LatestPolitical

ರಣರಂಗ ಬಿಟ್ಟು ಓಡಿ ಹೋಗುವ ಹೇಡಿ ನಾನಾಗಲಾರೆ… ಸಿಎಂ ಸಿದ್ದರಾಮಯ್ಯ ನೀಡಿದ ಈ ಎಚ್ಚರಿಕೆ ಯಾರಿಗೆ?

*ಇವನೊಬ್ಬನನ್ನು ರಾಜಕೀಯವಾಗಿ ಮುಗಿಸಿಬಿಟ್ಟರೆ ಅದರ ನಂತರ ನಮ್ಮೆಲ್ಲರ ಹಾದಿ ಸುಲಭವಾಗುತ್ತದೆ

ಬೆಂಗಳೂರು: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಅಧಿಕಾರ ಹಸ್ತಾಂತರದ ಜಟಾಪಟಿ ಸಿಎಂ ಮತ್ತು ಡಿಸಿಎಂ ನಡುವೆ ನಡೆಯುತ್ತಿರುವುದು ಇವತ್ತು ನಿನ್ನೆಯದಲ್ಲ… ಈ ಕುರಿತಂತೆ ಪರ-ವಿರೋಧದ ಹೇಳಿಕೆಗಳು ಸರ್ಕಾರ ಆರಂಭವಾದಲ್ಲಿಂದ ಇಲ್ಲಿವರೆಗೂ ಮುಂದುವರೆದಿದೆ… ಬಹುಶಃ ರಾಜ್ಯ ರಾಜಕೀಯದಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬಂದ ಪಕ್ಷದಲ್ಲಿ ಸಿಎಂ ಅಧಿಕಾರದಲ್ಲಿದ್ದಾಗಲೇ ಸಿಎಂ ಅಧಿಕಾರ ಹಸ್ತಾಂತರದ ಕುರಿತಂತೆ ಇಷ್ಟೊಂದು ಚರ್ಚೆಗಳು ನಡೆದಿದ್ದು ಇದೇ ಮೊದಲಿರಬಹುದೇನೋ? ಸದ್ಯ ಸಿಎಂ ಆಗಲೇ ಬೇಕೆಂದು ಹವಣಿಸುತ್ತಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಹೈಕಮಾಂಡ್ ಜತೆಗೆ ಇರುವಾಗಲೇ ಇತ್ತ ಸಿಎಂ ಸಿದ್ದರಾಮಯ್ಯ ಅವರು ಎಕ್ಸ್ ನಲ್ಲಿ ರಣರಂಗ ಬಿಟ್ಟು ಓಡಿ ಹೋಗುವ ಹೇಡಿ ನಾನಾಗಲಾರೆ ಎಂಬ ಪೋಸ್ಟ್ ಹಾಕಿರುವುದು ಚರ್ಚೆಯನ್ನು ಹುಟ್ಟುಹಾಕಿದೆ.

ಕಳೆದ ಮೂರು ವರ್ಷಗಳಿಂದ ಸಿಎಂ ಆಗಿ ಅಧಿಕಾರ ನಡೆಸುತ್ತಿರುವ ಸಿದ್ದರಾಮಯ್ಯರವರಿಗೆ ಸಿಎಂ ಖುರ್ಚಿ ಮುಳ್ಳಿನ ಖುರ್ಚಿಯಾಗಿಯೇ ಪರಿಣಮಿಸಿದೆ.. ವಿಪಕ್ಷದವರಿಗಿಂತ ಸ್ವಪಕ್ಷದವರೇ ಅವರಿಗೆ ಮುಳ್ಳಾಗಿ ಚುಚ್ಚುತ್ತಿದ್ದಾರೆ. ಆಗಾಗ್ಗೆ ಅಧಿಕಾರ ಹಸ್ತಾಂತರದ ವಿಚಾರಗಳು ಮುನ್ನಲೆಗೆ ಬರುತ್ತಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸಿಎಂ ಆಗಿ ಅಧಿಕಾರ ವಹಿಸಿಕೊಂಡಾಗ ಹೈಕಮಾಂಡ್ ಮುಂದೆ ಏನು ಒಪ್ಪಂದ ಆಗಿತ್ತು ಎಂಬುದು ಗೊತ್ತಿಲ್ಲ. ಆದರೆ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು, ಡಿಸಿಎಂ ಡಿಕೆಶಿ ಬಣದ ಶಾಸಕರು ಹೇಳುವ ಮಾತುಗಳು, ನಡೆದುಕೊಳ್ಳುವ ರೀತಿಗಳನ್ನು ನೋಡಿದರೆ ಅಧಿಕಾರ ಹಸ್ತಾಂತರದ ಮಾತುಕತೆ ನಡೆದಿರಬಹುದು ಎಂಬುದು ಸ್ಪಷ್ಟವಾಗುತ್ತಿದೆ.

