ಕೆ.ಆರ್.ನಗರ(ಜಿಟೆಕ್ ಶಂಕರ್): ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೇಡಿಕೆ ಈಡೇರುವವರೆಗೂ ಕೆಲಸ ಸ್ಥಗಿತಗೊಳಿಸುವುದಾಗಿ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕು ಪರವಾನಗಿ ಭೂಪಕರ ಸಂಘದ ವತಿಯಿಂದ ಭೂದಾಖಲೆಗಳ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ.
ತಾಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಮನವಿ ಪತ್ರ ನೀಡಿ ಮಾತನಾಡಿದ ಕೆ.ಆರ್.ನಗರ ತಾಲೂಕು ಅಧ್ಯಕ್ಷ ಮುರುಳಿ ಅವರು ಸರ್ಕಾರ ನಮ್ಮ ಸಮಸ್ಯೆಗೆ ಸಕಾರಾತ್ಮಕವಾಗಿ ಸ್ಪಂದಿಸುವವರೆಗೂ ಅನಿರ್ದಿಷ್ಟ ಪ್ರತಿಭಟನೆ ನಡೆಸಲಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದರು.
ಪ್ರಮುಖವಾಗಿ ಅಳತೆ, ಸ್ವಾಮಿತ್ವ, ದರಖಾಸ್ತು, ಆಕಾರಬಂದು, ಡಾಟಾ ಎಂಟ್ರಿ ಸೇರಿದಂತೆ ಇತರ ಕೆಲಸಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಮಾಹಿತಿ ನೀಡಿದ ಅವರು ಪರವಾನಿಗೆ ಭೂ ಮಾಪಕರನ್ನು ಖಾಯಂ ಮಾಡುವುದರ ಜತೆಗೆ ಸೇವಾಭದ್ರತೆ ನೀಡಬೇಕೆಂದು ಒತ್ತಾಯಿಸಿದರು.

ಇದರ ಜತೆಗೆ ಸಮಾನ ಕೆಲಸಕ್ಕೆ ಸಮಾನ ವೇತನ, ಆರೋಗ್ಯ ಮತ್ತು ಜೀವ ವಿಮೆ, ಕೆ.ಎಲ್.ಆರ್. ಆಕ್ಟ್ ಜಾರಿಗೊಳ್ಳಿಸಿ ಹೆಚ್ಚಿನ ಒತ್ತಡ ಹೇರಿ ಮಲತಾಯಿ ಧೋರಣೆ ತೋರುವುದನ್ನು ನಿಲ್ಲಿಸಬೇಕು, ಖಾಯಂಮಾತಿಯಲ್ಲಿ ಅವೈಜ್ಞಾನಿಕ ಹೇಳಿಕೆಗಳನ್ನು ನಿಲ್ಲಿಸಿ ಜೇಷ್ಠತೆ ಆಧಾರದಲ್ಲಿ ಖಾಯಂಮಾತಿ ಮಾಡಬೇಕು ಎಂಬ ನಾನಾ ಬೇಡಿಕೆಗಳನ್ನು ಮಂಡಿಸಿದರಲ್ಲದೆ, ಮಾನಸಿಕ ಹಿಂಸೆ ನೀಡಿ ಅಸಂಬದ್ದ ಆದೇಶ ಮತ್ತು ಮೌಖಿಕ ಬೆದರಿಕೆ ಹಾಕುವುದನ್ನು ಅಧಿಕಾರಿಗಳನ್ನು ತಕ್ಷಣದಿಂದಲೇ ಬಿಡುವಂತೆ ತಿಳಿಸಿದರು.
ಈ ಹಿಂದೆ ಪ್ರತಿಭಟನೆ ನಡೆಸಿದಾಗ ಸರ್ಕಾರ ನಮ್ಮಗಳ ಸಮಸ್ಯೆಗೆ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿತ್ತು ಆದರೆ ಅದು ಇದುವರೆಗು ಜಾರಿ ಆಗಿಲ್ಲ ಎಂದ ಮುರುಳಿ ಈ ಬಾರಿ ಭರವಸೆ ನೀಡುವ ಬದಲು ಅವುಗಳನ್ನು ಜಾರಿಗೆ ತರುವಂತೆ ಕೋರಿದರು.
ಪರವಾನಗಿ ಭೂ ಮಾಪಕರ ಸಂಘದ ಅಧ್ಯಕ್ಷರಾದ ಮುರುಳಿ, ಭಾಸ್ಕರ್, ಭೂ ಮಾಪಕರಾದ ವಿಶ್ವನಾಥ್, ದಿನೇಶ್, ಕೆ.ವಿ.ರಾಮು, ಶಿವಕುಮಾರ್, ಕುಬೇರ, ಶ್ರೀಕಂಠಪಾಟೀಲ್, ಮಣಿಕಂಠ, ಕಿರಣ್, ಸಚಿನ್, ಕೆ.ಎಸ್ ಮಹದೇವ, ಸಿ.ಎಲ್.ಬಸವರಾಜು, ರಾಕೇಶ್, ರೂಪೇಶ್, ಸಿದ್ದರಾಜು, ರಂಗಪ್ಪ, ರತನ್, ಪ್ರಶಾಂತ್, ಶಂಕರ್, ದೊರೆ, ಮಹದೇವಮ್ಮ ಸೇರಿದಂತೆ ಇನ್ನಿತರರು ಹಾಜರಿದ್ದರು.








