LatestMysore

‘ಡಿಜಿಟಲ್ ಯುಗ’ದಲ್ಲಿ ಸಾಮಾಜಿಕ ಜಾಲತಾಣಗಳು ‘ಜ್ಞಾನದ ಆಕರ’.. ಸಮರ್ಥ ಬಳಕೆಯಿಂದ ಯಶಸ್ಸು ಸಾಧ್ಯ

ಮೈಸೂರು: ಇಂದಿನ ‘ಡಿಜಿಟಲ್ ಯುಗ’ದಲ್ಲಿ ಸಾಮಾಜಿಕ ಜಾಲತಾಣಗಳು ‘ಜ್ಞಾನದ ಆಕರ’ಗಳಾಗಿವೆ. ಅಸಂಖ್ಯಾತ ‘ಮಾಹಿತಿಗಳ ಕಣಜ’ಗಳಾಗಿವೆ. ಈ ಜಾಲತಾಣಗಳನ್ನು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ  ಪ್ರಗತಿಗೆ ಮತ್ತು ಕಲಿಕೆಯ ಸಮಸ್ಯೆಗಳ ನಿವಾರಣೆಗೆ ಸಮರ್ಥವಾಗಿ ಬಳಸಿಕೊಂಡು ‘ಯಶಸ್ಸಿನ ಪಥ’ದಲ್ಲಿ ಸಾಗಬೇಕು ಎಂದು ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ ಕರೆ ನೀಡಿದರು.

ಮೈಸೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ವಿದ್ಯೋದಯ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ತಿ. ನರಸೀಪುರ ತಾಲ್ಲೂಕಿನ ಸುಜ್ಜಲೂರು ಗ್ರಾಮದಲ್ಲಿ ಜರುಗಿದ ‘ಯೂತ್ ಫಾರ್ ಮೈ ಭಾರತ್ ‘ ವಿಶೇಷ ವಾರ್ಷಿಕ ಶಿಬಿರದಲ್ಲಿ ಭಾಗವಹಿಸಿ ‘ಯುವಜನತೆ ಮತ್ತು ಸಾಮಾಜಿಕ ಜಾಲತಾಣಗಳು’ ಎಂಬ ವಿಷಯ ಕುರಿತು ಅವರು ಮಾತನಾಡಿದರು.

ಫೇಸ್ ಬುಕ್, ವಾಟ್ಸಾಪ್, ಇನ್ಸ್ಟಗ್ರಾಮ್, ಟೆಲಿಗ್ರಾಫ್, ಎಕ್ಸ್ ಖಾತೆ, ಮೆಸೆಂಜರ್, ಯೂಟ್ಯೂಬ್ ಮುಂತಾದ ಸಾಮಾಜಿಕ ಜಾಲತಾಣಗಳು ನಮ್ಮ ದೈನಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿವೆ. ಇವು ಮಾಹಿತಿ ವಿನಿಮಯ, ಸಂವಹನ, ಜ್ಞಾನ ಹಂಚಿಕೆಗೆ ಅತ್ಯಗತ್ಯ ‘ಮಾಧ್ಯಮ’ಗಳು. ಯುವಜನರು ಶಿಕ್ಷಣ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದ ಹಾಗೂ ಜಾಗತಿಕ ವಿದ್ಯಮಾನಗಳನ್ನು ಅರಿಯಲು ಸಹಕಾರಿಯಾಗಿವೆ. ಆದರೆ ಇವನ್ನು ಸಂದರ್ಭೋಚಿತವಾಗಿ ಬಳಸಿಕೊಳ್ಳುವ ‘ವಿವೇಚನೆ’ ಹೊಂದಿರಬೇಕಾದ್ದು ಅಗತ್ಯ ಎಂದರು.