ಒಂದು ವೇಳೆ ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿರುವ ಚರ್ಚೆಯಂತೆ ಹೇಳುವುದಾದರೆ ಎರಡೂವರೆ ವರ್ಷಕ್ಕೆ ಸಿದ್ದರಾಮಯ್ಯ ಅವರು ಅಧಿಕಾರವನ್ನು ಡಿ.ಕೆ.ಶಿವಕುಮಾರ್ ಅವರಿಗೆ ಹಸ್ತಾಂತರ ಮಾಡಬೇಕಾಗಿತ್ತು. ಆದರೆ ಇಲ್ಲಿವರೆಗೆ ಮಾಡಿಲ್ಲ. ಹೀಗಾಗಿ ಮೂರು ವರ್ಷದ ಸನಿಹಕ್ಕೆ ಬರುತ್ತಿದೆ. ಇದು ಡಿ.ಕೆ.ಶಿವಕುಮಾರ್ ಸೇರಿದಂತೆ ಅವರ ಬಣದ ನಾಯಕರನ್ನು ಕೆರಳಿಸುವಂತೆ ಮಾಡಿದೆ. ಸದ್ಯ ಹೈಕಮಾಂಡ್ ಜತೆಯಲ್ಲಿರುವ ಡಿ.ಕೆ.ಶಿವಕುಮಾರ್ ಸಿಎಂ ಆಗಲೇ ಬೇಕೆಂಬ ಪಟ್ಟು ಹಿಡಿದಿದ್ದಾರೆ ಎನ್ನುವುದು ಗೊತ್ತಾಗುತ್ತಿದೆ. ಈ ಬಾರಿ ಸಿಎಂ ಆಗದೆ ಹೋದರೆ ಮುಂದೆ ಕಷ್ಟವಿದೆ ಎಂಬುದು ಡಿಕೆಶಿ ಅವರಿಗೂ ಗೊತ್ತಾಗಿದೆ. ಹೀಗಾಗಿಯೇ ಪಟ್ಟು ಸಡಿಲಿಸಲು ಅವರು ತಯಾರಿಲ್ಲ.. ಇತ್ತ ಸಿದ್ದರಾಮಯ್ಯ ಅವರು ಅಧಿಕಾರವಧಿ ಮುಗಿಸಲೇ ಬೇಕೆಂಬ ಹಠದಲ್ಲಿದ್ದಾರೆ.

