LatestMysore

ವಿದ್ಯಾರ್ಥಿಗಳು ವೈಯಕ್ತಿಕ ಸ್ವಚ್ಚತೆ, ಗ್ರಾಮದ ಹಸಿರೀಕರಣಕ್ಕೆ ಒತ್ತು ನೀಡಬೇಕು: ಟಿ.ಸಿ. ದೇವನಾಥ್

ಮೈಸೂರು: ವಿದ್ಯಾರ್ಥಿಗಳು ವೈಯಕ್ತಿಕ ಸ್ವಚ್ಚತೆ ಮತ್ತು ಗ್ರಾಮದ ಹಸಿರೀಕರಣಕ್ಕೆ ಹೆಚ್ಚು ಒತ್ತು ನೀಡಬೇಕು. ಆಗ ಪಟ್ಟಣ, ನಗರ, ದೇಶದ ಸ್ವಚ್ಚತೆ ಮತ್ತು ಭೂಮಿಯ ಹಸಿರೀಕರಣ ಸಾಧ್ಯವಾಗುತ್ತದೆ. ವಸ್ತುಗಳ ಮಿತಬಳಕೆ, ಮರುಳಕೆ ಜೊತೆಗೆ ಮಿತ ಸಂತಾನ ಮತ್ತು ಸರಳ ಜೀವನದ ಮೂಲಕ ಪರಿಸರ ರಕ್ಷಣೆಯನ್ನು ಜಪಿಸಬೇಕು ಎಂದು ಪರಿಸರವಾದಿ ಟಿ.ಸಿ. ದೇವನಾಥ್  ಕರೆ ನೀಡಿದರು.

ತಾಲ್ಲೂಕಿನ ಮೆಲ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಕೋ ಕ್ಲಬ್ ವತಿಯಿಂದ ನಡೆದ ‘ಹಸಿರು ನಮ್ಮ ಉಸಿರು – ಆರೋಗ್ಯವೇ ಭಾಗ್ಯ’ ಪರಿಸರ ಸಂರಕ್ಷಣಾ ಉಪನ್ಯಾಸದಲ್ಲಿ ಭಾಗವಹಿಸಿ ಅವರು ಮಾತನಾಡಿ, ಮಕ್ಕಳು ತಮ್ಮ ಹುಟ್ಟು ಹಬ್ಬದ ದಿನದಂದು ತಮ್ಮ ಸ್ನೇಹಿತರಿಗೆ ಚಾಕೊಲೇಟ್, ಕೇಕ್, ಪಪ್ಸ್  ಬದಲಿಗೆ ಬಾಳೆಹಣ್ಣನ್ನು ಹಂಚಬೇಕು. ಬಾಳೆಹಣ್ಣು ತಿನ್ನುವುದರಿಂದ ಮಕ್ಕಳ ಬೆಳವಣಿಗೆಗೆ ಅಗತ್ಯವಿರುವ ಕ್ಯಾಲ್ಸಿಯಂ ಲಭಿಸುತ್ತದೆ. ರೈತರಿಗೂ ನೆರವಾಗುತ್ತದೆ ಎಂದು ಕಿವಿಮಾತು ಹೇಳಿದರು.

ಮಕ್ಕಳ ಮನೆ ಆಹಾರ ಹೆಚ್ಚು ಸೇವಿಸಬೇಕು. ರಸ್ತೆ ಬದಿಯ ಮತ್ತು ಹೋಟೆಲಿನಲ್ಲಿ ದೊರಕುವ ಆಹಾರ ಪದಾರ್ಥಗಳನ್ನು ತ್ಯಜಿಸಬೇಕು. ಪರಿಸರ ಸಂಬಂಧಿಯಾದ ಪುಸ್ತಕಗಳ ಹೆಚ್ಚು ಹೆಚ್ಚು ಓದಬೇಕು. ‘ಹಸಿರೇ ಉಸಿರು ಆರೋಗ್ಯವೇ ಭಾಗ್ಯ’ ಎಂಬುದನ್ನು ಗ್ರಹಿಸಿ ಗಿಡ ನೆಟ್ಟು ಬೆಳೆಸುವ ಮೂಲಕ ಮರವಾಗಿಸಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆ ವಿಪರೀತವಾಗಿದೆ. ಅದನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಮಳೆ ನೀರು ಇಂಗದೆ, ಅಂತರ್ಜಲ‌ ಪೂರಣವಾಗದೆ ಭೂಮಿ ಬರಡಾಗುತ್ತಿದೆ. ಜನಜಾನುವಾರುಗಳ ಹಾಗೂ ಜಲಚರ ಜೀವಿಗಳ ಬದುಕಿಗೂ ಅಪಾಯ ಎದುರಾಗಿದೆ. ಆದ್ದರಿಂದ, ಪ್ರತಿಯೊಬ್ಬರೂ ಪ್ಲಾಸ್ಟಿಕ್ ಬಳಕೆ ತ್ಯಜಿಸಬೇಕು. ಬಟ್ಟೆ, ವೈರ್ ಹಾಗೂ ಪೇಪರ್ ಬ್ಯಾಗುಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು.

ಸಾಹಿತಿ ಟಿ. ಸತೀಶ್ ಜವರೇಗೌಡ ಮಾತನಾಡಿ, ಪ್ರಕೃತಿಯು ನಮ್ಮ ಆಸರೆಯ ಮತ್ತು ಜೀವಧಾರೆಯ ತಾಣ. ಸಕಲೆಂಟು ಜೀವಗಳಿಗೆ ನೆಲೆ ನೀಡಿದೆ. ಆದ್ದರಿಂದ, ಪ್ರಕೃತಿಯನ್ನು ನಾವು ತಾಯಿಯಂತೆ ಪ್ರೀತಿಸಬೇಕು. ಜೊತೆಗೆ ಪೋಷಿಸಿ ಸಂರಕ್ಷಿಸಬೇಕು. ಆಗ ಪ್ರಕೃತಿಯೂ ಕೂಡ ನಮ್ಮನ್ನು ಮಕ್ಕಳಂತೆ ಸಲಹುತ್ತದೆ ಎಂದರು.

ಮನುಷ್ಯನ ಭೋಗ ಜೀವನದ ಫಲವಾಗಿ ಪ್ರಕೃತಿಯ ನಾಶ ದಿನವೂ ನಡೆದಿದೆ. ಹಸಿರು ಮಾಯವಾಗಿ ಭೂಮಿಯೆಲ್ಲ ಬರಡಾಗುತ್ತಿದೆ. ಇದರಿಂದ ಮುಂದೆ ತುಂಬ ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ, ವಿದ್ಯಾರ್ಥಿಗಳು  ಪರಿಸರ ಪ್ರಜ್ಞೆ ಬೆಳೆಸಿಕೊಂಡು, ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.

ಮುಖ್ಯ ಶಿಕ್ಷಕಿ ಪಿ.ಎನ್. ವೀಣಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಶಿಕ್ಷಣ ಸಂಯೋಜಕ ಶಂಕರ್ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕ ಎ.ಎಸ್. ಶಶಿಧರ್, ಜಿಪಿಟಿ ಶಿಕ್ಷಕ ಹೆಚ್.ಎಸ್. ಸುನೀಲ್ ಕುಮಾರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪರಿಸರವಾದಿ ಟಿ.ಸಿ. ದೇವನಾಥ್ ಅವರನ್ನು ಸನ್ಮಾನಿಸಲಾಯಿತು.

admin
the authoradmin

Leave a Reply

Translate to any language you want