ಕುಶಾಲನಗರ(ಹೆಬ್ಬಾಲೆ ರಘು): ಹನ್ನೆರಡನೆಯ ಶತಮಾನದ ಶರಣರ ಚಿಂತನೆಗಳು ಎಲ್ಲಾ ಕಾಲಘಟ್ಟಕ್ಕೂ ಪ್ರಸ್ತುತವಾಗಿದ್ದು, ಎಲ್ಲಾ ವಚನಗಳಲ್ಲಿಯೂ ವೈಜ್ಞಾನಿಕ ನೆಲೆಗಟ್ಟು ಇದೆ.ಆಗಿನ ಅನುಭವ ಮಂಟಪದಲ್ಲಿ ಅಲ್ಲಮಪ್ರಭುವಿನಷ್ಟೇ ಸಮಾನ ಅವಕಾಶಗಳು ಎಲ್ಲಾ ಶರಣರಿಗೂ ಇತ್ತು ಎಂದು ಮೈಸೂರು ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.
ಸಮೀಪದ ತೊರೆನೂರು ಶ್ರೀ ಮರಳ ಸಿದ್ದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ವಿರಕ್ತ ಮಠದ ಸಂಸ್ಥಾಪಕರಾದ ಲಿಂಗೈಕ್ಯ ಶ್ರೀ ಮರುಳ ಸಿದ್ದೇಶ್ವರ ಸ್ವಾಮಿ ಹಾಗೂ ಶ್ರೀ ಮಹಾಂತ ಮಹಾಸ್ವಾಮಿಗಳ 13ನೇ ವರ್ಷದ ಪುಣ್ಯ ಸಂಸ್ಮರಣೋತ್ಸವದ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸಂವಿಧಾನ ರಚನಾ ಸಮಿತಿ ಪ್ರಮುಖರು ಸಮಾನತೆಯನ್ನು ಸಂವಿಧಾನ ಸೇರ್ಪಡೆ ಮಾಡಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳನ್ನು ಪ್ರತಿಪಾದಿಸಿದರು. ಆದರೆ ಸಮಸಮಾಜ ನಿರ್ಮಾಣ ಸಾಧ್ಯವಾಗಿಲ್ಲ. ಸಮಾನತೆಗಾಗಿ ಹೋರಾಟ ಇನ್ನೂ ಜೀವಂತವಾಗಿರುವುದು ವಿಷಾದನೀಯ. ಮನುಷ್ಯ ನಿರ್ಮಿಸಲಾಗದ ಭಗವಂತನ ಸೃಷ್ಟಿಯ ನದಿ,ಸರೋವರಗಳು, ನೀರು, ಮಣ್ಣು, ಗಾಳಿ ಮೊದಲಾದ ಸುಂದರ ಪರಿಸರವನ್ನು ನಾವು ಹದಗೆಡಿಸದೇ ಸುಮ್ಮನಿದ್ದರೆ ಸಾಕು ಅದೇ ನಾವು ಭಗವಂತನಿಗೆ ಸಲ್ಲಿಸುವ ಕಾಣಿಕೆ ಎಂದು ಅಭಿಪ್ರಾಯಿಸಿದರು.

ಅರಕಲಗೂಡು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ತೊರೆನೂರು ವಿರಕ್ತ ಮಠ ಪವಿತ್ರ ಕಾವೇರಿ ನದಿ ದಂಡೆಯ ಮೇಲೆ ಸುಂದರ ಪರಿಸರದಲ್ಲಿ ರೂಪುಗೊಂಡಿದೆ. ಇಂತಹ ಪರಿಸರದಲ್ಲಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸುವ ಮೂಲಕ ಇಂದಿನ ಮಕ್ಕಳಿಗೆ ನೈತಿಕ, ಸಂಸ್ಕೃತಿ ಹಾಗೂ ಮೌಲ್ಯಯುತ ಶಿಕ್ಷಣ ನೀಡುವ ಕೆಲಸ ಆಗಬೇಕು.ಈ ಬಗ್ಗೆ ಸ್ವಾಮೀಜಿಗಳು ಚಿಂತನೆ ನಡೆಸಬೇಕು ಎಂದು ಹೇಳಿದರು.ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಒತ್ತು ನೀಡಬೇಕು. ಪರಿಸರ ಉಳಿಸದೆ ಹೋದರೆ ಮಾನವನ ಬದುಕು ದುಸ್ತರವಾಗಲಿದೆ ಎಂದರು.

