ಹುಣಸೂರು: ಬೃಹತ್ ಆಲದ ಮರದ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಪ್ರವಾಸಿ ತಾಣವನ್ನಾಗಿ ಮಾಡುವ ಅಭಿಲಾಷೆಯನ್ನು ಗ್ರಾಮಸ್ಥರು, ವಿ.ಎಸ್.ಎಸ್.ವಿದ್ಯಾ ಸಂಸ್ಥೆ ಹಾಗೂ ಪಂಚಾಯಿತಿ ಸದಸ್ಯರು ಹೊಂದಿದ್ದಾರೆ. ಅದಕ್ಕೆ ಪೂರಕವಾಗಿ ನಾವು ಅವರೊಡನೆ ಕೈಜೋಡಿಸುತ್ತೇವೆ ಎಂದು ಪಿಡಿಓ ಶೇಖರ್ ತಿಳಿಸಿದರು.
ತಾಲ್ಲೂಕಿನ ಕುಡಿನೀರು ಮುದ್ದನಹಳ್ಳಿ ಗ್ರಾಮದ ಆಲದ ಮರದ ಹತ್ತಿರ ವಿ.ಎಸ್.ಎಸ್.ಪದವಿ ಕಾಲೇಜಿನ ಎನ್.ಎಸ್.ಎಸ್. ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಸ್ವಚ್ಚತಾ ಆಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ರಾಜ್ಯದಲ್ಕಿಯೆ 2 ನೇ ಅತಿ ದೊಡ್ಡ ಆಲದ ಮರವಾಗಿದೆ, ಇಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ಆಗಬೇಕಿದ್ದು, ಈ ಆಲದ ಮರದ ಸುತ್ತ ಕಾಂಪೌಂಡ್ ನಿರ್ಮಾಣಕ್ಕೆ ಪಂಚಾಯಿತಿ ವತಿಯಿಂದ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಆಲದ ಮರ ಸಮೀತಿಯ ಅದ್ಯಕ್ಷ, ರವಿ.ಎಂ.ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪರಿಸರವನ್ನು ವಿವಿಧ ಕಾರಣದಿಂದಾಗಿ ಮಾನವರು ನಾಶ ಮಾಡುತ್ತಿದ್ದಾರೆ. ಈ ಜಾತ್ರೆಯ ಮೂಲಕ ಪರಿಸರ ಸಂರಕ್ಷಿಸಿ, ಬೆಳೆಸಬೇಕು ಎಂಬ ಸಂಕಲ್ಪದೊಂದಿಗೆ ಜಾನಪದ ಜಾತ್ರೆ ಹಮ್ಮಿಕೊಂಡು ನಡೆಸಿ ಕೊಂಡು ಬರುತ್ತಿದ್ದು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಕಾರ್ಪೊರೇಟ್ ಸಂಸ್ಥೆಗಳು, ಪರಿಸರ ಪ್ರೇಮಿಗಳು ಹಾಗೂ ಗ್ರಾಮದ ಯುವಕರು ಸಂಪೂರ್ಣ ಸಹಕಾರ ನೀಡಿದರೆ ಸಂರಕ್ಷಿತ ಪ್ರವಾಸಿ ತಾಣ ಮಾಡುವ ದೃಢಸಂಕಲ್ಪವನ್ನು ಮಾಡಿದ್ದೇವೆ ಎಂದು ತಿಳಿಸಿದರು.
ಪ್ರಾಂಶುಪಾಲರಾದ ಶಿವಕುಮಾರ್ ಮಾತನಾಡಿ, ನಮ್ಮ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಸುಧಾಕರ್ ಆಸಕ್ತಿ ವಹಿಸಿ ಈ ಬೃಹತ್ ಆಲದ ಮರದ ಸಂರಕ್ಷಣೆಗೆ ಮುಂದಾಗಿರುವುದು ಖುಷಿ ನೀಡಿದ್ದು ನನ್ನ ಸಂಪೂರ್ಣ ಬೆಂಬಲವಿದೆ, ನಮ್ಮ ಸಂಸ್ಥೆ ಈ ಆಲದ ಮರದ ಅಭಿವೃದ್ಧಿಗೆ ದತ್ತು ಪಡೆದಿದ್ದು, ಈಗಾಗಲೇ ಕಳೆದ ವರ್ಷದಿಂದಲೇ ಅಭಿವೃದ್ಧಿಗೆ ಹಾಗೂ ಸ್ವಚ್ಚತಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಸ್ವಚ್ಚತಾ ಕಾರ್ಯಕ್ರಮದಲ್ಲಿ ವಿ.ಎಸ್.ಎಸ್.ಪದವಿ ಕಾಲೇಜಿನ ಕಾರ್ಯದರ್ಶಿ ಮಹಾಲಿಂಗಯ್ಯ, ಪ್ರಾಂಶುಪಾಲ ಶಿವಕುಮಾರ್, ಎನ್.ಎಸ್.ಎಸ್. ಅಧಿಕಾರಿ ಸುಧಾಕರ್, ಉಪನ್ಯಾಸಕರಾದ ಮನೋಜ್ ಕುಮಾರ್, ಪರಮೇಶ್, ಬಸವರಾಜು, ಉಪನ್ಯಾಸಕರಾದ ವಿ.ಸೋಮಣ್ಣ, ಮಲ್ಲಿಕಾರ್ಜುನಸ್ವಾಮಿ, ದೈಹಿಕ ಶಿಕ್ಷಕ ಶಿವಕುಮಾರ್, ಗ್ರಾ.ಪಂ.ಮಾಜಿ ಸದಸ್ಯರಾದ ರಮೇಶ್, ನಂಜಾಪುರ ಮನುಕುಮಾರ್, ವಿಎಸ್ ಎಸ್ ಎನ್ ಮಾಜಿ ಅಧ್ಯಕ್ಷ ಕಿರಣ್, ಮಂಜುನಾಥ್ ವೈ ಬಿ, ರಾಜೇಶ್, ಸಂತೋಷ್ ಉಪಸ್ಥಿತರಿದ್ದರು.








