ಹೆಗ್ಗಡದೇವನಕೋಟೆ…. ಇದು ಬರೀ ಗಂಧದಗುಡಿಯಲ್ಲ…ಚಿನ್ನದಗುಡಿ.. ನೀವೊಮ್ಮೆ ಬನ್ನಿ…
ಚೆಲುವನ್ನರಸಿ ಬರುವವರಿಗೆ ರಸದೌತಣ ನೀಡುವ ಸುಂದರ ತಾಣ

ಹೆಚ್.ಡಿ.ಕೋಟೆ ರಾಜಮಹಾರಾಜರಿಗೆ ಇಷ್ಟವಾಗಿದ್ದ ತಾಣ.. ನಿಸರ್ಗ ಸೌಂದರ್ಯವನ್ನು ತನ್ನ ಮಡಿಲಲ್ಲಿಟ್ಟುಕೊಂಡು ಚೆಲುವನ್ನರಸಿ ಬರುವವರಿಗೆ ರಸದೌತಣ ನೀಡುವ ಸುಂದರ ತಾಣದ ಬಗ್ಗೆ ಹಿರಿಯ ಬರಹಗಾರರು, ಪತ್ರಕರ್ತರೂ ಆಗಿರುವ ಬನ್ನೂರು ಕೆ.ರಾಜು ಅವರು ಜನಮನಕನ್ನಡದ ಓದುಗರಿಗಾಗಿ ಇಲ್ಲಿ ತೆರೆದಿಟ್ಟಿದ್ದಾರೆ..
ಇಡೀ ಏಷ್ಯಾ ಖಂಡದಲ್ಲಿಯೇ ಹೆಚ್ಚು ಆನೆಗಳನ್ನು ಹೊಂದಿರುವ ಮತ್ತು ಹುಲಿ, ಚಿರತೆ, ಕರಡಿ, ಕಾಡೆಮ್ಮೆ, ಕಾಡುಹಂದಿ, ಮುಳ್ಳುಹಂದಿ, ಮೊಸಳೆ, ಜಿಂಕೆ, ನವಿಲು, ಸಾರಂಗ ಮುಂತಾದ ವನ್ಯಜೀವಿಗಳಿಂದ ಸಮೃದ್ಧವಾಗಿರುವ ಹಾಗೂ ಸಾಗುವಾನಿ, ತೇಗ, ಗಂಧ, ಬೀಟೆ, ಹೊನ್ನೆ, ಬಿಲ್ವಾರ ಮುಂತಾದ ಬೆಲೆಬಾಳುವ ಸಸ್ಯ ಸಂಪತ್ತಿನ ಸಂಗಮವಾಗಿರುವ ಮತ್ತು ಕಬಿನಿ, ನುಗು, ಹೆಬ್ಬಾಳ, ತಾರಕ ಜಲಾಶಯಗಳಿಂದ ತುಂಬಿರುವ ದಟ್ಟಡವಿಯಿಂದ ಕೂಡಿರುವ ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ಜಿಲ್ಲೆಗೊಂದು ಹೆಗ್ಗಳಿಕೆ. ಅಷ್ಟೇ ಅಲ್ಲ ಇದು ಕನ್ನಡ ನಾಡಿನ ಹಿರಿಮೆಯೂ ಹೌದು.