ಕೊಡಗು ವಿವಿ ಕುಲಪತಿ ಡಾ.ಅಶೋಕ್ ಸಂಗಪ್ಪ ಆಲೂರ ಮಾತನಾಡಿ,ಅನುಭಾವದ ಸದ್ಭಾವನೆ, ಸತ್ಚಿಂತನೆ, ಸನ್ನಡತೆ ಪ್ರತಿಯೊಬ್ಬರ ಜೀವನದಲ್ಲಿ ಅಂತರ್ಗತವಾಗಬೇಕು.ಇಂದಿನ ಸಮಾಜದಲ್ಲಿ ಮನಷ್ಯ ಆಸೆಯೇ ದುಃಖಕ್ಕೆ ಮೂಲವಾಗಿದೆ. ಅಧಿಕಾರ, ಆಸ್ತಿ ಅಂತಸ್ತುಗಳ ಹಿಂದೆ ಹೋಗಿ ನೆಮ್ಮದಿ ಹಾಳು ಮಾಡಿಕೊಳ್ಳಬಾರದು ಎಂದ ಅವರು ಕಾಯಕ ಹಾಗೂ ದಾಸೋಹ ಪರಿಕಲ್ಪನೆ ಕುರಿತು ವಿಮರ್ಶಿಸಿದರು.

ತೊರೆನೂರು ವಿರಕ್ತ ಮಠದ ಮಲ್ಲೇಶ ಸ್ವಾಮೀಜಿ ಮಾತನಾಡಿ, ಈ ಮರಳ ಸಿದ್ದೇಶ್ವರ ಸ್ವಾಮಿ ಕ್ಷೇತ್ರಕ್ಕೆ ಐತಿಹಾಸಿಕ ಹಾಗೂ ಧಾರ್ಮಿಕ ಹಿನ್ನೆಲೆ ಇದೆ. ಸಿದ್ದೇಶ್ವರ ಸ್ವಾಮಿಗಳ ಪುಣ್ಯ ಕಾರ್ಯಗಳನ್ನು ಮೆಚ್ಚಿ ಆಗಿನ ಕೊಡಗಿನ ರಾಜ ವೀರಾರಾಜೇಂದ್ರ ಒಡೆಯರ್ ಮಠಕ್ಕೆ ಉದಾರ ದಾನದತ್ತಿ ನೀಡಿದ್ದರು ಎಂದರು. ತೊರೆನೂರು ಮಠದ ಏಳಿಗೆಗೆ ಭಕ್ತರು ಅಗತ್ಯ ನೆರವು ಹಾಗೂ ಸಹಕಾರ ನೀಡಬೇಕು ಎಂದು ಹೇಳಿದರು.

ಈ ಸಂದರ್ಭ ಶಾಸಕ ಡಾ.ಮಂತರ್ ಗೌಡ, ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ಕೊಡಗು ಜಿಲ್ಲಾಧ್ಯಕ್ಷ ಹೆಚ್.ವಿ.ಶಿವಪ್ಪ,ಬೆಟ್ಟದಪುರ ಮಠದ ಚನ್ನವೀರದೇಶೀಕೇಂದ್ರ ಸ್ವಾಮೀಜಿ, ಗಾವಡಗೆರೆ ಮಠದ ನಟರಾಜ ಸ್ವಾಮೀಜಿ, ಹಾಸನದ ತಣ್ಣೀರು ಹಳ್ಳ ಮಠದ ವಿಜಯಕುಮಾರ ಸ್ವಾಮೀಜಿ, ಚಿಲುಮೆ ಮಠದ ಜಯದೇವ ಸ್ವಾಮೀಜಿ, ವಿರಾಜಪೇಟೆ ಅರಮೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಕೆಸವತ್ತೂರು ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ, ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ, ಸೋಮವಾರ ಪೇಟೆಯ ನಿಶ್ಚಲನಿರಂಜನ ಸ್ವಾಮೀಜಿ, ಮನೆಹಳ್ಳಿ ಮಠದ ಇಮ್ಮಡಿ ಶಿವಲಿಂಗ ಸ್ವಾಮೀಜಿ,ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಕೊಡಗು ಜಿಲ್ಲಾ ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿ ಸಾಂಬಶಿವಯ್ಯ, ಕೋಶಾಧಿಕಾರಿ ಹೆಚ್.ಪಿ.ಉದಯಕುಮಾರ್, ತಾಲ್ಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಹೆಚ್.ಎಂ.ಮಧುಸೂದನ್, ತೊರೆನೂರು ಹೆಚ್.ಬಿ.ಚಂದ್ರಪ್ಪ ಪಾಲ್ಗೊಂಡಿದ್ದರು.