ಎರಡು ಬಲಿಷ್ಠ ನಾಯಕರ ನಡುವೆ ನಡೆಯುತ್ತಿರುವ ಜಂಗಿ(ಕುರ್ಚಿ)ಕುಸ್ತಿ ಮಧ್ಯೆ ಸಿಕ್ಕಿ ಹಾಕಿಕೊಂಡಿರುವ ಹೈಕಮಾಂಡ್ ಯಾವುದೇ ತೀರ್ಮಾನ ಕೈಗೊಳ್ಳದೆ ನುಣುಚಿಕೊಳ್ಳುತ್ತಾ ಬರುತ್ತಿದೆ. ಆದರೆ ಈ ಬಾರಿ ಏನಾದರೊಂದು ತೀರ್ಮಾನ ಆಗಲೇ ಬೇಕೆಂಬ ಹಠಕ್ಕೆ ಡಿಕೆಶಿ ಬಿದ್ದಂತೆ ಕಾಣುತ್ತಿದ್ದು ಇದರ ಪರಿಣಾಮ ಸಿದ್ದರಾಮಯ್ಯ ಅವರು ಅಧಿಕಾರ ಹಸ್ತಾಂತರ ಮಾಡಲೇ ಬೇಕಾದ ಒತ್ತಡಕ್ಕೆ ಸಿಲುಕಿದಂತೆ ಕಾಣಿಸುತ್ತಿದೆ. ಹಾಗಾಗಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಾಕಿಕೊಂಡಿರುವ ಪೋಸ್ಟ್ ಗಳಿಗೆ ಮಹತ್ವ ಬಂದಿವೆ ಮತ್ತು ಚರ್ಚೆಯನ್ನು ಹುಟ್ಟು ಹಾಕಿವೆ..

ಹಿಂದೆ ಅಧಿಕಾರರೂಢ ನಾಯಕರು ರಾಜಕೀಯ ವಿರೋಧಿಗಳೆಂದು ಸಂಬೋಧಿಸಿ ಪೋಸ್ಟ್ ಹಾಕಿದರೆ ಅದನ್ನು ವಿರೋಧ ಪಕ್ಷದವರನ್ನು ಟಾರ್ಗೆಟ್ ಮಾಡಿ ಹಾಕಿದ್ದಾರೆಂದು ಸುಲಭವಾಗಿ ಒಪ್ಪಿಕೊಳ್ಳಬಹುದಿತ್ತು. ಆದರೀಗ ಪ್ರತಿಯೊಬ್ಬ ನಾಯಕರಿಗೂ ಸ್ವಪಕ್ಷದಲ್ಲಿಯೇ ವಿರೋಧಿಗಳು ಇರುವುದರಿಂದ ಅದನ್ನು ಹೇಗೆ ಅರ್ಥೈಸಿಕೊಳ್ಳಬೇಕೆಂಬ ಜಿಜ್ಞಾಸೆ ಕಾಡಲಾರಂಭಿಸಿದೆ. ಇಲ್ಲಿ ಸಿದ್ದರಾಮಯ್ಯ ಅವರು ಮಾರುದ್ಧ ಹಾಕಿರುವ ಪೋಸ್ಟ್ ಗಳು ಯಾರನ್ನುದ್ದೇಶಿಸಿ ಎಂಬ ಪ್ರಶ್ನೆ ಎದ್ದಿದ್ದು, ಅರ್ಥೈಸಿಕೊಳ್ಳುವುದು ಜನರಿಗೆ ಬಿಡಲಾಗಿದೆ…

ಇಷ್ಟಕ್ಕೂ ಸಿಎಂ ಅವರ ಆ ಪೋಸ್ಟ್ ಓದಿದ ಮೇಲೆ ಅದು ಬಿಜೆಪಿ ಮತ್ತು ಜೆಡಿಎಸ್ ನಾಯಕರನ್ನುದ್ದೇಶಿಸಿ ಹಾಕಿದ್ದು ಎನ್ನುವುದನ್ನು ಒಪ್ಪಿಕೊಳ್ಳುವುದು ಕಷ್ಟವೇ… ಹಾಗಾದರೆ ಸದ್ಯಕ್ಕೆ ಸಿಎಂ ಸಿದ್ದರಾಮಯ್ಯ ಅವರ ವಿರೋಧಿಗಳು ಯಾರು? ಪೋಸ್ಟ್ ನ್ನು ಸಂಪೂರ್ಣ ಓದಿದ ಮೇಲೆ ಗೊತ್ತಾಗಿ ಬಿಡುತ್ತದೆ.. ಆದರೆ ಈ ಮಾರ್ಮಿಕ ಪೋಸ್ಟ್ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿರುವುದಂತು ನಿಜ.. ಹಾಗಾದರೆ ಪೋಸ್ಟ್ ನಲ್ಲಿ ಏನಿದೆ ಎಂಬುದನ್ನು ಒಮ್ಮೆ ಓದಿ ಬಿಡಿ…

