LatestMysore

ಗ್ರಾಮೀಣ ಜನರ ಮೂಲಸೌಕರ್ಯದ ಸಮಸ್ಯೆಗೆ  ‘ವೈಟಲ್’ ನಿಂದ ಪರಿಹಾರ… ಏನಿದು ವೈಟಲ್ ಅಂತಿರಾ?

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಇನ್ಮುಂದೆ ಗ್ರಾಮೀಣ ಪ್ರದೇಶದಲ್ಲಿನ ನೀರು ಸರಬರಾಜು, ರಸ್ತೆ ದುರಸ್ತಿ, ಒಳಚರಂಡಿ, ತ್ಯಾಜ್ಯ ನಿರ್ವಹಣೆ ಸೇರಿದಂತೆ ಮೂಲ ಸೌಕರ್ಯಗಳಿಗೆ ಸೇರಿದಂತೆ ಯಾವುದೇ ಸಮಸ್ಯೆಗಳಿದ್ದರೂ ಅದನ್ನು ಮೊಬೈಲ್ ಮೂಲಕವೇ ತಿಳಿದುಕೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳಲು “ವೈಟಲ್’ (Village Issue Tracking and Action Link) ಎಂಬ ಡಿಜಿಟಲ್ ವೇದಿಕೆಯನ್ನು  ಪರಿಚಯಿಸಲಾಗುತ್ತಿದೆ.

ಮೈಸೂರಿನ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಎನ್‌ಎಸ್‌ಎಸ್ ಘಟಕ ಹಾಗೂ ಉನ್ನತ ಭಾರತ ಅಭಿಯಾನ ಯೋಜನಾ ತಂಡದ ವತಿಯಿಂದ ರಾಮನಹಳ್ಳಿಯಲ್ಲಿ “ವೈಟಲ್ (Village Issue Tracking and Action Link)” ಯೋಜನೆಯನ್ನು ಗ್ರಾಮಸ್ಥರು ಹಾಗೂ ಸ್ಥಳೀಯ ಆಡಳಿತ ಮಂಡಳಿಗೆ ಇದನ್ನು ಪರಿಚಯಿಸಲಾಗಿದೆ.

ಈ ಬಗ್ಗೆ ಯೋಜನಾಧಿಕಾರಿ ಪ್ರೊ. ಕಾರ್ತಿಕ್ ಮಾತನಾಡಿ, ಗ್ರಾಮದಲ್ಲಿ ನೀರು ಸರಬರಾಜು, ರಸ್ತೆ ದುರಸ್ತಿ, ಒಳಚರಂಡಿ ಹಾಗೂ ತ್ಯಾಜ್ಯ ನಿರ್ವಹಣೆ, ಶಾಲಾ ಮೂಲಸೌಕರ್ಯ ಸಮಸ್ಯೆಗಳಂತಹ ಪ್ರಮುಖ ವಿಷಯಗಳನ್ನು ನೇರವಾಗಿ ಸ್ಥಳೀಯ ಆಡಳಿತ ಮಂಡಳಿಯ ಗಮನಕ್ಕೆ ತರಲು ಮತ್ತು ಅವುಗಳ ಪ್ರಗತಿಯನ್ನು ಟ್ರ್ಯಾಕ್ ಮಾಡಲು ಈ ಡಿಜಿಟಲ್ ವೇದಿಕೆ ಸಹಾಯಕವಾಗುತ್ತದೆ ಎಂದು ತಿಳಿಸಿದರಲ್ಲದೆ, ಯೋಜನೆಯು ಗ್ರಾಮಸ್ಥರು ಮತ್ತು ಆಡಳಿತ ಮಂಡಳಿಯ ನಡುವೆ ಪಾರದರ್ಶಕ, ವೇಗವಾದ ಹಾಗೂ ಜವಾಬ್ದಾರಿಯುತ ಸಂವಹನ ವ್ಯವಸ್ಥೆಯನ್ನು ನಿರ್ಮಿಸಿ, ಸಮಸ್ಯೆಗಳ ಆದ್ಯತೆ ನಿಗದಿ ಹಾಗೂ ಸಮಯೋಚಿತ ಪರಿಹಾರಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಅವರು ವಿವರಿಸಿದರು.

