CinemaLatest

ಸಂಗ್ರಾಮ್ ಸಿಂಗ್…. ಕನ್ನಡ ಚಿತ್ರರಂಗದಲ್ಲಿ ವಿಂಚುತ್ತಿದ್ದಾಗಲೇ ಕಾಲನ ಕರೆಗೆ ಓಗೊಟ್ಟ ನಟ!

ಕನ್ನಡ ಚಿತ್ರರಂಗ ನಿಂತ ನೀರಲ್ಲ. ಅದು ಕಾಲಘಟ್ಟಕ್ಕೆ ತಕ್ಕಂತೆ ಹಲವು ರೀತಿಯಲ್ಲಿ ಬದಲಾವಣೆ ಕಂಡಿದೆ.. ಹಳೆ ತಲೆಮಾರಿನ ಕಲಾವಿದರು ಮರೆಯಾಗಿ ಹೊಸ ಕಲಾವಿದರು ಬಂದು ತಮ್ಮದೇ ಆದ ಛಾಪು ಮೂಡಿಸಿ ಹೋಗಿದ್ದಾರೆ… ಈ ಸಮಯದಲ್ಲಿ ಕನ್ನಡ ಚಿತ್ರರಂಗದಲ್ಲಿ ಮಿಂಚಿ ಮರೆಯಾದ ಕಲಾವಿದರನ್ನು ಸ್ಮರಿಸುವುದು ಬಹುಮುಖ್ಯವಾಗಿದೆ. ಅವತ್ತಿನ ಕಾಲಕ್ಕೆ ಅವರೆಲ್ಲರ ಸಾಧನೆ ಶ್ಲಾಘನೀಯ.. ಇಂತಹ ಕಲಾವಿದರ ಸಾಲಿನಲ್ಲಿ ನಿಲ್ಲುವ ನಟ ಸಂಗ್ರಾಮ್ ಸಿಂಗ್… ಇವತ್ತು ಅವರಿಲ್ಲವಾದರೂ ಅವರ ಬಗ್ಗೆ ಹೇಳದೆ ಹೋದರೆ ನಾವು ಓದುಗರಿಗೆ ಮಾಡುವ ಬಹುದೊಡ್ಡ ವಂಚನೆಯಾಗಿ ಬಿಡುತ್ತದೆ.. ಹೀಗಾಗಿಯೇ ಹಿರಿಯಬರಹಗಾರರಾದ ಕುಮಾರಕವಿ ನಟರಾಜ್ ಅವರು ಸಂಗ್ರಾಮ್ ಸಿಂಗ್ ಅವರ ಬಗ್ಗೆ ಬರೆದಿದ್ದಾರೆ… ಒಮ್ಮೆ ಓದಿ.. ಅಭಿಪ್ರಾಯ ತಿಳಿಸಿ…

1951ರಲ್ಲಿ ಮೈಸೂರಿನ ಪ್ರಖ್ಯಾತ ಕಲಾವಿದರ ಕುಟುಂಬದಲ್ಲಿ ಜನಿಸಿ 1995ರಲ್ಲಿ ದೈವಾಧೀನರಾದ ನತದೃಷ್ಟ ಯುವನಟ ಸಂಗ್ರಾಮಸಿಂಗ್… ಕ್ರೂರವಿಧಿಯ ಅಟ್ಟಹಾಸಕ್ಕೆ ಸಿಲುಕಿ ಕೇವಲ 44ನೆ ವಯಸ್ಸಿಗೆ ಅಕಾಲಿಕ ಮರಣಹೊಂದಿದ ಆರಡಿ ಎತ್ತರದ ಆಜಾನುಬಾಹು ಸ್ಫುರದ್ರೂಪಿ ಯುವನಟ ಸಂಗ್ರಾಮ್ ಸಿಂಗ್ ಬಾಲಿವುಡ್ ರೇಂಜಿನ ಚಂದನವನದ ಮೊಟ್ಟಮೊದಲ ಹೀರೋ!

ಇವರ ಲುಕ್ ಮತ್ತು ಪ್ರತಿಭೆ ಕಂಡು ಕೆಲವು ಬಾಲಿವುಡ್ ನಿರ್ಮಾಪಕ ನಿರ್ದೇಶಕರು ಹಿಂದಿ ಚಿತ್ರರಂಗಕ್ಕೆ ಅವಕಾಶ ನೀಡಲು ಹಾತೊರೆದರೂ ಅವರೆಲ್ಲರ ಆಹ್ವಾನ ವನ್ನು ನಾಜೂಕಿನಿಂದಲೇ ತಿರಸ್ಕರಿಸಿದ ಅಪ್ಪಟ ಕನ್ನಡಿಗ. ಇದಕ್ಕೆ ಇನ್ನೊಂದು ಕಾರಣವೂ ಇದೆ, ಅಷ್ಟೊತ್ತಿಗಾಗಲೆ ಇವರಣ್ಣ ಎಸ್.ವಿ.ರಾ. ಬಾಬು ಬಾಲಿವುಡ್ ನಲ್ಲಿ ತಮ್ಮ ವ್ಯಕ್ತಿತ್ವದ ಛಾಪು ಮೂಡಿಸಿದ್ದರು.

