ArticlesLatest

ಮಾಂದಾಲಪಟ್ಟಿ ಭೇಟಿಗೆ ಪ್ರವಾಸಿಗರು ಮಾರ್ಚ್ ತನಕ ಕಾಯಲೇ ಬೇಕು… ಫೆ.28ರವರೆಗೆ ಪ್ರವೇಶ ನಿಷೇಧ? ಏಕೆ?

ಮಡಿಕೇರಿ: ಮಡಿಕೇರಿ ಸಮೀಪದ ನಿಸರ್ಗ ಸುಂದರ ಮಾಂದಾಲಪಟ್ಟಿಗೆ ತೆರಳುವವರಿಗೆ ಮಾರ್ಚ್ ತನಕ ಕಾಯುವುದು ಅನಿವಾರ್ಯವಾಗಿದೆ. ಇಲ್ಲಿ ರಸ್ತೆ ಮತ್ತು ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಕಾರಣ ಫೆ.16ರಿಂದ 28ರವರೆಗೆ ಸಾರ್ವಜನಿಕ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಅಲ್ಲದೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಎಂದು ಮಡಿಕೇರಿ  ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ತಿಳಿಸಿದ್ದಾರೆ.

ಇನ್ನು ಮಾಂದಾಲಪಟ್ಟಿ ಬಗ್ಗೆ ಹೇಳಬೇಕೆಂದರೆ ಇದು ಗಾಳಿಪಟ ಸಿನಿಮಾದ ಬಳಿಕ ಮುಗಿಲಪೇಟೆಯಾಗಿಯೇ ಹೆಸರು ವಾಸಿಯಾಗಿದೆ. ಹಿಂದೆ ಕೊಡಗಿನವರಿಗೆ ಈ ಬೆಟ್ಟದತ್ತ ಅಂತಹ ಆಸಕ್ತಿ ಇರಲಿಲ್ಲ ಏಕೆಂದರೆ ಎಲ್ಲ ಬೆಟ್ಟದಂತೆ ಇದು ಇತ್ತು. ಆದರೆ ಕಳೆದ ಒಂದೆರಡು ದಶಕಗಳಲ್ಲಿ ಕೊಡಗಿನ ಪ್ರವಾಸಿ ತಾಣಗಳ ಪೈಕಿ ತನ್ನದೇ ಆದ ಮಹತ್ವ ಪಡೆದು ಪ್ರವಾಸಿಗರನ್ನು ಅದರಲ್ಲೂ ನಿಸರ್ಗ ಪ್ರೇಮಿಗಳನ್ನು ಸೆಳೆಯುತ್ತಿದೆ. ಇವತ್ತು ಪ್ರವಾಸಿ  ತಾಣವಾಗಿ ಆಕರ್ಷಿಸುತ್ತಿರುವುದರಿಂದ, ಇದರ ಸುತ್ತಲೂ ವ್ಯಾಪಾರ ವಹಿವಾಟುಗಳು ಹುಟ್ಟಿಕೊಂಡಿವೆ.

ಮಾಂದಾಲಪಟ್ಟಿ ಬಗ್ಗೆ ಹೇಳುವುದಾದರೆ ಇದು ಮಡಿಕೇರಿಗೆ ಸುಮಾರು ಇಪ್ಪತ್ತು ಕಿ.ಮೀ. ದೂರದಲ್ಲಿದ್ದು, ಪುಷ್ಪಗಿರಿ ವನ್ಯಧಾಮಕ್ಕೆ ಸೇರಿದೆ. ಮಡಿಕೇರಿಯಿಂದ ಅಬ್ಬಿಫಾಲ್ಸ್ ರಸ್ತೆಯಲ್ಲಿ  ಸಾಗಬೇಕು. ಪ್ರವಾಸಿಗರೇ ಬಾರದ ಕಾಲದಲ್ಲಿ ಅಂದರೆ ಮೂರ್ನಾಲ್ಕು ದಶಕಗಳ ಹಿಂದೆ ಮಾಂದಾಲಪಟ್ಟಿಗೆ ದನಗಳನ್ನು ಮೇಯಿಸಲು ಅಥವಾ ಶಿಕಾರಿಗೆ ಗ್ರಾಮಸ್ಥರು ಹೋಗುತ್ತಿದ್ದರು. ಅಲ್ಲಿಗೆ ಯಾವುದೇ ರಸ್ತೆಗಳಿರಲಿಲ್ಲ. ಸಾಹಸಿಗಳು ಮಾತ್ರ ಗುಡ್ಡವನ್ನೇರುತ್ತಾ ಬೆಟ್ಟದ ತುತ್ತ ತುದಿಯೇರಿ ಅಲ್ಲಿಂದ ಕಾಣಸಿಗುವ ಸೌಂದರ್ಯವನ್ನು ನೋಡಿ ಕುಣಿದು ಕುಪ್ಪಳಿಸುತ್ತಿದ್ದರು.

