ಜ್ಞಾನ, ಅನುಭವಗಳನ್ನು ತಲೆಮಾರಿನಿಂದ ತಲೆಮಾರಿಗೆ ಸಾಗಿಸುವ ಮೌನ ಗುರು ಪುಸ್ತಕ: ವಚನ ಕುಮಾರಸ್ವಾಮಿ

ಮೈಸೂರು: ಜ್ಞಾನ ಮತ್ತು ಅನುಭವಗಳನ್ನು ತಲೆಮಾರಿನಿಂದ ತಲೆಮಾರಿಗೆ ಸಾಗಿಸುವ ಮೌನ ಗುರು ಪುಸ್ತಕ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಹೇಳಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಮೈಸೂರು ನೇತಾಜಿನಗರದ ಡಾ. ಶಿವಬಸಪ್ಪ ಹೊರೆಯಾಲ ಅವರ ಬಸವಜ್ಯೋತಿ ನಿವಾಸದಲ್ಲಿ ಆಯೋಜಿಸಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭದಲ್ಲಿ ಪುಸ್ತಕ ಸಂಸ್ಕೃತಿ ಬಗ್ಗೆ ಮಾತನಾಡಿ ಮಹನೀಯರ ಜೀವನಚರಿತ್ರೆ ನಮಗೆ ದಾರಿದೀಪ. ಜೀವನಚರಿತ್ರೆ ಓದಿದಾಗ ನಮ್ಮೊಳಗಿನ ನಿದ್ರಿಸಿದ ಕನಸು ಎಚ್ಚರಗೊಳ್ಳುತ್ತದೆ. ಸಾಧನೆ ಸಾಧ್ಯವೆಂಬ ನಂಬಿಕೆ ಅರಳುತ್ತದೆ. ಒಬ್ಬರ ಆತ್ಮಸಾಕ್ಷಿಯ ಧ್ವನಿಯೇ ಆತ್ಮಕಥೆ ತಮ್ಮ ಬದುಕಿನ ಪಾಠಗಳನ್ನು ತಾವೇ ಹೇಳುವಾಗ ಅದು ಓದುಗರ ಹೃದಯದಲ್ಲಿ ಆತ್ಮಪರಿಶೀಲನೆಯ ಬೆಳಕು ಹಚ್ಚುತ್ತದೆ. ಸಂಶೋಧನಾ ಕೃತಿ ಸತ್ಯದ ಅನ್ವೇಷಣೆಯ ಪಥ. ವಿಜ್ಞಾನ, ಸಮಾಜ ಅಥವಾ ಇತಿಹಾಸದ ವಿಷಯಗಳಲ್ಲಿ ಆಳವಾದ ಅಧ್ಯಯನ ಮನಸ್ಸಿಗೆ ವಿಚಾರಶೀಲತೆ ನೀಡುತ್ತದೆ.