ಸಂಗ್ರಾಮ್ ಸಿಂಗ್ ತಂದೆ ಡಿ.ಶಂಕರಸಿಂಗ್ ಚಿತ್ರರಂಗದ ಪಿತಾಮಹರಲ್ಲೊಬ್ಬರು. ಇವರ ತಾಯಿ ಪ್ರತಿಮಾದೇವಿ ಖ್ಯಾತ ನಟಿಯರಲ್ಲಿ ಒಬ್ಬರು. ಶಂಕರಸಿಂಗ್ ಅಂದಿನ ಮೈಸೂರು ಸಾಮ್ರಾಜ್ಯದ ಕನ್ನಡ ರಜಪೂತ್ ಕುಟುಂಬದಲ್ಲಿ ಜನಿಸಿ ಗಾಂಧಿ-ನೆಹರು ಅನುಯಾಯಿಆಗಿ ಕ್ವಿಟ್‍ ಇಂಡಿಯ ಚಳುವಳಿಯಲ್ಲಿ ಭಾಗವಹಿಸಿ 1943ರಲ್ಲಿ ಹಾಸನದ ಸೆರೆಮನೆಯಲ್ಲಿದ್ದರು. ಸ್ವಾತಂತ್ರ್ಯಾನಂತರ ಬ್ರೂಕ್ ಬಾಂಡ್ ಕಂಪನಿ ಉದ್ಯೋಗಿಯಾಗಿ ಕ್ರಮೇಣ ಪ್ರಭಾತ್, ಮಹಾತ್ಮ, ಜವಹರ್ ಎಂಬ ಮೂರು ಟೂರಿಂಗ್ ಟಾಕೀಸ್‍ ಮಾಲೀಕರಾದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಸಂಗ್ರಾಮ್‍ಸಿಂಗ್ ತಾತ ಮೈಸೂರು ಅರಮನೆ ಹುದ್ದೆಯಲ್ಲಿದ್ದು ನಂತರ ಅರಸೀಕೆರೆಗೆ ಬಂದು ನೆಲೆಸಿದ್ದರು. ಕಾಲಕ್ರಮೇಣ ಪುನಃ ಮೈಸೂರಿಗೆ ಹಿಂತಿರುಗಿದ್ದರು. ಆಗ, ಭಾರತದಲ್ಲೇ ಕೇವಲ ಐದಾರು ಮುಖ್ಯ ನಗರದಲ್ಲಿ ಹತ್ತಾರು ಟಾಕೀಸು ಮಾತ್ರ ಇದ್ದ ಕಾಲವದು, ಚಿತ್ರ ನಿರ್ಮಾಣ ಆಗುತ್ತಿದ್ದುದು ಬಾಂಬೆ, ಕಲ್ಕತ್ತ, ಮದ್ರಾಸ್ ಮೂರು ನಗರದಲ್ಲಿ ಮಾತ್ರ!

ಅಂಥ ಕಾಲದಲ್ಲಿ ಮೈಸೂರು ನಗರದಲ್ಲಿ ‘ನವಜ್ಯೋತಿ ಸಿನಿಮ ಸ್ಟುಡಿಯೊ’ ಸ್ಥಾಪಿಸಿ ಇಡೀ ದೇಶದಲ್ಲೆ ಮೈಸೂರನ್ನು ನಾಲ್ಕನೇ ಚಿತ್ರನಿರ್ಮಾಣ ನಗರವನ್ನಾಗಿಸಿದ ಸಿಂಹಗಳೇ ಶಂಕರಸಿಂಗ್, ಬಿ.ವಿಠಲಾಚಾರ್ಯ ಹಾಗೂ ಸಿ.ವಿ.ರಾಜು. 1945ರಲ್ಲಿ ಈ ಮೂವರೂ ಒಟ್ಟಿಗೆ ಸೇರಿ 60000 ರೂ. ಬಂಡವಾಳದಲ್ಲಿ “ಕೃಷ್ಣಲೀಲ” ಕನ್ನಡ ಚಿತ್ರ ತಯಾರಿಸಿ 1947ರಲ್ಲಿ ಬಿಡುಗಡೆ ಮಾಡುವ ಸಾಹಸ ತೋರುವ ಮೂಲಕ ದೇಶವೇ ಇವರತ್ತ ತಿರುಗಿ ನೋಡುವ ಹಾಗೆ ಮಾಡಿದರು. ಈ ಚಿತ್ರವು ತಲಾ 3500 ರೂ. ನಿವ್ವಳ ಲಾಭ ತಂದುಕೊಡುವ ಮೂಲಕ ಇತಿಹಾಸದ ಪುಟ ಸೇರಿತು!