ವೈಟಲ್ ವೇದಿಕೆಯ ಮೂಲಕ ಗ್ರಾಮಸ್ಥರು ತಮ್ಮ ಮೊಬೈಲ್ ಫೋನ್ ಅಥವಾ ಸಾಮಾನ್ಯ ಡಿಜಿಟಲ್ ಸಾಧನಗಳ ಸಹಾಯದಿಂದ ಸಮಸ್ಯೆಗಳನ್ನು ದಾಖಲಿಸಬಹುದು. ಪ್ರತಿಯೊಂದು ದೂರುಗೆ ವಿಶಿಷ್ಟ ನೋಂದಣಿ ಸಂಖ್ಯೆ ನೀಡಲಾಗುತ್ತಿದ್ದು, ಅದರ ಪ್ರಗತಿಯನ್ನು ಹಂತ ಹಂತವಾಗಿ ಗಮನಿಸಲು ಸಾಧ್ಯವಾಗುತ್ತದೆ. ಇದರಿಂದ ಆಡಳಿತಾತ್ಮಕ ಪಾರದರ್ಶಕತೆ ಹೆಚ್ಚಾಗಿ, ಸಮಸ್ಯೆಗಳ ಪರಿಹಾರದಲ್ಲಿ ವಿಳಂಬ ಕಡಿಮೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಯೋಜನಾ ತಂಡದ ವಿದ್ಯಾರ್ಥಿಗಳಾದ ಯಶ್ವಂತ್ ಎಸ್., ಯಶ್ ಗೌಡ ಮತ್ತು ಇಂಚರಾ ಎಸ್. ಅವರು ವೈಟಲ್ ಯೋಜನೆಯ ಉದ್ದೇಶ, ಕಾರ್ಯವಿಧಾನ ಮತ್ತು ಗ್ರಾಮಾಭಿವೃದ್ಧಿಯಲ್ಲಿ ಅದರ ದೀರ್ಘಕಾಲೀನ ಮಹತ್ವವನ್ನು ವಿವರಿಸಿದರು. ಗ್ರಾಮಸ್ಥರು ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಂಡು ತಮ್ಮ ಹಕ್ಕುಗಳು ಮತ್ತು ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಪಡೆಯಬೇಕು ಎಂದು ಅವರು ಮನವಿ ಮಾಡಿದರು.

ಈ ಕಾರ್ಯಕ್ರಮದಲ್ಲಿ ಪರಶುರಾಮಪ್ಪ ಅಗಸನಹಳ್ಳಿ (ಪಿಡಿಓ), ಸಿ.ಎಸ್. ಶೇಖರ್ (ಕಾರ್ಯದರ್ಶಿ), ಜಯಲಕ್ಷ್ಮಿ ಆರ್.ಸಿ (ಎಸ್‌ಡಿಎಎ), ಬಸವರಾಜು ಕೆ (ಡಿಇಒ), ರಮೇಶ್ (ಮಾಜಿ ಪಂಚಾಯತಿ ಸದಸ್ಯರು), ಶ್ರೀಧರ್ (ಬಿಲ್ ಕಲೆಕ್ಟರ್) ಹಾಗೂ ರಾಮನಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದು, ಯೋಜನೆಗೆ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಸಮುದಾಯದ ಸಕ್ರಿಯ ಭಾಗವಹಿಸುವಿಕೆಯಿಂದ ಜಾರಿಗೊಂಡಿರುವ ಈ ಯೋಜನೆ ಗ್ರಾಮೀಣ ಅಭಿವೃದ್ಧಿಯತ್ತ ಮಹತ್ವದ ಹೆಜ್ಜೆಯಾಗಿದ್ದು, ಸುಸಂಘಟಿತ, ಸ್ವಾವಲಂಬಿ ಮತ್ತು ಜವಾಬ್ದಾರಿಯುತ ಗ್ರಾಮ ನಿರ್ಮಾಣಕ್ಕೆ ಪೂರಕವಾಗಲಿದೆ ಎಂಬ ಅಭಿಪ್ರಾಯ  ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.

admin
the authoradmin

Leave a Reply

Translate to any language you want