ಸಮುದ್ರ ಮಟ್ಟದಿಂದ ಸುಮಾರು 4ಸಾವಿರ ಅಡಿ ಎತ್ತರದಲ್ಲಿರುವ ಮಾಂದಾಲಪಟ್ಟಿಗೆ  ಈ ಹಿಂದೆ ಆಗೊಮ್ಮೆ ಈಗೊಮ್ಮೆ ಪ್ರವಾಸಿಗರು ಬರುತ್ತಿದ್ದರು. ಉಳಿದಂತೆ ಅಲ್ಲಿ ನೀರವ ಮೌನ ನೆಲೆಸಿರುತ್ತಿತ್ತು. ಈಗ ಹಾಗಿಲ್ಲ ಪ್ರವಾಸಿಗರು ಲಗ್ಗೆ ಹಾಕುತ್ತಲೇ ಇರುತ್ತಾರೆ. ಇನ್ನು ಕೊಡವ ಭಾಷೆಯಲ್ಲಿ “ಮಾಂದಲ್ ಪಟ್ಟ” ಎಂದರೆ ಎತ್ತರದ ಜಾಗ ಎಂದರ್ಥ. ಬಹುಶಃ ಆಡು ಭಾಷೆಯಲ್ಲಿ ಅದು ಮಾಂದಲಪಟ್ಟಿ ಆಗಿರಬಹುದೆಂದು ಹೇಳಲಾಗುತ್ತಿದೆ.

ಮಾಂದಾಲಪಟ್ಟಿ ಪ್ರವಾಸಿಗರಿಗೆ ಸ್ವರ್ಗ ತಾಣವಾಗಿದ್ದು, ಬೆಟ್ಟದ ತುತ್ತ ತುದಿ (ವ್ಯೂಪಾಯಿಂಟ್) ತಲುಪಿದಾಗ  ಕೈಗೆ ಎಟುಕುತ್ತದೆಯೇನೋ ಎಂಬಂತೆ ಭಾಸವಾಗುವ ಮುಗಿಲು… ಪುಷ್ಪಗಿರಿ ಹಾಗೂ ಕೋಟೆಬೆಟ್ಟದ ಸುತ್ತಲೂ ಹರಡಿ ನಿಂತ ಪರ್ವತ ಶ್ರೇಣಿಗಳು… ಅಲೆಅಲೆಯಾಗಿ ತೇಲಿ ಬರುವ ಮಂಜು…  ಸುಂದರ ನಿಸರ್ಗ ಸೌಂದರ್ಯ ನಿಮ್ಮ ಆಯಾಸವನ್ನೆಲ್ಲಾ ಮಾಯ ಮಾಡಿಬಿಡುತ್ತದೆ. ನಡುಬೇಸಿಗೆಯಲ್ಲೂ ತಂಪು ಹವೆ… ಮುಂಜಾನೆ ಇಬ್ಬನಿಯ ಸಿಂಚನ… ಸಂಜೆ  ಮಂಜು ಮುಸುಕಿನಲ್ಲಿ ರಕ್ತದ ಚೆಂಡಿನಂತೆ ಹೊಳೆವ ಸೂರ್ಯ ಬೆಟ್ಟಗಳ ನಡುವೆ ಲೀನವಾಗುವ ದೃಶ್ಯ ಮನಮೋಹಕವಾಗಿರುತ್ತದೆ.

ಇನ್ನು ಮಾಂದಲಪಟ್ಟಿಗೆ ಬರುವ ಪ್ರವಾಸಿಗರು ಒಂದಷ್ಟು ಎಚ್ಚರಿಕೆ ವಹಿಸುವುದು ಒಳಿತು. ಇಲ್ಲಿಗೆ ಭೇಟಿ ನೀಡುವವರು ತಿಂಡಿ ತಿನಿಸುಗಳನ್ನು ಜೊತೆಯಲ್ಲಿಯೇ ಕೊಂಡೊಯ್ಯುವುದು ಒಳ್ಳೆಯದು ಅಲ್ಲಿ ಏನೂ ಸಿಗಲಾರದು. ಆದರೆ  ಪ್ಲಾಸ್ಟಿಕ್ ಚೀಲ, ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗದಿದ್ದರೆ ಅದೇ ಮಾಂದಲಪಟ್ಟಿಯ ಸೌಂದರ್ಯದ ಉಳಿವಿಗೆ ಪ್ರವಾಸಿಗರು ನೀಡುವ ಕೊಡುಗೆಯಾಗುತ್ತದೆ.  ಸದ್ಯ ಮಾಂದಾಲಪಟ್ಟಿಗೆ ಹೋಗುವ ಪ್ರಯತ್ನ ಬೇಡ ಮಾರ್ಚ್ ನಲ್ಲಿ ಇತ್ತ ಬಂದರೆ ಬೇಸಿಗೆಯ ಬಿಸಿಲ ಝಳದಲ್ಲೂ ತಂಪು ಹವೆ ಮುದ ನೀಡಬಹುದು.. ವರ್ಷದ ಪ್ರತಿ ಕಾಲವೂ ಮಾಂದಾಲಪಟ್ಟಿಗೆ ಹೊಸ ಮೆರಗು ನೀಡುತ್ತದೆ. ಹೀಗಾಗಿ ಮಳೆಗಾಲದ ಹೊರತಾಗಿ ಎಲ್ಲ ದಿನಗಳು ಮಜಾ ಕೊಡುತ್ತವೆ.

 

B M Lavakumar

 

admin
the authoradmin

Leave a Reply

Translate to any language you want