1950-1960ರ ದಶಕದಲ್ಲಿ ನಟ, ನಿರ್ಮಾಪಕ, ನಿರ್ದೇಶಕ ಡಿ.ಶಂಕರಸಿಂಗ್ ಚಿತ್ರರಂಗದ ಹಿರಿಯ ಚಿತ್ರೋದ್ಯಮಿಗಳಲ್ಲಿ ಅಗ್ರಗಣ್ಯರಾದರು. ತಮ್ಮ ಸ್ವಂತ “ಮಹಾತ್ಮ ಪಿಕ್ಚರ್ಸ್” ಬ್ಯಾನರ್ ಮೂಲಕ 25ಕ್ಕೂ ಹೆಚ್ಚು ಸಿನಿಮ ತಯಾರಿಸಿ ಚಿತ್ರೋದ್ಯಮ ದಿಗ್ಗಜರಾದರು. ಆಗಿನ ಕಾಲಕ್ಕೆ ಭಾರತದ ಖ್ಯಾತನಟಿ ಕನ್ನಡತಿ ಪ್ರತಿಮಾದೇವಿಯನ್ನ ವಿವಾಹವಾಗಿ ರೀಲ್ ಲೈಫ್ ಮೋಡಿಯಿಂದ ರಿಯಲ್ ಲೈಫ್ ಜೋಡಿಯ ತಾರಾದಂಪತಿಗಳ ಪಟ್ಟಿಗೆ ಸೇರಿದರು!

ಶಂಕರಸಿಂಗ್-ಪ್ರತಿಮಾದೇವಿ ದಂಪತಿಗೆ ಮೂವರು ಪುತ್ರರು, ಓರ್ವ ಪುತ್ರಿ: ಸಂಗ್ರಾಮ್ ಸಿಂಗ್, ಎಸ್.ವಿ.ರಾಜೇಂದ್ರ ಸಿಂಗ್‍(ಬಾಬು), ಜೈರಾಜ್‍ ಸಿಂಗ್ ಹಾಗೂ ವಿಜಯಲಕ್ಷ್ಮಿಸಿಂಗ್ (ಜೈಜಗದೀಶ್ ಪತ್ನಿ). ಎಲ್ಲರೂ ಚಿತ್ರರಂಗಕ್ಕೆ ಚಿರಪರಿಚಿತರು. ಕನ್ನಡ ಚಿತ್ರೋದ್ಯಮದ ಪ್ರಾರಂಭ ದಿನಗಳಲ್ಲಿ, ಬಾಬು ಮತ್ತು ಜೈರಾಜ್‍ ಗಿಂತಲೂ ಸಂಗ್ರಾಮ್‍ ಸಿಂಗ್ ತುಸು ಹೆಚ್ಚಿನ ಕ್ರಿಯಾಶೀಲರಾಗಿ ಸುದ್ದಿಯಲ್ಲಿದ್ದರು.

1973ರಲ್ಲಿ ಮಹಾತ್ಮ ಪ್ರೊಡಕ್ಷನ್ಸ್ ನಿರ್ಮಿಸಿ, ಬಾಬು ಸಹನಿರ್ದೆಶಕ- ನಿರ್ಮಾಪಕರಾಗಿ,  ಸಂಗ್ರಾಮ್‍ಸಿಂಗ್ ಹೀರೋಆಗಿ ಎಂಟ್ರಿ ಕೊಟ್ಟ ಚೊಚ್ಚಲ ಚಿತ್ರ “ಬಂಗಾರದಕಳ್ಳ” ಈ ಚಿತ್ರದಲ್ಲಿ ಇವರ ಫ್ಯಾಮಿಲಿಫ಼್ರಂಡ್- ಬಾಲ್ಯದಗೆಳೆಯ ಅಂಬರೀಶ್ ಗೆ ಒಂದು ಮುಖ್ಯಪಾತ್ರ ನೀಡಿ ಸ್ಯಾಂಡಲ್‍ ವುಡ್ ಗೆ ಇಂಟ್ರಡ್ಯೂಸ್ ಮಾಡಿದರು. ಆದರೆ ಅಂಬರೀಶ್ ನಟಿಸಿದ 2ನೇ ಚಿತ್ರ ನಾಗರಹಾವು, ತುಸುಬೇಗ ಬಿಡುಗಡೆಯ ಭಾಗ್ಯ ಕಂಡಿತು? ಸಂಗ್ರಾಮ್‍ಸಿಂಗ್ ಕೆಲವು ಕಾಲ ತಮ್ಮ ಚಟುವಟಿಕೆಯಲ್ಲಿ ಏರಿಳಿತ ಕಂಡರೂ ನಿರಾಶರಾಗದೆ ನಿರಂತರ ಪ್ರಯತ್ನವನ್ನ ಮುಂದುವರೆಸಿದರು.