ಸಮಕಾಲೀನ ಸಂದರ್ಭದಲ್ಲಿ ಈ ಸಾಮಾಜಿಕ ಜಾಲತಾಣಗಳು ಸುಳ್ಳು ಸುದ್ದಿ ಹರಡುವ, ಜಾತಿ ಮತ್ತು ಧರ್ಮದ ನಡುವಿನ ಸಾಮರಸ್ಯ ಕದಡುವ, ಹಿಂಸೆ ಮತ್ತು ಅಶ್ಲೀಲತೆಯನ್ನು ಬಿತ್ತುವ ಕೆಲಸ ಮಾಡುತ್ತಿವೆ. ವಿದ್ಯಾರ್ಥಿಗಳ ಓದುವ ಮತ್ತು ಯುವಜನರ ದುಡಿಯುವ ಅಮೂಲ್ಯ ಸಮಯವನ್ನು ಕಸಿದುಕೊಂಡಿವೆ. ಇದೊಂದು ‘ಸಾಮಾಜಿಕ ವ್ಯಸನ’ವಾಗಿ ಮಾರ್ಪಟ್ಟಿದೆ. ‘ಜನೋಪಯೋಗಿ’ ಕಾರ್ಯಗಳಿಗೆ ಬದಲಾಗಿ ‘ವಿನಾಶಕಾರಿ ಕೃತ್ಯ’ಗಳಿಗೆ ಬಳೆಕೆಯಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ರಂಗಕರ್ಮಿ ಚಂದ್ರ ಮಂಡ್ಯ ಮಾತನಾಡಿ, ಇತ್ತೀಚಿಗೆ ಯುವಕರು ಮೊಬೈಲ್ ಮೋಹಕ್ಕೆ ಸಿಲುಕಿ ದಿನಕ್ಕೆ ಕನಿಷ್ಠ ಹತ್ತುರಿಂದ ಹನ್ನೆರಡು ಗಂಟೆಗಳ ಕಾಲ ಸಾಮಾಜಿಕ ಜಾಲತಾಣದಲ್ಲೇ ಮುಳುಗಿ ಹೋಗುತ್ತಿದ್ದಾರೆ. ಕೀಳು ಮಟ್ಟದ ಹಾಸ್ಯದ ವಿಡಿಯೋಗಳೇ ಇವರ ಮನೋರಂಜನೆಯ ವೇದಿಕೆಯಾಗಿದೆ. ಅವರಿಗೆ ಮುಂದಿನ ಭವಿಷ್ಯದ ಬದುಕಿನ ಬಗ್ಗೆ ಯಾವ ಯೋಚನೆ ಮತ್ತು ಯೋಜನೆಯೂ ಕಾಣುತ್ತಿಲ್ಲ. ಜೊತೆಗೆ ಪರಸ್ಪರರನ್ನು ಗೌರವಿಸುವುದನ್ನು ಕೂಡ ಮರೆತುಬಿಟ್ಟಿದ್ದಾರೆ ಎಂದು ವಿಷಾದಿಸಿದರು.

ಹಿಂದೆಲ್ಲ ‘ಒಳ್ಳೆಯವರಾಗಿ ಬದುಕಿದರೆ ಸತ್ತ ಮೇಲೆ ಸ್ವರ್ಗಕ್ಕೆ ಹೋಗುತ್ತಾರೆ’ ಎಂದು ಹೇಳುತ್ತಿದ್ದರು, ‘ಸ್ವರ್ಗ ಇದೆಯೋ? ಇಲ್ಲವೋ? ಗೊತ್ತಿಲ್ಲ! ಆದರೆ ಇಂದಿನ ಬದುಕಿನ ಜಂಜಾಟದಲ್ಲಿ ಸ್ವರ್ಗವನ್ನು ಕಾಣಬೇಕಾದರೆ, ಸಾಧ್ಯವಾದಷ್ಟು ಪುಟಾಣಿ ಮಕ್ಕಳ ಜೊತೆ ಬೆರೆತು, ಅವರ ಅಸಂಖ್ಯಾತ ಕುತೂಹಲಕಾರಿ ಮತ್ತು ಮುಗ್ಧತೆಯ ಪ್ರಶ್ನಾವಳಿ, ಆಟ ಪಾಠಗಳಲ್ಲಿ ನಾವು ಕೂಡ ಮಕ್ಕಳಾಗಿ ಬೆರೆತರೆ ನಿಜವಾಗಿಯೂ ನಾವು ಇಲ್ಲಿಯೇ ಸ್ವರ್ಗವನ್ನು ನೋಡಬಹುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕೆನರಾ ಬ್ಯಾಂಕಿನ ಸಲಹೆಗಾರ ಎಸ್.ವಿ. ರಮೇಶ್ ರಾವ್ ‘ಆರ್ಥಿಕ ಸಾಕ್ಷರತೆ’ ಕುರಿತು ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಶಿಬಿರಾಧಿಕಾರಿ ಶಿವಮೂರ್ತಿ, ಸಹ ಶಿಬಿರಾಧಿಕಾರಿಗಳಾದ ಎಸ್. ಸುಮ ಮತ್ತು ಅಶ್ವಿನಿ, ಪಿ.ಆರ್.ಎಂ. ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿ ನಂದೀಶ್ ಉಪಸ್ಥಿತರಿದ್ದರು.

admin
the authoradmin

Leave a Reply

Translate to any language you want