ನನ್ನ ಮೇಲೆ ವಿರೋಧಿಗಳು ನಡೆಸುತ್ತಿರುವ ಬಹುತೇಕ ದಾಳಿಗಳು, ಮಾಡುತ್ತಿರುವ ಟೀಕೆ-ಆರೋಪಗಳಿಗೆ ನಾನು ಹುಟ್ಟಿದ ಜಾತಿಯೂ ಒಂದು ಕಾರಣ. ಕುರಿಕಾಯುತ್ತಾ ಇರಬೇಕಾದವನು ಮುಖ್ಯಮಂತ್ರಿ ಆಗಿ ಬಿಟ್ಟನಲ್ಲಾ, ಆರ್ಥಿಕ ತಜ್ಞರಿಗೆ ಸರಿಸಮನಾಗಿ ನಿಂತು ಸಾಲುಸಾಲು ಬಜೆಟ್ ಮಂಡಿಸಿ ಶಹಬ್ಬಾಸ್ ಗಿರಿ ಗಳಿಸುತ್ತಿದ್ದಾನಲ್ಲಾ ಎನ್ನುವ ಅಸಹನೆ, ಅವರೊಳಗೆ ದ್ವೇಷ, ಅಸೂಯೆ ಕುದಿಯುತ್ತಿದೆ. ಇವನೊಬ್ಬನನ್ನು ರಾಜಕೀಯವಾಗಿ ಮುಗಿಸಿಬಿಟ್ಟರೆ ಅದರ ನಂತರ ನಮ್ಮೆಲ್ಲರ ಹಾದಿ ಸುಲಭವಾಗುತ್ತದೆ ಎನ್ನುವ ರಾಜಕೀಯ ದುರುದ್ದೇಶದ ಲೆಕ್ಕಾಚಾರ ಇವರ ಮನಸ್ಸಿನಲ್ಲಿದೆ.

ಸಾಮಾಜಿಕ ಬದಲಾವಣೆಗೆ ಕೈ ಹಾಕಿದವರೆಲ್ಲರ ವಿರುದ್ಧ ಇಂತಹ ಷಡ್ಯಂತ್ರಗಳು ನಡೆದಿರುವುದನ್ನು ಇತಿಹಾಸದ ಪುಟದಲ್ಲಿ ಕಾಣಬಹುದು. ಬುದ್ಧ, ಬಸವಣ್ಣ, ಅಂಬೇಡ್ಕರ್, ಗಾಂಧೀಜಿ, ಪೆರಿಯಾರ್, ನಾರಾಯಣ ಗುರು, ಕನಕದಾಸರಾದಿಯಾಗಿ ಸಾಮಾಜಿಕ ಪರಿವರ್ತನೆಗೆ ಹೋರಾಟ ನಡೆಸಿದವರೆಲ್ಲರನ್ನು ಹಣಿಯುವ, ಧಮನಿಸುವ, ಮುಗಿಸುವ ಸಂಚು-ಒಳಸಂಚುಗಳು ನಡೆಯುತ್ತಲೇ ಬಂದಿದೆ. ಬಸವಣ್ಣ ಏನು ತಪ್ಪು ಮಾಡಿದ್ದರು? ಜಾತಿ ವಿನಾಶಕ್ಕೆ ಪ್ರಯತ್ನ ಮಾಡಿದ್ದರು, ಅಂತರಜಾತಿ ಮದುವೆ ಮಾಡಿಸಿದ್ದರು, ಅವಕಾಶ ವಂಚಿತ ತಬ್ಬಲಿ ಜಾತಿಗಳಿಗೆ ಸ್ವಾಭಿಮಾನದ ದೀಕ್ಷೆ ಕೊಟ್ಟು ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಸುವ ಪ್ರಯತ್ನ ಮಾಡಿದ್ದರು. ಈ ಕಾರಣಕ್ಕಾಗಿ ಅವರನ್ನು ವ್ಯವಸ್ಥಿತ ಸಂಚಿನ ಮೂಲಕ ಮುಗಿಸಲಾಯಿತು.

