರಿಣಾಮ ಚುನಾವಣೆಯಲ್ಲಿ ನಿಂತು ಗೆಲುವು ಕಂಡರು.
ಇದೆಲ್ಲದರ ನಡುವೆ ವಿಶ್ವನಾಥ್ ರಾಜ್ಯ ರಾಜಕೀಯದಿಂದ ಕೇಂದ್ರದ ಕಡೆಗೆ ಮುಖಮಾಡಿದರು. ಆ ವೇಳೆಗೆ ಲೋಕಸಭಾ ಕ್ಷೇತ್ರ ಪುನರ್ವಂಗಡಣೆಯಾದಾಗ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಿಂದ ವಿಶ್ವನಾಥ್ ಕಾಂಗ್ರೆಸ್ ನಿಂದ ಕಣಕ್ಕಿಳಿದು ಸಂಸದರಾದರು. ಹೀಗಾಗಿ ಕೆ.ಆರ್.ನಗರ ಕ್ಷೇತ್ರ ಇವರ ಹಿಡಿತ ತಪ್ಪಿತು. ಅಲ್ಲಿ ಮಂಚನಹಳ್ಳಿ ಮಹದೇವ್ ಪಕ್ಷದ ನಾಯಕತ್ವ ವಹಿಸಿಕೊಂಡಿದ್ದರು. ಆದರೆ ಅವರ ನಿಧನದ ನಂತರ ನಡೆದ ಚುನಾವಣೆಯಲ್ಲಿ ಅಂದರೆ 2013ರ ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಯಾರನ್ನು ಆಯ್ಕೆ ಮಾಡಬೇಕು ಎಂಬ ಅಧಿಕಾರ ವಿಶ್ವನಾಥ್ ಅವರಿಗೆ ಇತ್ತು. ಆದರೆ ಅವರು ಸ್ವಜಾತಿ ಪ್ರೇಮ ಮೆರೆದರು ಎಂಬ ಆರೋಪ ಅವರ ಮೇಲಿದ್ದು ಅದಕ್ಕೆ ಅವತ್ತು ಅವರು ಮಾಡಿದ ಅದೊಂದು ನಿರ್ಧಾರ ಕಾರಣವಾಗಿತ್ತು.

ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲು ಮಾಜಿ ಶಾಸಕ ದಿವಂಗತ ಮಂಚನಹಳ್ಳಿ ಮಹದೇವ್ ಪತ್ನಿ ಅನುರಾಧ ಮಹದೇವ್, ಹಿರಿಯ ಕಾಂಗ್ರೆಸ್ಸಿಗ ಶ್ರೀರಾಮ ಸಕ್ಕರೆ ಕಾರ್ಖಾನೆಯ ಜಿಪಂ ಮಾಜಿ ಉಪಾಧ್ಯಕ್ಷ, ಗೆಳೆಯ ಎ ಎಸ್ ಚನ್ನಬಸಪ್ಪ, ಒಕ್ಕಲಿಗ ಮುಖಂಡ ಸಾಲಿಗ್ರಾಮದ ಮಹಾರಾಷ್ಟ್ರದ ಇಂಜಿನಿಯರ್ ಎಸ್ ಪಿ ತಮ್ಮಯ್ಯ, ಮುದುಗುಪ್ಪೆ ರಮೇಶ್ ಇಷ್ಟೇ ಅಲ್ಲದೆ ತಮ್ಮ ಪತ್ನಿ ಶಾಂತಮ್ಮ ವಿಶ್ವನಾಥ್ ಅಥವಾ ಪುತ್ರ ಜಿಪಂ ಮಾಜಿ ಸದಸ್ಯ ಅಮಿತ್ ವಿ ದೇವರ ಹಟ್ಟಿ ಹೀಗೆ ಹತ್ತಾರು ನಾಯಕರಿದ್ದರು. ಆದರೆ ಅವರೆಲ್ಲರನ್ನು ಬಿಟ್ಟು ಬಿಜೆಪಿ ಕೆಜಿಪಿಯಲ್ಲಿದ್ದ ಈಗಿನ ಶಾಸಕರಾದ ಡಿ ರವಿಶಂಕರ್ ಅವರ ತಂದೆ ಮತ್ತು ಎಂಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ದೊಡ್ಡ ಸ್ವಾಮಿ ಗೌಡರಿಗೆ ಟಿಕೆಟ್ ಕೊಡಿಸುವ ಮೂಲಕ ಸ್ವಜಾತಿ ಪ್ರೇಮ ಮೆರೆದಿದ್ದರು. ಇವತ್ತು ಅವರೇ ರಾಜಕೀಯವಾಗಿ ವಿಶ್ವನಾಥ್ ಅವರಿಗೆ ಎದುರಾಳಿಗಳಾಗಿದ್ದಾರೆ.