ಇನ್ನೇನು ಎತ್ತರಕ್ಕೆ ಬೆಳೆಯುವ ಲಕ್ಷಣಗಳು ಕಾಣುವಾಗಲೇ ಉಗ್ರಮೃತ್ಯುವಿನ ಕೆಟ್ಟಕಣ್ಣಿಗೆ ಬಿದ್ದು ಅಕಾಲಮರಣ ಅಪ್ಪಿದರು. ಒಂದು ವೇಳೆ ಈ ಯುವನಟ ಇನ್ನಷ್ಟುಕಾಲ ಬದುಕಿದ್ದರೆ ಬಹುಶಃ 40ರಿಂದ 50 ಚಿತ್ರಗಳಲ್ಲಿ ನಟಿಸುವುದರ ಜತೆಗೇ ಯಶಸ್ವೀ ನಿರ್ಮಾಪಕ, ನಿರ್ದೇಶಕನಾಗಿ ಚಂದನವನಕ್ಕೆ ಅಮೋಘ ಕೊಡುಗೆ ನೀಡುತ್ತಿದ್ದರೇನೋ? ಕರ್ನಾಟಕ ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರಲ್ಲಿ ಹುಟ್ಟಿಬೆಳೆದ ಸಂಗ್ರಾಮ್‍ಸಿಂಗ್ ಕಡೆಗೂ ಅರಮನೆ ನಗರಿಯಲ್ಲೆ ಕೊನೆಯುಸಿರೆಳೆದುದು ಕನ್ನಡ ಚಿತ್ರರಂಗ ಕಂಡ ಅತ್ಯಂತ ದುರಂತವೂ ಹೌದು!

ಸಂಗ್ರಾಮ್‍ಸಿಂಗ್ ನಟಿಸಿದ ಸಿನಿಮಾಗಳೆಂದರೆ.. ಬಂಗಾರದಕಳ್ಳ(1973), ಶುಭಮಂಗಳ, ಮಹದೇಶ್ವರ ಪೂಜಾಫಲ, ಭರ್ಜರಿಬೇಟೆ, ತಿರುಗುಬಾಣ, ಕಲಿಯುಗ, ಪಿತಾಮಹ, ಮನೆಯೇ ಮಂತ್ರಾಲಯ, ಕೃಷ್ಣ ನೀ ಬೇಗನೆ ಬಾರೋ, ಕರ್ಣ, ಮಲ್ಲಿಗೆ ಹೂವೇ, ಇತ್ಯಾದಿ. ನಿರ್ಮಾಪಕ-ನಿರ್ದೇಶಕನಾಗಿ: ಭಲೇ ಕಿಲಾಡಿ, ಲಕ್ಷಾಧೀಶ್ವರ, ಬ್ಲಾಕ್‍ಮಾರ್ಕೆಟ್, ಧನಪಿಶಾಚಿ, ಪಾತಾಳಮೋಹಿನಿ, ಮುಂತಾದವುಗಳಾಗಿವೆ. ಒಟ್ಟಿನಲ್ಲಿ ಸಂಗ್ರಾಮ್ ಸಿಂಗ್ ಬದುಕಿ ಬಾಳಬೇಕಾದ ವಯಸ್ಸಿಗೆ ಕಾಲನ ಕರೆಗೆ ಓಗೊಟ್ಟಿದ್ದು ಚಿತ್ರರಂಗಕ್ಕೆ ಅಘಾತವೇ…

ಬಹುಭಾಷಾ ಚಿತ್ರಗಳಲ್ಲಿ ಮಿಂಚಿದ ಹಿರಿಯ ಕಲಾವಿದೆ ಜಮುನಾ… ಇವರು ಸಿನಿಮಾ ನಟಿಯಾಗಿದ್ದು ಹೇಗೆ?

admin
the authoradmin

18 ಪ್ರತಿಕ್ರಿಯೆಗಳು

ನಿಮ್ಮದೊಂದು ಉತ್ತರ