ಕನ್ನಡದ ಆಸ್ತಿ ಮಾಸ್ತಿಯವರ ‘ಕಾಕನಕೋಟೆ’, ಶ್ರೀ ಕೃಷ್ಣ ಆಲನಹಳ್ಳಿಯವರ ‘ಕಾಡು’, ಎಂ.ಪಿ. ಶಂಕರ್ ಅವರ ‘ಕಾಡಿನ ರಹಸ್ಯ’ ಮತ್ತು ‘ಕಾಡಿನ ರಾಜ’ ಹಾಗು ‘ಗಂಧದಗುಡಿ’ ಇವೆಲ್ಲವೂ ಇಲ್ಲಿಯವೇ. ಆರ್ಥಾತ್ ಇಲ್ಲಿ ಸೃಷ್ಠಿಗೊಂಡಂಥವು. ವರನಟ ಡಾ.ರಾಜ್‌ಕುಮಾರ್ ಮತ್ತು ಸಾಹಸಸಿಂಹ ಡಾ. ವಿಷ್ಣುವರ್ಧನ್ ಜೋಡಿ ಅಭಿನಯದ ‘ಗಂಧದಗುಡಿ’ ಚಲನಚಿತ್ರವೊಂದನ್ನು ನೋಡಿದರೆ ಸಾಕು ಹೆಗ್ಗಡದೇವನಕೋಟೆಯ ಅರಣ್ಯದೈಸಿರಿಯನ್ನೆಲ್ಲಾ ಕಾಣಬಹುದು. ಇಂಥ ಅದೆಷ್ಟೋ ವಿವಿಧ ಭಾಷೆಗಳ ಚಲನಚಿತ್ರಗಳು, ಕಥೆ-ಕಾದಂಬರಿಗಳು, ನಾಟಕ-ರೂಪಕಗಳು ಹೆಗ್ಗಡದೇವನಕೋಟೆಯ ಅಭಯಾರಣ್ಯದಲ್ಲಿ ಅರಳಿವೆ. ಅಂಥ ಅದ್ಭುತ ಸ್ಥಳವಿದು ನಿಜಕ್ಕೂ ಕನ್ನಡ ನಾಡಿನ ಗಂಧದಗುಡಿಯಷ್ಟೇ ಅಲ್ಲ ಚಿನ್ನದಗುಡಿಯೂ ಹೌದು!

ಮಹಾರಾಜರ ಕಾಲದಲ್ಲಿ ಹಾಗೂ ಆ ನಂತರ 1972ರವರೆವಿಗೂ ಆನೆಗಳನ್ನು ಖೆಡ್ಡಾ ಮೂಲಕ ಹಿಡಿದು ಪಳಗಿಸುವ ಕಾರ್ಯಾಚರಣೆಗೆ ಕೇಂದ್ರವಾಗಿದ್ದ ‘ಕಾಕನಕೋಟೆ’ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಪಳಗಿದ ಆನೆಗಳನ್ನು ಕರೆತರುವ ಕಾಡಿನ ಹಾಡಿ ‘ಬಳ್ಳ’ ವೈಷ್ಣವ ಸಂಪ್ರದಾಯದ ಕೋಟೆಯ ಪುರಾತನ ಕಾಲದ ಶ್ರೀ ವರದರಾಜಸ್ವಾಮಿ ದೇವಸ್ಥಾನ, ಶ್ರೀರಾಮಾನುಜಾಚಾರ್ಯರು ಕಟ್ಟಿಸಿದರೆಂಬ ಪ್ರತೀತಿಯುಳ್ಳ ಕೆ. ಬೆಳತ್ತೂರಿನ ಪ್ರಸಿದ್ಧ ಶ್ರೀ ಲಕ್ಷ್ಮಿನಾರಾಯಣ ದೇವಾಲಯ, ಕಪಿಲಾ ನದಿದಂಡೆಯ ಮೇಲಿರುವ ರಾಜರಾಜ ಚೋಳ ನಿರ್ಮಿಸಿದನೆಂದು ಹೇಳಲಾಗುವ ಎಚ್. ಮಟಕೆರೆಯ ಶ್ರೀರಾಮ ಲಿಂಗೇಶ್ವರ ದೇಗುಲ, ಶ್ರೀ ಮಹದೇಶ್ವರಸ್ವಾಮಿ ನೆಲೆಸಿರುವ ಸುಪ್ರಸಿದ್ಧ ದ್ವೀಪ ಕ್ಷೇತ್ರವಾದ ‘ಭೀಮನಕೊಲ್ಲಿ ಶ್ರೀ ಕ್ಷೇತ್ರ’.