ಹೆಚ್ ವಿಶ್ವನಾಥ್ ಅವರು ದೊಡ್ಡ ಸ್ವಾಮಿಗೌಡರ ತಂಗಿಯನ್ನು ಹೆಬ್ಬಾಳ್ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಡಿ ಗೆಲ್ಲಿಸಿದರು, ಅವರ ಪುತ್ರ ಈಗಿನ ಶಾಸಕ ಡಿ ರವಿಶಂಕರ್ ಅವರನ್ನು ಸಾಲಿಗ್ರಾಮ ಜಿ.ಪಂ. ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಡಿ ಗೆಲ್ಲಿಸಿದ್ದರು. ವಿಧಾನಸಭೆಗೆ ದೊಡ್ಡ ಸ್ವಾಮಿಗೌಡರಿಗೆ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡಿ ಕಾಂಗ್ರೆಸ್ ನಾಯಕತ್ವವನ್ನು ಅವರ ಕುಟುಂಬಕ್ಕೆ ನೀಡಿದರು. ಅಷ್ಟು ಮಾಡಿದ ವಿಶ್ವನಾಥ್ ಅವರು ಕಾಂಗ್ರೆಸ್ ನಲ್ಲಿಯೇ 2014 ಲೋಕಸಭಾ ಚುನಾವಣೆ ಬಳಿಕ ಮೂಲೆಗುಂಪಾದರು. ಆದರೆ ಕಾಂಗ್ರೆಸ್ ನಲ್ಲಿಯೆ ಇದ್ದ ದೊಡ್ಡಸ್ವಾಮಿಗೌಡರ ಪುತ್ರ ರವಿಶಂಕರ್ ಇವತ್ತು ಶಾಸಕರಾಗಿದ್ದಾರೆ. ವಿಶ್ವನಾಥ್ ಅವರ ಪುತ್ರ ಅಮಿತ್ ವಿ ದೇವರಟ್ಟಿ ಎಂಡಿಸಿಸಿ ಬ್ಯಾಂಕಿನ ಚುನಾವಣೆಗೆ ಸ್ಪರ್ಧಿಸಿದಾಗ ಅವರ ವಿರುದ್ಧ ದೊಡ್ಡ ಸ್ವಾಮಿಗೌಡರೇ ನಿಂತು ಅಮಿತ್ ವಿ ದೇವರೆಟ್ಟಿಯನ್ನು ಸೋಲಿಸಿ, ತಾವು ಗೆದ್ದು ಅಧ್ಯಕ್ಷರಾಗಿದ್ದಾರೆ.

ವಿಶ್ವನಾಥ್ ಅವರು ಯಾರನ್ನು ರಾಜಕೀಯವಾಗಿ ಬೆಳೆಸಿದರೋ ಅವರಿಂದಲೇ ಮೋಸವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇನ್ನು ನಾಲ್ಕೈದು ತಿಂಗಳಲ್ಲಿ ವಿಧಾನಪರಿಷತ್ ಅಧಿಕಾರವಧಿ ಮುಗಿಯುವುದರಿಂದ ಆ ನಂತರ ಅವರ ರಾಜಕೀಯ ನಡೆ ಹೇಗಿರುತ್ತದೆ ಎಂಬುದು ಕುತೂಹಲಕಾರಿಯಾಗಿದೆ. ಪುತ್ರನಿಗೆ ರಾಜಕೀಯದಲ್ಲಿ ನೆಲೆ ತೋರಿಸಲೇ ಬೇಕಾದ ಅನಿವಾರ್ಯತೆ ಅವರಿಗಿದೆ. ಕಳೆದ ಐದು ದಶಕಗಳ ಕಾಲ ರಾಜಕಾರಣ ಮಾಡಿರುವ ವಿಶ್ವನಾಥ್ ಅವರು ಎಸ್ಎಂ ಕೃಷ್ಣ ರವರ ಸಚಿವ ಸಂಪುಟದಲ್ಲಿ ಸಚಿವರಾಗಿ 2009ರಲ್ಲಿ ಸಂಸತ್ ಸದಸ್ಯರಾಗಿ ರಾಜಕಾರಣವನ್ನು ಚೆನ್ನಾಗಿ ಅರಿತಿದ್ದಾರೆ. ಮುಂದೆ ಬಿಜೆಪಿಯಲ್ಲಿಯೇ ಉಳಿದು ರಾಜಕಾರಣ ಮಾಡುತ್ತಾರಾ? ಎಂಬುವುದೇ ಕುತೂಹಲಕಾರಿಯಾಗಿದೆ.
-ಬಿ.ಎಂ.ಲವಕುಮಾರ್
ಸಂಕಷ್ಟದಲ್ಲಿರುವ ಹಿರಿಯ ಸಾಹಿತಿ ಬನ್ನೂರು ಕೆ ರಾಜುರವರಿಗೆ ಸರ್ಕಾರ, ಸಂಘ, ಸಂಸ್ಥೆ ಸ್ಪಂದಿಸಬೇಕಿದೆ..








