ಕಬಿನಿ ಹಿನ್ನೀರಿನ ಕನಕನಹಳ್ಳಿಯಲ್ಲಿ ಒತ್ತುವರಿಯಾಗಿದ್ದ ಜಮೀನು ತೆರವು… ಮುಚ್ಚಳಿಕೆ ಬರೆದ ಗ್ರಾಮಸ್ಥರು


ಮೈಸೂರು: ಹೆಚ್ ಡಿ ಕೋಟೆ ತಾಲೂಕಿನ ಕಬಿನಿ ಹಿನ್ನೀರಿನ ಬೋರೆದೇವರಮುಂಟಿ ಮತ್ತು ಕನಕನಹಳ್ಳಿ ಗ್ರಾಮದಲ್ಲಿ ಒತ್ತುವರಿಯಾಗಿದ್ದ ಭೂಸ್ವಾಧೀನದ ಜಮೀನನ್ನು ತಹಶೀಲ್ದಾರ್ ಆದೇಶದಂತೆ ಅಧಿಕಾರಿಗಳು ತೆರವುಗೊಳಿಸಿರುವ ಘಟನೆ ಮಂಗಳವಾರ ನಡೆದಿದೆ.
ಇದೇ ವೇಳೆ ತಾಲೂಕಿನ ಅಂತರಸಂತೆ ಹೋಬಳಿಯ ಕಬಿನಿ ಹಿನ್ನೀರು ಪ್ರದೇಶವಾದ ಕನಕನಹಳ್ಳಿ ಗ್ರಾಮದ ಭೂಸ್ವಾಧೀನ ಪ್ರದೇಶವನ್ನು ಯಾವುದೇ ರೀತಿಯಲ್ಲಿ ಒತ್ತುವರಿ ಮಾಡುವುದಿಲ್ಲವೆಂದು ಗ್ರಾಮ ಆಡಳಿತಾಧಿಕಾರಿ, ರಾಜಸ್ವ ನಿರೀಕ್ಷಕರು, ಭೂಮಾಪಕರು ಮತ್ತು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಸಮ್ಮುಖದಲ್ಲಿ ಗ್ರಾಮಸ್ಥರು ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ.
ಘಟನೆ ವಿವರ: ಕನಕನಹಳ್ಳಿ ಗ್ರಾಮದ ನಿವಾಸಿ ರತ್ನಯ್ಯ ಸೇರಿದಂತೆ ಗ್ರಾಮಸ್ಥರು ಅಂತರಸಂತೆ ಹೋಬಳಿಯ ಬೋರೆದೇವರಮುಂಟಿ ಮತ್ತು ಕನಕನಹಳ್ಳಿ ಗ್ರಾಮಕ್ಕೆ ಸೇರಿದ ಸರ್ವೆ ನಂಬರ್ 1, 3/1, 3/2, ರ ಜಮೀನು ಕಬಿನಿ ಜಲಾಶಯದ ಹಿನ್ನೀರಿಗೆ ಭೂಸ್ವಾಧೀನಗೊಂಡಿದ್ದು, ಇದು ಸರ್ಕಾರಿ ಜಮೀನಾಗಿದ್ದರೂ ಅಕ್ರಮವಾಗಿ ವಶಪಡಿಸಿಕೊಂಡು ತಂತಿಬೇಲಿ ನಿರ್ಮಿಸುವ ಪ್ರಯತ್ನ ಮಾಡಿದ್ದರು.
ಈ ಸಂಬಂಧ ಸರ್ಕಾರಿ ಜಮೀನು ಅತಿಕ್ರಮಿಸಿದ ಆರೋಪದಡಿ ರತ್ನಯ್ಯ ವಿರುದ್ಧ ಸರ್ಕಾರಿ ಭೂಕಬಳಿಕೆ ಕಾಯಿದೆ ಪ್ರಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಹಶೀಲ್ದಾರ್‌ಗೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಹೆಚ್.ಡಿ.ಕೋಟೆ ತಹಶೀಲ್ದಾರ್‌ರವರು ಜೂ.2ರಂದು ಅಂತರಸಂತೆ ಪೊಲೀಸ್ ಠಾಣೆ ಆರಕ್ಷಕ ಉಪನಿರೀಕ್ಷಕರಿಗೆ ಭೂಮಾಪಕರ ಸಮ್ಮುಖದಲ್ಲಿ ಭೂಸ್ವಾಧೀನವಾಗಿರುವ ಜಮೀನಿನ ಗಡಿಯನ್ನು ಗುರುತಿಸಿ ಒತ್ತುವರಿಯನ್ನು ತೆರವುಗೊಳಿಸುವಂತೆ ಆದೇಶ ನೀಡಿದ್ದರು.
ಈ ಸಂಬಂಧ ಮಂಗಳವಾರ ಭೂಮಾಪಕರು, ರಾಜಸ್ವ ನಿರೀಕ್ಷಕರು, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಭೂಸ್ವಾಧೀನಗೊಂಡಿರುವ ಜಮೀನನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಅಳತೆ ಮಾಡಿ ಗಡಿ ಗುರುತಿಸಿದ್ದಾರೆ. ಈ ಸಂದರ್ಭ ಸ್ಥಳದಲ್ಲಿ ಹಾಜರಿದ್ದ ಗ್ರಾಮಸ್ಥರಾದ ರತ್ನಯ್ಯ, ರಾಜ್, ವಿಜಯ, ಚಂದ್ರ, ಸುರೇಶ, ಕರಿಯಪ್ಪ, ಪುಟ್ಟರಾಜ್ ಸೇರಿದಂತೆ ಗ್ರಾಮಸ್ಥರು ಕಬಿನಿ ಹಿನ್ನೀರು ಪ್ರದೇಶವನ್ನು ಅಧಿಕಾರಿಗಳು ಅಳತೆ ಮಾಡಿ ಗುರುತಿಸಿದ್ದು, ನಾವು ಒತ್ತುವರಿ ಪ್ರದೇಶವನ್ನು ತೆರವು ಮಾಡಿರುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಆ ಮೂಲಕ ಕಬಿನಿ ಹಿನ್ನೀರು ಪ್ರದೇಶದ ಒತ್ತುವರಿ ಪ್ರಕರಣ ಸುಖಾಂತ್ಯ ಕಂಡಂತಾಗಿದೆ.