ಮೈಸೂರು ಮಹಾರಾಜರು ಶಿಕಾರಿಗೆ ಬಂದಾಗ ಉಳಿದು ಕೊಳ್ಳಲೆಂದೇ ಆ ಕಾಲದಲ್ಲಿ ಕಬಿನಿ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಈಗ ‘ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ಸ್’ ಆಗಿರುವ ಕಾರಾಪುರದ ‘ಮಹಾರಾಜ ಬಂಗಲೆ’, ಈ ಬಂಗಲೆಯ ಬಳಿಯೇ ವನ್ಯ ಮೃಗಗಳನ್ನು ಅತ್ಯಂತ ಸನಿಹದಿಂದ ವೀಕ್ಷಿಸಲು ಕೆರೆಯೊಂದರ ಸಹಿತ ಕಟ್ಟಿರುವ ವೀಕ್ಷಣಾಗೋಪುರ, ಬೀಚನಹಳ್ಳಿ ಡ್ಯಾಂ ಎಂದೇ ಸ್ಥಳೀಯರಲ್ಲಿ ಜನಜನಿತವಾಗಿರುವ 1975ರಲ್ಲಿ ನಿರ್ಮಿಸಲ್ಪಟ್ಟಿರುವ ನಯನ ಮನೋಹರ ‘ಕಬಿನಿ ಜಲಾಶಯ’, 1957ರಲ್ಲಿ ಬೀರ್‍ವಾಳುವಿನಲ್ಲಿ ನುಗು ಹೊಳೆಗೆ ಬೆಟ್ಟ ಹೊಂದಿಕೊಂಡಂತೆ ನಿರ್ಮಾಣಗೊಂಡಿರುವ ಕಣ್ಮನ ಸೆಳೆವ ‘ನುಗು ಜಲಾಶಯ’ ಮತ್ತು ತಾರಕದಲ್ಲಿರುವ ‘ತಾರಕ ಜಲಾಶಯ’ ಹಾಗೂ ಹೆಬ್ಬಳ್ಳದಲ್ಲಿರುವ ‘ಹೆಬ್ಬಳ್ಳ ಜಲಾಶಯ’ ಮುಂತಾದ ಕುತೂಹಲಕರ, ಸಾಹಸಮಯ, ಮನಮೋಹಕ, ಭಕ್ತಿ ಪ್ರಧಾಯಕ ಸ್ಥಳಗಳು ಹೆಗ್ಗಡದೇವನಕೋಟೆಯ ಕಾಡಿನ ಗರ್ಭದೊಳಗಿವೆ.

ಮೈಸೂರು ದಸರಾ ಮೆರವಣಿಗೆಯಲ್ಲಿ ಭಾಗವಹಿಸುವ ಬಹಳಷ್ಟು ಪಳಗಿದ ಆನೆಗಳಿಗೆ ಆಶ್ರಯ ತಾಣವಾಗಿರುವ ಇಲ್ಲಿಗೆ ಸಮೀಪದಲ್ಲೇ ಇರುವ ಹುಣಸೂರು ತಾಲ್ಲೂಕಿನ ‘ವೀರನಹೊಸಹಳ್ಳಿ ಹಾಡಿ’ ಮತ್ತು ಹೆಗ್ಗಡದೇವನಕೋಟೆ ಕಾಡಿಗೆ ಅಂಟಿಕೊಂಡಂತೆಯೇ ದಕ್ಷಿಣ ಭಾಗದಲ್ಲಿ ‘ಬಂಡೀಪುರ ಅಭಯಾರಣ್ಯ’ ಹಾಗೂ ಪಶ್ಚಿಮ ಭಾಗದಲ್ಲಿ ‘ರಾಜೀವ್‌ಗಾಂಧಿ ರಾಷ್ಟ್ರೀಯ ಉದ್ಯಾನವನ’ ಗಳೂ ಇರುವುದರಿಂದ ಹೆಗ್ಗಡದೇವನಕೋಟೆಗೆ ಪ್ರವೇಶಿಸುವ ಪ್ರವಾಸಿಗರು ಹೆಚ್ಚೆಚ್ಚು ಸ್ಥಳಗಳನ್ನು ವೀಕ್ಷಿಸಬಹುದಾಗಿದೆ.