ಈಗ ರಾಹುಲ್ ಗಾಂಧಿಯವರ ವಿರುದ್ಧವೂ ಸಂಚು ನಡೆಯುತ್ತಿದೆ. ಯಾವಾಗ ರಾಹುಲ್ ಗಾಂಧಿಯವರು ಜಾತಿ, ಮತ, ಪಂಥ, ವರ್ಗವನ್ನು ಮೀರಿ ಎಲ್ಲ ಭಾರತೀಯರನ್ನು ಜೋಡಿಸುವ ಕೆಲಸ ಶುರು ಮಾಡಿದರೋ, ಯಾವಾಗ ಅವರು ಸಾಮಾಜಿಕ ನ್ಯಾಯದ ಪ್ರಶ್ನೆಗಳನ್ನು ಎತ್ತಲು ಶುರುಮಾಡಿದರೋ, ಯಾವಾಗ ಅವರು ಜಾತಿಗಣತಿ ಬಗ್ಗೆ, ಮೀಸಲಾತಿ ಹೆಚ್ಚಳದ ಬಗ್ಗೆ ದನಿ ಎತ್ತಲು ಪ್ರಾರಂಭಿಸಿದರೋ ಅಂದಿನಿಂದ ಅವರನ್ನು ಹಣಿಯುವ ಕೆಲಸ ಜೋರಾಗಿ ನಡೆಯುತ್ತಿದೆ.

ಕಾಲ ಬದಲಾಗಿದೆ, ನಾವು ಮನುವಿನ ಕಾಲದಲ್ಲಿಯೂ ಇಲ್ಲ, ರಾಜ-ಮಹಾರಾಜರ ಗುಲಾಮರೂ ಅಲ್ಲ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ನಮಗಿರುವ ದೊಡ್ಡ ರಕ್ಷಣೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನ. ನನ್ನ ನಾಲ್ಕು ದಶಕಗಳ ರಾಜಕೀಯ ಜೀವನ ಎಂದಿಗೂ ಹೂವಿನ ಹಾಸಿಗೆ ಆಗಿರಲಿಲ್ಲ, ಅದು ಕಲ್ಲು – ಮುಳ್ಳುಗಳ ಹಾದಿಯಾಗಿತ್ತು. ನನ್ನನ್ನು ರಾಜಕೀಯವಾಗಿ ಮುಗಿಸಲು ಹಲವಾರು ದೊಡ್ಡ ದೊಡ್ಡ ನಾಯಕರು ಹಲವಾರು ಬಗೆಯ ಕುಟಿಲ ಕಾರಸ್ತಾನಗಳನ್ನು ಮಾಡಿದ್ದಾರೆ. ಅವುಗಳನ್ನೆಲ್ಲವನ್ನೂ ಜನತೆಯ ಆಶೀರ್ವಾದದಿಂದ ಗೆದ್ದು ಬಂದಿದ್ದೇನೆ.

