ಮದುವೆ ಎನ್ನುವುದು ಎರಡು ದೇಹಗಳ ಸಮಾಗಮ ಅಲ್ಲ ಎರಡು ಮನಸ್ಸುಗಳ ಸಂಗಮ: ಕಲ್ಮಳ್ಳಿ ನಟರಾಜು
ಜೆಎಸ್ ಎಸ್ ವಿವಾಹ ಕೇಂದ್ರದ ವತಿಯಿಂದ ವಧು ವರರ ಸಮಾವೇಶ

ಮೈಸೂರು: ಮದುವೆ ಎನ್ನುವುದು ಎರಡು ದೇಹಗಳ ಸಮಾಗಮ ಅಲ್ಲ ಎರಡು ಮನಸ್ಸುಗಳ ಭಾವನೆಗಳನ್ನು ಅರ್ಥೈಸಿ ಕೊಂಡು ವಿವಾಹದ ನಂತರ ಬರುವ ಎಲ್ಲ ಕಷ್ಟ ಸುಖಗಳಲ್ಲಿ ಸಹ ಭಾಗಿತ್ವದಿಂದ ಸುಖ ಸಂತೋಷ ನೆಮ್ಮದಿಗಳಿಂದ ಜೀವನ ಸಾಗಿಸಲು ಸಿಕ್ಕ ಪುಣ್ಯ ಅವಕಾಶ ಎಂದು ಜೆಎಸ್ಎಸ್ ಮಹಾ ವಿದ್ಯಾ ಪೀಠದ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ನಿರ್ದೇಶಕ ಕಲ್ಮಳ್ಳಿ ನಟರಾಜು ಹೇಳಿದರು.

ಮೈಸೂರಿನ ರಾಜೇಂದ್ರ ಸಭಾ ಭವನದಲ್ಲಿ ಜೆಎಸ್ ಎಸ್ ಮಹಾ ವಿದ್ಯಾ ಪೀಠದ ಜೆಎಸ್ಎಸ್ ವಿವಾಹ ಕೇಂದ್ರದ ವತಿಯಿಂದ ನಡೆದ ವಧು ವರರ ಸಮಾವೇಶದಲ್ಲಿ ಮಾತನಾಡಿದ ಅವರು, ಹತ್ತಿಪ್ಪತ್ತು ವರ್ಷಗಳ ಹಿಂದೆ ಕುಟುಂಬದ ಹಿರಿಯರೇ ವಿವಾಹಕ್ಕೆ ಒಪ್ಪಿಗೆ ನೀಡಿ ನೆರವೇರಿಸುತ್ತಿದ್ದರು. ಸಣ್ಣ ಪುಟ್ಟ ಮನಸ್ತಾಪಗಳಿದ್ದರೂ ವೈವಾಹಿಕ ಜೀವನಕ್ಕೆ ಅಡ್ಡಿ ಬರದೆ ಹಿರಿಯರ ಮಧ್ಯಸ್ಥಿಕೆಯಲ್ಲಿ ಬಗೆ ಹರಿಸಿ ಕೊಂಡು ಸುಖ ಸಂತೋಷ ನೆಮ್ಮದಿಯಿಂದ ತುಂಬು ಜೀವನ ನಡೆಸುತ್ತಿದ್ದರು.

ಆದರೆ ಬದಲಾದ ಈ ಕಾಲ ಘಟ್ಟದಲ್ಲಿ ಮದುವೆಯಾಗ ಬಯಸುವ ಗಂಡು ಹೆಣ್ಣು ಮಕ್ಕಳೇ ಒಪ್ಪಿ ಮಾಡಿ ಕೊಂಡ ವಿವಾಹಗಳು ನಂತರ ಬರುವ ಸಣ್ಣ ಪುಟ್ಟ ಸಮಸ್ಯೆಗಳನ್ನೇ ಪರಸ್ಪರ ಕುಳಿತು ಬಗೆಹರಿಸಿಕೊಳ್ಳದೆ ಮದುವೆಯಾದ ಕೆಲ ದಿನ ಅಥವಾ ವರ್ಷಗಳಲ್ಲಿಯೇ ವಿಚ್ಛೇದನ ಪಡೆದು ಸಂಬಂಧ ಮುರಿದು ಕೊಳ್ಳುತ್ತಿರುವುದು ಅತ್ಯಂತ ಆಘಾತಕಾರಿ ಮತ್ತು ನೋವಿನ ಸಂಗತಿಯಾಗಿದೆ. ಕುಟುಂಬದ ಹಿರಿಯರು ಯಾರೊಂದಿಗೂ ಈ ನೋವನ್ನು ಹಂಚಿ ಕೊಳ್ಳದೆ ಪರಿತಪಿಸುತ್ತಿದ್ದಾರೆ ಪ್ರತಿ ನಿತ್ಯ ನ್ಯಾಯಾಲಯಕ್ಕೆ ಅಲೆ ದಾಡುವ ವಿಷಯ ಸಾಮಾನ್ಯವಾಗಿದೆ