ಮೈಸೂರು ಮಹಾರಾಜರ ಸಾಮಂತನಾದ ಹೆಗ್ಗಡದೇವನು ಇಲ್ಲಿ ಕಂದಕಗಳನ್ನು ನಿರ್ಮಿಸಿ ಈ ಪ್ರದೇಶದ ಸುತ್ತಲೂ ಮಣ್ಣಿನಿಂದ ಕೋಟೆಯನ್ನು ಕಟ್ಟುವುದಕ್ಕೂ ಮೊದಲು ಇದು ‘ಪೊನ್ನಾಟ’ ಎಂದು ಕರೆಸಿಕೊಂಡಿತ್ತು. ಇದನ್ನು ಮೈಸೂರು ಮಹಾರಾಜರಿಗೂ ಮೊದಲು ಹೊಯ್ಸಳರು ಮತ್ತು ವಿಜಯನಗರ ಅರಸರು ಆಳಿದ್ದರು. ಇದಕ್ಕೆ ಪುರಾವೆಯಾಗಿ ಅನೇಕ ಐತಿಹಾಸಿಕ ದಾಖಲೆಗಳನ್ನು, ಹಲವಾರು ಶಾಸನಗಳನ್ನು ಈ ನೆಲವೇ ಸಾಕ್ಷಿಯಾಗಿ ನೀಡಿದೆ. ಹೆಗ್ಗಡದೇವನು ಕೋಟೆ ಕಟ್ಟಿ ನಿರ್ಮಿಸಿದ 1622 ಚದರ ಕಿ.ಮೀ. ವಿಸ್ತೀರ್ಣದ ಈ ಅಮೂಲ್ಯ ಪ್ರದೇಶ ಈಗ ಹೆಗ್ಗಡದೇವನ ಕೋಟೆಯಾಗಿ ಪ್ರಸಿದ್ಧಿಗೆ ಬಂದಿದೆ. ಪ್ರಸ್ತುತ ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಅನುಷ್ಠಾನಗೊಳಿಸಿರುವ ‘ನಲಿ-ಕಲಿ’ ಶಿಕ್ಷಣ ಯೋಜನೆಯನ್ನು ತಾಲ್ಲೂಕು ಕೇಂದ್ರವೂ ಆಗಿರುವ ಇಲ್ಲಿ ಮೊಟ್ಟಮೊದಲಿಗೆ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತಂದಿತ್ತು.

ಹೀಗೆ ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಎಲ್ಲಕ್ಕಿಂತ ಮಿಗಿಲಾಗಿ ಮಹತ್ವಪೂರ್ಣ ಪ್ರವಾಸಿ ತಾಣವಾಗಿ ಪ್ರವಾಸೋದ್ಯಮದ ಭೂಪಟದಲ್ಲಿ ಹೆಸರಾಗಿರುವ ಹೆಗ್ಗಡದೇವನಕೋಟೆಯ ಒಳಹೊಕ್ಕು ನಡೆದರೆ ಸಾಕು ಪ್ರವಾಸಿಗರಿಗೆ ಹೊಸದೊಂದು ವನ್ಯಜೀವಿಗಳ ಅರಣ್ಯಪರ್ವ ತನ್ನಂತಾನೆ ತೆರೆದುಕೊಳ್ಳುತ್ತದೆ. ದಟ್ಟ, ದುರ್ಗಮ ಕಾನನದ ಚೆಲುವಿನೊಡನೆ ಅತ್ಯಂತ ಸಮೀಪದಿಂದ ವನ್ಯಜೀವಿಗಳನ್ನು ನೋಡಬಹುದಾದ ಅಪೂರ್ವ ತಾಣವಿದು.
ಮೈಸೂರು ಜಿಲ್ಲಾ ಕೇಂದ್ರದಿಂದ ಹೆಗ್ಗಡದೇವನಕೋಟೆಗೆ 52 ಕಿ.ಮೀ. ಬೆಂಗಳೂರಿನಿಂದ 192 ಕಿ.ಮೀ. ದೂರವಿದ್ದು ಇಲ್ಲಿಗೆ ಖಾಸಗಿ ಬಸ್ಸುಗಳು ಸೇರಿದಂತೆ ಸರ್ಕಾರಿ ಬಸ್ಸುಗಳ ತನಕ ಉತ್ತಮ ಸಾರಿಗೆ ವ್ಯವಸ್ಥೆ ಇದೆ. ಆದರೆ ಹೆಗ್ಗಡದೇವನಕೋಟೆಯ ಅರಣ್ಯಗರ್ಭದಲ್ಲಿನ ಸುಮಾರು 20-30 ಕಿ.ಮೀ. ಸುತ್ತಳತೆಯಲ್ಲಿರುವ ವಿವಿಧ ಪ್ರವಾಸಿ ತಾಣಗಳನ್ನು ನೋಡಲು ವಾಹನಗಳ ವ್ಯವಸ್ಥೆ ಅಷ್ಟೇನೂ ಚೆನ್ನಾಗಿಲ್ಲ. ಹಾಗಾಗಿ ಖಾಸಗಿ ವಾಹನಗಳಲ್ಲೇ ಹೋಗುವುದು ಉತ್ತಮ. ಒಂದೇ ದಿನದಲ್ಲಿ ಹೋಗಿ ಬರುವವರಾದರೆ ಜೊತೆಯಲ್ಲಿ ಊಟ-ತಿಂಡಿ ತೆಗೆದುಕೊಂಡು ಹೋಗುವುದು ಕ್ಷೇಮ.