ಇದು ನನ್ನ ವಿರುದ್ಧ ನಡೆಯುತ್ತಿರುವ ಷಡ್ಯಂತ್ರಗಳಲ್ಲ, ಇದು ನನ್ನನ್ನು ನಂಬಿರುವ, ಪ್ರೀತಿಸುತ್ತಿರುವ, ನನಗೆ ನಿರಂತರವಾಗಿ ಆಶೀರ್ವಾದ ನೀಡಿ ಬೆಂಬಲಿಸುತ್ತಿರುವ ನಿಮ್ಮ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಎನ್ನುವುದು ನನಗೆ ಚೆನ್ನಾಗಿ ಗೊತ್ತು. ಆದ್ದರಿಂದ ನನ್ನ ಉಸಿರು ಇರುವ ವರೆಗೆ ಈ ರಾಜಕೀಯ ಷಡ್ಯಂತ್ರ, ದ್ವೇಷ-ಅಸೂಯೆಯ ರಾಜಕಾರಣದ ವಿರುದ್ಧ ಹೋರಾಡುತ್ತೇನೆ. ಇದು ಸತ್ಯ, ನ್ಯಾಯ ಮತ್ತು ಧರ್ಮಕ್ಕಾಗಿ ನಡೆಯುತ್ತಿರುವ ಹೋರಾಟ. ನಿಮ್ಮೆಲ್ಲರ ಬೆಂಬಲದೊಂದಿಗೆ ಈ ಹೋರಾಟವನ್ನು ನನ್ನ ಉಸಿರು ಇರುವ ವರೆಗೆ ನಡೆಸುತ್ತೇನೆ, ರಣರಂಗವನ್ನು ಬಿಟ್ಟು ಓಡಿ ಹೋಗುವ ಹೇಡಿ ನಾನಾಗಲಾರೆ…

ಸಿಎಂ ಸಿದ್ದರಾಮಯ್ಯನವರ ಪೋಸ್ಟ್ ನ್ನು ಓದಿದ ಮೇಲೆ ಅವರ ವಿರೋಧಿಗಳು ಯಾರು ಎಂಬುದನ್ನು ನಿರ್ಧರಿಸುವುದು ಕಷ್ಟವೇ.. ಆದರೆ ಅದನ್ನು ನಿಮಗೆ ಬಿಡಲಾಗಿದೆ. ಮುಖ್ಯವಾಗಿ ರಾಜ್ಯರಾಜಕೀಯವನ್ನು ಗಮನಿಸುವಾಗ ಸಿದ್ದರಾಮಯ್ಯ ಅವರ ಆಡಳಿತದ ವಿರುದ್ಧ ವಿಪಕ್ಷಗಳು ಹೋರಾಟ ಮಾಡಿದ್ದಾರೆ.. ಟೀಕೆ ಮಾಡಿದ್ದಾರೆ.. ಆರೋಪಗಳನ್ನು ಮಾಡುತ್ತಲೇ ಬಂದಿದ್ದಾರೆ.. ರಾಜೀನಾಮೆಗೂ ಆಗ್ರಹಿಸಿರಬಹುದು. ಆದರೆ ಇದು ಪ್ರಜಾಪ್ರಭುತ್ವದಲ್ಲಿ ಸಾಮಾನ್ಯವೇ.. ಇದನ್ನು ಹಿಂದೆ ವಿಪಕ್ಷನಾಯಕರಾಗಿದ್ದಾಗ ಸಿದ್ದರಾಮಯ್ಯರವರೂ ಮಾಡಿದ್ದಾರೆ. ಆದರೆ ಸಿಎಂ ಸ್ಥಾನವನ್ನು ಬಿಟ್ಟುಕೊಡಿ ಅಂಥ ವಿಪಕ್ಷದವರು ಕೇಳುತ್ತಿಲ್ಲ..ಅದನ್ನು ಕೇಳುತ್ತಿರುವುದು ಅವರ ಪಕ್ಷದವರೇ.. ಹಾಗಾದರೆ ಸಿಎಂ ಸಿದ್ದರಾಮಯ್ಯ ಅವರ ವಿರೋಧಿಗಳು ಯಾರು?

B M Lavakumar

ಇದನ್ನೂ ಓದಿ… ರಾಜಕೀಯದ ಅಗ್ನಿಪರೀಕ್ಷೆಯಲ್ಲಿ ಸಿಎಂ ಸಿದ್ದರಾಮಯ್ಯ… ಸ್ವಪಕ್ಷದ ಶಾಸಕರಿಂದಲೇ ಆರೋಪ, ಆಕ್ರೋಶ…

 

admin
the authoradmin

Leave a Reply

Translate to any language you want