ಗೊಂದಿಬಸವನಹಳ್ಳಿ ರೊಂಡೆಕೆರೆ ಅಭಿವೃದ್ದಿಗೆ ಭೂಮಿಪೂಜೆ… ಕೆರೆ ಅಭಿವೃದ್ಧಿಯಿಂದ ರೈತರ ಬದುಕು ಹಸನು

ಕುಶಾಲನಗರ (ರಘುಹೆಬ್ಬಾಲೆ): ಗ್ರಾಮೀಣ ಪ್ರದೇಶಗಳಲ್ಲಿರುವ ಕೆರೆಗಳ ಅಭಿವೃದ್ಧಿಯಿಂದ ರೈತರ ಕೃಷಿ ಚಟುವಟಿಕೆಗೆ ಅನುಕೂಲವಾಗಲಿದ್ದು,ಅವರ ಬದುಕ ಹಸನವಾಗಲಿದೆ ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು.

ಗೊಂದಿಬಸವನಹಳ್ಳಿ ಗ್ರಾಮದ ರೊಂಡೆಕೆರೆಯನ್ನು ರೂ.1.60 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಪಡಿಸಲು ಮಂಗಳವಾರ ಭೂಮಿಪೂಜೆ ನೆರವೇರಿಸಿ ಶಾಸಕರು ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು ಪ್ರತಿ ವರ್ಷ ಮಳೆಗಾಲದಲ್ಲಿ ರೊಂಡೆಕೆರೆ ತುಂಬಿ ಕೆರೆಯ ತಡೆಗೋಡೆ ಒಡೆದು ರೈತರ ಜಮೀನು ಹಾಗೂ ವಿವಿಧ ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿ ತೊಂದರೆ ಉಂಟಾಗುತ್ತಿತ್ತು.

ಈ ಹಿನ್ನೆಲೆ ರೈತರ ಹಾಗೂ ಗ್ರಾಮದ ಜನರ ಬೇಡಿಕೆಯನ್ನು ಸಣ್ಣ ನೀರಾವರಿ ಸಚಿವರು ಬೋಸ್ ರಾಜ್ ಅವರಿಗೆ ತಿಳಿಸಿ ಮನವಿ ಮಾಡಿದ ಮೇರೆಗೆ ಕೆರೆ ಅಭಿವೃದ್ಧಿಗೆ ಅನುದಾನ ಒದಗಿಸಿದ್ದಾರೆ. ಸಚಿವರಿಗೆ ರೈತರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಕೆರೆಗಳನ್ನು ಅಭಿವೃದ್ಧಿ ಪಡಿಸಿ ರೈತರ ಜಮೀನುಗಳಿಗೆ ನೀರು ಒದಗಿಸುವುದರ ಜೊತೆಗೆ ಜನಜಾನುವಾರು,ಪ್ರಾಣಿ,ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲಾಗುತ್ತದೆ. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಜೊತೆಗೆ ಮಡಿಕೇರಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸುತ್ತಿದ್ದಾರೆ. ರೊಂಡೆಕೆರೆ ಮಳೆಗಾಲದಲ್ಲಿ ಅತ್ಯಧಿಕ ಮಳೆಯ ನೀರು ಹರಿದ ಸಂದರ್ಭ ಕೆರೆಯ ಏರಿ ಒಡೆದು ನೀರೆಲ್ಲಾ ಪೋಲಾಗಿತ್ತು. ಮೀನು ಸಾಕಣೆಗೂ ಅಡಚಣೆಯಾಗಿತ್ತು. 1.60 ಕೋಟಿ ಅನುದಾನ ತಂದು ಕೆರೆಯ ಏರಿ, ತೂಬು ಹಾಗೂ ರಸ್ತೆಯ ಅಭಿವೃದ್ದಿಗೆ ಯೋಜನೆ ರೂಪಿಸಲಾಗಿದೆ ಎಂದರು.

ಈಗಾಗಲೇ ಒತ್ತುವರಿಯಾಗಿರುವ ಕೆರೆಯ ಜಾಗವನ್ನು ಸರ್ವೆ ಕಾರ್ಯವನ್ನು ಮಾಡಿ ಒತ್ತುವರಿ ತೆರವುಗೊಳಿಸಬೇಕು.ಈ ಕಾರ್ಯಕ್ಕೆ ಎಲ್ಲರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಕುಶಾಲನಗರದ ತಾವರೆಕೆರೆ ಯನ್ನು ರೂ.3 ಕೋಟಿ ವೆಚ್ಚದಲ್ಲಿ ಸಮಗ್ರವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದ್ದು ಸದ್ಯದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು. ಮಾಜಿ ಮುಖ್ಯಮಂತ್ರಿ ದಿ.ಆರ್.ಗುಂಡೂರಾವ್ ಅವರ ಪ್ರತಿಮೆಯನ್ನು ಪುರಸಭೆ ಮುಂಭಾಗದಲ್ಲಿ ಹಾಗೂ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಪ್ರತಿಮೆಯನ್ನು ಗಣಪತಿ ದೇವಾಲಯ ಸರ್ಕಲ್ ನಲ್ಲಿ ಅಳವಡಿಸುವ ಮೂಲಕ ಮಹಾನ್ ವ್ಯಕ್ತಿ ಗಳಿಗೆ ಗೌರವ ಸಲ್ಲಿಸಲಾಗುತ್ತದೆ ಎಂದರು.

ಈ ಸಂದರ್ಭ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಗೋವಿಂದಪ್ಪ, ಜಲಮಂಡಳಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಕೂಡ ಮಾಜಿ ಅಧ್ಯಕ್ಷ ಬಿ.ಜಿ. ಮಂಜುನಾಥ್, ಮಹಿಳಾ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷೆ ಜಿ.ಆರ್.ಪುಷ್ಪಲತಾ, ಪುರಸಭೆ ನಾಮನಿರ್ದೇಶನ ಸದಸ್ಯರಾದ ಗೊಂದಿಬಸವನಹಳ್ಳಿ ಪ್ರಕಾಶ್, ಜಗದೀಶ್, ತಹಸೀಲ್ದಾರ್ ಕಿರಣ್ ಗೌರಯ್ಯ, ಪುರಸಭೆ ಮುಖ್ಯಾಧಿಕಾರಿ ಗಿರೀಶ್ ಕುಮಾರ್, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕುಮಾರಸ್ವಾಮಿ, ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಇದೇ ಸಂದರ್ಭ ಪುರಸಭೆ ಮಾಜಿ ಸದಸ್ಯ ಎಂ.ಎಂ.ಪ್ರಕಾಶ್ ಹಾಗೂ ಗ್ರಾಮಸ್ಥರು ಶಾಸಕ ಮಂತರ್ ಗೌಡ ಅವರನ್ನು ಸನ್ಮಾನಿಸಿ ಗೌರವಿಸಿದರು.