ಏಕೆಂದರೆ ಈ ಕಾಡಿನೊಳಗೆ ತಿನ್ನಲು ಅಷ್ಟಾಗಿ ಏನೂ ಸಿಗುವುದಿಲ್ಲ. ಸಿಕ್ಕರೂ ತುಂಬಾ ದುಬಾರಿ. ವಸತಿಗಾಗಿ ಇಲ್ಲಿ ಸರ್ಕಾರಿ ಸ್ವಾಮ್ಯದ ಕಾರಾಪುರ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ಸ್ ಸೇರಿದಂತೆ ಕಪಿಲ ವೈಲ್ಡರ್‌ನೆಷ್ ರಿಟ್ರೇಟ್, ಬುಷ್‌ಬೆಟ್ಟ ಹಾಲಿಡೇ ವೈಲ್ಡ್ ಲೈಫ್, ಕಬಿನಿ ರಿವರ್ ಲಾಡ್ಜ್, ವಾರ್‌ವುಡ್ಸ್, ಸೋಗಳ್ಳಿಯ ಕಬಿನಿ ಲೇಕ್ ವ್ಯೂ ರೆಸಾರ್ಟ್ಸ್, ವೀರನ ಹೊಸಹಳ್ಳಿಯ ದಿ ಕಿಂಗ್ ಸಾಂಕ್ಚುವರಿ ಮುಂತಾದ ಜಂಗಲ್ ರೆಸಾರ್ಟ್ಸ್‌ಗಳಿವೆ. ಅರಣ್ಯ ಇಲಾಖೆಯ ಡಾರ್ಮೆಂಟ್ರಿಗಳೂ ಉಂಟು.
ಇವುಗಳಲ್ಲಿ ದಿನವೊಂದಕ್ಕೆ ಒಬ್ಬರಿಗೆ ಊಟ-ತಿಂಡಿ, ವಸತಿ, ವನ್ಯಜೀವಿ ವೀಕ್ಷಣೆಯ ಜೀಫ್ ಸಫಾರಿ, ಆನೆ ಸವಾರಿ, ದೋಣಿ ವಿಹಾರ ಎಲ್ಲವೂ ಸೇರಿ ಕನಿಷ್ಠ ಮೂರರಿಂದ ಐದಾರು ಸಾವಿರಗಳಿರುತ್ತದೆ. ದಿನವೊಂದಕ್ಕೆ ೭೫೦ ರೂ. ಗಳ ಬಾಡಿಗೆಯುಳ್ಳ ಸುಂಕದಕಟ್ಟೆ ಗೆಸ್ಟ್‌ಹೌಸ್‌ನಂತಹ ಜಂಗಲ್ ರೆಸಾರ್ಟ್ಸ್‌ಗಳು, ಟೆಂಟ್‌ಹೌಸ್‌ಗಳು, ಕಾಟೇಜ್‌ಗಳೂ ಇಲ್ಲಿ ಉಂಟು. ಇವುಗಳ ಬುಕಿಂಗ್‌ಗೆ ಮತ್ತು ಎಲ್ಲಾ ರೀತಿಯ ಮಾಹಿತಿಗೆ ಮೈಸೂರು ಜಿಲ್ಲಾ ಕೇಂದ್ರದಲ್ಲಿರುವ ಸ್ಕೈವೇ ಇಂಟರ್‌ನ್ಯಷನಲ್ ಟ್ರಾವೆಲ್ಸ್ (ದೂರವಾಣಿ: 0821-2444444ಅನ್ನು ಸಂಪರ್ಕಿಸಬಹುದು.

ಹಾಗೆಯೇ ಹೆಗ್ಗಡದೇವನಕೋಟೆ ಅರಣ್ಯ ವಲಯ ಅಪಾಯಕಾರಿ ವನ್ಯಮೃಗಗಳಿಂದ ಕೂಡಿರುವುದರಿಂದ ಪ್ರವಾಸದ ವೇಳೆ ಬಹಳ ಎಚ್ಚರಿಕೆಯಿಂದಿರುವುದು ಕ್ಷೇಮ. ರಾತ್ರಿ ವೇಳೆಯ ಸಂಚಾರ ಅಪಾಯಕಾರಿಯಾದ್ದರಿಂದ ಮತ್ತು ವನ್ಯಜೀವಿಗಳ ಹಿತದೃಷ್ಟಿಯಿಂದ ರಾತ್ರಿ ಪ್ರಯಾಣ ಇಲ್ಲಿ ನಿಶಿದ್ಧವಾಗಿದೆ.