ಶಿಕ್ಷಕಿ ಡಿ.ಎಂ.ಮಹದೇವಿ ನಿರೂಪಿಸಿದರು.ಬಸವರಾಜು ಸ್ವಾಗತಿಸಿದರು.ಮೂರ್ತಿ ವಂದಿಸಿದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶಿರಂಗಾಲ ಎಸ್.ವಿ.ನಂಜುಂಡಪ್ಪ,ಮಾಹಿತಿ ಹಕ್ಕುಗಳ ಆಯೋಗದ ಮಾಜಿ ಅಧ್ಯಕ್ಷ ವಿರೂಪಾಕ್ಷಯ್ಯ,ಮಡಿಕೇರಿ ಎಫ್.ಎಂ.ಸಿ.ಕಾಲೇಜಿನ ಪ್ರಾಧ್ಯಾಪಕಿ ಡಾ.ಜಿ.ಎಂ.ಹೇಮಲತಾ,ಮರೂರು ಕೃಷಿಕ ಶಿವರುದ್ರಪ್ಪ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಬಿ.ಜಗದೀಶ್ ಅವರನ್ನು ಸುತ್ತೂರು ಶ್ರೀಗಳು ಸನ್ಮಾನಿಸಿ ಗೌರವಿಸಿದರು.ವೀರಶೈವ ಲಿಂಗಾಯತ ಮಹಾಸಭಾದ ಕೊಡಗು ಜಿಲ್ಲಾಧ್ಯಕ್ಷ ಹೆಚ್.ವಿ.ಶಿವಪ್ಪ ಹಾಗೂ ಪದಾಧಿಕಾರಿಗಳು ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿ ಅವರನ್ನು ಸನ್ಮಾನಿಸಿ ಗೌರವಿಸಿದರು.

ಮೊದಲಿಗೆ ಸಂಸ್ಮರಣೋತ್ಸವಕ್ಕೆ ಆಗಮಿಸಿದ ಮೈಸೂರು ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿ ಅವರನ್ನು ಮಠದ ಪ್ರವೇಶದ್ವಾರದಿಂದ ಮಂಗಳವಾದ್ಯ,ಮಹಿಳೆಯರ ಪೂರ್ಣಕುಂಭ ಕಳಶದೊಂದಿಗೆ ಕಾರ್ಯಕ್ರಮ ವೇದಿಕೆ ವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು.ವಿವಿಧೆಡೆಗಳಿಂದ ಆಗಮಿಸಿದ್ದ ಸ್ವಾಮೀಜಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಸುತ್ತೂರು ಶ್ರೀಗಳಿಗೆ ಸಾಥ್ ನೀಡಿದರು.

ಕುಶಾಲನಗರ ಸಮೀಪದ ತೊರೆನೂರು ಶ್ರೀ ಮರಳ ಸಿದ್ದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ವಿರಕ್ತ ಮಠದ ಸಂಸ್ಥಾಪಕರಾದ ಲಿಂಗೈಕ್ಯ ಶ್ರೀ ಮರುಳ ಸಿದ್ದೇಶ್ವರ ಸ್ವಾಮಿ ಹಾಗೂ ಶ್ರೀ ಮಹಾಂತ ಮಹಾಸ್ವಾಮಿಗಳ 13ನೇ ವರ್ಷದ ಪುಣ್ಯ ಸಂಸ್ಮರಣೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.