ಇದಕ್ಕೆ ಆರ್ಥಿಕ ಸ್ವಾಯತ್ತತೆ ಕಾರಣವೋ ಅಥವಾ ಪ್ರತಿಷ್ಠೆ ಅಡ್ಡ ಬರುತ್ತಿದೆಯೋ ಅಥವಾ ನಾವು ನೀಡುತ್ತಿರುವ ಆಧುನಿಕ ಶಿಕ್ಷಣದ ಸಂಸ್ಕಾರದ ಕೊರತೆಯೂ ಎನ್ನುವುದನ್ನು ಹುಡುಕಿ ಪರಿಹಾರ ಕಂಡು ಕೊಂಡು ಮುನ್ನಡೆಯಬೇಕಿದೆ ಪಾಶ್ಚಾತ್ಯ ಸಂಸ್ಕೃತಿಯಂತೆ ಮದುವೆ ಸ್ವೇಚ್ಛೆಯಲ್ಲ ಬೇಕೆನಿಸಿದಾಗ ಜೊತೆಗಿದ್ದು, ಬೇಡವೆನಿಸಿದಾಗ ಕಳಚಿ ಕೊಳ್ಳುವ ವಸ್ತುವಾಗದೆ, ಭಾರತೀಯ ಸಂಸ್ಕೃತಿ ಯಲ್ಲಿ ಮದುವೆ ಎಂದರೆ ಅದು ಪವಿತ್ರ ವಾದ ನೈತಿಕ ನೆಲೆಗಟ್ಟಿನ ವಿಶ್ವಾಸ ಪ್ರೀತಿ ನಂಬಿಕೆ ಮೇಲೆ ರೂಪುಗೊಳ್ಳುವುದಾಗಿದೆ.

ಎರಡು ಮನಸ್ಸುಗಳನ್ನು ಬೆಸೆಯುವ ಸೇತುವೆ ಚತುರ್ವಿಧ ಪುರುಷಾರ್ಥಗಳಲ್ಲಿ ಹೇಳುವಂತೆ ಮನುಷ್ಯ ಪಡೆಯುವ ಧರ್ಮ ಅರ್ಥ ಕಾಮ ಮೋಕ್ಷ ಇವೆಲ್ಲವೂ ನೈತಿಕ ನೆಲೆಗಟ್ಟು ಹೊಂದಿರಬೇಕು. ವಿಶ್ವ ಶ್ರೇಷ್ಠ ಸಂಸ್ಕೃತಿಯನ್ನು ನೀಡಿದ ಭಾರತ ಸಾರುವ ಸಂದೇಶವೂ ಹೌದು. ಅದರಂತೆ ಜೀವನ ಮೌಲ್ಯಗಳನ್ನು ಉಳಿಸುವ ನಿಟ್ಟಿನಲ್ಲಿ ಉದಾತ್ತ ಚಿಂತನೆಗಳ ಬಗ್ಗೆ ದಾಂಪತ್ಯಕ್ಕೆ ಕಾಲಿಡುವ ನಮ್ಮ ಮಕ್ಕಳು ಇಂದು ಅರಿಯಬೇಕಾಗಿದೆ . ಈ ನಿಟ್ಟಿನಲ್ಲಿ ಮಕ್ಕಳನ್ನು ದೂರದೆ ಪೋಷಕರು ತಮ್ಮ ತಪ್ಪುಗಳ ಬಗ್ಗೆಯೂ ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ. ಒಬ್ಬ ಪ್ರಜ್ಞಾವಂತ ಪೋಷಕನಾಗಿ ನಾನು ಈ ಮಾತನ್ನು ನನ್ನನ್ನು ಸೇರಿದಂತೆ ಎಲ್ಲ ಪೋಷಕರಿಗೆ ಈ ಸಂದರ್ಭದಲ್ಲಿ ಹೇಳ ಬಯಸುತ್ತೇನೆ ಎಂದರು