ಕವಿತೆ ಭಾವಗಳ ನಿಸರ್ಗ ಗಾನ. ಒಂದು ಸಣ್ಣ ಸಾಲು ಸಹ ಮನದ ನೋವನ್ನು ಮಧುರಗಾನವನ್ನಾಗಿ ಪರಿವರ್ತಿಸುತ್ತದೆ. ಕಥೆಗಳು ಜೀವನದ ಚಿಕ್ಕ ಚಿಕ್ಕ ಅನುಭವಗಳ ಚಿತ್ತಾರ. ಒಂದು ಕಥೆ, ಒಂದು ಪಾತ್ರ, ಒಂದು ಸಂದೇಶ ಅವು ಮನುಷ್ಯನ ಮನದಲ್ಲಿ ಮಾನವೀಯತೆಯ ಬೀಜ ಬಿತ್ತುತ್ತವೆ. ಪುಸ್ತಕ ಓದುವ ಸಂಸ್ಕೃತಿ ಬೆಳೆದರೆ ಮನಸ್ಸು ಮೃದುಗೊಳ್ಳುತ್ತದೆ, ವಿಚಾರಗಳು ವಿಶಾಲಗೊಳ್ಳುತ್ತವೆ, ಸಮಾಜದಲ್ಲಿ ಸಂಸ್ಕಾರ ಅರಳುತ್ತದೆ. ಮನೆಗೊಂದು ಗ್ರಂಥಾಲಯ ಎಂದರೆ ಅದು ಕೇವಲ ಪುಸ್ತಕಗಳ ರಾಶಿ ಅಲ್ಲ. ಅದು ಮೌಲ್ಯಗಳ ಮಂದಿರ, ಮೌನ ಗುರುಗಳ ಮಹೋತ್ಸವ ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಡಾ. ಮಾನಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ರಾಜ್ಯಾದ್ಯಂತ ಲಕ್ಷ ಮನೆಗಳಲ್ಲಿ “ಮನೆಗೊಂದು ಗ್ರಂಥಾಲಯ” ಸ್ಥಾಪಿಸುವ ಮಹತ್ವಾಕಾಂಕ್ಷೆ ಉದ್ದೇಶವನ್ನು ಪ್ರಾಧಿಕಾರ ಹೊಂದಿದ್ದು ಈ ಯೋಜನೆಯ ಭಾಗವಾಗಿ ಸಮಗ್ರ ರೂಪುರೇಷೆ ತಯಾರಿಸಲಾಗಿದ್ದು, ಪ್ರತಿಯೊಂದು ಮನೆ ಓದಿನ ಮಂದಿರವಾಗಬೇಕು ಎಂಬ ಸಂಕಲ್ಪದೊಂದಿಗೆ ಕಾರ್ಯಾಚರಣೆ ಆರಂಭವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪುಸ್ತಕ ಪ್ರಾಧಿಕಾರದ ಸಂಚಾಲಕ ಎಂ.ಚಂದ್ರಶೇಖರ್ ಮಾತನಾಡಿ ಪ್ರತಿಯೊಂದು ಮನೆ ಗ್ರಂಥಾಲಯವಾಗಬೇಕು. ಪುಸ್ತಕ ಸಂಸ್ಕೃತಿ ಬೆಳೆದರೆ ಕುಟುಂಬದಲ್ಲಿ ಜ್ಞಾನ ಮತ್ತು ಮೌಲ್ಯಗಳ ವಾತಾವರಣ ನಿರ್ಮಾಣವಾಗುತ್ತದೆ. ಮನೆಗೊಂದು ಗ್ರಂಥಾಲಯ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಶಿಕ್ಷ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ಚಿಕ್ಕಹಳ್ಳಿ ದೇವರಾಜು ಪ್ರಾಸ್ತಾವಿಕ ನುಡಿ ನುಡಿದು ಮನೆಗೊಂದು ಗ್ರಂಥಾಲಯ ರಾಜ್ಯದಲ್ಲಿ ಮೊದಲಿಗೆ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರ ಮನೆಯಲ್ಲಿ, ಮೈಸೂರು ಜಿಲ್ಲೆಯಲ್ಲಿ ಉಸ್ತುವಾರಿ ಮಂತ್ರಿಗಳಾದ ಡಾ. ಎಚ್.ಸಿ ಮಹದೇವಪ್ಪ ಅವರ ಮನೆಯಲ್ಲಿ ಉದ್ಘಾಟನೆ ಆಗಿ ರಾಜ್ಯಾದ್ಯಂತ ಪುಸ್ತಕ ಸಂಸ್ಕೃತಿಯ ಮಹತ್ವವನ್ನು ಪ್ರಚುರಪಡಿಸಲಾಗುತ್ತಿದೆ ಎಂದರು.

ಸಾಹಿತಿ ಡಾ. ಶಿವಬಸಪ್ಪ ಹೊರೆಯಾಲ ಅವರು ಮಾತನಾಡಿ ಅನೇಕರ ಕೃತಿಗಳು ಪ್ರಕಟವಾಗದೇ ಬೆಳಕಿಗೆ ಬರುತ್ತಿಲ್ಲ. ಕವಿತೆ ರಚಿಸುವ ಕವಿಗಳು ಮತ್ತು ಕೃತಿಗಳನ್ನು ರಚಿಸುವ ಲೇಖಕರಿಗೆ ರಾಜ್ಯದಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಪುಸ್ತಕ ಪ್ರಾಧಿಕಾರ ಸಂಚಾಲಕ ಎಂ. ಮಹೇಶ್ ಚಿಕ್ಕಲ್ಲೂರು, ಅನೇಕ ಪುಸ್ತಕ ಪ್ರೇಮಿಗಳು ಉಪಸ್ಥಿತರಿದ್ದರು.