ಸುತ್ತೂರು ಶ್ರೀ ಮಠ ಭಾರತೀಯ ಸಂಸ್ಕೃತಿ ಯ ಮೌಲ್ಯಗಳನ್ನು ವಿಶ್ವಕ್ಕೆ ದೇಶದ ರಾಯಭಾರಿಯಾಗಿ ಜಾತ್ಯತೀತವಾಗಿ ವಸು ದೈವ ಕುಟುಂಬಕಂ ಎನ್ನುವ ಆಶಯದಂತೆ ಪ್ರಪಂಚದ ವಿವಿಧ ಖಂಡಗಳಲ್ಲಿ ಆಧ್ಯಾತ್ಮಿಕ ಶಿಕ್ಷಣ ಆರೋಗ್ಯ ಅರಿವು ಮನುಷ್ಯನ ಸರ್ವಾಂಗೀಣ ಬೆಳವಣಿಗೆಗೆ ಅಗತ್ಯ ವಿರುವ ಎಲ್ಲ ಕ್ಷೇತ್ರಗಳಲ್ಲಿಯೂ ಅಪಾರ ಸೇವೆ ಸಲ್ಲಿಸುತ್ತಿರುವುದು ನಾಡಿನ ಪುಣ್ಯ ವಿಶೇಷ ನಮ್ಮ ನಿಮ್ಮೆಲ್ಲರ ಪರವಾಗಿ ಶ್ರೀಮಠದ ಪೂಜ್ಯ ಪರಂಪರೆಗೆ ಮತ್ತು ಪ್ರಸ್ತುತ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮಿಗಳವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು
ಕಾರ್ಯಕ್ರಮದಲ್ಲಿ ಜೆಎಸ್ಎಸ್ ವಿವಾಹ ಮಾಹಿತಿ ಕೇಂದ್ರ ವಿಭಾಗದ ಉಸ್ತುವಾರಿ ಸಂಚಾಲಕಿ ಡಾ ಮಲ್ಲಿಕಾ ಮಾತನಾಡಿ ಈ ವೇದಿಕೆಯ ವತಿಯಿಂದ ಪ್ರತಿ ಎರಡು ತಿಂಗಳಿಗೊಮ್ಮೆ ಮೈಸೂರಿನಲ್ಲಿ ನಿರಂತರವಾಗಿ ನಡೆದು ಕೊಂಡು ಬರುತ್ತಿದ್ದು ಈಗಾಗಲೇ ಈ ಸೇವೆಯನ್ನು ಬೆಂಗಳೂರಿಗೂ ವಿಸ್ತರಿಸಿದ್ದು, ನಡೆಸಲಾಗಿದ್ದು ನೂರಾರು ಮಂದಿ ಪೋಷಕ ವಧು ವರರು ಇದರ ಫಲಾನುಭವಿಗಳಾಗಿದ್ದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮುಂದಿನ ತಿಂಗಳ ಮಾರ್ಚ್ 8 ರಂದು ನಿಗದಿತ 35 ರಿಂದ 45 ರ ವಯೋ ಮಿತಿಯ ಜಾತ್ಯತೀತವಾಗಿ ಬೆಂಗಳೂರಿನ ಬನಶಂಕರಿ ಬಡಾವಣೆಯ ಎರಡನೇ ಹಂತದಲ್ಲಿ ರುವ ಜೆಎಸ್ ಎಸ್ ಪಬ್ಲಿಕ್ ಶಾಲೆಯ ಆವರಣದಲ್ಲಿನ ಘನ ಲಿಂಗ ಶಿವ ಯೋಗಿ ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಇದರ ಸದುಪಯೋಗ ಪಡೆದು ಕೊಳ್ಳುವಂತೆ ಸಭೆಗೆ ಮನವಿ ಮಾಡಿದರು
ಕಾರ್ಯಕ್ರಮದಲ್ಲಿ ಶ್ರೀಮತಿ ಆಶಾ ಭವಾನಿ ಉಪಸ್ಥಿತ ವಧು ವರರನ್ನು ಸಭೆಗೆ ಪರಿಚಯಿಸಿದರು ಮತ್ತು ವಂದಾರ್ಪಣೆ ತಿಳಿಸಿದರು. ವಿಭಾಗದ ಸಿಬ್ಬಂದಿ ಸೇರಿದಂತೆ ನೂರಾರು ಪೋಷಕರು ವಧು ವರರು ಉಪಸ್ಥಿತರಿದ್ದರು







